ADVERTISEMENT

ಶಿಕ್ಷಣ: ವಿದೇಶಿ ವಿ.ವಿ., ಸ್ವದೇಶಿ ಕ್ಯಾಂಪಸ್‌; ಹಲವು ಒಪ್ಪಂದ

ಚಂದ್ರಹಾಸ ಹಿರೇಮಳಲಿ
Published 19 ಅಕ್ಟೋಬರ್ 2025, 23:30 IST
Last Updated 19 ಅಕ್ಟೋಬರ್ 2025, 23:30 IST
ಚೆವನಿಂಗ್- ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನ ಪಡೆದು ವಿದೇಶ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿನಿಯರ ಜತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮತ್ತು ತಂಡ
ಚೆವನಿಂಗ್- ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನ ಪಡೆದು ವಿದೇಶ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿನಿಯರ ಜತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮತ್ತು ತಂಡ   
ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಆಕಾಂಕ್ಷೆ ಇದ್ದರೂ ನಾನಾ ಕಾರಣಗಳಿಂದ ಅದು ಸಾಧ್ಯವಾಗುತ್ತಿರುವುದಿಲ್ಲ. ಅಂತಹವರ ಬಯಕೆಯನ್ನು ಈಡೇರಿಸಲಿವೆ, ನಮ್ಮ ರಾಜ್ಯದಲ್ಲೇ ಆರಂಭವಾಗಲಿರುವ ಹಲವು ವಿದೇಶಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು

ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಹಂಬಲ ಬಹುತೇಕರಲ್ಲಿ ಇರುತ್ತದೆ. ಆದರೆ, ವಿದೇಶಕ್ಕೆ ತೆರಳಿ, ಬಯಸಿದ ಕೋರ್ಸ್‌ನಲ್ಲಿ ಪದವಿ, ಸ್ನಾತಕೋತ್ತರ ಪದವಿಗೆ ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ. ಪ್ರತಿಭೆಯ ಜತೆಗೆ ಕುಟುಂಬದ ಆರ್ಥಿಕ ಸ್ಥಿತಿಯೂ ಹೊಂದಿಕೆಯಾಗಬೇಕು.

ಇಂತಹ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಅನುವಾಗುವಂತೆ ಹಲವು ವಿದ್ಯಾರ್ಥಿವೇತನ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ರೂಪಿಸಿದೆ. ಪದವಿ ವಿದ್ಯಾರ್ಥಿಗಳಿಗೆ ಬ್ರಿಟನ್‌ ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಅವಕಾಶ ಒದಗಿಸಲು ಬ್ರಿಟಿಷ್‌ ಕೌನ್ಸಿಲ್‌ ಜತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಒಪ್ಪಂದ ಮಾಡಿಕೊಂಡಿದೆ. ಮೊದಲ ಕಂತಿನಲ್ಲಿ, ರಾಜ್ಯದ 30 ವಿದ್ಯಾರ್ಥಿಗಳು ಪೂರ್ವ ಲಂಡನ್‌ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಬಂದಿದ್ದಾರೆ. ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳಿಗೆ ಉತ್ತೇಜನ ನೀಡಲು ಚೆವನಿಂಗ್- ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನ ನಿಧಿ ಸ್ಥಾಪಿಸಲಾಗಿದೆ. ರಾಜ್ಯದ ಸರ್ಕಾರಿ ಕಾಲೇಜು ಮತ್ತು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಪಡೆದ ಐವರು, ತಲಾ ₹ 40 ಲಕ್ಷ ಒಳಗೊಂಡ ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಬ್ರಿಟಿಷ್‌ ಹೈಕಮಿಷನ್‌ ಹಾಗೂ ರಾಜ್ಯ ಸರ್ಕಾರ ಈ ಹಣವನ್ನು ಸಮನಾಗಿ ಭರಿಸಲಿವೆ. ವಿದ್ಯಾರ್ಥಿನಿಯರು ಬ್ರಿಟನ್ನಿನ ತಮ್ಮ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಬಹುದು. 

ಆದರೆ, ವಿದ್ಯಾರ್ಥಿವೇತನ, ಸಾಲಸೌಲಭ್ಯ, ಆರ್ಥಿಕ ನೆರವು ಪಡೆದರೂ ವಿದೇಶಗಳಿಗೆ ತೆರಳಿ ಅಧ್ಯಯನ ಮಾಡುವವರ ಸಂಖ್ಯೆ ತೀರಾ ವಿರಳ. ಇದನ್ನು ಮನಗಂಡ ಸರ್ಕಾರ, ಕರ್ನಾಟಕದಲ್ಲಿ ಶಾಖೆಗಳನ್ನು ತೆರೆಯುವಂತೆ ವಿದೇಶಗಳ ಹತ್ತುಹಲವು ವಿಶ್ವವಿದ್ಯಾಲಯಗಳನ್ನು ಆಹ್ವಾನಿಸಿದೆ. ಒಪ್ಪಂದ ಮಾಡಿಕೊಂಡಿದೆ. ವೋಲ್ವರ್‌ಹ್ಯಾಮ್ಟನ್ ವಿಶ್ವವಿದ್ಯಾಲಯವು ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಈಗಾಗಲೇ ಚಟುವಟಿಕೆ ಆರಂಭಿಸಿದೆ. ಬ್ರಿಟನ್‌ನ ಲ್ಯಾಂಕಾಸ್ಟರ್‌ ವಿಶ್ವವಿದ್ಯಾಲಯ ಬರುವ ಫೆಬ್ರುವರಿಯಿಂದ ಕಾರ್ಯಾರಂಭ ಮಾಡಲಿದೆ. ಲಿವರ್‌ಪೂಲ್‌, ಕೇಂಬ್ರಿಡ್ಜ್, ವೇಲ್ಸ್ ವಿಶ್ವವಿದ್ಯಾಲಯಗಳು, ಇಂಪೀರಿಯಲ್‌ ಕಾಲೇಜು ಸಹ ಒಪ್ಪಂದ ಮಾಡಿಕೊಂಡಿವೆ. 

ADVERTISEMENT

ಬೆಂಗಳೂರಿನಲ್ಲಿ ಕ್ಯಾಂಪಸ್‌ ತೆರೆಯಲು 30 ವಿಶ್ವವಿದ್ಯಾಲಯಗಳು ಸಮ್ಮತಿಸಿವೆ. 9 ವಿಶ್ವವಿದ್ಯಾಲಯಗಳು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿವೆ. ಕರ್ನಾಟಕದತ್ತ ಮುಖ ಮಾಡಲು ಸೇಂಟ್‌ಜಾನ್ಸ್, ತೋಟಗಾರಿಕೆ ಕ್ಷೇತ್ರದ ವರ್ಲ್ಡ್‌ ಹಾರ್ಟಿ ಸೆಂಟರ್‌ ಆಸಕ್ತಿ ತೋರಿವೆ. ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯ, ಬ್ಲೂಮ್ಸ್‌ಬರ್ಗ್‌ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಉನ್ನತ ಅಧಿಕಾರಿಗಳ ಜತೆಗೆ ಮಾತುಕತೆ ನಡೆದಿದೆ. ಬ್ರಿಟನ್‌ಗೆ ತೆರಳಿ ಒಂದು ವಾರ ಬೀಡುಬಿಟ್ಟಿದ್ದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್‌, ಹಲವು ವಿಶ್ವವಿದ್ಯಾಲಯಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ರಾಜ್ಯದ ಸರ್ಕಾರಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷಾ ಕೌಶಲ ತರಬೇತಿ, ಅಧ್ಯಾಪಕರು, ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ತರಬೇತಿ ನೀಡುತ್ತಿವೆ. ವಿದೇಶಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟಕ್ಕೆ ಪೂರಕವಾಗಿ ರಾಜ್ಯದ ಪ್ರಾಧ್ಯಾಪಕರನ್ನು ಸಜ್ಜುಗೊಳಿಸಲು ಬ್ರಿಟಿಷ್‌ ಕೌನ್ಸಿಲ್‌ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್, ವ್ಯವಹಾರ ನಿರ್ವಹಣೆ, ಕ್ರೀಡಾ ವ್ಯವಸ್ಥಾಪನೆ, ಕ್ರೀಡಾ ಮನೋವಿಜ್ಞಾನ, ಭೂಗೋಳ ಹಾಗೂ ಭೂ ಮಾಹಿತಿ ವಿಜ್ಞಾನ ಪದವಿ ಕೋರ್ಸುಗಳಂತಹ ವಿಭಾಗಗಳಲ್ಲಿ ವಿಚಾರ ವಿನಿಮಯ ನಡೆಯುತ್ತಿದೆ.

‘ಕರ್ನಾಟಕದ ಬಹಳಷ್ಟು ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸಿದರೂ ಆರ್ಥಿಕ ಸಮಸ್ಯೆಯಿಂದ ಸಾಧ್ಯವಾಗುವುದಿಲ್ಲ. ರಾಜ್ಯದಲ್ಲೇ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಆರಂಭಿಸುವುದರಿಂದ ಅವರ ಕನಸನ್ನು ನನಸು ಮಾಡಬಹುದು. ಇಲ್ಲಿ ಅತ್ಯುತ್ತಮ ಗುಣಮಟ್ಟದ ಹೊಸ ಸಂಶೋಧನೆಗಳನ್ನು ಉತ್ತೇಜಿಸಲಾಗುವುದು. ಈ ಮೂಲಕ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟ ತರಲಾಗುವುದು. ಉನ್ನತ ಶಿಕ್ಷಣದಲ್ಲಿ ರಾಜ್ಯವು ದೇಶದಲ್ಲಿ 12ನೇ ಸ್ಥಾನದಲ್ಲಿದ್ದು, ಮೊದಲ ರಾಜ್ಯವಾಗಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದಿದ್ದಾರೆ ಸಚಿವ ಸುಧಾಕರ್‌.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 24 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇವರಲ್ಲಿ 5 ಲಕ್ಷ ಮಂದಿ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ.

ಕರ್ನಾಟಕದಲ್ಲಿ ಆರಂಭವಾಗುವ ವಿದೇಶಿ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಒಲವು ವ್ಯಕ್ತವಾಗಿದೆ. ಇದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಮಕ್ಕಳೂ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದೇಶಗಳಲ್ಲಿ ಉದ್ಯೋಗ ಹೊಂದಲು ದಾರಿ ಸುಗಮವಾಗಲಿದೆ.
ಡಾ. ಎಂ.ಸಿ.ಸುಧಾಕರ್‌ ಉನ್ನತ ಶಿಕ್ಷಣ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.