ADVERTISEMENT

ಶಿಕ್ಷಣ: ಹೋಂವರ್ಕ್ ಈಗ ಹೊರೆಯಲ್ಲ..

ಪಿಟಿಐ
Published 28 ಸೆಪ್ಟೆಂಬರ್ 2025, 23:42 IST
Last Updated 28 ಸೆಪ್ಟೆಂಬರ್ 2025, 23:42 IST
<div class="paragraphs"><p>ಹೋಂವರ್ಕ್ ಈಗ ಹೊರೆಯಲ್ಲ..</p></div>

ಹೋಂವರ್ಕ್ ಈಗ ಹೊರೆಯಲ್ಲ..

   

ಒಂದು ಕಾಲದಲ್ಲಿ ಶಾಲಾ ಮಕ್ಕಳ ಹೋಂವರ್ಕ್ ಎಂದರೆ, ಗಣಿತದ ಲೆಕ್ಕಗಳನ್ನು ಮತ್ತೆ ಮತ್ತೆ ಬಿಡಿಸುವುದು, ಪ್ರಬಂಧ ಬರೆಯುವಂತಹ ಚಟುವಟಿಕೆಗಳೇ ಹೆಚ್ಚಾಗಿರುತ್ತಿದ್ದವು. ಕಾಲಾನುಕ್ರಮದಲ್ಲಿ ಹೋಂವರ್ಕ್‌ನ ಪರಿಕಲ್ಪನೆ ಬದಲಾಗಿದ್ದು, ಹೆಚ್ಚು ವೈವಿಧ್ಯಮಯವಾದ ಮತ್ತು ಕಲಿಕಾಸ್ನೇಹಿ ಪದ್ಧತಿಗಳು ರೂಢಿಗೆ ಬಂದಿವೆ. ಶಿಕ್ಷಣ ನೀತಿಯಲ್ಲಿ ಮಹತ್ವದ ಬದಲಾವಣೆಗಳು ಆಗಿರುವುದನ್ನು ಇದು ಸೂಚಿಸುತ್ತದೆ.

ದೇಶದಾದ್ಯಂತ ತರಗತಿಗಳು ಇಂತಹ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ, ಹೊಸ ಕಲಿಕಾ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಾ ಸಾಗಿರುವಂತೆಯೇ ಹೋಂವರ್ಕ್‌ನ ಸ್ವರೂಪವೂ ಸದ್ದಿಲ್ಲದೇ ಬದಲಾಗುತ್ತಿದೆ. ಡಿಜಿಟಲ್ ಸಾಧನಗಳು ಮತ್ತು ಸೃಜನಾತ್ಮಕತೆ, ವಿಮರ್ಶಾತ್ಮಕ ಚಿಂತನೆ, ವಿದ್ಯಾರ್ಥಿ ಯೋಗಕ್ಷೇಮವೇ ಪ್ರಧಾನವಾದ ಬೋಧನಾ ವಿಧಾನಗಳಿಂದ ಇಂದು ಮರುರೂಪ ಪಡೆದಿದೆ ಎನ್ನುತ್ತಿದ್ದಾರೆ ಶಿಕ್ಷಕರು. 

ADVERTISEMENT

‘ಹಿಂದೆ, ಹೋಂವರ್ಕ್‌ ಎಂದರೆ, ವಾಕ್ಯಗಳನ್ನು ಕಾಪಿ ಮಾಡುವುದು, ಮಗ್ಗಿ ಉರು ಹೊಡೆಯುವುದು, ಮಾಡಿದ ಲೆಕ್ಕಗಳನ್ನೇ ಪದೇಪದೇ ಮಾಡುವುದಾಗಿತ್ತು. ಇಂದು ಹೆಚ್ಚಿನ ಶಾಲೆಗಳು ಪ್ರಾಜೆಕ್ಟ್ ಆಧಾರಿತ ಕ್ರಿಯೆಗಳು, ‌ವಿಷಯ ನಿರೂಪಣೆ ಮತ್ತು ಸಮುದಾಯ ಆಧಾರಿತ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿವೆ’ ಎನ್ನುತ್ತಾರೆ ಶಾಲೆಯೊಂದರ ಅಧ್ಯಕ್ಷ ಮತ್ತು ದೆಹಲಿ ರಾಜ್ಯ ಸಾರ್ವಜನಿಕ ಶಾಲಾ ನಿರ್ವಹಣಾ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಜೈನ್.

ಮಕ್ಕಳಿಗೆ ನೀಡುವ ಭಾರಿ ಪ್ರಮಾಣದ ಹೋಂವರ್ಕ್ ಬಗ್ಗೆ ಬಹಳ ಹಿಂದಿನಿಂದಲೂ ಆತಂಕ ವ್ಯಕ್ತವಾಗುತ್ತಲೇ ಇತ್ತು. ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿ– 2018 (ಎಸ್‌ಎಸ್‌ಇಆರ್) ನಗರ ಪ್ರದೇಶಗಳ ಶೇ 74ರಷ್ಟು ವಿದ್ಯಾರ್ಥಿಗಳಿಗೆ ಹೋಂವರ್ಕ್‌ ನೀಡಲಾಗುತ್ತಿದೆ ಎಂದು ಹೇಳಿದೆ. ಆದರೂ ಕಲಿಕಾ ನ್ಯೂನತೆಗಳು ಕಂಡುಬಂದಿದ್ದು, ಇದು ‘ಭಾರಿ ಪ್ರಮಾಣ’ದಲ್ಲಿ ನೀಡಲಾಗುವ ಹೋಂವರ್ಕ್‌ನ ಉಪಯುಕ್ತತೆ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ. 

ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಉತ್ತೇಜಿಸುವ ದಿಸೆಯಲ್ಲಿ ಹೋಂವರ್ಕ್‌ನ ಪರಿಕಲ್ಪನೆ ಬದಲಾಗುತ್ತಿದೆ. ಇದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್ಇಪಿ) ಭಾಗಶಃ ಪ್ರೇರಣೆಯಾಗಿದೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಎನ್‌ಇಪಿ ಜಾರಿಯಾದ ನಂತರ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಮತ್ತು ಹಲವು ರಾಜ್ಯಗಳ ಶಿಕ್ಷಣ ಮಂಡಳಿಗಳು ವಿದ್ಯಾರ್ಥಿಗಳಿಗೆ ‘ಆಹ್ಲಾದಕರ ಎನಿಸುವ, ಪ್ರಾಯೋಗಿಕವಾದ ಮತ್ತು ಅನ್ವಯಿಕತೆ-ಆಧಾರಿತ’ ಕಾರ್ಯಗಳನ್ನು ನಿಯೋಜಿಸುವ ಬಗ್ಗೆ ಶಿಕ್ಷಕರಿಗೆ ಸುತ್ತೋಲೆಗಳನ್ನು ಹೊರಡಿಸಿವೆ.

‘ಬರೀ ನೆನಪಿಟ್ಟುಕೊಂಡ ಸಂಗತಿಗಳಿಗೆ ಒತ್ತು ನೀಡುವ ಬದಲು, ವಿದ್ಯಾರ್ಥಿಗಳು ‘ಏಕೆ’ ಮತ್ತು ‘ಹೇಗೆ’ ಎಂಬ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವಂತಹ ಹೋಂವರ್ಕ್‌ ಇಂದು ಅಗತ್ಯವಿದೆ. ಕಂಠಪಾಠ ಮಾಡುವ ಪದ್ಧತಿಯು ಸಂಕೀರ್ಣವೂ ಅಗತ್ಯವೂ ಆದ ವಿಷಯಗಳ ಕಲಿಕೆಗೆ ತೊಡಕನ್ನು ಉಂಟುಮಾಡುತ್ತದೆ. ಕೇವಲ ಪಠ್ಯಪುಸ್ತಕಗಳನ್ನು ಓದುವ ಬದಲು ಪ್ರಯೋಗಗಳು, ಪ್ರಾಜೆಕ್ಟ್‌ಗಳು ಮತ್ತು ಹೊಸ ಸವಾಲುಗಳನ್ನು ಎದುರಿಸುವುದಕ್ಕೆ ಆದ್ಯತೆ ನೀಡುವ ಮೂಲಕ ಕಲಿಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ’ ಎಂದು ಸಿಬಿಎಸ್ಇಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಈ ಪರಿವರ್ತನೆಯಲ್ಲಿ ತಂತ್ರಜ್ಞಾನವೂ ಪ್ರಮುಖ ಪಾತ್ರ ವಹಿಸಿದೆ. ಡಿಜಿಟಲ್ ತರಗತಿಗಳು ಹೆಚ್ಚಾಗುವುದರೊಂದಿಗೆ, ವಿದ್ಯಾರ್ಥಿಗಳಿಗೆ ವಿಡಿಯೊಗಳನ್ನು ರೂಪಿಸಲು, ಸ್ಲೈಡ್ ಶೋಗಳನ್ನು ತಯಾರಿಸಲು ಅಥವಾ ಅಸೈನ್‌ಮೆಂಟ್‌ಗಳನ್ನು ಪೂರ್ಣಗೊಳಿಸುವುದಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಲು ಸೂಚಿಸಲಾಗುತ್ತದೆ. ಕೆಲವು ಶಾಲೆಗಳಲ್ಲಿ ಹೋಂವರ್ಕ್‌ ಪಠ್ಯಪುಸ್ತಕಗಳ ವ್ಯಾಪ್ತಿಯನ್ನು ಮೀರಿ ಮುಂದೆ ಸಾಗಿದ್ದು, ಕುಟುಂಬದ ಸದಸ್ಯರನ್ನು ಸಂದರ್ಶಿಸುವುದು, ಅಡುಗೆ ತೋಟವನ್ನು ನಿರ್ವಹಿಸುವುದು ಅಥವಾ ಸ್ಥಳೀಯ ಸಂಪ್ರದಾಯಗಳನ್ನು ದಾಖಲಿಸುವಂತಹ ಚಟುವಟಿಕೆಗಳಿಗೆ ವಿಸ್ತರಿಸಿದೆ.

ಮಕ್ಕಳು ಉರು ಹೊಡೆಯುವ ಪದ್ಧತಿಯಿಂದ ಮುಕ್ತರಾಗುವುದನ್ನು ಬಹುತೇಕ ‍ಪೋಷಕರು ಸ್ವಾಗತಿಸಿದ್ದಾರೆ. ಕೆಲವರು ಮಾತ್ರ ಪ್ರಾಜೆಕ್ಟ್ ಆಧಾರಿತವಾದ, ಹೆಚ್ಚು ಕೆಲಸ–ಕೌಶಲ ಬೇಡುವ ಹೋಂವರ್ಕ್‌ ಪೋಷಕರ ಮೇಲಿನ ಅವಲಂಬನೆಯನ್ನು ಹೆಚ್ಚಿಸುತ್ತದೆ ಮತ್ತು ಕಲಿಕೆಯ ಅಂತರವನ್ನು ವಿಸ್ತರಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

‘ಮಕ್ಕಳು ಹೋಮ್‌ವರ್ಕ್‌ ಹೆಸರಿನಲ್ಲಿ ನಕಲು ಮಾಡುವುದರಲ್ಲೇ ಗಂಟೆಗಟ್ಟಲೆ ಕಳೆಯುತ್ತಿಲ್ಲ ಎಂದು ನಮಗೆ ಸಂತೋಷವಾಗಿದೆ. ಆದರೆ ಸೃಜನಶೀಲತೆಯ ಹೆಸರಿನಲ್ಲಿ ಪೋಷಕರೇ  ಹೋಂವರ್ಕ್‌ ಮಾಡುವಂತೆ ಆಗಬಾರದು. ಪೋಷಕರ ಮೇಲ್ವಿಚಾರಣೆ ಅಥವಾ ಅಲ್ಪ ನೆರವನ್ನಷ್ಟೇ ಬೇಡುವ ರೀತಿಯಲ್ಲಿ ಅದು ಇರಬೇಕು’ ಎಂದು ಪೋಷಕರಾದ ದೆಹಲಿಯ ದಿವಾಂಶಿ ಶ್ರೇಯ್ ಹೇಳುತ್ತಾರೆ.

‘ತರಗತಿಯ ಕಲಿಕೆ ಮತ್ತು ಸ್ವಯಂ ಅಧ್ಯಯನದ ನಡುವಿನ ಪ್ರಮುಖ ಸೇತುವೆ ಹೋಂವರ್ಕ್. ಆದರೆ, ಅದು ಮಕ್ಕಳನ್ನು ಹೈರಾಣ ಮಾಡುವಂತೆ ಇರಬಾರದು’ ಎನ್ನುವುದು ಶಿಕ್ಷಣ ತಜ್ಞೆ ಮೀತಾ ಸೇನ್‌ಗುಪ್ತಾ ಅವರ ನುಡಿ. 

ಸೃಜನಶೀಲತೆಯ ಹೆಸರಿನಲ್ಲಿ ಸ್ಕ್ರ್ಯಾಪ್ ಬುಕ್‌ಗಳನ್ನು ಮಾಡುವ ಬದಲು ನನ್ನ ಮಗುವಿಗೆ ಮಣ್ಣಿನಲ್ಲಿ ಆಟವಾಡುವುದು, ನೆರೆಯ ಮಕ್ಕಳೊಂದಿಗೆ ಸೇರುವುದು ಮತ್ತು ಜನರೊಂದಿಗೆ ಸಂವಹನ ನಡೆಸುವಂತಹ ಹೋಂವರ್ಕ್ ನೀಡುತ್ತಿರುವುದರಿಂದ ನನಗೆ ಸಂತೋಷವಾಗಿದೆ. ಮಕ್ಕಳು ಟಿ.ವಿ, ಮೊಬೈಲ್ ಪರದೆಗಳಿಗೆ ಅಂಟಿಕೊಂಡಿರುವ ಪ್ರಸ್ತುತ ಸ್ಥಿತಿಯಲ್ಲಿ, ದಶಕಗಳ ಹಿಂದೆ ನಮ್ಮ ದಿನಚರಿಯ ಅತ್ಯಂತ ಸ್ವಾಭಾವಿಕ ಭಾಗವಾಗಿದ್ದ ಈ ರೀತಿಯ ಹೋಂವರ್ಕ್ ಮಕ್ಕಳಿಗೆ ಬೇಕಾಗಿದೆ.

–ತುಷಾರ್ ಮೆಹ್ತಾ, ‍ಪೋಷಕ, ಸಾಫ್ಟ್‌ವೇರ್ ಡೆವಲಪರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.