ADVERTISEMENT

5 ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್‌ಭೂಗೋಳ ಬಿ.ಎಸ್ಸಿ–ಎಂ.ಎಸ್ಸಿ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ

ಆತ್ರೇಯ
Published 29 ಮೇ 2022, 19:35 IST
Last Updated 29 ಮೇ 2022, 19:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವವಿದ್ಯಾಲಯ ಮಟ್ಟದಲ್ಲಿ ಮೊದಲ ಬಾರಿಗೆ ‘ರಾಷ್ಟ್ರೀಯ ಹೊಸ ಶಿಕ್ಷಣ ನೀತಿ 2020' ಅನುಷ್ಠಾನಗೊಳಿಸುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯ, ‘ಭೂಗೋಳ ವಿಜ್ಞಾನ'ದಲ್ಲಿ ಹೊಸದಾಗಿ ‘ಬಿ.ಎಸ್ಸಿ ಮತ್ತು ಎಂ.ಎಸ್ಸಿ ಸಂಯೋಜಿತ (ಇಂಟಿಗ್ರೇಟೆಡ್‌)’ ಐದು ವರ್ಷ ಅವಧಿಯ ಕೋರ್ಸ್‌ ಆರಂಭಿಸುತ್ತಿದೆ.

ವಿದ್ಯಾರ್ಥಿಗಳ ಕೌಶಲ ವೃದ್ಧಿ, ಉದ್ಯೋಗಾವಕಾಶ ಹಾಗೂ ಜಾಗತಿಕ ಮಟ್ಟದಲ್ಲಿ ಇತರರ ಜೊತೆ ಪ್ರತಿಸ್ಪರ್ಧಿಸುವ ಉದ್ದೇಶದಿಂದ ಹೊಸ ಕೋರ್ಸ್ ವಿನ್ಯಾಸಗೊಳಿಸಲಾಗಿದ್ದು, ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಮೂರು ರೀತಿಯಲ್ಲಿ ನಿರ್ಗಮಿಸುವ(Exit Options) ಆಯ್ಕೆಯನ್ನು ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಚೌಕಟ್ಟಿನಲ್ಲಿರುವ ಈ ಕೋರ್ಸ್‌, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2022–23) ಆರಂಭವಾಗಲಿದೆ.

ಯಾರಿಗೆ ಪ್ರವೇಶಾವಕಾಶ

ADVERTISEMENT

ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ 10+2 ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು. ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಭೂಗೋಳ ವಿಜ್ಞಾನವನ್ನು ಒಂದು ವಿಷಯವನ್ನಾಗಿ ಓದಿದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರು.

ಕೋರ್ಸ್‌ ಕಲಿಕೆಯಿಂದ ವಿಫುಲ ಅವಕಾಶ:

ಪ್ರತ್ಯೇಕವಾಗಿ ಕಲಿಯುವ ಭೂಗೋಳ ವಿಜ್ಞಾನದ ಬಿ.ಎಸ್ಸಿ ಹಾಗೂ ಎಂ.ಎಸ್ಸಿ ಪದವಿಗಿಂತ 'ಇಂಟಿಗ್ರೇಟೆಡ್’ ಕೋರ್ಸ್‌ ಹೆಚ್ಚು ಭಿನ್ನವಾಗಿದೆ. ಕೋರ್ಸ್‌ ಕಲಿಕೆಯ ಅಂತಿಮ ವರ್ಷದಲ್ಲಿ ಭೂಗೋಳ, ಜಿಯೊಇನ್‌ಫಾರ್ಮಾಟಿಕ್ಸ್ ಹಾಗೂ ನೈಸರ್ಗಿಕ ವಿಪತ್ತು ನಿರ್ವಹಣೆ ವಿಶೇಷ ವಿಷಯಗಳ(Specialisation) ಆಯ್ಕೆಗೆ ಅವಕಾಶವಿದೆ. ಈ ಮೂರರಲ್ಲಿ ಒಂದು ವಿಷಯ ಆಯ್ಕೆ ಮಾಡಿಕೊಂಡು ಅಂತಿಮ ವರ್ಷದಲ್ಲಿ ಅಧ್ಯಯನ ನಡೆಸಬಹುದಾಗಿದೆ. ಇದು ದೇಶದಲ್ಲಿ ಮೊದಲ ಪ್ರಯತ್ನವಾಗಿದ್ದು, ಇದರ ಕಲಿಕೆಯಿಂದ ನಾನಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ದೊರೆಯಲಿವೆ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳ ವಿಜ್ಞಾನ ವಿಭಾಗದ ಚೇರ್ಮನ್ ಅಶೋಕ ಡಿ. ಹಂಜಗಿ.

ಇಂಧನ, ನೀರು, ಜೀವ ವೈವಿಧ್ಯ, ಹವಾಮಾನ, ನೈಸರ್ಗಿಕ ವಿಪತ್ತು, ಜನಸಂಖ್ಯೆ ಮತ್ತು ಇತರೆ ಪ್ರಮುಖ ವಿಷಯಗಳನ್ನು ಕೋರ್ಸ್‌ ತಿಳಿಸಿಕೊಡುತ್ತದೆ. ಭೂಮಿಯ ಮೇಲ್ಮೈ ಲಕ್ಷಣಗಳು, ಅಂತರ್ಜಲ ಮಟ್ಟ, ಭೂ ಕುಸಿತ, ಸರೋವರ, ಜಲ ಸಂಗ್ರಹಾಗಾರಗಳು ಮತ್ತು ನದಿ ಪಾತ್ರದ ಬಗ್ಗೆ ವೈಜ್ಞಾನಿಕ ವರದಿ ಸಿದ್ಧಪಡಿಸುವ ಜ್ಞಾನವೂ ಕೋರ್ಸ್‌ನಿಂದ ಬೆಳೆಯಲಿದೆ ಎಂಬುದು ಅವರ ಅಭಿಪ್ರಾಯ.

ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ನೆರವಾಗುವ ಜೊತೆಗೆ, ಉದ್ಯೋಗ ಪಡೆಯಲು ಕೋರ್ಸ್ ಸಹಾಯವಾಗುತ್ತದೆ ಎನ್ನುತ್ತಾರೆ ಅವರು.

ಮೂರು ನಿರ್ಗಮನದ ಆಯ್ಕೆಗಳು

5 ವರ್ಷ ಅವಧಿ 10 ಸೆಮಿಸ್ಟರ್‌ ಒಳಗೊಂಡ ಕೋರ್ಸ್‌ ಇದಾಗಿದೆ. ‘ರಾಷ್ಟ್ರೀಯ ಹೊಸ ಶಿಕ್ಷಣ ನೀತಿ 2020' ಅನ್ವಯ ಮೂರು ನಿರ್ಗಮನದ ಆಯ್ಕೆಗಳು ಕೋರ್ಸ್‌ನಲ್ಲಿವೆ.

* ಆರು ಸೆಮಿಸ್ಟರ್‌ (ಮೂರು ವರ್ಷ) ಪೂರ್ಣಗೊಳಿಸಿ ನಿರ್ಗಮಿಸಲು ಬಯಸುವ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ (ಭೂಗೋಳ ವಿಜ್ಞಾನ) ಪದವಿ ದೊರೆಯಲಿದೆ.

* 8 ಸೆಮಿಸ್ಟರ್ (4 ವರ್ಷ) ಪೂರ್ಣಗೊಳಿಸುವವರಿಗೆ ಬಿ.ಎಸ್ಸಿ (ಭೂಗೋಳ ವಿಜ್ಞಾನ) ಆನರ್ಸ್‌ ಪದವಿ ನೀಡಲಾಗುತ್ತದೆ.

* 10 ಸೆಮಿಸ್ಟರ್‌ (ಐದು ವರ್ಷ) ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ–ಎಂ.ಎಸ್ಸಿ 'ಇಂಟಿಗ್ರೇಟೆಡ್’ ಪದವಿ ಜೊತೆಯಲ್ಲಿ ಭೂಗೋಳ ವಿಜ್ಞಾನ ಅಥವಾ ಭೂಗೋಳ ಇನ್‌ಫಾರ್ಮೆಟಿಕ್ಸ್ ಅಥವಾ ನೈಸರ್ಗಿಕ ವಿಪತ್ತು ನಿರ್ವಹಣೆ ವಿಶೇಷ ಅಧ್ಯಯನ ಅರ್ಹತೆ ದೊರೆಯಲಿದೆ.

ಉದ್ಯೋಗಾವಕಾಶ

ಇಂಟಿಗ್ರೇಟೆಡ್ ಭೂಗೋಳ ವಿಜ್ಞಾನ ಪದವಿ(ಬಿ.ಎಸ್ಸಿ) ಪೂರ್ಣಗೊಳಿಸಿದವರಿಗೆ ಭಾರತೀಯ ಸರ್ವೆ ಇಲಾಖೆ, ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ, ಹೈದರಾಬಾದ್‌ನಲ್ಲಿರುವ ಭಾರತೀಯ ಭತ್ತದ ತಳಿ ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಮಣ್ಣು ಸಮೀಕ್ಷೆ ಮತ್ತು ಭೂ ಬಳಕೆ ಯೋಜನಾ ಸಂಸ್ಥೆ, ನವದೆಹಲಿಯ ಭಾರತೀಯ ಜನಗಣತಿ ಸಂಸ್ಥೆ, ಡಿಆರ್‌ಡಿಎಒ, ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು ಹಾಗೂ ಸರ್ಕಾರದ ವಿವಿಧ ಇಲಾಖೆ ಹುದ್ದೆಗಳಿಗೆ ಸೇರುವ ಅವಕಾಶವಿರುತ್ತದೆ. ಕಾರ್ಟೊಗ್ರಾಫರ್, ನಿಸರ್ಗ ಸಂರಕ್ಷಣಾ ಅಧಿಕಾರಿ, ಶಾಲಾ ಶಿಕ್ಷಕರು, ಪ್ರವಾಸೋದ್ಯಮ ಅಧಿಕಾರಿ, ಸಾರಿಗೆ ಯೋಜನಾ ಅಧಿಕಾರಿ, ಸಹಾಯಕ ಪ್ರಾಧ್ಯಾಪಕ, ಭೌಗೋಳಿಕ ಸಂಶೋಧಕ ಸೇರಿ ನಾನಾ ಹುದ್ದೆಗಳಿಗೂ ಅರ್ಹತೆ ಹೊಂದಿರುತ್ತಾರೆ.

ಭೂಗೋಳ ಇನ್‌ಫಾರ್ಮೆಟಿಕ್ಸ್‌ ವಿಶೇಷ ವಿಷಯ ಕಲಿತವರಿಗೆ, ರಾಷ್ಟ್ರೀಯ ಸೂಕ್ಷ್ಮ ಸಂವೇದಿ ಅನ್ವಯಿಕ ಕೇಂದ್ರ, ಈಶಾನ್ಯ ಬಾಹ್ಯಾಕಾಶ ಅನ್ವಯಿಕ ಕೇಂದ್ರ, ರಾಜ್ಯ ಜಿಐಎಸ್‌ ಅಭಿವೃದ್ಧಿ ಕೋಶ, ಸಾರ್ವಜನಿಕ ಕಲ್ಯಾಣ ಇಲಾಖೆ, ಪರಿಸರ ಸರ್ವೇಕ್ಷಣಾ ಪ್ರಾಧಿಕಾರ (ಇಐಎ) ಹಾಗೂ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಾವಕಾಶಗಳಿವೆ.

ನೈಸರ್ಗಿಕ ವಿಪತ್ತು ನಿರ್ವಹಣೆ ವಿಷಯದೊಂದಿಗೆ ಕೋರ್ಸ್‌್ ಪೂರ್ಣಗೊಳಿಸಿದವರಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತೀಯ ಹವಾಮಾನ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶಗಳು ದೊರೆಯುತ್ತವೆ.

ಕೋರ್ಸ್‌, ಪಠ್ಯಕ್ರಮ ಮತ್ತಿತರ ಮಾಹಿತಿಗಳಿಗಾಗಿ ಈ ಲಿಂಕ್‌ ಕ್ಲಿಕ್ ಮಾಡಿ
https://eng.bangaloreuniversity.ac.in/science/geog ಹಾಗೂ ಇಮೇಲ್ : geography@bub.ernet.in ಮೂಲಕವೂ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.