ADVERTISEMENT

ಸಮಾಧಾನ: ಹಟಮಾರಿ ಮಗಳನ್ನು ತಿದ್ದುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 23:30 IST
Last Updated 20 ಜುಲೈ 2025, 23:30 IST
   

ನನಗೆ ಮಗ ಮತ್ತು ಮಗಳಿದ್ದಾರೆ. ಮಗ ಎಂಜಿನಿಯರಿಂಗ್‌ ಓದುತ್ತಿದ್ದಾನೆ. ಸೂಕ್ಷ್ಮ ಸ್ವಭಾವ. ಆದರೆ, ಮಗಳು 8ನೇ ತರಗತಿ ಕಲಿಯುತ್ತಿದ್ದಾಳೆ. ಆದರೆ, ಹಟದ ಸ್ವಭಾವ.  ಏತಿ ಅಂದರೆ ಪ್ರೇತಿ ಎನ್ನುತ್ತಾಳೆ. ಓದಿನಲ್ಲಿ ಜಾಣೆ, ಕೌಶಲದಲ್ಲಿಯೂ ಮುಂದು, ಭಾಷಣದಲ್ಲಿ, ಕಲೆ, ಸಂಗೀತ... ಹೀಗೆ ಎಲ್ಲರದಲ್ಲಿಯೂ ಆಸಕ್ತಿ. ಇಂಥದ್ದು ಗೊತ್ತಿಲ್ಲ ಅನ್ನುವ ಹಾಗಿಲ್ಲ. ಆದರೆ ಅವಳ‌ ಹಟದ ಸ್ವಭಾವ ಮಾತ್ರ ದಿನೇ ದಿನೇ ಹೆಚ್ಚುತ್ತಿದೆ. ಬೇಕು ಅಂದರೆ ಬೇಕೇಬೇಕು ಅನ್ನುವ ಸ್ಥಿತಿಗೆ ತಲುಪಿದೆ. ಶಾಲೆಯಲ್ಲಿಯೂ ಈ ಧೋರಣೆಗೆ ದೂರುಗಳು ಹೆಚ್ಚುತ್ತಿವೆ. ಅವಳನ್ನು ತಿದ್ದುವುದು ಹೇಗೆ?  ಬಂಡಾಯಗಾರ್ತಿಯಂತೆ ಇರುವ ಅವಳನ್ನು ಸಂಯಮದ ದಿಕ್ಕಿಗೆ ಕರೆದೊಯ್ಯುವುದು ಹೇಗೆ?

ನಿವೇದಿತಾ ರವಿಶಂಕರ್, ಶಿವಮೊಗ್ಗ

ನಿಮ್ಮ ಮಗಳ ಸ್ವಭಾವ ಸ್ವಲ್ಪ ವಿಕೋಪದ ದಾರಿಯಲ್ಲಿದೆ. ಸಾಧಾರಣವಾಗಿ ಯಾವುದೇ ಮಗುವಿಗೆ ತಾನು ಕೆಟ್ಟ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು ಇಷ್ಟ ಇರುವುದಿಲ್ಲ. ತೀರಾ ನಕಾರಾತ್ಮಕ ವಾತಾವರಣದಲ್ಲಿ ಬೆಳೆದ ಕೆಲವರು ಇದಕ್ಕೆ ವ್ಯತಿರಿಕ್ತವಾಗಿ ಇರುತ್ತಾರೆ. ಇಲ್ಲಿ ಹಾಗೇನಿಲ್ಲ.

ADVERTISEMENT

ಇನ್ನು, ನಿಮ್ಮ ದಾಂಪತ್ಯ ಜೀವನ ಹೇಗಿದೆ? ಮನೆಯಲ್ಲಿ ನೀವು ಗಂಡ– ಹೆಂಡತಿ ಪದೇ ಪದೇ ಜಗಳವಾಡುತ್ತೀರಾ? ನಿಮ್ಮಿಬ್ಬರಲ್ಲಿ ಪರಸ್ಪರ ಯಾರ ಮೇಲಾದರೂ ಇನ್ನೊಬ್ಬರು ದಬ್ಬಾಳಿಕೆ ಮಾಡುತ್ತೀರಾ? ವಿಶೇಷವಾಗಿ ನಿಮ್ಮ ಗಂಡ ನಿಮಗೆ ಹೊಡೆದು, ಬೈದು ಮಾಡುತ್ತಾರಾ? ಈಗ ಮಗ ನಿಮ್ಮ ಜೊತೆಗೆ ಇಲ್ಲವಾ? ಅವನ ಸ್ವಭಾವ ಹೇಗಿದೆ? ಅಣ್ಣ– ತಂಗಿಯ ನಡುವಿನ ಬಾಂಧವ್ಯ ಹೇಗಿದೆ? ಇವೆಲ್ಲವುಗಳ ಜೊತೆಗೆ ಇನ್ನಷ್ಟು ವಿವರಗಳು ಬೇಕಾಗುತ್ತವೆ, ಇರಲಿ. ಮನೆಯಲ್ಲಿ ಸಹನೀಯ ವಾತಾವರಣ ಇಲ್ಲದಿರುವಾಗಲೂ ಮಕ್ಕಳು ಅಸಹಜ ಸ್ವಭಾವವನ್ನು ಮೈಗೂಡಿಸಿಕೊಳ್ಳುತ್ತಾರೆ.

ನಿಮ್ಮ ಮಗಳಿಗೆ ‘ಟೀನೇಜ್’ ಶುರುವಾಗಿದೆ. ಮನೋದೈಹಿಕ ಬದಲಾವಣೆಗಳು ಆಗುತ್ತಿವೆ. ಅವಳಿಗೆ ಇವೆಲ್ಲವೂ ಸೋಜಿಗವೆನ್ನಿಸಬಹದು. ಅವುಗಳನ್ನು ನಿರ್ವಹಿಸುವುದು ತಿಳಿಯದಿರಬಹುದು. ನೀವಾಗಲೀ, ನಿಮ್ಮ ತಾಯಿಯಾಗಲೀ ಅವಳಿಗೆ ಈ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಟ್ಟಿರಲಿಕ್ಕಿಲ್ಲ. ಆಕೆ ಅಪ್ಪನನ್ನೋ ಅಣ್ಣನನ್ನೋ ಅಥವಾ ಬೇರೆ ಯಾರನ್ನೋ ಅನುಕರಿಸುತ್ತಿರಬಹುದು. ಅವಳಲ್ಲಿ ಬದಲಾಗುತ್ತಿರುವ ಸ್ವಭಾವದಿಂದ ಅವಳಿಗೆ ಏನೇನೋ ಲಾಭಗಳಾಗಿರಬಹುದು. ಇದು ಅವಳ ಹೊರ ಮನಸ್ಸಿಗೆ ಗೊತ್ತಿರಲಿಕ್ಕಿಲ್ಲ. ಸುಪ್ತ ಮನಸ್ಸಿನಲ್ಲಿ ಗಟ್ಟಿಗೊಂಡಿರುವ ಆಲೋಚನೆಗಳು, ಪ್ರಕರಣಗಳು ಹೀಗೆ ವ್ಯಕ್ತವಾಗುತ್ತಿರಬಹುದು.

ಇನ್ನು, ಮನೆಯಲ್ಲಿ ತನಗೆ ಪಾಲಕರ ಪ್ರೀತಿ ಸಿಗುತ್ತಿಲ್ಲ, ಶಾಲೆಯಲ್ಲಿ ಶಿಕ್ಷಕರು ತನಗೆ ‘ಮಹತ್ವ’ ಕೊಡುತ್ತಿಲ್ಲ ಎಂದು ಆಕೆಗೆ ಅನ್ನಿಸಿರಬಹುದು. ನೀವು ಮೊದಲ ಪ್ರಾಶಸ್ತ್ಯವನ್ನು ಮಗನಿಗೆ ಕೊಟ್ಟಿದ್ದು ಜಾಸ್ತಿಯಾಗಿರಬಹುದು. ಅವಳು ಇಷ್ಟಪಟ್ಟು ಮಾಡಿದ್ದನ್ನು ನೀವು ತಿರಸ್ಕರಿಸಿರಬಹುದು. ಅಷ್ಟೆಲ್ಲಾ ಪ್ರತಿಭಾವಂತಳಾಗಿದ್ದರೂ ಆಕೆಗೆ ಸಮಾಧಾನ ಇಲ್ಲವಾಗಿರಬಹುದು. ಆಕೆ ಮಾಡುವ ಯಾವುದೇ ಕೆಲಸಕ್ಕೂ ಅವಳ ನಿರೀಕ್ಷೆಯಷ್ಟು ಮನ್ನಣೆ ಸಿಕ್ಕಿರಲಿಕ್ಕಿಲ್ಲ. ಶಾಲೆಯಲ್ಲಿಯೋ ಮನೆಯಲ್ಲಿಯೋ ಸಂಬಂಧಿಕರ ಎದುರಿಗೋ ಅವಳಿಗೆ ಅವಮಾನ ಆಗಿರಬೇಕು. ಇಂಥವೇ ಅನೇಕಾನೇಕ ಕಾರಣಗಳಿಂದ (ಅಂಥ ಸನ್ನಿವೇಶಗಳು ನಿಮ್ಮ ಗಮನಕ್ಕೆ ಬಂದಿರಲಿಕ್ಕಿಲ್ಲ ಅಥವಾ ನಿಮಗೆ ಸಹಜ ಎನ್ನಿಸಿದ್ದಿರಲೂಬಹುದು) ಅವಳ ಮನಸ್ಸಿಗೆ ಗಾಸಿಯಾಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆಕೆ ಸಿಡಿದೆದ್ದಿರಬಹುದು, ಹಟದಿಂದ ಪ್ರತಿಭಟಿಸುತ್ತಿರಬಹುದು.

ಇಂಥ ಸಂದರ್ಭಗಳಲ್ಲಿ, ನೀವು ಅವಳಿಗೆ ಒಂದಿಷ್ಟು ಜಾಸ್ತಿ ಪ್ರೀತಿ, ಕಾಳಜಿಯನ್ನು ತೋರಿಸಬೇಕು. ಇಬ್ಬರ ಬಗ್ಗೆಯೂ ಪಾಲಕರಾದ ನಿಮಗೆ ಸಮಾನವಾದ ಪ್ರೀತಿ, ಕಾಳಜಿ ಇದೆ ಎನ್ನುವುದನ್ನು ತಿಳಿಸಿ ಹೇಳಬೇಕು. ಆಕೆ ಅದನ್ನು ನಂಬುವ ಹಾಗೆ ನೀವು ನಡೆದುಕೊಳ್ಳಬೇಕು. ಅವಳಲ್ಲಿರುವ ವಿಶೇಷ ಗುಣವನ್ನು, ಅವಳ ಚಟುವಟಿಕೆಗಳನ್ನು ನೀವು ಮೆಚ್ಚಿ, ಹೊಗಳಬೇಕು. ನಿಮ್ಮೆಲ್ಲರ ನಡುವೆ ಆಕೆಯೂ ಒಬ್ಬ ಮಹತ್ವದ ವ್ಯಕ್ತಿ ಎನ್ನುವುದು ಅವಳಿಗೆ ತಿಳಿಯುವ ಹಾಗೆ ನೀವು ಮಾತನಾಡಬೇಕು. ಬಹುತೇಕ ಎಂಥದ್ದೇ ಸಮಸ್ಯೆ ಇದ್ದರೂ ‘ಪ್ರೀತಿ’ ಎನ್ನುವ ಔಷಧಿಯಿಂದ ಕಡಿಮೆಯಾಗುತ್ತದೆ.

ಅವಳ ದಿನಚರಿಯ ಬಗ್ಗೆ ಗಮನವಿಡಬೇಕು. ಸಾಕಷ್ಟು ನೀರು ಕುಡಿಯುತ್ತಾಳಾ, ಸರಿಯಾಗಿ ನಿದ್ರೆ ಮಾಡುತ್ತಾಳಾ, ಆಟೋಟಗಳಲ್ಲಿ ಭಾಗವಹಿಸುತ್ತಾಳಾ, ಯಾವ ಕಾರ್ಯಕ್ರಮಗಳನ್ನು, ಸೀರಿಯಲ್ಲುಗಳನ್ನು ನೋಡುತ್ತಾಳೆ ಎನ್ನುವಂತಹ ವಿಷಯಗಳನ್ನು ಪಾಲಕರು ಗಮನಿಸಬೇಕು.

ಈಗೀಗ ಮಕ್ಕಳು ಹೆಚ್ಚೆಚ್ಚು ನಾಜೂಕಿನವರಾಗುತ್ತಿದ್ದಾರೆ. ಅವರನ್ನು ಅಷ್ಟೇ ನಯವಾಗಿ, ನಾಜೂಕಾಗಿ ನಡೆಸಿಕೊಳ್ಳಬೇಕು. ಮಕ್ಕಳನ್ನು ಬೆಳೆಸುವುದೆಂದರೆ, ಮಣ್ಣಿನ ಮುದ್ದೆಯಿಂದ ಮಡಕೆಯನ್ನು ಮಾಡಿದ ಹಾಗೆಯೇ. ಕಲ್ಲನ್ನು ಕೆತ್ತಿ ಶಿಲ್ಪವನ್ನಾಗಿ ಮಾಡುವುದನ್ನು, ಮಡಕೆ ಮಾಡುವುದನ್ನು ಕಲಿತುಕೊಂಡಂತೆಯೇ ‘ಪೇರೆಂಟಿಂಗ್‌’ ಅನ್ನೂ ಕಲಿತುಕೊಳ್ಳಬೇಕಾಗುತ್ತದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.