ADVERTISEMENT

ಏಕಾಗ್ರತೆಯಿಂದ ಓದುವುದು ಹೇಗೆ?

ವಿನುತ ಮುರಳೀಧರ
Published 10 ಫೆಬ್ರುವರಿ 2020, 19:45 IST
Last Updated 10 ಫೆಬ್ರುವರಿ 2020, 19:45 IST
A group of students are indoors in their classroom. One woman is sitting at a desk and using a smartphone.Sending A Message In Class
A group of students are indoors in their classroom. One woman is sitting at a desk and using a smartphone.Sending A Message In Class   

ಈ ಹದಿಹರೆಯವೆಂಬುದೇ ಹಾಗೆ, ಉಪದೇಶವನ್ನು ಇಷ್ಟಪಡದ ವಯಸ್ಸು. ಅದರಲ್ಲೂ ಪರೀಕ್ಷೆ ಹತ್ತಿರವಿರುವಾಗ ಆಕರ್ಷಣೆಗಳಿಂದ ದೂರವಿರಿ ಎಂದಾಗ ಸಿಟ್ಟು ಬರುವುದು ಸಹಜ. ಆದರೆ ಮುಂದಿರುವ ಗುರಿ ನೆನಪಿಸಿಕೊಂಡರೆ ಮೊಬೈಲ್‌, ಟಿ.ವಿಯಂತಹ ಆಕರ್ಷಣೆಯಿಂದ ದೂರ ಉಳಿದು ಓದಿನ ಮೇಲೆ ಏಕಾಗ್ರತೆ ಸಾಧಿಸಬಹುದು.

ಹತ್ತನೆಯ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟಗಳು. ಮುಂದಿನ ವಿದ್ಯಾಭ್ಯಾಸದ ಪ್ರತಿ ಹಂತದಲ್ಲೂ ಹತ್ತನೇ ತರಗತಿಯ ಹಾಗೂ ದ್ವಿತೀಯ ಪಿಯುಸಿಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುವುದು ಇದಕ್ಕೆ ಕಾರಣ. ಹಾಗಾಗಿ ಪರೀಕ್ಷೆಗಾಗಿ ಓದುವುದು ಒಂದು ಕಡೆಯಾದರೆ, ಸರಿಯಾಗಿ ಓದಲು, ಓದಿದ್ದು ನೆನಪಿರುವಂತಾಗಲು ಕೆಲವು ಮಾನಸಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಓದಿನಿಂದ ವಿಮುಖರನ್ನಾಗಿ ಮಾಡಲು ಕೆಲವು ಆಕರ್ಷಣೆಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಅಂಕಗಳಿಕೆ ಸಾಧ್ಯ.

ಎಸ್ಸೆಸ್ಸೆಲ್ಸಿ ಓದುತ್ತಿರುವ ನೀವೆಲ್ಲರೂ ಹದಿಹರೆಯದವರು. ಸಾಧಾರಣವಾಗಿ 12– 18ರ ವಯಸ್ಸನ್ನು ಹದಿಹರೆಯವೆನ್ನಬಹುದು. ಈ ಹಂತದಲ್ಲಿ ದೇಹದಲ್ಲಿ ಹಾರ್ಮೋನ್‌ಗಳ ಹೆಚ್ಚಿನ ಸ್ರವಿಸುವಿಕೆಯಿಂದ ಮಾನಸಿಕ, ದೈಹಿಕ ಬದಲಾವಣೆಗಳು ಸಹಜ. ಇವನ್ನೆಲ್ಲಾ ಒಪ್ಪಿಕೊಂಡು ವಿದ್ಯಾಭ್ಯಾಸದತ್ತ ಗಮನ ನೀಡಿದರೆ ಗೆಲುವು ನಿಮ್ಮದೇ.

ADVERTISEMENT

ಮನಸ್ಸನ್ನು ಸೆಳೆದು ಅಭ್ಯಾಸಕ್ಕೆ ತೊಡಕುಂಟು ಮಾಡುವ ಆಕರ್ಷಣೆಗಳು ಹಾಗೂ ಅವುಗಳಿಂದ ದೂರ ಇರಲು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಮೊದಲು ನೋಡೋಣ.

ಮೊಬೈಲ್: ಇದು ವಿದ್ಯಾರ್ಥಿ ಜೀವನದಲ್ಲಿ ಅನಿವಾರ್ಯವೇನಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಓದಿ ಬೇಸರವಾದಾಗ ಸ್ನೇಹಿತರ ಜೊತೆ ಮಾತನಾಡಲು, ಯಾವುದಾದರೂ ವಿಷಯದ ಬಗ್ಗೆ ವಿವರ ಸಂಗ್ರಹಿಸಲು ಬಳಸಬಹುದು. ಅದಕ್ಕೆ ನಿಮಗೆ ನೀವೇ ಸಮಯ ನಿಗದಿ ಮಾಡಿಕೊಳ್ಳಿ. ಬಳಸಬೇಕೆಂದು ಅನಿಸಿದಾಗಲೆಲ್ಲಾ ನಿಮ್ಮ ಗುರಿಯನ್ನು ನೆನಪು ಮಾಡಿಕೊಳ್ಳಿ. ಓದುವ, ಮಲಗುವ, ಊಟ ಮಾಡುವ ಸ್ಥಳಗಳಲ್ಲಿ ಮೊಬೈಲ್‌ ಅನ್ನು ಪಕ್ಕಕ್ಕಿಟ್ಟುಕೊಳ್ಳಬೇಡಿ. ಹತ್ತಿರದಲ್ಲಿ ಮೊಬೈಲ್ ಕಾಣದಿದ್ದರೆ ಬಳಸುವುದೂ ಕಮ್ಮಿಯಾಗುತ್ತದೆ. ಒಂದೇ ಸಲಕ್ಕೆ ಅತಿ ಅವಲಂಬನೆಯಿಂದ ಹೊರ ಬರಲಾಗದು. ಹಾಗಾಗಿ ಹಂತ ಹಂತವಾಗಿ ಮೊಬೈಲ್ ಬಳಸುವುದನ್ನು ನಿಯಂತ್ರಿಸಿಕೊಳ್ಳಿ. ಮುಂಜಾನೆ ಏಳಲು ಅಲಾರ್ಮ್‌ ರೂಪದಲ್ಲಿ ಮೊಬೈಲ್ ಬೇಡ. ಸಾಧ್ಯವಾದರೆ ಅಲಾರ್ಮ್‌ ಗಡಿಯಾರಗಳನ್ನೇ ಉಪಯೋಗಿಸಿ. ಮೊಬೈಲ್ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡಿದಾಗ ಪದೇ ಪದೇ ಅತ್ತ ಗಮನ ಹರಿಯುವುದನ್ನು ತಪ್ಪಿಸಬಹುದು. ಮೊಬೈಲ್‌ನಲ್ಲಿರುವ ಗೇಮ್‌ಗಳು, ಅನಾವಶ್ಯಕ ಆ್ಯಪ್‌ಗಳನ್ನು ಡಿಲೀಟ್ ಮಾಡಿ.

ಟಿ.ವಿ: ನಿಮ್ಮ ಇಷ್ಟದ ಕಾರ್ಯಕ್ರಮ ಬರುವ ಸಮಯದಲ್ಲಿ ಟಿ.ವಿಯ ಮುಂದಿರದೆ ಮನೆಯಿಂದ ಹೊರಗೆ ಹೋಗಿ ಹೊರಾಂಗಣ ಆಟ ಅಥವಾ ಸ್ನೇಹಿತರೊಂದಿಗೆ ಗುಂಪು ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ. ಒಂದೆರಡು ದಿನ ಧಾರಾವಾಹಿ ನೋಡುವುದನ್ನು ತಪ್ಪಿಸಿಕೊಂಡರೆ ಮತ್ತೆ ನೋಡಬೇಕೆನ್ನುವ ಹಂಬಲ ಕಮ್ಮಿಯಾಗುವುದು. ನಿಮ್ಮಿಷ್ಟದ ಕಾರ್ಯಕ್ರಮವನ್ನು ದಿನದ ಒಂದರ್ಧ ಗಂಟೆ ಮಾತ್ರ ವೀಕ್ಷಿಸಿ. ನಿಮಗೆಂದೇ ಒಂದು ಪ್ರತ್ಯೇಕ ಟಿ.ವಿಯ ವ್ಯವಸ್ಥೆ ಬೇಡ. ಮನೆಯ ಸದಸ್ಯರೆಲ್ಲಾ ಒಟ್ಟಾಗಿ ವೀಕ್ಷಿಸಿದಾಗ ಎಲ್ಲರೂ ನೋಡುವ ಕಾರ್ಯಕ್ರಮ ನೋಡಲಷ್ಟೇ ಸಾಧ್ಯ. ನಿಮ್ಮಿಷ್ಟದ ಕಾರ್ಯಕ್ರಮ ನೋಡಲು ಅವಕಾಶವಿಲ್ಲದಾಗ ಟಿ.ವಿ ವೀಕ್ಷಣೆಯ ಆಸಕ್ತಿಯೂ ಕಡಿಮೆಯಾಗುವುದು.

ಪ್ರೀತಿ-ಪ್ರೇಮ: ಹದಿವಯಸ್ಸಲ್ಲಿ ವಿರುದ್ಧ ಲಿಂಗಿಗಳಲ್ಲಿ ಆಕರ್ಷಣೆ ಮೂಡುವುದು ಸಹಜ. ಆದರದು ಪ್ರೇಮವಲ್ಲ. ನಿಮ್ಮನ್ನು ಆಕರ್ಷಿಸಿದವರೊಂದಿಗೆ ಮಾತನಾಡಿ, ಆಟವಾಡಿ, ಸ್ನೇಹ ಬೆಳೆಸಿ. ಆದರೆ ಅದನ್ನೇ ಪ್ರೀತಿ- ಪ್ರೇಮವೆಂದು ತಲೆಕೆಡಿಸಿಕೊಳ್ಳುವುದಾಗಲಿ, ಶಾರೀರಿಕ ಸಂಪರ್ಕವಾಗಲಿ ಬೇಡವೇ ಬೇಡ.

ಜಂಕ್ ಫುಡ್: ಏನಾದರೂ ಕುರುಕಲು ತಿನ್ನುತ್ತಾ ಓದುವ ಅಭ್ಯಾಸದ ಬದಲು ಹಣ್ಣುಗಳು, ಮೊಳಕೆ ಬಂದ ಕಾಳು, ಹಸಿ ತರಕಾರಿ ಸೇವಿಸಿ. ಹಾಗೆಯೇ ಬೀದಿ ಬದಿಯ ಆಹಾರಗಳ ಸೇವನೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಪರೀಕ್ಷೆಯ ಸಮಯದಲ್ಲಿ ಆರೋಗ್ಯ ಕೈಕೊಟ್ಟರೆ ವರ್ಷಪೂರ್ತಿ ಓದಿದ್ದು ದಂಡ. ಪರೀಕ್ಷೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಸಭೆ ಸಮಾರಂಭಗಳಿಗೆ ಹೋಗುವುದನ್ನು ಆದಷ್ಟು ನಿಲ್ಲಿಸಿ. ಮನೆಯ ಆಹಾರ ಆರೋಗ್ಯಕ್ಕೆ ಒಳ್ಳೆಯದು.

ಇಂತಹ ಒಳಿತು ಕೆಡುಕುಗಳನ್ನು ಸರಿಯಾಗಿ ನಿರ್ಧರಿಸಲಾಗದ ಕಾರಣ ಹಿರಿಯರ ಬುದ್ಧಿಮಾತುಗಳಿಗೆ ಬೆಲೆ ನೀಡಿ. ನಮ್ಮ ಒಳಿತಿಗಾಗಿ ಹೇಳುತ್ತಿರುವರೆಂಬ ಅರಿವಿದ್ದರೆ ಸಿಟ್ಟು ಬಾರದು. ಮನಸ್ಸು ಕ್ರೋಧಗೊಂಡಾಗ ರಕ್ತ ಸಂಚಾರ ಜಾಸ್ತಿಯಾಗಿ ಹೃದಯ ಮತ್ತು ಮೆದುಳಿನ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಓದಿನೆಡೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದು, ಜೊತೆಗೆ ಓದಿದ್ದು ಸ್ಮರಣೆಯಲ್ಲಿ ಉಳಿಯುವುದೂ ಇಲ್ಲ.

ಹಾಗೆಯೇ ನಿತ್ಯವೂ ಒಂದರ್ಧ ಗಂಟೆಯಷ್ಟು ಸಮಯ ಮೈಯಲ್ಲಿ ಬೆವರು ಬರುವಂತಹ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಓದಲು ಇನ್ನಷ್ಟು ಹುಮ್ಮಸ್ಸು ಬರುವುದು. ಚೆನ್ನಾಗಿ ನೀರು ಕುಡಿಯಿರಿ. ದಿನಕ್ಕೆ ಕನಿಷ್ಠ 6–7 ತಾಸು ಸತತ ನಿದ್ರೆ ಮಾಡಿ. ಪರೀಕ್ಷೆಗೆ ಯಾವುದೇ ವಾಮಮಾರ್ಗಗಳನ್ನು ಹುಡುಕದೆ ಆತ್ಮವಿಶ್ವಾಸದಿಂದ ಅಭ್ಯಾಸ ಮಾಡಿದರೆ ಗೆಲುವು ಖಂಡಿತಾ ನಿಮ್ಮದೇ.

(ಲೇಖಕಿ ಆಪ್ತ ಸಮಾಲೋಚಕಿ, ತೀರ್ಥಹಳ್ಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.