‘ತಾರಾನಕಿ’ ಪರ್ವತ
ಇತ್ತೀಚೆಗೆ, ನ್ಯೂಜಿಲೆಂಡ್‌ನ ಉತ್ತರ ದ್ವೀಪದಲ್ಲಿರುವ ಎರಡನೇ ಅತಿ ಎತ್ತರದ (2,518 ಮೀಟರ್ / 8,261 ಅಡಿ) ಪರ್ವತ ಹಾಗೂ ಎಗ್ಮಾಂಟ್ ರಾಷ್ಟ್ರೀಯ ಉದ್ಯಾನದ ಭಾಗವಾಗಿರುವ ‘ತರಾನಕಿ ಮೌಂಗಾ’ ಅಥವಾ ‘ತಾರಾನಕಿ’ ಪರ್ವತಕ್ಕೆ ಅಧಿಕೃತವಾಗಿ ‘ಕಾನೂನುಬದ್ಧ ಮಾನವ ಸ್ಥಾನಮಾನ’ ಹಾಗೂ ‘ಮಾನವ ಹಕ್ಕು’ ನೀಡಲಾಗಿದೆ. ‘ತರಾನಕಿ ಮೌಂಗಾ’ ವಿಶ್ವದ ಅತ್ಯಂತ ಸಮ್ಮಿತೀಯ (ಶಂಕುವಿನಾಕಾರದ), ಹಿಮದಿಂದ ಆವೃತವಾದ ಸುಪ್ತ ಜ್ವಾಲಾಮುಖಿ ಶಿಖರಗಳಲ್ಲಿ ಒಂದಾಗಿದ್ದು, ಪ್ರವಾಸಿಗರು, ಸ್ನೋಬೋರ್ಡರ್‌ಗಳು ಮತ್ತು ಸ್ಕೀಯರ್‌ಗಳಿಗೆ ಜನಪ್ರಿಯ ತಾಣವಾಗಿದೆ. ಇದುವರೆಗೆ ನ್ಯೂಜಿಲೆಂಡ್‌ನಲ್ಲಿ ಅತಿ ಹೆಚ್ಚು ಬಾರಿ ಆರೋಹಣ ಮಾಡಿದ ಪರ್ವತ ಇದಾಗಿದೆ. ಈ ಪರ್ವತ ಬೂದಿ ಮತ್ತು ಲಾವಾ ಹರಿವಿನ ಪರ್ಯಾಯ ಪದರಗಳಿಂದ ರೂಪಗೊಂಡಿದೆ. ಹೀಗಾಗಿ, ಇದು ‘ಸ್ಟ್ರಾಟೋವೊಲ್ಕಾನೊ’ ಎಂದು ಗುರುತಿಸಲಾಗಿದೆ. ಆಸ್ಟ್ರೇಲಿಯನ್ ಭೂತಟ್ಟೆ ಹಾಗೂ ಪೆಸಿಫಿಕ್ ಭೂತಟ್ಟೆಗಳ ಸಂಯೋಗದ ಸ್ಥಳದಲ್ಲಿ ಈ ಪರ್ವತ ನೆಲೆಗೊಂಡಿದ್ದು, ಜ್ವಾಲಾಮುಖಿ ಹಾಗೂ ಭೂಕುಸಿತಗಳಿಂದ ರೂಪುಗೊಂಡ ಉಂಗುರಾಕಾರದ ಬಯಲುಪ್ರದೇಶ ಈ ಪರ್ವತದ ಮೇಲಿದೆ.
ಈ ಪರ್ವತ ಸ್ಥಳೀಯ ಮಾವೊರಿ ಜನರಿಗೆ ಶತಮಾನಗಳಿಂದ ಪೂಜ್ಯನೀಯ ಸ್ಥಳವಾಗಿದೆ. ಇದು ತನ್ನದೇ ಆದ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ಮಾವೋರಿಗಳಿಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪೋಷಣೆಯ ಮೂಲವಾಗಿದೆ. ಮಾವೋರಿಗಳು ಈ ಪರ್ವತವನ್ನು ತಮ್ಮ ಪೂರ್ವಜರು ರಕ್ಷಣೆ ಮತ್ತು ವಿಶ್ರಾಂತಿ ಪಡೆಯುತ್ತಿರುವ ಸ್ಥಳವೆಂದು ಪರಿಗಣಿಸುತ್ತಾರೆ.
ಬ್ರಿಟಿಷ್ ಪರಿಶೋಧಕ ಕ್ಯಾಪ್ಟನ್ ಜೇಮ್ಸ್ ಕುಕ್ 1776ರಲ್ಲಿ ತನ್ನ ಹಡಗಿನಿಂದ ಶಿಖರವನ್ನು ಗಮನಿಸಿ ಅದಕ್ಕೆ ‘ಮೌಂಟ್ ಎಗ್ಮಾಂಟ್’ ಎಂದು ಹೆಸರಿಸಿದ್ದರು. 18 ಮತ್ತು 19ನೇ ಶತಮಾನಗಳಲ್ಲಿ ಬ್ರಿಟಿಷ್ ವಸಾಹತುಶಾಹಿಗಳು ‘ತಾರನಕಿ’ ಪರ್ವತದಲ್ಲಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಿದರು. 1840ರಲ್ಲಿ ಈ ಪರ್ವತವನ್ನು ಸಂರಕ್ಷಿಸಲು ‘ವೈಟಾಂಗಿ ಒಪ್ಪಂದ’ ಮಾಡಿಕೊಂಡಿದ್ದರೂ ಆ ಒಪ್ಪಂದದ ಉಲ್ಲಂಘನೆ ಸಾಮಾನ್ಯವಾಗಿತ್ತು. ಬ್ರಿಟಿಷ್ ವಸಾಹತುಶಾಹಿ ಕೊನೆಗೊಂಡ ನಂತರ ಈ ಪರ್ವತವನ್ನು ರಕ್ಷಿಸುವ ಜೊತೆಗೆ ಅದರ ಸಾಂಸ್ಕೃತಿಕ ಹಿರಿಮೆಯನ್ನು ಕಾಪಾಡಿಕೊಳ್ಳಲು ನಿರಂತರ ಹೋರಾಟಗಳು ನಡೆದಿದ್ದು, ಈಗ ಈ ಪರ್ವತಕ್ಕೆ ಕಾನೂನು ಮಾನ್ಯತೆ ಲಭಿಸಿದೆ. ‘ಮೌಂಟ್ ಎಗ್ಮಾಂಟ್’ ಎಂಬ ಹೆಸರನ್ನು ರದ್ದುಪಡಿಸಿ, ‘ತಾರಾನಕಿ’ ಪರ್ವತ ಹಾಗೂ ಅದರ ಸುತ್ತಲಿನ ಶಿಖರಗಳನ್ನು ಒಟ್ಟುಗೂಡಿ ‘ಟೆ ಪಾಪಾ–ಕುರಾ–ಒ–ತರಾನಕಿ’ (ತರಾನಕಿಯ ಅತ್ಯಂತ ಪೂಜ್ಯನೀಯ ಮತ್ತು ಅಮೂಲ್ಯ ಭೂಮಿ) ಎಂದು ಮರುನಾಮಕರಣ ಮಾಡಲಾಗಿದ್ದು, ಇನ್ನು ಮೇಲೆ ಇದನ್ನು ‘ಟೆ ಕಹುಯಿ ಟುಪುವಾ’ (ಜೀವಂತ ಘಟಕ) ಎಂದು ಪರಿಗಣಿಸಲಾಗುತ್ತದೆ ಎಂದು ತರಾನಕಿ ಮೌಂಗಾದ ಮುಖ್ಯ ಸಮಾಲೋಚಕ ಜೇಮೀ ಟುಟಾ ಹಾಗೂ ‘ತೆ ಪತಿ ಮಾವೋರಿ’ ರಾಜಕೀಯ ಪಕ್ಷದ ಸಹ ನಾಯಕಿ ಡೆಬ್ಬಿ ನ್ಗರೆವಾ–ಪ್ಯಾಕರ್ ತಿಳಿಸಿದ್ದಾರೆ.
‘ತಾರಾನಕಿ ಮೌಂಗಾ’ಕ್ಕೆ ಮಾನವ ಹಕ್ಕುಗಳನ್ನು ನೀಡುವ ಮಸೂದೆಯನ್ನು ನ್ಯೂಜಿಲೆಂಡ್ ಸಂಸತ್ತಿನಲ್ಲಿ ಜನವರಿ 30, 2025ರಂದು ಸರ್ವಾನುಮತದಿಂದ ಅನುಮೋದಿಸಲಾಯಿತು. ಮಸೂದೆ ಮಂಡನೆ ವೀಕ್ಷಿಸಲು ಮಾವೋರಿ ಬುಡಕಟ್ಟಿಗೆ ಸೇರಿದ ನೂರಾರು ಜನರು ರಾಜಧಾನಿ ವೆಲ್ಲಿಂಗ್ಟನ್‌ಗೆ ಬಂದಿದ್ದರು. ಮಸೂದೆ ಅಂಗೀಕಾರದ ನಂತರ ‘ಮೌರಿ’ ಹಾಡು ಹಾಗೂ ‘ಹಾಕಾ’ ನೃತ್ಯಗಳೊಂದಿಗೆ ಸ್ವಾಗತಿಸಲಾಯಿತು. ಹೊಸ ಕಾನೂನಿನ ಅನ್ವಯ ತಾರನಕಿ ಮೌಂಗಾ ವ್ಯಾಪ್ತಿಯ ಭೂಮಿಯನ್ನು ಬಲವಂತವಾಗಿ ಮಾರುವಂತಿಲ್ಲ ಹಾಗೂ ಖರೀದಿಸುವಂತಿಲ್ಲ. ಪರ್ವತದ ನಿರ್ವಹಣೆಗೆ ಸಾಂಪ್ರದಾಯಿಕ ಪದ್ಧತಿಗಳನ್ನು ಪುನಃಸ್ಥಾಪಿಸಲು ಮತ್ತು ಸ್ಥಳೀಯ ವನ್ಯಜೀವಿಗಳನ್ನು ರಕ್ಷಿಸಲು ಅನುಮತಿ ಲಭಿಸಿದೆ. 1860ರ ದಶಕದಲ್ಲಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ ‘ಮೌಂಟ್ ತರಾನಕಿ’ ವ್ಯಾಪ್ತಿಯ ಒಂದು ಮಿಲಿಯನ್ ಎಕರೆಗೂ ಹೆಚ್ಚು ಭೂಮಿಯನ್ನು ಮಾವೋರಿಗಳ ಕ್ಷಮೆ ಕೋರಿ ಮರಳಿಸಬೇಕಿದೆ.
ನ್ಯೂಜಿಲೆಂಡ್‌ನಲ್ಲಿ ಪರಿಸರದ ಅಂಶಗಳಿಗೆ, ನೈಸರ್ಗಿಕ ಘಟಕಗಳಿಗೆ ಮಾನವ ಸಮಾನ ಸ್ಥಾನಮಾನ ನೀಡುವ ರೂಢಿ ಜಾರಿಯಲ್ಲಿದೆ. 2014ರಲ್ಲಿ, ‘ಟೆ ಉರೆವೆರಾ’ ಅರಣ್ಯಕ್ಕೆ ಹಾಗೂ 2017ರಲ್ಲಿ ‘ವಂಗನುಯಿ’ ನದಿಗೆ ಇದೇ ರೀತಿಯ ಮನ್ನಣೆಯನ್ನು ನ್ಯೂಜಿಲೆಂಡ್ ಸರ್ಕಾರ ನೀಡಿದೆ. ಈ ನಿರ್ಧಾರಗಳು ಹಾಗೂ ಕಾನೂನು ಮೂಲಕ ಪ್ರಕೃತಿಯೊಂದಿಗೆ ‘ರಕ್ತಸಂಬಂಧ’ ಸೃಷ್ಟಿಸಿಕೊಳ್ಳುವ ಭಾವನೆ ನ್ಯೂಜಿಲೆಂಡ್ ಸರ್ಕಾರ ಹಾಗೂ ಅಲ್ಲಿನ ಜನರು ಪರಿಸರ ಸಂರಕ್ಷಣೆಗೆ ನೀಡುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ⇒v
1. ಎಂ.ಸಿ.ಮೆಹ್ತಾ v/s ಭಾರತ ಸರ್ಕಾರ, 1986: ಪರಿಸರ ಅನಕ್ಷರತೆಯನ್ನು ತೊಡೆದುಹಾಕಲು ಈ ಕೆಳಗಿನ ನಿರ್ದೇಶನಗಳನ್ನು ನೀಡಲಾಯಿತು.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪರಿಸರದ ಕುರಿತು ಸಿದ್ಧಪಡಿಸಿದ ಕನಿಷ್ಠ ಎರಡು ಸ್ಲೈಡ್‌ಗಳನ್ನು ಸಿನಿಮಾ ಮಂದಿರಗಳು / ವಿಡಿಯೊ ಪಾರ್ಲರ್‌ಗಳು ಪ್ರದರ್ಶಿಸಬೇಕು.
ದೂರದರ್ಶನ ಮತ್ತು ಆಕಾಶವಾಣಿಗಳು ಪರಿಸರದ ಕುರಿತಾದ ಕಾರ್ಯಕ್ರಮಗಳಿಗಾಗಿ ಪ್ರತಿದಿನ 5–7 ನಿಮಿಷಗಳನ್ನು ಮೀಸಲಿಡಬೇಕು.
ಶಾಲೆಗಳು ಮತ್ತು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪರಿಸರವನ್ನು ಶ್ರೇಣೀಕೃತ ರೀತಿಯಲ್ಲಿ ಕಡ್ಡಾಯ ವಿಷಯವನ್ನಾಗಿ ಮಾಡಬೇಕು, ಅದಕ್ಕಾಗಿ ಒಂದು ಕೋರ್ಸ್ ಅನ್ನು ಸೂಚಿಸಬೇಕು.
2. ಎಂ.ಸಿ.ಮೆಹ್ತಾ v/s ಕಮಲ್ ನಾಥ್, 1996: ಜೀವಕ್ಕೆ ಅಗತ್ಯವಾದ ಮೂಲಭೂತ ಪರಿಸರ ಅಂಶಗಳಾದ ಗಾಳಿ, ನೀರು ಮತ್ತು ಮಣ್ಣಿನ ಯಾವುದೇ ಭಾಗವನ್ನು ಜೀವಕ್ಕೆ ಅಪಾಯಕಾರಿಯಾಗುವ ಮಟ್ಟದಲ್ಲಿ ಕಲುಷಿತಗೊಳಿಸಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
3.ಗ್ರಾಮೀಣ ಮೊಕದ್ದಮೆ ಮತ್ತು ಹಕ್ಕು ಕೇಂದ್ರ v/s ಉತ್ತರ ಪ್ರದೇಶ ರಾಜ್ಯ, 1985: ಮಸ್ಸೂರಿ ಬೆಟ್ಟಗಳಲ್ಲಿ ಅರಣ್ಯಗಳನ್ನು ನಾಶಮಾಡುವ ಮತ್ತು ಮಣ್ಣಿನ ಸವೆತ ಹೆಚ್ಚಿಸುವ ಸುಣ್ಣದ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಲಾಯಿತು.
4. ತರುಣ್ ಭಾರತ್ ಸಂಘ (NGO) v/s ಭಾರತ ಸರ್ಕಾರ, 1993: ಸರಿಸ್ಕಾ ಹುಲಿ ಅಭಯಾರಣ್ಯದ ಸುತ್ತಲಿನ ಎಲ್ಲಾ 400 ಅಮೃತಶಿಲೆ ಗಣಿಗಳ ಮುಚ್ಚಲಾಯಿತು.
5. ಗಂಗಾ ಮತ್ತು ಯಮುನಾ ಮಾಲಿನ್ಯ ತಡೆಗಟ್ಟುವಿಕೆ, 1995: 1986ರ ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸುಪ್ರೀಂ ಕೋರ್ಟ್ ಕಾನ್ಪುರದ ಗಂಗಾ, ಕೋಲ್ಕತ್ತದ ಹೂಗ್ಲಿ ಮತ್ತು ದೆಹಲಿಯ ಯಮುನಾ ನದಿಯ ದಡದಲ್ಲಿ ನೆಲೆಸಿರುವ ಎಲ್ಲಾ ಮಾಲಿನ್ಯಕಾರಕ ಕೈಗಾರಿಕೆಗಳನ್ನು ತೆರವುಗೊಳಿಸುವಂತೆ ಸ್ವಯಂಪ್ರೇರಿತವಾಗಿ ಸೂಚನೆ ನೀಡಿದೆ.
6. ಉತ್ತರಾಖಂಡ ಹೈಕೋರ್ಟ್ 2017ರಲ್ಲಿ ಗಂಗಾ ಮತ್ತು ಯಮುನಾ ನದಿಗಳಿಗೆ ಹಾಗೂ 2018ರಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ಹಿಮನದಿಗಳಿಗೆ ಕಾನೂನುಬದ್ಧ ವ್ಯಕ್ತಿತ್ವದ ಸ್ಥಾನಮಾನವನ್ನು ನೀಡಿದ್ದು, ನಂತರ ಈ ಪರಿಸರ ವ್ಯಾಪ್ತಿಯ ಎಲ್ಲಾ ಪ್ರಾಣಿಗಳಿಗೂ ಈ ಹಕ್ಕುಗಳನ್ನು ವಿಸ್ತರಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ತೀರ್ಪನ್ನು ತಡೆಹಿಡಿದಿದೆ.
7.ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2020ರಲ್ಲಿ ಚಂಡೀಗಢದ ಸುಖ್ನಾ ಸರೋವರವನ್ನು ‘ಪರಿಸರ ಸಂರಕ್ಷಣೆಯ ಜೀವಂತ ಘಟಕ’ ಎಂದು ಘೋಷಿಸಿದೆ.
8. ಪರಿಸರದ ಹಕ್ಕು ಮತ್ತು ಸಂವಿಧಾನ: ಭಾರತೀಯ ಸಂವಿಧಾನದ 21ನೇ ವಿಧಿಯನ್ವಯ, ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನಗಳ ಪ್ರಕಾರ ಹೊರತುಪಡಿಸಿ, ಯಾವುದೇ ವ್ಯಕ್ತಿಯ ಜೀವನ ಅಥವಾ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಿಲ್ಲ. ಘನತೆಯಿಂದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳು ‘ಸ್ವಚ್ಛ ಪರಿಸರ’ದ ಅಗತ್ಯವನ್ನು ಒಳಗೊಂಡಿವೆ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.