ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ‘ಐಎಎಸ್‌ ಆ್ಯಲಿ’

ರೇಷ್ಮಾ
Published 31 ಡಿಸೆಂಬರ್ 2019, 19:30 IST
Last Updated 31 ಡಿಸೆಂಬರ್ 2019, 19:30 IST
ಮೋನಿಶ್ ಹಾಗೂ ಶ್ರುತಿ ದಂಪತಿ
ಮೋನಿಶ್ ಹಾಗೂ ಶ್ರುತಿ ದಂಪತಿ   

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಸಾಮಾನ್ಯ ಸಂಗತಿಯಲ್ಲ. ಅದರಲ್ಲೂ ಐಎಎಸ್‌, ಕೆಎಎಸ್‌ನಂತಹ ಯುಪಿಎಸ್‌ಸಿ ಪರೀಕ್ಷೆಗಳನ್ನು ಬರೆಯುವವರು ಹಗಲು–ರಾತ್ರಿ ಶ್ರಮ ವಹಿಸಬೇಕು. ಜೊತೆಗೆ ಓದಿಗೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕು. ತರಬೇತಿಗಾಗಿ ಮುಂಬೈ, ಚೆನ್ನೈ, ದೆಹಲಿ, ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗಬೇಕು. ದೈನಂದಿನ ವಿದ್ಯಮಾನಗಳ ಬಗ್ಗೆಯೂ ಗಮನ ಹರಿಸಬೇಕು. ಆದರೆ ಇನ್ನು ಮುಂದೆ ಇಷ್ಟೆಲ್ಲಾ ಕಷ್ಟ ಪಡಬೇಕಾಗಿಲ್ಲ. ಯುಪಿಎಸ್‌ಸಿ ಪರೀಕ್ಷಾ ಆಕಾಂಕ್ಷಿಗಳಿಗಾಗಿ ಮೊಬೈಲ್ ಆ್ಯಪ್‌ವೊಂದನ್ನು ರಚಿಸಲಾಗಿದೆ. ಅದುವೇ ‘ಐಎಎಸ್‌ ಆ್ಯಲಿ’.

ಯುಪಿಎಸ್‌ಸಿ ಪರೀಕ್ಷೆಗಳಿಗೆ ಕೋಚಿಂಗ್ ನೀಡಿ, ಓದಿನ ಸಾಮಗ್ರಿಗಳನ್ನು ನೀಡುವ ಸಲುವಾಗಿಯೇ ಈ ಆ್ಯಪ್ ಹುಟ್ಟಿಕೊಂಡಿದೆ. ಇದರ ಹೆಸರೇ ಸೂಚಿಸುವಂತೆ ಇದು ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ಸ್ನೇಹಿತನಂತೆ.

ಹಾಸನ ಮೂಲದ ಮೋನಿಶ್ ಎಚ್‌.ಪಿ. ಹಾಗೂ ಗ್ರಾಫಿಕ್ ಡಿಸೈನರ್ ಆಗಿರುವ ಅವರ ಪತ್ನಿ ಶ್ರುತಿ ರಾಮಚಂದ್ರ ಆ್ಯಪ್‌ನ ರೂವಾರಿಗಳು. ಸ್ವತಃ ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಮೋನಿಶ್‌ ಯುಪಿಎಸ್‌ಸಿ ಪರೀಕ್ಷೆ ಆಕಾಂಕ್ಷಿಗಳಿಗೆ ನೆರವಾಗುವ ಉದ್ದೇಶದಿಂದ ಈ ಆ್ಯಪ್‌ ರೂಪಿಸಿದ್ದಾರೆ.

ADVERTISEMENT

ಮೋನಿಶ್ 7 ವರ್ಷಗಳಿಂದ ಸಂಗ್ರಹಿಸಿದ ಎಲ್ಲಾ ವಿಷಯಗಳ ಓದಿನ ಸಾಮಗ್ರಿಗಳನ್ನು ಆ್ಯಪ್‌ನಲ್ಲಿ ಕ್ರೋಢಿಕರಿಸಿದ್ದಾರೆ. ಜೊತೆಗೆ ದೈನಂದಿನ ವಿದ್ಯಮಾನಗಳಿಗೂ ಒಂದು ವಿಭಾಗವನ್ನು ರಚಿಸಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿರುವ ಯುಪಿಎಸ್‌ಸಿ ಪರೀಕ್ಷೆಯ ಆಕಾಂಕ್ಷಿಗಳು ಉಚಿತವಾಗಿ ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಫೋಕಸ್, ಪ್ರಾಕ್ಟೀಸ್‌ ಹಾಗೂ ಕನ್ಸಿಸ್ಟೆನ್ಸಿ ಎಂಬ ಅಡಿಬರಹ ಹೊಂದಿರುವ ಈ ಆ್ಯಪ್ ಗಮನ, ಅಭ್ಯಾಸ ಹಾಗೂ ನಿಷ್ಠೆಯನ್ನು ಧ್ಯೇಯವನ್ನಾಗಿಸಿಕೊಂಡಿದೆ.

ಗಮನ: ಐಎಎಸ್‌ ನಂತದ ಸ್ಪರ್ಧಾತ್ಮಕ ಪರೀಕ್ಷೆಗೆ ಅಗಾಧ ವಿಷಯವನ್ನು ಓದಬೇಕು. ಓದಿದ ಎಲ್ಲವನ್ನೂ ನೆನಪಿನಲ್ಲಿರಿಸಿಕೊಳ್ಳುವುದು ಕಷ್ಟ. ಆ ಕಾರಣಕ್ಕೆ ಆ್ಯಪ್‌ನಲ್ಲಿ ಪ್ರತಿ ವಿಷಯವನ್ನು ಚಿಕ್ಕ ಚಿಕ್ಕ ಗದ್ಯಭಾಗವನ್ನಾಗಿಸಿ ವಿಂಗಡಿಸಲಾಗಿದೆ. ಪ‍್ರತಿಯೊಂದು ಭಾಗವು ಕಥೆ ಅಥವಾ ಘಟನೆಯ ರೂಪದಲ್ಲಿರುತ್ತದೆ. ಅದನ್ನು ಓದಲು 5 ನಿಮಿಷಗಳ ಕಾಲಮಿತಿ ಇರುತ್ತದೆ. 5 ನಿಮಿಷದಲ್ಲಿ ಓದಿ ಕೆಳಗೆ ನೀಡಿದ ಪ್ರಶ್ನೆಗಳನ್ನು ಉತ್ತರಿಸಬೇಕಾಗುತ್ತದೆ. ಇದರಿಂದ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಅಭ್ಯಾಸ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ ನಿರಂತರ ಅಭ್ಯಾಸ ತುಂಬಾ ಮುಖ್ಯ. ಪ್ರತಿದಿನ ಒಬ್ಬರೇ ಓದುವುದು ಬೇಸರವಾಗಬಹುದು. ಓದಿನ ಜೊತೆಗೆ ಜ್ಞಾನದ ಅರಿವೂ ಹೆಚ್ಚಬೇಕು ಎಂಬ ಕಾರಣಕ್ಕೆ ಇಬ್ಬರು ಸೇರಿ ಆಟದ ರೀತಿ ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ಆ್ಯಪ್‌ನಲ್ಲಿದೆ. ದೇಶದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯ ಜೊತೆ ನಾವು ಸ್ಪರ್ಧಿಸಬಹುದು. ಯಾರು ಹೆಚ್ಚು ಅಂಕಗಳಿಸುತ್ತಾರೋ ಅವರು ವಿಜೇತರಾಗುತ್ತಾರೆ.

ಅಭ್ಯಾಸದಲ್ಲಿನ ನಿಷ್ಠೆ

ಐಎಎಸ್‌, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ದೊಡ್ಡ ಸವಾಲು ಎಂದರೆ ಪ್ರತಿನಿತ್ಯ ನಡೆಯುವ ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಅಪ್‌ಡೇಟ್‌ ಆಗಿರುವುದು. ವಿಷಯದ ಓದಿನ ಜೊತೆಗೆ ಪ್ರತಿದಿನದ ವಿದ್ಯಮಾನದ ಸಾಮಾನ್ಯ ಜ್ಞಾನವು ಅಷ್ಟೇ ಮುಖ್ಯ. ಅದಕ್ಕಾಗಿ ಆ್ಯಪ್‌ನಲ್ಲಿ ವಿಟಮಿನ್ ಎಂಬ ವಿಭಾಗವನ್ನು ಸೇರಿಸಲಾಗಿದೆ. ಅವು ನಿತ್ಯದ ಪಾಠದೊಂದಿಗೆ ಐದು ಹೊಸ ವಿಚಾರಗಳನ್ನು ಬಿತ್ತರಿಸುತ್ತವೆ. ಅದರಲ್ಲಿ ದಿನಕ್ಕೊಂದು ಆಟವಾಡುವ ಮೂಲಕ ದೈನಂದಿನ ವಿಷಯಗಳ ಮೇಲೆ ಅರಿವು ಹೆಚ್ಚಿಸಿಕೊಳ್ಳಬಹುದು.

ಕೊನೆಯದಾಗಿ ಪ್ರತಿವಾರವೂ ಆಕಾಂಕ್ಷಿಗಳು ಎಷ್ಟು ಪ್ಯಾಸೇಜ್‌ಗಳನ್ನು ಮುಗಿಸಿದ್ದಾರೆ, ಎಷ್ಟು ಆಟಗಳಲ್ಲಿ ಜಯಶೀಲರಾಗಿದ್ದಾರೆ ಹಾಗೂ ಯಾವೆಲ್ಲಾ ಪ್ರಚಲಿತ ವಿದ್ಯಮಾನಗಳನ್ನು ಅರಿತಿದ್ದಾರೆ ಎನ್ನುವುದರ ಆಧಾರದ ಮೇಲೆ ಮುಂಚೂಣಿಯಲ್ಲಿರುವವರ ಹೆಸರುಗಳನ್ನು ‘ಹಾಲ್ ಆಫ್ ಫೇಮ್’ ಎಂಬ ವಿಭಾಗದಲ್ಲಿ ಪ್ರಕಟಿಸಲಾಗುವುದು. ಇದು ಅಭ್ಯರ್ಥಿಗಳು ಸಾಮರ್ಥ್ಯವನ್ನು ಬಲಪಡಿಸಿಕೊಳ್ಳಲು ಸಹಕಾರಿ.

ಅಲ್ಲದೇ ಮುಖ್ಯ ಪ್ರಶ್ನೆಗಳನ್ನು ಉತ್ತರಿಸುವ ಅಭ್ಯಾಸಕ್ಕಾಗಿ ಪ್ರತಿದಿನವೂ ಒಂದು ಪ್ರಶ್ನೆಯನ್ನು ಪ್ರಕಟಿಸಲಾಗುತ್ತದೆ. ನಿಗದಿತ ಸಮಯದಲ್ಲಿ ಅದಕ್ಕೆ ಉತ್ತರಿಸುವ ಮೂಲಕ ಅಭ್ಯರ್ಥಿಯು ಬರೆಯುವ ಕಲೆಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.

ಈ ಆ್ಯ‍ಪ್‌ನಲ್ಲಿ ಸದ್ಯಕ್ಕೆ ಮಾಹಿತಿ ಇಂಗ್ಲಿಷ್‌ನಲ್ಲಿ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ಇತರ ಭಾಷೆಗಳಿಗೂ ವಿಸ್ತರಿಸುವ ಯೋಚನೆಯಲ್ಲಿದ್ದಾರೆ ಮೋನಿಶ್ ದಂಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.