ADVERTISEMENT

ಸಮಾಧಾನ | ಅಮ್ಮನೇ ಮಾತು ಬಿಟ್ಟರೆ...

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 0:30 IST
Last Updated 7 ಏಪ್ರಿಲ್ 2025, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಮ್ಮನೇ ಮಾತು ಬಿಟ್ಟರೆ...

ನನ್ನ ಗೆಳತಿಯ ಮಗಳು ಎಸ್ಸೆಸೆಲ್ಸಿ ವಿದ್ಯಾರ್ಥಿನಿ. ಅವಳ ಬಗ್ಗೆ ಶಾಲೆಯಿಂದ ದೂರು ಬಂತು ಎಂದು ಅವಳ ಅಮ್ಮ ಮಗಳತ್ರ ಮಾತಾಡುವುದನ್ನೇ ಬಿಟ್ಟಿದ್ದಾಳೆ. ಆಕೆಯ ಪತಿ ವಿದೇಶದಲ್ಲಿ ಕೆಲಸದಲ್ಲಿದ್ದಾರೆ. ಮನೆಯಲ್ಲಿ ಆಕೆ, ಮಗಳು, ಮಗ, ಗಂಡನ ಅಪ್ಪ ಹಾಗೂ ಅಮ್ಮ ಇಷ್ಟೇ ಜನ ಇರೋದು. ಗೆಳತಿಗೆ ಬುದ್ಧಿಮಾತು ಹೇಳಲಿಕ್ಕೆ ಪ್ರಯತ್ನಿಸಿದೆ. ತಾಯಿಯ ಮೌನದಿಂದ ಮಗಳು ಮಾನಸಿಕವಾಗಿ ಕುಗ್ಗುತ್ತಿದ್ದಾಳೆ ಎಂದು ಅನ್ನಿಸಿತು. ಅಮ್ಮ - ಮಗಳ ಸಂಬಂಧವನ್ನು ಚೆನ್ನಾಗಿ ಮಾಡುವುದು ಹೇಗೆ?

ADVERTISEMENT

ಇಲ್ಲಿ ತಾಯಿಯೇ ತನ್ನ ಮಗಳಿಗಿಂತಲೂ ಚಿಕ್ಕವಳ ಹಾಗೆ ಹಟ ಮಾಡಿದರೆ ಹೇಗೆ?  ಸೋಷಿಯಲ್‌ ಮೀಡಿಯಾ ಹಾವಳಿಯಿಂದ ಬಹುತೇಕ ಎಲ್ಲರ ಮನಸ್ಸು ಅಲ್ಲೋಲಕಲ್ಲೋಲವಾಗುತ್ತಿರುತ್ತದೆ. ಇನ್ನು ಹದಿಹರೆಯದವರ ಪಾಡಂತೂ ಹೇಳಿ ಮುಗಿಸಲಾಗದು. ಮಕ್ಕಳ ಕೈಲಿರುವ ಮೊಬೈಲಿನೊಳಗಿನ ಪ್ರಪಂಚಕ್ಕೂ, ಹೊರಗೆ ಕಾಣುವ ಪ್ರಪಂಚಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಇವುಗಳಿಂದ ಉಂಟಾಗುವ ದ್ವಂದ್ವ, ಅತಿರೇಕದ ಮಾನಸಿಕ ತೊಳಲಾಟಗಳನ್ನು ನಿಯಂತ್ರಿಸಿಕೊಳ್ಳಲು ಮಕ್ಕಳು ಹೆಣಗಾಡುತ್ತಾರೆ. ಕೆಲವರು ಸೋಲುತ್ತಾರೆ.  

ಹದಿಹರೆಯದವರಿಗೆ ಪ್ರತಿದಿನವೂ ಹೊಸದಿನ. ಹೊಸ ಹೊಸ ಭರವಸೆಗಳ, ಕನಸುಗಳ, ಕುತೂಹಲಗಳ ಬೆಳಗು. ಹೊಸ ಹೊಸ ಸಮಸ್ಯೆಗಳ, ಆತಂಕಗಳ, ಪ್ರಶ್ನೆಗಳ ದಿನಗಳು. ಪಾಲಕರು ಸದಾ ಮಕ್ಕಳನ್ನು ಸಾಧ್ಯವಿರುವಷ್ಟೂ ಕಾಳಜಿಯಿಂದ ಗಮನಿಸುತ್ತಿರಬೇಕು. ಮಕ್ಕಳು ತಪ್ಪು ಮಾಡಿದರೂಂತ ಅವರನ್ನು ಅತಿಯಾಗಿ ಶಿಕ್ಷಿಸಬಾರದು. ಮಕ್ಕಳು ಮಾಡಿದ ತಪ್ಪೆಲ್ಲವೂ ಪಾಲಕರದ್ದೇ ತಪ್ಪು ಎನ್ನುವಷ್ಟು ವಿಕೋಪಕ್ಕೂ ಹೋಗಬಾರದು. ಇಲ್ಲಿ ಮಕ್ಕಳೊಂದಿಗೆ ಪಾಲಕರೂ ಕಲಿಯುತ್ತಲೇ ಇರುತ್ತಾರೆ. ಪರಸ್ಪರ ಇಬ್ಬರೂ ಕಲಿಯುತ್ತ, ಹೊಂದುತ್ತ, ಮಾಗುತ್ತ ಸಾಗುವುದೇ ಬದುಕಿನ ಸಹಜ ರೀತಿ. ಪಾಲಕರಿಗೆ ಎಲ್ಲವೂ ಗೊತ್ತದೆ ಎನ್ನುವ ಹಾಗಿಲ್ಲ. ಮಕ್ಕಳಿಗೆ ಏನೂ ಗೊತ್ತಿಲ್ಲ ಎನ್ನುವ ಹಾಗೂ ಇಲ್ಲ.  

ಈ ಪ್ರಕರಣದಲ್ಲಿ ಅಮ್ಮನೇ ಮಗುವಿನ ಬಳಿ ಮಾತು ಬಿಡುವುದು ಅನಗತ್ಯ. ಉಪ್ಪಿಗಿಂತ ರುಚಿ ಇಲ್ಲ. ತಾಯಿಗಿಂತ ಬಂಧುವಿಲ್ಲ. ಆಕೆ ಹದಿಹರೆಯದ ಹುಡುಗಿ. ಅವಳಿಗೆ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಹೆಚ್ಚು. ಅವುಗಳನ್ನೆಲ್ಲಾ ಆಕೆ ಒಂಟಿಯಾಗಿ ಎದುರಿಸಲಾರಳು. ಮನೆಯಲ್ಲಿರುವವರ ನಡುವೆ ಸಂಬಂಧದ ಸ್ಪಷ್ಟನೆ ಇದ್ದರೆ ಒಳ್ಳೆಯದಿತ್ತು.

ಮಗಳ ಮೇಲೆ ಶಾಲೆಯಿಂದ ದೂರು ಬಂದಾಗ, ತಾಯಿ ಏಕಮುಖವಾಗಿ, ಮಗಳಿಗೆ ಶಿಕ್ಷಿಸುವ ಬದಲಿಗೆ  ಸಮಾಧಾನದಿಂದ ತಪ್ಪನ್ನು ಸರಿ ಪಡಿಸಿಕೊಳ್ಳಲು ತಿಳಿಹೇಳಲಿ.  ಮಗುವಿಗೆ ಆಘಾತವಾಗಿ ತೀವ್ರ ಒಂಟಿತನ ಕಾಡುತ್ತದೆ. ಕೀಳರಿಮೆಯುಂಟಾಗುತ್ತದೆ. ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಿಸಲಾಗದೇ ಆತಂಕಕ್ಕೊಳಗಾಗಬಹುದು. ಮುಂದೆ ಮಾನವ ಸಂಬಂಧಗಳ ಬಗ್ಗೆ ನಂಬುಗೆ ಇಲ್ಲದಂತಾಗಬಹುದು. ಮಗಳ ಜೀವನವೂ ಸಮಸ್ಯೆಗಳ ಸರಮಾಲೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲ್ಲಿಕ್ಕಾಗದು. ಇನ್ನು, ಮನೆ ಮಂದಿಯ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವ, ಹಿರಿಯರು ಇದ್ದರೆ, ಅವರಿಂದ ಎಲ್ಲರಲ್ಲಿಯೂ ಪರಸ್ಪರ ಅಷ್ಟಿಷ್ಟು ಸೌಹಾರ್ದತೆ ಇರಲಿಕ್ಕೆ ಅನುಕೂಲತೆಗಳಾಗಬಹುದು.

ಮಾತು ಕೇಳದ ಮಕ್ಕಳನ್ನು ಶಿಕ್ಷಿಸುವ ಬದಲಿಗೆ ಪ್ರೀತಿಸಿ ಸರಿದಾರಿಗೆ ತರಬಹುದು.  ಅಮ್ಮ ಅಮ್ಮನಾಗಿರಬೇಕು. ಮಕ್ಕಳ ಪಾಲಿನ ಗುಮ್ಮವಾಗಬಾರದು.

ನಿಮ್ಮ ಗೆಳತಿಯು ತನ್ನ ಬಾಲ್ಯದಲ್ಲಿ ಅವಳ ತಾಯಿಯಿಂದ ಅತಿಯಾದ ನೋವನ್ನು ಅನುಭವಿಸಿದ್ದು ಇದ್ದರೆ ಈಗ ತನ್ನ ಮಗಳ ಮೇಲೆ ಆ ಸೇಡನ್ನು ತೀರಿಸಿಕೊಳ್ಳುತ್ತಿರಬಹುದು. ಆಕೆಯೊಳಗಿನ ಅವ್ಯಕ್ತ ಸಿಟ್ಟು ಹೀಗೆ ವ್ಯಕ್ತವಾಗುತ್ತಿರಬಹುದು. ಇದರ ಬಗ್ಗೆ ನಿಮ್ಮ ಗೆಳತಿಗೆ ನೆನಪು ಇಲ್ಲದಿರಬಹುದು. ಆಕೆಯ ಮನಸ್ಥಿತಿಯೂ ಅಷ್ಟಾಗಿ ಸರಿ ಇಲ್ಲವಾಗಿದ್ದರೆ ಮೊದಲು ಆಕೆ ನಂತರ ಅಗತ್ಯವೆನ್ನಿಸಿದರೆ ಮಗಳು ಆಪ್ತ ಸಮಾಲೋಚಕರನ್ನು ಕಾಣಬೇಕು. ಇದರಿಂದ ಇಬ್ಬರಿಗೂ ಅನುಕೂಲವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.