ಶುಭಾಂಶು ಶುಕ್ಲಾ ಅವರ ಐಎಸ್ಎಸ್ ಯಾನವು ಅಂತರಿಕ್ಷದಲ್ಲಿ ಮಾನವನ ವಾಸಯೋಗ್ಯ ಸಾಧ್ಯತೆಯ ಬಗ್ಗೆ ಇನ್ನಷ್ಟು ಪ್ರಯೋಗಗಳನ್ನು ನಡೆಸುವುದಕ್ಕೆ ಒತ್ತಾಸೆ ನೀಡಿದೆ. ಅಷ್ಟೇ ಅಲ್ಲ, ಮೂಲವಿಜ್ಞಾನದತ್ತ ನಮ್ಮ ಮಕ್ಕಳ ಆಸಕ್ತಿಯನ್ನು ಕೆರಳಿಸುವುದಕ್ಕೆ ಮತ್ತು ಈ ಯೋಜನೆಯ ವಿವಿಧ ಆಯಾಮಗಳನ್ನು ವಿಶ್ಲೇಷಿಸುವ ಮೂಲಕ ಅಧ್ಯಾಪಕರು ಬೋಧನೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳುವುದಕ್ಕೂ ಪ್ರೇರಣೆ ನೀಡಿದೆ.
ಅಂತರಿಕ್ಷಕ್ಕೆ ತೆರಳಿದ ಎರಡನೇ ಭಾರತೀಯರಾದ ಶುಭಾಂಶು ಶುಕ್ಲಾ ಅವರ ಯಾನ ಇದೀಗ ಯಶಸ್ವಿಯಾಗಿ ಮುಕ್ತಾಯವಾಗಿದೆ. ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ದಲ್ಲಿ (ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್– ಐಎಸ್ಎಸ್) 18 ದಿನ ವಾಸಿಸಿ ಅಪೂರ್ವವಾದ ಅನುಭವ ಪಡೆಯುವುದರೊಂದಿಗೆ, ಅಲ್ಲಿ ಅರ್ಥಪೂರ್ಣವಾದ ವೈಜ್ಞಾನಿಕ ಪ್ರಯೋಗಗಳನ್ನೂ ನಿರ್ವಹಿಸಿ ಅವರು ಭೂಮಿಗೆ ಮರಳಿದ್ದಾರೆ.
ಅಂತರಿಕ್ಷಯಾನ ಒಂದು ರೋಮಾಂಚಕಾರಿಯಾದ ಸಾಹಸ. ವಿಜ್ಞಾನದ ತಳಹದಿಯ ಮೇಲೆ ಭೌತಶಾಸ್ತ್ರದ ನಿಯಮಗಳಿಗೆ ಅನುಗುಣವಾಗಿ ಈ ಯಾನ ರೂಪಿತವಾಗಿರುತ್ತದೆ. ಇಲ್ಲಿ ಅನೇಕ ವೇಳೆ ಕಂಡುಬರುವ ಗಂಟೆಗೆ 28ರಿಂದ 40 ಸಾವಿರ ಕಿಲೊಮೀಟರ್ ವೇಗ, ಅಪಾರವಾದ ಉಷ್ಣತೆ, ಅಂತರಿಕ್ಷ ನೌಕೆ ಹಾಗೂ ಅದರೊಳಗೆ ಕುಳಿತಿರುವ ಗಗನಯಾತ್ರಿಗಳ ಮೇಲೆ ಬೀಳುವ ಬಲ... ಇವೆಲ್ಲವೂ ನಮ್ಮ ಊಹೆಗೆ ನಿಲುಕದಂತಹವು.
ರಾಕೆಟ್‌ಗಳ ನೆರವಿನಲ್ಲಿ ಕೈಗೊಳ್ಳುವ ಅಂತರಿಕ್ಷಯಾನದ ವಿವರಗಳನ್ನು ಅರಿತಾಗ ಮೈ ಜುಮ್ಮೆನ್ನುತ್ತದೆ! ಅದರಲ್ಲೂ ‘ಮಾನವಸಹಿತ ಅಂತರಿಕ್ಷಯಾನ’ಕ್ಕೆ ಲಕ್ಷಾಂತರ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಸಾಮರ್ಥ್ಯವಿದೆ.
1984ರಲ್ಲಿ ಅಂತರಿಕ್ಷಕ್ಕೆ ತೆರಳಿದ ಮೊದಲ ಭಾರತೀಯರಾದ ರಾಕೇಶ್ ಶರ್ಮಾ ಅವರ ಸಾಹಸಯಾನದಿಂದ ಸ್ಫೂರ್ತಿ ಪಡೆದವರು ಶುಕ್ಲಾ. ಬಳಿಕ ವಿಜ್ಞಾನ ಹಾಗೂ ಗಣಿತದಲ್ಲಿ ಆಸಕ್ತಿ ತಳೆದು, ಕಠಿಣತಮವಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಯುದ್ಧವಿಮಾನದ ಪೈಲಟ್ ಆದರು. ಟೆಸ್ಟ್ ಪೈಲಟ್ ಸಹ ಆಗಿ ಭಾರತದ ‘ಗಗನಯಾನ’ ಕಾರ್ಯಕ್ರಮದ ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರಾದರು. ಇದೀಗ ಅವರು ‘ಆ್ಯಕ್ಸಿಯಂ– 4’ ಎಂಬ ಅಂತರಿಕ್ಷ ಅಭಿಯಾನದ ಭಾಗವಾಗಿ, ಭೂಮಿಯಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಭೂಕಕ್ಷೆಯಿಂದಲೇ ಸಂವಾದ ನಡೆಸಿದ್ದಾರೆ.
ತೂಕರಹಿತ ಸ್ಥಿತಿಯಲ್ಲಿ ತೇಲಾಡುತ್ತಾ ಗಂಟೆಗೆ ಸುಮಾರು 28 ಸಾವಿರ ಕಿ.ಮೀ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದ್ದ ಶುಕ್ಲಾ ಅವರನ್ನು ಟಿ.ವಿ. ಪರದೆಯ ಮೇಲೆ ಕಂಡು, ಅವರೊಂದಿಗೆ ಸಂವಾದ ನಡೆಸುವಾಗ ನಮ್ಮ ವಿದ್ಯಾರ್ಥಿಗಳು ಅನುಭವಿಸಿದ ಉದ್ವೇಗ, ಪಡೆದ ಉತ್ತೇಜನ ಅಸಾಧಾರಣವಾದುದು. ಪಠ್ಯಪುಸ್ತಕದಿಂದಷ್ಟೇ ಅಲ್ಲ, ಸಂವಹನದಲ್ಲಿ ತಜ್ಞರಿಗೆ ಪ್ರಶ್ನೆಗಳನ್ನು ಕೇಳುವುದರಿಂದಲೂ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು, ಈ ಮೂಲಕ ತಮ್ಮ ಜ್ಞಾನದಿಗಂತವನ್ನು ವಿಸ್ತರಿಸಿಕೊಳ್ಳಬಹುದು ಎಂಬ ಅರಿವನ್ನು ಇದು ವಿದ್ಯಾರ್ಥಿಗಳಲ್ಲಿ ಮೂಡಿಸಿದೆ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಈಗಾಗಲೇ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಬಹಳಷ್ಟು ಸಾಧನೆ ಮಾಡಿದೆ. ಅದರಲ್ಲೂ ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕೋಟ್ಯಂತರ ವಿದ್ಯಾರ್ಥಿಗಳನ್ನು ಹೊಂದಿರುವ ದೇಶಕ್ಕೆ ತನ್ನ ಸಾಧನೆಗಳು ಸುಸ್ಥಿರವಾಗಿ ಇರುವಂತೆ ನೋಡಿಕೊಂಡು, ಈ ಕ್ಷೇತ್ರಗಳಲ್ಲಿ ಮತ್ತಷ್ಟು ಮೇಲಕ್ಕೇರುವುದು ಅತ್ಯಗತ್ಯವಾಗಿದೆ. ಈ ದಿಸೆಯಲ್ಲಿ ಶುಕ್ಲಾ ಅವರ ಯಾನವು ದೇಶದಾದ್ಯಂತ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದಲ್ಲಿ, ಅಂದರೆ ‘ಸ್ಟೆಮ್’ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆದು ನಂತರ ಅದನ್ನೇ ವೃತ್ತಿಯನ್ನಾಗಿ ಆಯ್ದುಕೊಳ್ಳುವುದನ್ನು ಪ್ರೇರೇಪಿಸಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.
ಅಂತರಿಕ್ಷದ ತೂಕರಹಿತ ಸ್ಥಿತಿಯಲ್ಲಿ ವಾಸಿಸುವ ವಿಶಿಷ್ಟ ಅನುಭವವನ್ನು ಪಡೆಯುವುದಕ್ಕಷ್ಟೇ ಶುಕ್ಲಾ ಅವರ ಯಾನವು ಸೀಮಿತವಾಗಿರಲಿಲ್ಲ. ಭಾರತದಲ್ಲೇ ವಿಜ್ಞಾನಿಗಳಿಂದ ಯೋಜಿಸಿ, ರೂಪಿಸಿ, ವಿಶೇಷ ಸಾಧನಗಳಲ್ಲಿ ಸಿದ್ಧಗೊಳಿಸಲಾದ ಏಳು ಪ್ರಯೋಗಗಳನ್ನು ನಡೆಸುವುದೂ ಅವರ ಯಾನದ ಉದ್ದೇಶವಾಗಿತ್ತು. ಆ ಪೈಕಿ ಒಂದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಐಐಟಿ ವಿಜ್ಞಾನಿಗಳು ರೂಪಿಸಿದ್ದು. ಅದು, ಅಂತರಿಕ್ಷ ಪರಿಸರದಲ್ಲಿ ಹೆಸರುಕಾಳು ಹಾಗೂ ಮೆಂತ್ಯದ ಮೊಳೆತ ಬೀಜಗಳಲ್ಲಿ ಆಗುವ ಮಾರ್ಪಾಡುಗಳನ್ನು ಅಭ್ಯಸಿಸುವುದಾಗಿತ್ತು.
ಮೂಲ ವಿಜ್ಞಾನಕ್ಕೆ ಸಂಬಂಧಿಸಿದ್ದೂ ಸೇರಿದಂತೆ ಒಟ್ಟು 60 ಪ್ರಯೋಗಗಳಲ್ಲಿ ಶುಕ್ಲಾ ಹಾಗೂ ಸಹಚರರು ಐಎಸ್ಎಸ್‌ನ ಒಳಗೆ ತೊಡಗಿಸಿಕೊಂಡರು. ಇದು, ವಿಜ್ಞಾನ ಶಿಕ್ಷಣ ಪಡೆಯುತ್ತಿರುವ ವಿವಿಧ ಹಂತದ ವಿದ್ಯಾರ್ಥಿ ಸಮೂಹದ ಆಸಕ್ತಿಯನ್ನು ಪುನರುಜ್ಜೀವನಗೊಳಿಸಿ, ಕುತೂಹಲ ಕೆರಳಿಸುವುದರಲ್ಲಿ ಯಶಸ್ವಿಯಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.
ಇನ್ನು ಶುಕ್ಲಾ ಅವರ ಯಾನಕ್ಕೆ ಸಂಬಂಧಿಸಿದ ಚಿತ್ರಗಳು, ವಿಡಿಯೊಗಳನ್ನು ತೋರಿಸುತ್ತಾ ಅವುಗಳ ವಿವಿಧ ಮುಖಗಳನ್ನು ವಿಶ್ಲೇಷಿಸುವ ಮೂಲಕ, ನ್ಯೂಟನ್ನನ ಚಲನಾ ನಿಯಮ, ಗುರುತ್ವಾಕರ್ಷಣ ನಿಯಮಕ್ಕೆ ಅವು ಯಾವ ರೀತಿ ಬದ್ಧವಾಗಿವೆ ಎಂಬುದನ್ನು ಅಧ್ಯಾಪಕರು ಸುಲಭವಾಗಿ ವಿವರಿಸಬಹುದು. ಈ ಯಾನಕ್ಕೆ ಬಳಸಿದ ರಾಕೆಟ್ ಯಾವ ಮುನ್ನೂಕುವ ಸಾಧನವನ್ನು (ಪ್ರೊಪೆಲೆಂಟ್ಸ್ ಅಂದರೆ ಇಂಧನ-ಆಕ್ಸಿಡೈಸರ್ ಜೋಡಿ) ಬಳಸುತ್ತದೆ ಎಂಬುದನ್ನು ಪ್ರಸ್ತಾಪಿಸುತ್ತಾ ರಸಾಯನಶಾಸ್ತ್ರವನ್ನು ಆಸಕ್ತಿದಾಯಕವಾಗಿ ಬೋಧಿಸಬಹುದು. ಈ ಯಾನವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು, ಶಾಲಾ ಶಿಕ್ಷಣದ ಮಟ್ಟದಲ್ಲಿ ಕಂಡುಬರುವ ಕೆಲವು ಗಣಿತಾತ್ಮಕ ಸಮಸ್ಯೆಗಳನ್ನೂ ಬಗೆಹರಿಸಬಹುದು. ಈ ರೀತಿ ಮಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಅನುಭವ ನನಗಿದೆ.
ಹೀಗೆ, ಶುಭಾಂಶು ಶುಕ್ಲಾ ಅವರ ‘ಆ್ಯಕ್ಸಿಯಂ– 4’ ಅಭಿಯಾನ ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಅನೇಕ ವಿಧವಾದ ಕೊಡುಗೆಯನ್ನು ನೀಡಿದೆ, ಭವಿಷ್ಯದಲ್ಲೂ ನೀಡಲಿದೆ.
ಲೇಖಕ: ನಿರ್ದೇಶಕ, ಜವಾಹರಲಾಲ್ ನೆಹರೂ ತಾರಾಲಯ, ಬೆಂಗಳೂರು, ಇಸ್ರೊ ನಿವೃತ್ತ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.