ADVERTISEMENT

Connecting The Dots: ಕಲಿಕೆಗೆ ಸೇತುವಾದ ‘ಕನೆಕ್ಟಿಂಗ್‌ ದಿ ಡಾಟ್ಸ್‌’

ಉಮೇಶ ಭಟ್ಟ ಪಿ.ಎಚ್.
Published 14 ಡಿಸೆಂಬರ್ 2025, 23:30 IST
Last Updated 14 ಡಿಸೆಂಬರ್ 2025, 23:30 IST
   

ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ಎಂದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಭಯ. ಎಷ್ಟು ಕೇಳಿಸಿಕೊಂಡರೂ ಅರ್ಥವಾಗುವುದಿಲ್ಲ ಎಂಬ ಭಾವನೆ. ಇಂತಹ ಆತಂಕವನ್ನು ಹೋಗಲಾಡಿಸುವ ದಿಸೆಯಲ್ಲಿ ಶ್ರಮಿಸುತ್ತಿದೆ ‘ಕನೆಕ್ಟಿಂಗ್‌ ದಿ ಡಾಟ್ಸ್’ ಎಂಬ ಸಂವಾದಾತ್ಮಕ ಕಲಿಕಾ ಕಾರ್ಯಕ್ರಮ.

ಬದಲಾದ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ವಿಧಾನದ ಕಲಿಕೆಯ ಜತೆಗೆ ತಂತ್ರಜ್ಞಾನ ಆಧಾರಿತ ಕಲಿಕೆಯೂ ಮುಖ್ಯವಾಗುತ್ತದೆ. ಇದಕ್ಕೆ ಪೂರಕವಾಗಿ, ಸರ್ಕಾರಿ ಶಾಲೆಗಳ 6ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್‌ ಸಂವಹನವನ್ನು ಆನ್‌ಲೈನ್‌ ತರಗತಿಗಳ ಮೂಲಕ ಪ್ರಯೋಗಾಲಯ ಕಿಟ್‌ಗಳನ್ನು ಬಳಸಿ ಇಲ್ಲಿ ಹೇಳಿಕೊಡಲಾಗುತ್ತಿದೆ. ಕಲಿಕೆಯನ್ನು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ.

ಐಐಟಿ ಮದ್ರಾಸ್‌ನಲ್ಲಿ ಪದವಿ ಮುಗಿಸಿ, ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು, ಎರಡು ದಶಕಗಳ ಕಾಲ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದ ಬೆಂಗಳೂರಿನ ರಾಜೇಶ್‌ ಎ. ರಾವ್‌ ಅವರಿಗೆ ಶಿಕ್ಷಣ ವಲಯದಲ್ಲಿ ಹೊಸದೇನನ್ನಾದರೂ ಮಾಡಬೇಕೆಂಬ ಹುಮ್ಮಸ್ಸಿತ್ತು. ಅದಕ್ಕಾಗಿ ಅವರು ಸಮಾನಮನಸ್ಕರೊಂದಿಗೆ ಸೇರಿ ರೂಪಿಸಿದ್ದೇ ಈ ಕಲಿಕಾ ಕಾರ್ಯಕ್ರಮ.

ADVERTISEMENT

ಆಸಕ್ತ ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಮಕ್ಕಳಿಗೆ ನಿರಂತರವಾಗಿ ತರಗತಿಗಳನ್ನು ನಡೆಸುವುದು, ಪ್ರಯೋಗಗಳನ್ನು ಆಯೋಜಿಸುವುದು ಇದರಲ್ಲಿ ಸೇರಿವೆ. 2013ರಲ್ಲಿ ಬೆಂಗಳೂರಿನ ಆಯ್ದ ಶಾಲೆಗಳಲ್ಲಿ ತರಗತಿ ಶುರು ಮಾಡಲಾಯಿತು. ನೇರ ಪಾಠಕ್ಕಿಂತ, ಒಂದು ಕಡೆ ಕುಳಿತು ಹಲವು ಶಾಲೆ, ಮಕ್ಕಳನ್ನು ತಲುಪುವ ವ್ಯವಸ್ಥೆ ರೂಪುಗೊಂಡಿತು. ನಗರದ ಎಚ್‌ಎಸ್ಆರ್ ಲೇಔಟ್‌ನಲ್ಲಿರುವ ಕಚೇರಿಯೇ ಮುಖ್ಯ ಪಾಠದ ಮನೆ. ಅದು ಸುಸಜ್ಜಿತ ಸ್ಟುಡಿಯೊ. ಎದುರಿಗೆ ಕ್ಯಾಮೆರಾ, ಹಿಂದೆ ದೊಡ್ಡ ಹಲಗೆ. ಶಿಕ್ಷಕರು ಅಲ್ಲಿಂದ ಲೈವ್ ತರಗತಿಗಳನ್ನು ಆರಂಭಿಸಿದರೆ, ರಾಜ್ಯದ 17 ಜಿಲ್ಲೆಗಳ ಸುಮಾರು 100 ಸರ್ಕಾರಿ ಶಾಲೆಗಳ ಮಕ್ಕಳಿಗೆ ಏಕಕಾಲದಲ್ಲಿ ಇದು ತಲುಪುತ್ತದೆ. ಬೆಳಿಗ್ಗೆ 10ಕ್ಕೆ ಶುರುವಾದರೆ ಸಂಜೆ 4ರವರೆಗೂ ಮುಂದು ವರಿಯುತ್ತದೆ. ಸಂಜೆಯ ನಂತರ ಶಿಕ್ಷಕರಿಗೆ ತರಬೇತಿ ಇರುತ್ತದೆ.

ರಾಜ್ಯ ಶಿಕ್ಷಣ ಇಲಾಖೆ ರೂಪಿಸಿರುವ ಪಠ್ಯ ಆಧರಿಸಿ, ತರಗತಿಗಳಿಗೆ ಪರಸ್ಪರ ಅಡ್ಡಿಯಾಗದಂತೆ ಐದು ದಿನಗಳಿಗೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಂವಾದದ ರೀತಿಯಲ್ಲಿ ಪಾಠ ಇರುವುದರಿಂದ ಮಕ್ಕಳು ಖುಷಿಯಿಂದ ಭಾಗಿಯಾಗುತ್ತಾರೆ. ರಸಪ್ರಶ್ನೆಯನ್ನು ಆಯೋಜಿಸಿ ಮಕ್ಕಳ ಜ್ಞಾನಾರ್ಜನೆಗೆ ಇಂಬು ನೀಡುವ ಪ್ರಯತ್ನವೂ ಆಗುತ್ತಿದೆ.

ಶಾಲೆಯಲ್ಲೇ ಸ್ಟುಡಿಯೊ:

ಲೈವ್‌ ತರಗತಿಯಲ್ಲಿ ಪಾಲ್ಗೊಳ್ಳಲು ಬೇಕಾದ ಕ್ಯಾಮೆರಾ, ಉಪಕರಣಗಳು, ಇಂಟರ್‌ನೆಟ್‌ ಸಂಪರ್ಕ, ಯುಪಿಎಸ್‌ ಸಹಿತ ಅಗತ್ಯ ಪರಿಕರಗಳನ್ನು ಸುಮಾರು ₹ 1 ಲಕ್ಷ ವೆಚ್ಚದಲ್ಲಿ ಶಾಲೆಗೆ ಒದಗಿಸಲಾಗುತ್ತದೆ. ವಿಜ್ಞಾನ ಹಾಗೂ ಗಣಿತ ಪ್ರಯೋಗಗಳಿಗೆ ಬೇಕಾದ ಉಪಕರಣಗಳನ್ನೂ ನೀಡಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಒಲವಿರುವ ಕಾರ್ಪೊರೇಟ್‌ ಸಂಸ್ಥೆಗಳ ‘ಸಾಮಾಜಿಕ ಹೊಣೆಗಾರಿಕೆ ನಿಧಿ’ (ಸಿಎಸ್‌ಆರ್) ಬಳಸುವುದರಿಂದ ಶಾಲೆಗಳಿಗೆ ಇವೆಲ್ಲವೂ ಉಚಿತವಾಗಿ ದೊರೆಯುತ್ತವೆ. ಇದರೊಟ್ಟಿಗೆ ಅರ್ಹ ಮಕ್ಕಳಿಗೆ ವಿದ್ಯಾರ್ಥಿವೇತನ, ಕಲಿಕೆಗೆ ಬೇಕಾದ ಆರ್ಥಿಕ ನೆರವನ್ನೂ ಒದಗಿಸಲಾಗುತ್ತದೆ.

ತರಗತಿ, ಪ್ರಯೋಗಗಳು ಹಾಗೂ ಇತರ ಚಟುವಟಿಕೆಗಳನ್ನು ಚಿತ್ರೀಕರಿಸಿ, ಸಂಗ್ರಹಿಸಿ ಇಟ್ಟುಕೊಳ್ಳುವ ಮೂಲಕ, ಏನಾದರೂ ಅನುಮಾನ ಇದ್ದವರಿಗೆ, ಇಲ್ಲವೇ ಗೈರುಹಾಜರಾಗಿದ್ದ ಮಕ್ಕಳಿಗೆ ಬಳಸಲು ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕಾಗಿಯೇ ಆ್ಯಪ್ ಒಂದನ್ನು ರೂಪಿಸಿದ್ದು, ಅಲ್ಲಿ ಎಲ್ಲವೂ ಲಭ್ಯವಿರುತ್ತವೆ. ಮಕ್ಕಳಿಗೆ ಕಿರು ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. ಉನ್ನತ ಶಿಕ್ಷಣ ಪಡೆಯಲು ಬೇಕಾದ ಮಾರ್ಗದರ್ಶನವನ್ನೂ ಪ್ರೌಢಶಾಲೆ ಹಂತದಲ್ಲಿ ನೀಡಲಾಗುತ್ತದೆ.

ವಿಜ್ಞಾನದ ಪ್ರಾಯೋಗಿಕ ತರಗತಿಗಳು ಮಕ್ಕಳ ಕುತೂಹಲ ತಣಿಸಿವೆ. ಅನುಮಾನಗಳನ್ನು ಬಗೆಹರಿಸಿವೆ. ವಿಜ್ಞಾನ, ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಭಾವನೆಯನ್ನು ದೂರ ಮಾಡಿವೆ. ಫಲಿತಾಂಶವೂ ಸುಧಾರಣೆ ಕಂಡಿದೆ. 39 ಶಿಕ್ಷಕರು ಹಾಗೂ ತಜ್ಞರ ತಂಡವು ಈ ಚಟುವಟಿಕೆಯ ಬೆನ್ನೆಲುಬಾಗಿದೆ.

ಪ್ರಯೋಗನಿರತ ವಿದ್ಯಾರ್ಥಿಗಳು

ಕರ್ನಾಟಕದ ಶಿಕ್ಷಣ ವ್ಯವಸ್ಥೆಗೆ ಹೋಲಿಸಿದರೆ ನಾವು ತಲುಪುತ್ತಿರುವ ಪ್ರಮಾಣ ಸಣ್ಣದು. ಆದರೆ, ಅದರ ಪರಿಣಾಮವು ಮಕ್ಕಳ ಮೇಲೆ ಆಗುತ್ತಿರುವುದನ್ನು ಹತ್ತಿರದಿಂದ ಕಂಡಿದ್ದೇವೆ. ಶಿಕ್ಷಣ ಸುಧಾರಣೆಯ ಈ ಕ್ರಮಕ್ಕೆ, ಇದೇ ದಿಸೆಯಲ್ಲಿ ಕೆಲಸ ಮಾಡುವ ಸಂಸ್ಥೆಗಳು ಹಾಗೂ ಹಲವು ವ್ಯಕ್ತಿಗಳು ಜತೆಯಾಗಿದ್ದಾರೆ.
ರಾಜೇಶ್‌ ಎ. ರಾವ್‌ ‘ಕನೆಕ್ಟಿಂಗ್‌ ದಿ ಡಾಟ್ಸ್’ ಕಲಿಕಾ ಕಾರ್ಯಕ್ರಮದ ಸಂಸ್ಥಾಪಕ 
ಜವಾಬ್ದಾರಿ ಹೆಚ್ಚಿಸಿದ ಪ್ರಶಸ್ತಿ

ಇನ್ಫೊಸಿಸ್‌ ಪ್ರತಿಷ್ಠಾನವು ‘ಆರೋಹಣ ಸೋಷಿಯಲ್‌ ಇನೊವೇಷನ್‌’ ಪ್ರಶಸ್ತಿಯನ್ನು ನೀಡುತ್ತದೆ. ವಿಭಿನ್ನ ಪರಿಕಲ್ಪನೆಯ ಮೂಲಕ ಸಮುದಾಯಗಳ ಬದುಕು ಉತ್ತಮಪಡಿಸುವ ಸಾಮಾಜಿಕ ಕಾರ್ಯ ಮಾಡುತ್ತಿರುವ ವ್ಯಕ್ತಿ ಹಾಗೂ ತಂಡವನ್ನು ಗುರುತಿಸಿ ಪ್ರಶಸ್ತಿ
ಘೋಷಿಸಲಾಗುತ್ತದೆ.

2025ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದಾಗ, ದೇಶದ ನಾನಾ ಭಾಗಗಳಿಂದ 2 ಸಾವಿರ ಅರ್ಜಿಗಳು ಬಂದಿದ್ದವು. ಇದರಲ್ಲಿ ಕೊನೆಗೆ ಆಯ್ಕೆಯಾಗಿದ್ದು ‘ಕನೆಕ್ಟಿಂಗ್‌ ದಿ ಡಾಟ್ಸ್’ ಕಾರ್ಯಕ್ರಮ. ರಾಜೇಶ್ ರಾವ್, ರವೀಂದ್ರ ರಾವ್‌, ದೀಪಾ ರಾಜೀವ್‌ ಅವರ ತಂಡಕ್ಕೆ ₹ 10 ಲಕ್ಷ ನಗದು ಮೊತ್ತದ ಪ್ರಶಸ್ತಿ ಲಭ್ಯವಾಗಿರುವುದು ಇನ್ನಷ್ಟು ಉತ್ತೇಜನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.