ADVERTISEMENT

‘ಗಿರಣಿ ಉದ್ಯಮ’ಕ್ಕೊಂದು ಕೋರ್ಸ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 20:15 IST
Last Updated 27 ನವೆಂಬರ್ 2022, 20:15 IST
ಮೈಸೂರಿನ ಸಿಎಫ್‌ಟಿಆರ್‌ಐ ಆವರಣದಲ್ಲಿರುವ ಸುಸಜ್ಜಿತ ಗ್ರಂಥಾಲಯ
ಮೈಸೂರಿನ ಸಿಎಫ್‌ಟಿಆರ್‌ಐ ಆವರಣದಲ್ಲಿರುವ ಸುಸಜ್ಜಿತ ಗ್ರಂಥಾಲಯ   

ಹಿಟ್ಟಿನ ಗಿರಣಿಯಿಂದ ಉತ್ತಮ ಬದುಕು ಕಂಡುಕೊಳ್ಳಬಹುದೇ? ಹೌದೆನ್ನುತ್ತದೆ ಮೈಸೂರಿನ ಸಿಎಫ್‌ಟಿಆರ್‌ಐ (ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ).

ಅದಕ್ಕೆ ಕಾರಣ ಸಂಸ್ಥೆಯಲ್ಲಿರುವ ಹಿಟ್ಟಿನ ಗಿರಣಿ ತಂತ್ರಜ್ಞಾನದ (ಫ್ಲೋರ್ ಮಿಲ್ಲಿಂಗ್ ಟೆಕ್ನಾಲಜಿ) ಕೋರ್ಸ್. ಇಲ್ಲಿ ತರಬೇತಿ ಪಡೆದವರು ಉದ್ಯಮ ಸ್ಥಾಪಿಸಿದ್ದಲ್ಲದೇ ಅದರಲ್ಲಿ ಯಶಸ್ಸನ್ನೂ ಪಡೆದು, ಹಲವರಿಗೆ ಉದ್ಯೋಗಗಳನ್ನೂ ನೀಡಿದ್ದಾರೆ.

1981ರಲ್ಲಿ ಭಾರತ– ಸ್ವಿಟ್ಜರ್‌ಲೆಂಡ್‌ ಸಹಯೋಗದಲ್ಲಿ ಆರಂಭವಾದ ಯೋಜನೆಯೇ ‘ಅಂತರರಾಷ್ಟ್ರೀಯ ಗಿರಣಿ ತಂತ್ರಜ್ಞಾನದ ಶಾಲೆ’. ( ISMT – International School of Milling Technology) ಇದು ಒಂದು ವರ್ಷದ ಅವಧಿಯ ಕೋರ್ಸ್‌. ಈ ವರೆಗೆ 41 ಬ್ಯಾಚ್‌ಗಳಲ್ಲಿ 836 ವಿದ್ಯಾರ್ಥಿಗಳು ಕೋರ್ಸ್‌ ಪೂರೈಸಿದ್ದಾರೆ. ಇದರಲ್ಲಿ ಭಾರತ ಹಾಗೂ ಬಾಂಗ್ಲಾದೇಶ, ಕಾಂಬೋಡಿಯಾ, ಘಾನಾ, ಕೀನ್ಯಾ ಮುಂತಾದ 26 ದೇಶಗಳ 117 ವಿದ್ಯಾರ್ಥಿಗಳು ಸೇರಿದ್ದಾರೆಂಬುದು ವಿಶೇಷ. ಇದೇಡಿಸೆಂಬರ್‌ನಿಂದ 42ನೇ ತಂಡಕ್ಕೆ ಕೋರ್ಸ್ ಪ್ರವೇಶ ಆರಂಭವಾಗುತ್ತಿದೆ.

ADVERTISEMENT

ಇದಕ್ಕಾಗಿಯೇ , ಕಂಪ್ಯೂಟರ್ ನಿಯಂತ್ರಿತ ಪೈಲೆಟ್ ರೋಲರ್ ಹಿಟ್ಟಿನ ಗಿರಣಿ ಅಳವಡಿಸಲಾಗಿದೆ. ಸಂಸ್ಥೆಯಲ್ಲಿ ಪ್ರಯೋಗಾಲಯವಿದೆ. ಗಿರಣಿಯಲ್ಲಿ ಮಾಡಿದ ಉತ್ಪನ್ನಗಳ ಗುಣಮಟ್ಟ ನಿರ್ಧರಿಸಲು ‘ಪೈಲಟ್ ಸ್ಕೇಲ್ ಬೇಕಿಂಗ್’ ವ್ಯವಸ್ಥೆ ಇದೆ. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳಿರುವ ಬೃಹತ್ ಗ್ರಂಥಾಲಯ, ಅನುಭವಿ ಉಪನ್ಯಾಸಕರಿದ್ದಾರೆ.

ಶೈಕ್ಷಣಿಕ ಅರ್ಹತೆ: ಈ ಕೋರ್ಸ್‌ಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಎಂಜಿನಿ ಯರಿಂಗ್, ತಂತ್ರಜ್ಞಾನ, ವಿಜ್ಞಾನ ವಿಭಾಗದಲ್ಲಿ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಉನ್ನತ ಶ್ರೇಣಿಯೊಂದಿಗೆ ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಸ್ತಿ ಹಾಗೂ ಕೋರ್ಸ್ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಉದ್ಯೋಗ ಮಾರ್ಗದರ್ಶನವನ್ನೂ ನೀಡಲಾಗುತ್ತದೆ.

‘ಗಿರಣಿ ತಂತ್ರಜ್ಞಾನ ಕಲಿಕೆಗೆ ಹೊಸ ಸಾಧ್ಯತೆ ಕಲ್ಪಿಸುವ ಉದ್ದೇಶವಿರುವ ಕೋರ್ಸ್ ಇದು. ಕೋರ್ಸ್‌ನಿಂದಾಗಿ ಗಿರಣಿ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಉದ್ಯೋಗಗಳು ಸೃಷ್ಟಿಯಾಗಿವೆ’ ಎಂಬುದು ಸಂಸ್ಥೆಯ ಪ್ರಾಂಶುಪಾಲ ಸುರೇಶ್ ಸ್ಯಾಕ್ರೆ ಅವರ ನುಡಿ.

‘ಗಿರಣಿ ತಂತ್ರಜ್ಞಾನದ ಕಲಿಕೆ ನನ್ನ ಬದುಕಿನ ಪ್ರಮುಖ ತಿರುವು. ಕೋರ್ಸ್ ಪಡೆದು ಗಿರಣಿ ಉದ್ಯಮ ಆರಂಭಿಸಿ ಯಶಸ್ಸು ಪಡೆದು ನೂರಾರು ಜನರಿಗೆ ಉದ್ಯೋಗ ನೀಡಿದ ತೃಪ್ತಿ ನನಗಿದೆ’ ಎನ್ನುತ್ತಾರೆ ಸಂಸ್ಥೆಯ ಹಳೆ ವಿದ್ಯಾರ್ಥಿ ಕೋಲ್ಕತ್ತಾದ ಫ್ಯಾರಿಸನ್ಸ್ ಫುಡ್ ಪ್ರೈ ಲಿಮಿಟೆಡ್ ನಿರ್ದೇಶಕ ಹ್ಯಾರೀಸ್ ನೆಲ್ಲಿಕ್ಕೋಟೆ.

ಏನೇನು ಪಠ್ಯಕ್ರಮವಿದೆ: ಈ ಕೋರ್ಸ್‌ನ ಪಠ್ಯ ಹಾಗೂ ಪ್ರಾಯೋಗಿಕ ವಿಷಯಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.

lಗಿರಣಿ ಕಾರ್ಯಾಚರಣೆ, ಯಂತ್ರಗಳು, ಧಾನ್ಯ ವಿಜ್ಞಾನ ಮತ್ತು ಬೇಕಿಂಗ್ ಕಲೆ.

lಭೌತವಿಜ್ಞಾನ,ರಸಾಯನ ವಿಜ್ಞಾನ, ಗಣಿತ ವಿಜ್ಞಾನದ ಕಲಿಕೆ

l ಮೆಕ್ಯಾನಿಕ್ಸ್, ವಿದ್ಯುತ್ ತಂತ್ರಜ್ಞಾನ, ಶಕ್ತಿಯ ನಿರ್ವಹಣೆ, ಪ್ಯಾಕೇಜಿಂಗ್, ಕಂಪ್ಯೂಟರ್ ವಿಜ್ಞಾನ

l ವಿವಿಧ ಹಿಟ್ಟಿನ ಗಿರಣಿಗಳಿಗೆ ಅಧ್ಯಯನ ಪ್ರವಾಸ

l ಕೋರ್ಸ್ ಮೂಲಕ ಐ.ಎಸ್.ಎಂ.ಟಿ ಗಿರಣಿಯಲ್ಲಿ ‘ಸಸ್ಯ ಕಸಿ’ ಮತ್ತು ಸ್ವಯಂಚಾಲಿತ ಗಿರಣಿಯ ಬಗ್ಗೆ ಪ್ರಾಯೋಗಿಕ ತರಗತಿ ನೀಡುತ್ತಾರೆ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ದೇಶದ ವಿದ್ಯಾರ್ಥಿಗಳಿಗೆ ₹ 2.5 ಲಕ್ಷ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ 11 ಸಾವಿರ ಡಾಲರ್ ಶುಲ್ಕ ನಿಗದಿಪಡಿಸಿದ್ದು, ವಸತಿ ನಿಲಯದ ಖರ್ಚು ಪ್ರತ್ಯೇಕ. ಹೆಚ್ಚಿನ ಮಾಹಿತಿಗೆ:9243552882 https://cftri.res.inಗೆ ಭೇಟಿ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.