ಚಿತ್ರ: ಜೆಎಸ್ಎಸ್ಅಕಾಡೆಮಿ
ಮೈಸೂರು: ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‌ಎಸ್‌ಎಎಚ್‌ಇಆರ್) ವತಿಯಿಂದ ಮಾರಿಷಸ್‌ನಲ್ಲಿ ಎಂಬಿಬಿಎಸ್ (5 ವರ್ಷ) ಕೋರ್ಸ್ ಪ್ರಾರಂಭಿಸಲು ಅಲ್ಲಿನ ಸರ್ಕಾರದ ಉನ್ನತ ಶಿಕ್ಷಣ ಆಯೋಗದಿಂದ ಅನುಮೋದನೆ ಸಿಕ್ಕಿದೆ ಎಂದು ಕುಲಪತಿ ಬಿ. ಸುರೇಶ್ ತಿಳಿಸಿದರು.
ಇಲ್ಲಿನ ಸುತ್ತೂರು ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯಸಂಕಲ್ಪ ಹಾಗೂ ದೂರದೃಷ್ಟಿಯ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಅಧಿಕೃತ ಅಂಗೀಕಾರದೊಂದಿಗೆ ಜೆಎಸ್‌ಎಸ್ ಮಹಾವಿದ್ಯಾಪೀಠವು ಅಂತರರಾಷ್ಟ್ರೀಯ ವೈದ್ಯಕೀಯ ಶಿಕ್ಷಣದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತದಾಚೆಗೂ
‘ಗುಣಮಟ್ಟ, ಕೈಗೆಟಕುವ ಹಾಗೂ ಜಾಗತಿಕವಾಗಿ ಪ್ರಸ್ತುತವಾಗಿರುವ ಉನ್ನತ ಶಿಕ್ಷಣವನ್ನು ಭಾರತದಾಚೆಗೂ ವಿಸ್ತರಿಸುವ ಧ್ಯೇಯ ಸಾಕಾರಗೊಂಡಿದೆ. 100 ಸೀಟುಗಳ ಪ್ರವೇಶಕ್ಕೆ ಅಲ್ಲಿನ ಸರ್ಕಾರದಿಂದ ಅನುಮತಿ ದೊರೆತಿದೆ. ಇದೇ ನವೆಂಬರ್‌ನಲ್ಲಿ ಆರಂಭಿಸಲಾಗುವುದು. ‘ನೀಟ್’ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಅರ್ಹತೆ ಇರುವವರು ಪ್ರವೇಶ ಪಡೆಯಬಹುದು’ ಎಂದು ವಿವರ ನೀಡಿದರು.
‘ಎನ್‌ಎಂಸಿ (ನ್ಯಾಷನಲ್ ಮೆಡಿಕಲ್ ಕೌನ್ಸಿಲ್) ಮಾರ್ಗಸೂಚಿಯಂತೆ ಕೋರ್ಸ್ ನಡೆಸಲಾಗುವುದು. ಭಾರತೀಯ ಪಠ್ಯಕ್ರಮದಲ್ಲೇ ಬೋಧಿಸಲಾಗುವುದು. ಬೋಧಕರಲ್ಲಿ ಬಹುತೇಕರು ನಮ್ಮ ದೇಶದವರೇ ಇರುತ್ತಾರೆ. ಅಲ್ಲಿಯೇ ಕ್ಲಿನಿಕಲ್ ತರಬೇತಿಯನ್ನೂ ಕೊಡಲಾಗುವುದು. ಇದಕ್ಕೆ ಬೇಕಾದ ಸೌಕರ್ಯಗಳು ಹಾಗೂ ಅತ್ಯಾಧುನಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ, ಎಫ್‌ಎಂಜಿ (ಫಾರಿನ್ ಮೆಡಿಕಲ್ ಗ್ರಾಜುಯೇಟ್) ಪರೀಕ್ಷೆಗೆ ಬೇಕಾಗುವ ತರಬೇತಿಯನ್ನೂ ನೀಡಲಾಗುವುದು’ ಎಂದು ತಿಳಿಸಿದರು.
2006ರಿಂದ ಅಲ್ಲಿ ಪ್ರಾರಂಭ
‘ಮಾರಿಷಸ್‌ನಲ್ಲಿ 2006ರಲ್ಲಿ ಸ್ಥಾಪಿತವಾದ ಜೆಎಸ್‌ಎಸ್ ಅಕಾಡೆಮಿಯು ಆ ದೇಶದಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ನೀಡಿದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಬಳಿಕ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡು ಇತರ ಕೋರ್ಸ್‌ಗಳನ್ನೂ (ಆರೋಗ್ಯ ವಿಜ್ಞಾನ, ಲೈಫ್ ಸೈನ್ಸ್ ಹಾಗೂ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ 9 ಯುಜಿ, ಪಿಜಿ) ನಡೆಸುತ್ತಿದೆ. ಜೆಎಸ್‌ಎಸ್ ಎಜುಕೇಶನ್ ಫೌಂಡೇಷನ್ ಪ್ರೈ.ಲಿ. ಇದನ್ನು ನಿರ್ವಹಿಸುತ್ತಿದೆ’ ಎಂದು ವಿವರಿಸಿದರು.
‘ಆ ದೇಶದ ವಕೋಯಾಸ್ ಉಪನಗರದ ಬೋನ್‌ಟೇರ್‌ನಲ್ಲಿ 8 ಎಕರೆ ಪ್ರದೇಶದ ಕ್ಯಾಂಪಸ್‌ನಲ್ಲಿ 14,689 ಚ.ಮೀ. ವಿಸ್ತೀರ್ಣದಲ್ಲಿ ಅಕಾಡೆಮಿಯ ಕಟ್ಟಡ ನಿರ್ಮಿಸಲಾಗಿದೆ. ಅಂತರರಾಷ್ಟ್ರೀಯ ದರ್ಜೆಯ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಸಿಮ್ಯುಲೇಷನ್ ಮತ್ತು ಕೌಶಲ ತರಬೇತಿ, ಹಾಗೂ ವಸತಿ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪದವಿ ಪ್ರದಾನ ಅಧಿಕಾರ ಹೊಂದಿರುವ ಸಂಸ್ಥೆಯಾಗಿ 2018ರಲ್ಲಿ ನೋಂದಣಿಯಾಗಿದೆ. ವಿವಿಧ 12 ದೇಶಗಳ ವಿದ್ಯಾರ್ಥಿಗಳು ಈಗ ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ಅಲ್ಲಿನ ಆರೋಗ್ಯ ಇಲಾಖೆಯು ಎಸ್‌ಎಸ್‌ಆರ್‌ಎನ್ ಆಸ್ಪತ್ರೆ, ಐದು ಪ್ರಾದೇಶಿಕ ಆಸ್ಪತ್ರೆಗಳು ಮತ್ತು ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಒಟ್ಟು 600 ಹಾಸಿಗೆಗಳ ಸೌಲಭ್ಯವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಕ್ಲಿನಿಕಲ್ ತರಬೇತಿಗೆ ಒದಗಿಸಿದೆ’ ಎಂದರು.
ಕ್ರಾಂತಿಕಾರಿ ಹೆಜ್ಜೆ
‘ಈ ಎಂಬಿಬಿಎಸ್ ಶಿಕ್ಷಣವು ಮಾರಿಷಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ’ ಎಂದು ಹೇಳಿದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮನವಿಯ ಮೇರೆಗೆ ಮಾರಿಷಸ್‌ನಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಯಿತು. ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ಅನುವಾಗಲೆಂದು ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುತ್ತಿದೆ. ಅಗತ್ಯವಾದ ಎಲ್ಲ ಸೌಲಭ್ಯವನ್ನೂ ಒದಗಿಸಲಾಗಿದೆ’ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ, ನಿರ್ದೇಶಕರಾದ ಪುಟ್ಟಸುಬ್ಬಪ್ಪ ಹಾಗೂ ಸಂತಾನಂ, ಜೆಎಸ್ಎಸ್ಎಎಚ್‌ಇಆರ್ ಉಪಕುಲಪತಿ ಡಾ.ಎಚ್. ಬಸವನಗೌಡಪ್ಪ, ಕುಲಸಚಿವ ಡಾ.ಬಿ. ಮಂಜುನಾಥ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.