ADVERTISEMENT

‘ಕನ್ನಡ ಕಾನ್ವೆಂಟ್‌’ಗೆ 64ರ ಸಂಭ್ರಮ

ರಾಜ್ಯೋತ್ಸವ ಪ್ರಯುಕ್ತ ಬಳಸಲು....

ಎಸ್‌.ಸಂಪತ್‌
Published 1 ನವೆಂಬರ್ 2018, 19:30 IST
Last Updated 1 ನವೆಂಬರ್ 2018, 19:30 IST
ಚಾಮರಾಜಪೇಟೆಯಲ್ಲಿರುವ ಎಲ್‌ಆರ್‌ಎಚ್‌ಎಸ್‌ ಸ್ಕೂಲ್‌
ಚಾಮರಾಜಪೇಟೆಯಲ್ಲಿರುವ ಎಲ್‌ಆರ್‌ಎಚ್‌ಎಸ್‌ ಸ್ಕೂಲ್‌   

ರಾಜಧಾನಿಯ ಸಾಂಸ್ಕೃತಿಕ ಕೇಂದ್ರ ಸ್ಥಾನಗಳಲ್ಲಿ ಚಾಮರಾಜಪೇಟೆಗೆ ಪ್ರಮುಖ ಸ್ಥಾನವಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಿಡಿದು ಸಾಕಷ್ಟು ಸಂಘ, ಸಂಸ್ಥೆಗಳು ಇಲ್ಲಿ ಕನ್ನಡ ಕಟ್ಟುವ, ಸಂಸ್ಕೃತಿ ಪಸರಿಸುವ ಕೆಲಸಗಳನ್ನು ಮಾಡುತ್ತಿವೆ. ವಸತಿ ಪ್ರದೇಶವಾಗಿದ್ದ ಇದು ಕ್ರಮೇಣ ‘ಕಮರ್ಷಿಯಲ್‌’ ಪ್ರದೇಶವಾಗಿ ಬೆಳೆದಿದೆ. ಆದರೂ ಕನ್ನಡ ಮತ್ತು ಸಂಸ್ಕೃತಿ ಕೆಲಸಗಳಿಗೆ ಕೊರತೆಯಿಲ್ಲ.

‘ಕನ್ನಡದ ಕಾನ್ವೆಂಟ್‌’ ಎಂದೇ ಪ್ರಸಿದ್ಧವಾಗಿರುವ ಚಾಮರಾಜ ಪೇಟೆಯ ಶ್ರೀ ರಾಮಮಂದಿರ ಶಾಲೆಗೀಗ 64 ವರ್ಷಗಳು. ಇಲ್ಲಿನ ವಿದ್ಯಾರ್ಥಿಗಳು ಕನ್ನಡದಷ್ಟೇ ಚೆನ್ನಾಗಿ ಇಂಗ್ಲಿಷ್‌ ಅನ್ನೂ ಕಲಿಯುತ್ತಾರೆ ಎಂಬುದು ಈ ಶಾಲೆಯ ಪ್ರಸಿದ್ಧಿಗೆ ಕಾರಣ. ನವೆಂಬರ್‌ 2 ಮತ್ತು 3 ರಂದು ಈ ಶಾಲೆ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

1955ರಲ್ಲಿ ಆರಂಭವಾದ ಈ ಶಾಲೆಯ ವಿದ್ಯಾರ್ಥಿಗಳಿಗಂತೂ ಹಿಂದಿನಿಂದ ಎಲ್ಲಿಲ್ಲದ ಬೇಡಿಕೆ. 1990ರವರೆಗೂ ಇಲ್ಲಿನ ವಿದ್ಯಾರ್ಥಿಗಳಿಗೆ ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌, ಬೆಂಗಳೂರು ಹೈಸ್ಕೂಲ್‌ನಲ್ಲಿ ಸುಲಭವಾಗಿ ಪ್ರವೇಶ ಸಿಗುತ್ತಿತ್ತು. ಈ ಕನ್ನಡ ಶಾಲೆಯ ಮಕ್ಕಳು ಇಂಗ್ಲಿಷ್‌ ಚೆನ್ನಾಗಿ ಬಲ್ಲರು ಎಂಬುದೇ ಇದಕ್ಕೆ ಕಾರಣ. ಇದೀಗ ಇದೇ ಶಾಲೆಯಲ್ಲಿ ಹೈಸ್ಕೂಲ್‌ ಇದೆ. ಹಾಗಾಗಿ ಈ ಶಾಲೆಗೆ ಹಿಂದಿನಿಂದ ಜನರೇ ಇಟ್ಟಿರುವ ಹೆಸರು ‘ಕನ್ನಡದ ಕಾನ್ವೆಂಟ್’.

ADVERTISEMENT

ಚಾಮರಾಜಪೇಟೆಯ ಶ್ರೀರಾಮಂದಿರ ಅಸೋಸಿಯೇಷನ್‌ ನಡೆಸುತ್ತಿರುವ ಈ ಶಾಲೆಯ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಅಂದಾಜು 16 ಶಾಲೆಗಳಿದ್ದವು. ಇವುಗಳೊಂದಿಗೆ ಪೈಪೋಟಿ ನೀಡಿ ಕನ್ನಡತನವನ್ನು ಉಳಿಸಿ ಪಸರಿಸುತ್ತಿರುವ ಈ ಶಾಲೆಯಲ್ಲೀಗ 800 ವಿದ್ಯಾರ್ಥಿಗಳಿದ್ದಾರೆ. ಹಿಂದೆ ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ 1,200 ವಿದ್ಯಾರ್ಥಿಗಳು ಓದುತ್ತಿದ್ದರು. ಖಾಸಗಿ ಶಾಲೆಗಳಿಗೆ ಇನ್ನಷ್ಟು ಸ್ಪರ್ಧೆ ನೀಡಲು ಕೆಲ ವರ್ಷಗಳ ಹಿಂದೆ ಈ ಶಾಲೆ ಇಂಗ್ಲಿಷ್‌ ಮಾಧ್ಯಮದ ಹೈಸ್ಕೂಲ್‌ ಅನ್ನೂ ತೆರೆದಿದೆ. ಇದರ ಪರಿಣಾಮ 16 ಶಾಲೆಗಳಲ್ಲಿ ಏಳು ಶಾಲೆಗಳು ಬಾಗಿಲು ಹಾಕಿವೆ.

ಒಟ್ಟು ಮೂರು ಶಾಲೆಗಳು: ಒಂದೇ ಆವರಣದಲ್ಲಿ ‘ಶ್ರೀರಾಮ ಶಿಶುವಿಹಾರ, ಶಕುಂತಲಾದೇವಿ ಹಿರಿಯ ಪ್ರಾಥಮಿಕ ಪಾಠಶಾಲೆ’, ‘ಲಕ್ಷ್ಮೀದೇವಿ ರಾಮಣ್ಣ ಪ್ರೌಢಶಾಲೆ’ ಹಾಗೂ ‘ಎಲ್‌.ಆರ್‌.ಎಚ್‌.ಎಸ್‌. ಸೆಂಟ್ರಲ್‌ ಸ್ಕೂಲ್‌’ ನಡೆಯುತ್ತಿವೆ. ಈ ಜಾಗ ಮತ್ತು ಬಹುತೇಕ ಕಟ್ಟಡ ದಾನಿಗಳ ಕೊಡುಗೆ.

1955ರಲ್ಲಿ ಕೇವಲ ಮೂರು ಕೊಠಡಿಗಳಿಂದ ಆರಂಭವಾದ ಈ ಶಾಲೆಯಲ್ಲೀಗ 25 ಕೊಠಡಿಗಳಿವೆ. ಅಲ್ಲದೆ ದಾನಿಗಳ ನೆರವಿನಿಂದ ಇನ್ನೂ 32 ಕೊಠಡಿಗಳನ್ನು ಕಟ್ಟಿ ಶಾಲಾ ಚಟುವಟಿಕೆಗಳನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಶ್ರೀರಾಮಮಂದಿರ ಅಸೋಸಿಯೇಷನ್‌ ಹೊಂದಿದೆ.

ದಾನಿಗಳ ಸೇವೆ: ದಾನಿಗಳಾದ ಲಕ್ಷ್ಮೀಪತಿ ಮತ್ತು ಪುಟ್ಟನಂಜಮ್ಮ ಅವರು ಶಾಲೆಗೆ ಜಾಗವನ್ನು ದಾನವಾಗಿ ನೀಡಿದ್ದಾರೆ. 1954ರಲ್ಲಿ ಶ್ರೀಕೃಷ್ಣ ಭಾಗವತರಿಂದ ಹರಿಕತೆ, ಪುರಾಣ ಪ್ರವಚನಗಳು ನಡೆದು, ಅಲ್ಲಿ ಸಂಗ್ರಹಿಸಿದ ಸಣ್ಣಪುಟ್ಟ ಹಣದಿಂದ ಶಾಲೆಯ ಆರಂಭವಕ್ಕೆ ನಾಂದಿಯಾಡಲಾಯಿತು. ಎಂ.ಆರ್‌.ಲಕ್ಷ್ಮಿದೇವಿ ರಾಮಣ್ಣ (ವಿಧಾನ ಪರಿಷತ್ತಿನ ಸದಸ್ಯೆ) ಅವರ ಮುಂದಾಳತ್ವದಲ್ಲಿ ಪ್ರಸಿದ್ಧ ಗಣಿತಶಾಸ್ತ್ರಜ್ಞೆ ಶಕುಂತಲಾದೇವಿ ಅವರು 1955ರಲ್ಲಿ ಅಂದಾಜು ₹ 5,000 ವೆಚ್ಚದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಿಕೊಟ್ಟರು.

ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಶಾಲಾ ಕೊಠಡಿಗಳ ಸಂಖ್ಯೆಯೂ ಹೆಚ್ಚಳವಾಗಿದ್ದು, ಮೂರು ಅಂತಸ್ತಿನ ಕಟ್ಟಡವನ್ನು ಹೊಂದಿದೆ. 2010–11ರಲ್ಲಿ ಶಕುಂತಲಾದೇವಿ ಅವರು ಮತ್ತೊಮ್ಮೆ ಅಂದಾಜು ₹ 20 ಲಕ್ಷ ಧನ ಸಹಾಯ ಮಾಡಿ ಹೈಸ್ಕೂಲ್‌ ಕಟ್ಟಡ ನಿರ್ಮಾಣಕ್ಕೆ ನೆರವಾದರು. ಅಂತೆಯೇ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿರುವ ಎಂ. ಬಿಂದು ಮಾಧವರಾವ್‌ ಅವರ ಸೇವೆಯೂ ಅವಿಸ್ಮರಣೀಯ.

ಶಾಲೆಯಲ್ಲಿ 12 ವರ್ಷಗಳಿಂದ ದತ್ತು ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿ ಪ್ರವೇಶ ಪಡೆಯುವ ಬಡ ಹಾಗೂ ಪ್ರತಿಭಾವಂತ ಮಕ್ಕಳನ್ನು ಹಲವು ದಾನಿಗಳು, ಸಂಘ, ಸಂಸ್ಥೆಗಳು ದತ್ತು ಪಡೆದು ಅವರ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ಭರಿಸುತ್ತಿವೆ. ‘ಪ್ರೇಮಾಂಜಲಿ ಟ್ರಸ್ಟ್‌’, ಗಿಬ್ಸ್‌ ಸಂಸ್ಥೆ, ಭವಾನಿ ಪ್ರಸಾದ್‌, ಮೀರಾ ತೀರ್ಥಾ ಸೇರಿದಂತೆ ಹಲವರು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದಿದ್ದಾರೆ.

ಶಾಲೆಯಲ್ಲಿ ಏನೇನಿದೆ: ಸುಸಜ್ಜಿತ ಕಂಪ್ಯೂಟರ್‌ ಲ್ಯಾಬ್‌, ಭೌತವಿಜ್ಞಾನ, ರಸಾಯನ ವಿಜ್ಞಾನದ ಲ್ಯಾಬ್‌, ಸುಮಾರು 20 ಸಾವಿರ ಪುಸ್ತಕಗಳ ಗ್ರಂಥಾಲಯ (ಅಮೆರಿಕದಲ್ಲಿರುವ ಡಾ. ಅನಿಲ್‌ ಕೆ. ರಾಮಣ್ಣ ಅವರ ಕೊಡುಗೆ), ಆಟದ ಮೈದಾನ ಇದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೆಸರು ಮಾಡಿದ್ದಾರೆ ಎಂದು ಹೇಳುತ್ತಾರೆ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಆಡಳಿತ ಮಂಡಳಿಯ ಸದಸ್ಯ ಸ್ವಾಮಿ ಪ್ರಸಾದ್‌.

**

ಉಳಿವಿಗೆ ಕಾರಣವಾಗಿರುವ ಅಂಶಗಳು

* ಇದು ಅನುದಾನಿತ ಶಾಲೆಯಾಗಿರುವುದರಿಂದ ಶುಲ್ಕ ಕಡಿಮೆ

* ಶೇ 60ರಷ್ಟು ವಿದ್ಯಾರ್ಥಿಗಳು ದತ್ತು ಕಾರ್ಯಕ್ರಮದ ವ್ಯಾಪ್ತಿಯಲ್ಲಿರುವುದರಿಂದ ಅವರಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗುತ್ತಿದೆ

* ಇಲ್ಲಿನ ಹಳೆ ವಿದ್ಯಾರ್ಥಿಗಳಲ್ಲಿ ಹಲವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನೂ ಇದೇ ಶಾಲೆಗೆ ಸೇರಿಸುತ್ತಿದ್ದಾರೆ

* ಸಮೀಪದ ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ಇರುವುದರಿಂದ ಪೋಷಕರು ಈ ಶಾಲೆಯತ್ತ ಮುಖ ಮಾಡಿದ್ದಾರೆ

**

ಇಂದು, ನಾಳೆ ವಜ್ರಮಹೋತ್ಸವ

ಶಾಲೆಯ ವಜ್ರಮಹೋತ್ಸವ ಮತ್ತು ನೂತನ ಕಟ್ಟಡದ ಉದ್ಘಾಟನೆ ಇದೇ 2 ಮತ್ತು 3ರಂದು ನಡೆಯಲಿದೆ.ಶುಕ್ರವಾರ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಎಂ.ಎನ್‌. ವೆಂಕಟಾಚಲಯ್ಯ, ಶನಿವಾರ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕಿದ್ವಾಯಿ ಆಸ್ಪತ್ರೆಯ ವಿಶ್ರಾಂತ ನಿರ್ದೇಶಕರಾದ ಡಾ. ವಿಜಯಲಕ್ಷ್ಮಿ ದೇಶಮಾನೆ, ಬೆಂಗಳೂರು ದಕ್ಷಿಣದ ಡಿಡಿಪಿಐ ಎಸ್‌. ರಾಜೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಚಾಮರಾಜಪೇಟೆ ಶ್ರೀರಾಮಮಂದಿರ ಅಸೋಸಿಯೇಷನ್‌ನ ಅಧ್ಯಕ್ಷರಾದ ಸಿ.ಎಂ.ಸುಬ್ಬಯ್ಯ, ಉಪಾಧ್ಯಕ್ಷರಾದ ಬೈಸಾನಿ ಅಶೋಕ್‌ ಕುಮಾರ್‌, ಸಂಸ್ಥಾಪಕ ಕಾರ್ಯದರ್ಶಿ ಎಂ. ಬಿಂದು ಮಾಧವರಾವ್‌ ಪಾಲ್ಗೊಳ್ಳುವರು. ಶಾಲಾ ಸಂಸ್ಥಾಪಕರು ಮತ್ತು ನಿವೃತ್ತ ಶಿಕ್ಷಕರಿಗೆ ಈ ವೇಳೆ ಗೌರವಾರ್ಪಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.