ADVERTISEMENT

CR Rao: ಖ್ಯಾತ ಗಣಿತ, ಸಂಖ್ಯಾಶಾಸ್ತ್ರಜ್ಞ ಸಿ.ಆರ್. ರಾವ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2023, 9:21 IST
Last Updated 23 ಆಗಸ್ಟ್ 2023, 9:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಅಮೆರಿಕನ್ ಸಿ.ಆರ್. ರಾವ್ ಎಂದೇ ಖ್ಯಾತರಾಗಿದ್ದ ಗಣಿತ ಮತ್ತು ಸಂಖ್ಯಾಶಾಸ್ತ್ರಜ್ಞರಾದ ಕಲ್ಯಂಪುಡಿ ರಾಧಾಕೃಷ್ಣ ರಾವ್ ಇಂದು (ಬುಧವಾರ) ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು. ಅವರು ಅಮೆರಿಕದಲ್ಲಿ ನೆಲೆಸಿದ್ದರು.

ರಾಧಾಕೃಷ್ಣ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದ್ದರು. ಗುಡೂರು, ನಂದಿಗಾಮ ಮತ್ತು ವಿಶಾಖಪಟ್ಟಣದಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದರು. ಬಳಿಕ ಆಂಧ್ರ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ (ಗಣಿತಶಾಸ್ತ್ರ) ಮತ್ತು 1943ರಲ್ಲಿ ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು. 1948ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಗಣಿತ ಮತ್ತು ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ರಾವ್ ಅವರು ಮಾಡಿರುವ ಸಾಧನೆಗಾಗಿ 1968ರಲ್ಲಿ ಪದ್ಮಭೂಷಣ, 2001ರಲ್ಲಿ ಕೇಂದ್ರ ಸರ್ಕಾರ ಭಾರತದ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 75 ವರ್ಷಗಳ ಹಿಂದೆ ಸಂಖ್ಯಾಶಾಸ್ತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದ ರಾವ್ ಅವರ ಅಪಾರ ಕೊಡುಗೆಯ ಸ್ಮರಣಾರ್ಥ 2023ರ ಸಾಲಿನ ನೊಬೆಲ್ ಪ್ರಶಸ್ತಿಗೆ ಸಮಾನವಾದ ‘ಇಂಟರ್‌ನ್ಯಾಷನಲ್ ಪ್ರೈಜ್ ಆಫ್ ಸ್ಟ್ಯಾಟಸ್ಟಿಕ್ಸ್ 2023’ ಅಂತರರಾಷ್ಟ್ರೀಯ ಪ್ರಸ್ತಿಗೆ ಭಾಜನರಾಗಿದ್ದರು.

ADVERTISEMENT

ರಾವ್ ಅವರು 19 ದೇಶಗಳಿಂದ 39 ಡಾಕ್ಟರೇಟ್ ಪಡೆದಿದ್ದಾರೆ. ಜತೆಗೆ, 477 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, 15 ಪುಸ್ತಕಗಳನ್ನು ಬರೆದಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಅವರು 2002ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿ ‘ನ್ಯಾಷನಲ್ ಮೆಡಲ್ ಆಫ್ ಸೈನ್ಸ್’ ಅನ್ನು ನೀಡಿ ಗೌರವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.