ADVERTISEMENT

ಇದು ಅಂತಿಂಥ ಗ್ರಂಥಾಲಯವಲ್ಲ!

ಪೃಥ್ವಿರಾಜ್ ಎಂ ಎಚ್
Published 27 ನವೆಂಬರ್ 2018, 19:45 IST
Last Updated 27 ನವೆಂಬರ್ 2018, 19:45 IST
ಕುಮಾರಸ್ವಾಮಿ ಬಡಾವಣೆ ನಗರ ಕೇಂದ್ರ ಗ್ರಂಥಾಲಯ
ಕುಮಾರಸ್ವಾಮಿ ಬಡಾವಣೆ ನಗರ ಕೇಂದ್ರ ಗ್ರಂಥಾಲಯ   

ಗ್ರಂಥಾಲಯವೆಂದ ಕೂಡಲೇ ನಿಶ್ಶಬ್ದ ವಾತಾವರಣದಲ್ಲಿ ಕುಳಿತು ಓದುವುದು, ಪುಸ್ತಕಗಳನ್ನು ಎರವಲು ಪಡೆಯುವುದು ನೆನಪಿಗೆ ಬರುತ್ತದೆ. ಆದರೆಕುಮಾರಸ್ವಾಮಿ ಬಡವಾವಣೆಯ ನಗರ ಕೇಂದ್ರ ಗ್ರಂಥಾಲಯ ಇವುಗಳಿಗಷ್ಟೇ ಸೀಮಿತವಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಾ ಗಮನ ಸೆಳೆಯುತ್ತಿದೆ.

ಓದುಗರು ಗ್ರಂಥಾಲಯದೊಂದಿಗೆ ಸದಾ ಸಂಪರ್ಕದಲ್ಲಿರ ಬೇಕು ಎಂದು, 29 ವರ್ಷಗಳಿಂದ ಸತತವಾಗಿ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ವನ್ನು ವಿಶೇಷವಾಗಿ ಆಚರಿಸುತ್ತಿದೆ. ಪ್ರತಿವರ್ಷ ನವೆಂಬರ್ 14ರಿಂದ 20ರವರೆಗೆ ಈ ಸಪ್ತಾಹ ನಡೆಯುತ್ತದೆ. ಭಕ್ತಿ, ಭಾವ, ಜನಪದ ಮತ್ತು ಚಲನಚಿತ್ರ ಗೀತೆಗಳ ಸ್ಪರ್ಧೆ, ರಸಪ್ರಶ್ನೆ, ಮಣಿ ಪೋಣಿಸುವುದು, ಪ್ರಬಂಧ ರಚನೆ, ಚಿತ್ರಕಲೆ, ಬಾಲ್‌ ಇನ್‌ ದಿ ರಿಂಗ್‌, ಸ್ಪೂನ್‌ ಇನ್‌ ದ ಗ್ಲಾಸ್‌, ನಾಟಕ, ನೃತ್ಯ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ.

‘ನಾಲ್ಕು ವರ್ಷದ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ವಿಶೇಷವೆಂದರೆ ಜೆ.ಪಿ.ನಗರ, ತ್ಯಾಗರಾಜನಗರ, ಬಸವೇಶ್ವರ ನಗರದವರೂ ಇಲ್ಲಿಗೆ ಬಂದು ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಈ ವರ್ಷ ನಡೆದ ಸ್ಪರ್ಧೆಯಲ್ಲಿ 85 ವರ್ಷದ ಹಿರಿಯರೊಬ್ಬರು ಭಾಗವಹಿಸಿ ತೃತೀಯ ಬಹುಮಾನ ಪಡೆದಿದ್ದಾರೆ’ ಎನ್ನುತ್ತಾರೆ ಗ್ರಂಥಾಲಯದ ಗ್ರಂಥಪಾಲಕ ಎಸ್‌. ಆನಂದ.

ADVERTISEMENT

ಉಚಿತ ಪುಸ್ತಕ!: ಗ್ರಂಥಪಾಲಕರ ದಿನಾಚರಣೆ ಮತ್ತು ಸಾಂತಂತ್ರ್ಯೋತ್ಸವದ ಅಂಗವಾಗಿ ಪ್ರತಿವರ್ಷ ಆಗಸ್ಟ್‌ 12ರಿಂದ 15ರವರೆಗೆ ವಿಶೇಷ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಿ ಸದಸ್ಯರು ತಮ್ಮ ನೆಚ್ಚಿನ ಪುಸ್ತಕವನ್ನು ಉಚಿತವಾಗಿ ಪಡೆಯುವ ಅವಕಾಶ ಕಲ್ಪಿಸುತ್ತಿದೆ. ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಪ್ರತಿವರ್ಷ ಏಪ್ರಿಲ್‌ 23ರಂದು ‘ಪಠ್ಯ ಪುಸ್ತಕಗಳ ಪ್ರದರ್ಶನ’ವನ್ನೂ ಏರ್ಪಡಿಸಲಾಗುತ್ತದೆ.

ಣೇಶೋತ್ಸವ– ಗೊಂಬೆ ಪ್ರದರ್ಶನ: ವಿನಾಯಕ ಚತುರ್ಥಿ ಅಂಗವಾಗಿ ಗಣೇಶೋತ್ಸವವನ್ನು ಆಯೋಜಿಸಲಾಗುತ್ತಿದೆ. ದಸರಾ ನವರಾತ್ರಿ ಉತ್ಸವದ ಅಂಗವಾಗಿ ಗೊಂಬೆ ಪ್ರದರ್ಶನ ಏರ್ಪಡಿಸಲಾಗುತ್ತದೆ. ಓದುಗರಿಂದಲೇ ಗಾಯನ, ನೃತ್ಯ ಕಾರ್ಯಕ್ರಮಗಳೂ ನಡೆಯುತ್ತವೆ. ಗಣತಂತ್ರ ದಿನೋತ್ಸವ, ಸಂವಿಧಾನ ದಿನ, ಅಂಬೇಡ್ಕರ್ ಜಯಂತಿ, ಬಸವೇಶ್ವರ ಜಯಂತಿಯನ್ನೂ ಇಲ್ಲಿ ಆಚರಿಸುವುದು ವಿಶೇಷ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಕನ್ನಡ ಮತ್ತು ಇಂಗ್ಲಿಷ್‌ನ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಗಳು, ನಿಯತಕಾಲಿಕೆಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತೀ ಭಾನುವಾರ ಸಮಾಜ ಮತ್ತು ವಿಜ್ಞಾನ ವಿಷಯಗಳ ಬಗ್ಗೆ ತಜ್ಞರಿಂದ ತರಗತಿಗಳನ್ನು ನಡೆಸಿಕೊಡಲಾಗುತ್ತಿದೆ. ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಪ್ರತೀ ಎರಡನೇ ಮತ್ತು ನಾಲ್ಕನೇ ಶನಿವಾರದಂದು ‘ಪುಟ್ಟ ಮಗು ಕಥೆ ಕೇಳು’ ಕಾರ್ಯಕ್ರಮ ಇಲ್ಲಿ ನಡೆಯುತ್ತದೆ.

30 ವರ್ಷಗಳಿಂದ ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಗ್ರಂಥಾಲಯಕ್ಕೆ, ವರ್ಷದ ಹಿಂದೆ ₹ 72 ಲಕ್ಷದಲ್ಲಿ ಸುಸಜ್ಜಿತ ಎರಡು ಅಂತಸ್ತಿನ ಕಟ್ಟಡ ಒದಗಿಸಲಾಗಿದೆ. ವೃತ್ತಪತ್ರಿಕೆಗಳ ವಿಭಾಗ, ನಿಯತ ಕಾಲಿಕೆಗಳ ವಿಭಾಗ, ಮಕ್ಕಳ ವಿಭಾಗ, ಸಂದರ್ಭ ಸೇವಾ ವಿಭಾಗಗಳಿದ್ದು, ಎರವಲು ಪುಸ್ತಕ ವಿಭಾಗಕ್ಕಾಗಿ ಮೇಲಿನ ಮಹಡಿಯನ್ನು ಮೀಸಲಿರಿಸಲಾಗಿದೆ.

ಇಲ್ಲಿ ಕನ್ನಡ, ಇಂಗ್ಲಿಷ್ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳ ಜತೆಗೆ ತೆಲುಗು, ತಮಿಳು, ಮಲಯಾಳ, ಉರ್ದು ಭಾಷೆಗಳ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳೂ ಓದಲು ಸಿಗುತ್ತವೆ. ಪ್ರತ್ಯೇಕ ಕೋಣೆಯಲ್ಲಿ ಮಕ್ಕಳ ಪುಸ್ತಕಗಳನ್ನು ಜೋಡಿಸಿ ಮಕ್ಕಳ ವಿಭಾಗ ಆರಂಭಿಸಲಾಗಿದೆ. ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಕಾಮಿಕ್ ಪುಸ್ತಕಗಳು, ಖ್ಯಾತ ಸಾಹಿತಿಗಳ ನೀತಿ ಪಾಠಗಳಿರುವ ಪುಸ್ತಕಗಳು, ಕಲೆ, ವಿಜ್ಞಾನ, ಕ್ರೀಡಾ ಕ್ಷೇತ್ರಗಳ ಸಾಧಕರು, ವೀರ ಸೇನಾನಿಗಳು, ಕವಿಗಳ ಬಗ್ಗೆ ಮಾಹಿತಿ ಪುಸ್ತಕಗಳನ್ನು ಇಡಲಾಗಿದೆ.

*18 ವರ್ಷಗಳಿಂದ ಈ ಗ್ರಂಥಾಲಯದ ಸದಸ್ಯನಾಗಿದ್ದೇನೆ. ನನಗೆ ತಿಳಿದಿರುವಂತೆ ಈ ರೀತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಗ್ರಂಥಾಲಯವನ್ನು ನೋಡಿಲ್ಲ. ಇಲ್ಲಿಗೆ ಒಂದು ದಿನ ಬರದಿದ್ದರೂ ನನಗೆ ಹೊತ್ತು ಕಳೆಯುವುದಿಲ್ಲ.

–ದೇವರಾಜ್, ರಂಗಸಾಗರ ಪ್ರಧಾನ ಕಾರ್ಯದರ್ಶಿ

*ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ನಾನು ಭಾಗಿಯಾಗುತ್ತೇನೆ. ನಮ್ಮಂತಹ ಹಿರಿಯರಿಗೆ ಇದಕ್ಕಿಂತ ಉತ್ತಮ ತಾಣ ಸಿಗುವುದಿಲ್ಲ ಎಂಬುದು ನನ್ನ ಭಾವನೆ.

ಶೇಷಾದ್ರಿ, ನಿವೃತ್ತ ಎಂಜಿನಿಯರ್,ಇಸ್ರೊ ಬಡಾವಣೆ

* ಬೆಳಗ್ಗೆ, ಸಂಜೆ ಎರಡೂ ಹೊತ್ತು ಇಲ್ಲಿಗೆ ಬರುತ್ತೇನೆ. ಓದುವುದರಿಂದ ಮಾಹಿತಿಯಷ್ಟೇ ಅಲ್ಲ, ಮನಸಿಗೆ ಸಮಾಧಾನವೂ ಸಿಗುತ್ತದೆ.

– ಸುಬ್ರಹ್ಮಣ್ಯಾಚಾರ್,ನಿವೃತ್ತ ಶಿಕ್ಷಕ

ಕಂಪ್ಯೂಟರ್ ಸೌಲಭ್ಯವೂ ಬೇಕು

ಶಾಸಕ ಆರ್‌. ಅಶೋಕ್‌ ಮತ್ತು ಪಾಲಿಕೆ ಸದಸ್ಯ ಎಲ್‌. ಶ್ರೀನಿವಾಸ್ ಅವರು ಗ್ರಂಥಾಲಯ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು, ಉಪ ನಿರ್ದೇಶಕರಿಂದಲೂ ಬೆಂಬಲ ಸಿಗುತ್ತಿದೆ. ಸದಸ್ಯತ್ವ ಪಡೆಯುವ ಪ್ರತಿಯೊಬ್ಬರಿಗೂ ವಿಶೇಷ ಪುಸ್ತಕ ಉಡುಗೊರೆಯಾಗಿ ನೀಡುತ್ತೇವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗಾಗಿ ದಾನಿಗಳ ನೆರವಿನಿಂದ ಟೀ, ಬಿಸ್ಕತ್ತು ಪೂರೈಸುತ್ತಿದ್ದೇವೆ. ಅವರಿಗಾಗಿ ಕಂಪ್ಯೂಟರ್ ಸೌಲಭ್ಯವನ್ನೂ ಒದಗಿಸುವ ಉದ್ದೇಶವಿದ್ದು, ಇದಕ್ಕೆ ದಾನಿಗಳ ನೆರವು ಬೇಕಿದೆ. ಓದುಗರಿಂದಲೇ ತೆಂಗು ಮತ್ತು ಅಡಿಕೆ ಸಸಿಗಳನ್ನು ನೆಡೆಸಿದ್ದೇವೆ. ಅದರ ಪೋಷಣೆಯ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ. ಇದರಿಂದ ಈ ಗ್ರಂಥಾಲಯ ನಮ್ಮದು ಎಂಬ ಭಾವನೆ ಅವರಲ್ಲಿ ಮೂಡುತ್ತದೆ ಎಂಬ ಆಶಯವಷ್ಟೇ.

ಎಸ್‌. ಆನಂದ, ಗ್ರಂಥಪಾಲಕ,ನಗರ ಕೇಂದ್ರ ಗ್ರಂಥಾಲಯ ಕುಮಾರಸ್ವಾಮಿ ಬಡಾವಣೆ.

ವಿವಿಧ ಸೌಲಭ್ಯಗಳು

* ವಿದ್ಯುತ್ ಸಮಸ್ಯೆ ಕಾಡದಂತೆ ಯು.ಪಿ.ಎಸ್

* ಶುದ್ಧ ಕುಡಿಯುವ ನೀರಿನ ಘಟಕ

* ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ

* ಗ್ರಂಥಾಲಯದ ಸುತ್ತ ಸುಂದರ ಉದ್ಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.