ADVERTISEMENT

ಸಮಾಧಾನ ಅಂಕಣ: ಜೀವನವನ್ನು ನಿತ್ಯೋತ್ಸವದಂತೆ ರೂಪಿಸಿಕೊಳ್ಳುವ ಅವಕಾಶವಿದೆ..

ಡಿ.ಎಂ.ಹೆಗಡೆ
Published 7 ಸೆಪ್ಟೆಂಬರ್ 2025, 23:30 IST
Last Updated 7 ಸೆಪ್ಟೆಂಬರ್ 2025, 23:30 IST
   

ಸರ್, ನನ್ನ ಮಗಳು ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್ ಆಗಿದ್ದಾಳೆ. ಓದಿನಲ್ಲಿ ಒಂದಿಷ್ಟೂ ಆಸಕ್ತಿ ಇಲ್ಲ. ಅವಳು ಕನಿಷ್ಠ ಡಿಗ್ರಿ ಆದರೂ ಪಡೆಯಲಿ ಎನ್ನುವುದು ನಮ್ಮ ಆಸೆ. ಅವಳನ್ನು ಪ್ರೇರೇಪಿಸುವುದು ಹೇಗೆ?

–ಗೀತಾಂಜಲಿ ತಗ್ಗಿನಮನೆ, ಹೊಸೂರು

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನಿಷ್ಠ ವಿದ್ಯಾರ್ಹತೆಯಾದರೂ ಇರಬೇಕಾದದ್ದು ಅನಿವಾರ್ಯ ಎನ್ನಿಸಿದೆ. ಮಗಳು ನಪಾಸಾದ ಮಾತ್ರಕ್ಕೆ ಆಕೆಗೆ ಪಾಸಾಗುವ ಶಕ್ತಿ ಇಲ್ಲ ಎಂದಲ್ಲ. ಆಕೆಗೆ ಈಗಿನ ಕಲಿಕೆಯ ವಿಧಾನದಲ್ಲಿ ಆಸಕ್ತಿ ಇಲ್ಲದಿರಬಹುದು, ಆಕೆ ಬೇರೆ ಏನನ್ನೋ ಆಲೋಚಿಸುತ್ತಿರಬಹುದು, ಅವಳ ಆಸಕ್ತಿ ಭಿನ್ನವಾಗಿಯೂ ಇರಬಹುದು.

ADVERTISEMENT

ನಪಾಸಾದ ಆಕೆ ಸಹಜವಾಗಿ ಖಿನ್ನಳಾಗಿರುತ್ತಾಳೆ. ಮನಸ್ಸು ವಿಚಲಿತವಾಗಿರುತ್ತದೆ. ಹಾಗಾಗಿ, ನೀವು ಅವಳ ಜೊತೆಗೆ ಆತಂಕದಿಂದಾಗಲೀ ಕೋಪದಿಂದಾಗಲೀ ತಿರಸ್ಕಾರದಿಂದಾಗಲೀ ವ್ಯವಹರಿಸಬೇಡಿ. ಅವಳೊಂದಿಗೆ ಸಹಜವಾಗಿ ಮಾತನಾಡಿ. ನೀವು ಅವಳನ್ನು ಪ್ರೀತಿಸುತ್ತೀರಿ ಎನ್ನುವುದನ್ನು ಅವಳಿಗೆ ಅರ್ಥವಾಗುವ ಹಾಗೆ ವ್ಯವಹರಿಸಿ. ಆಕೆ ಏನೇ ಮಾಡಿದರೂ, ಏನೇ ಆದರೂ ನಿಮ್ಮ ಮಗಳು ಎನ್ನುವ ಸತ್ಯವನ್ನು ಒಪ್ಪಿಕೊಳ್ಳಿ  ಹಾಗೂ ಅವಳ ಸೋಲಿನಿಂದ ನಿಮ್ಮ ಪ್ರೀತಿಯಲ್ಲಿ ಕೊರತೆಯಾಗಿಲ್ಲ ಎನ್ನುವುದು ಅವಳಿಗೆ ತಿಳಿಯುವ ಹಾಗೆ ವರ್ತಿಸಿ.

ಇನ್ನು, ವಿದ್ಯಾಭ್ಯಾಸದಲ್ಲಿ ಅವಳ ಅನಾಸಕ್ತಿಗೆ ಕಾರಣವೇನು ಎನ್ನುವುದನ್ನು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿ. ಅವಳಿಗೆ ವಿಷಯಗಳು ಸರಿಯಾಗಿ ಅರ್ಥವಾಗದೇ ಹೋಗಿರಬಹುದು. ಶಾಲೆಯ ಪರಿಸರ ಇಷ್ಟವಾಗದೇ ಇದ್ದಿರಬಹುದು. ಮನೆಯಲ್ಲಿ ಏನೋ ತೊಂದರೆಯಾಗುತ್ತಿರಬಹುದು. ವಯೋಸಹಜವಾದ ವ್ಯತಿರಿಕ್ತ ಸ್ಥಿತಿಯನ್ನು ಅವಳಿಂದ ನಿಭಾಯಿಸಲು ಸಾಧ್ಯವಾಗುತ್ತಿರಲಿಕ್ಕಿಲ್ಲ. ತಾನು ಉಳಿದವರಿಗಿಂತ ದಡ್ಡಿ, ಪೆದ್ದಿ ಎನ್ನುವ ಕೀಳರಿಮೆ ಇರಬಹುದು. ಸಹಪಾಠಿಗಳ ಸಹವಾಸ ದೋಷವೂ ಕಾರಣವಾಗಿರಬಹುದು ಅಥವಾ ಬೇರೆ ಯಾವುದೋ ಆಕರ್ಷಣೆಗೆ ಈಡಾಗಿರಲೂಬಹುದು. ಪರೀಕ್ಷೆಯಲ್ಲಿ ನಪಾಸಾದರೆ ಅವಳಿಗೆ ಏನೋ ಲಾಭವಿರಬಹುದು!

ಇನ್ನು ನೀವಾಗಲೀ ಶಿಕ್ಷಕರಾಗಲೀ ಮಕ್ಕಳಿಗೆ ‘ನೀನು ಪಾಸಾಗಲೇಬೇಕು, ಹೆಚ್ಚು ಅಂಕ ಗಳಿಸಬೇಕು, ಇಲ್ಲದಿದ್ದರೆ ಪೆದ್ದಿ ಎನ್ನಿಸಿಕೊಳ್ಳುತ್ತೀಯೆ’ ಎಂದೆಲ್ಲ ಹೇಳಬಾರದು. ಪರೀಕ್ಷೆಯಲ್ಲಿ ಪಾಸಾಗುವುದರಿಂದ ನಿನ್ನ ಮುಂದಿನ ಜೀವನವನ್ನು ಸರಳವಾಗಿಯೂ ಸುಂದರವಾಗಿಯೂ ರೂಪಿಸಿಕೊಳ್ಳುವುದು ಸುಲಭವಾಗುತ್ತದೆ, ವರ್ಷಕ್ಕೆ ಒಮ್ಮೆ ಮಾತ್ರ ಬರುವ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು ಎಂದು ಮನದಟ್ಟು ಮಾಡಿಸಬೇಕು. ನಮ್ಮ ಎಲ್ಲ ಸವಾಲುಗಳನ್ನೂ ಸಹಜವಾಗಿ ಎದುರಿಸುವುದನ್ನು ರೂಢಿಸಿಕೊಳ್ಳಬೇಕು, ಒಮ್ಮೆ ನಪಾಸಾದರೆ ಗಾಸಿಯಾಗಬೇಕಿಲ್ಲ, ಮತ್ತೆ ಪರೀಕ್ಷೆ ಬರೆದು ಪಾಸು ಮಾಡಿಕೊಳ್ಳಬಹುದು, ವಿದ್ಯೆಹೀನನ ಬಾಳು ಬರೀ ಗೋಳು ಎನ್ನುವುದನ್ನು ಅವಳಿಗೆ ಅರ್ಥಮಾಡಿಸಬೇಕು. ಅದಕ್ಕೆ ಪೂರಕವಾಗಿ ನಿಜಜೀವನದಲ್ಲಿ ಕಾಣುವ ಕೆಲವರ ಉದಾಹರಣೆಗಳನ್ನು ಕೊಡಬಹುದು.

ಮನುಷ್ಯನ ಜೀವನ ಒಂದು ವರದಾನ. ಭೂಮಿಯ ಮೇಲೆ ಬದುಕುವ ಒಂದು ಅವಕಾಶ. ಇಲ್ಲಿ ಯಾರೂ ಮೂರ್ಖರಲ್ಲ, ಪೆದ್ದರಲ್ಲ. ಒಬ್ಬರಂತೆ ಇನ್ನೊಬ್ಬರಿಲ್ಲ. ಎಲ್ಲರಲ್ಲಿಯೂ ಒಂದಲ್ಲ ಒಂದು ವಿಶೇಷ ಗುಣ ಇದ್ದೇ ಇರುತ್ತದೆ. ಹೀಗಾಗಿ, ನಿಮ್ಮ ಮಗಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎನ್ನುವುದನ್ನು ಕೇಳಿ ತಿಳಿದುಕೊಳ್ಳಿ. ಅದರಲ್ಲಿ ಆಕೆ ಮುಂದುವರಿಯುವಂತೆ ಪ್ರೋತ್ಸಾಹಿಸಿ.

ಆಸಕ್ತಿ ಇರುವ ಕ್ಷೇತ್ರ ಯಾವುದೇ ಆಗಿದ್ದರೂ ಅದರಲ್ಲಿ ಶ್ರದ್ಧೆಯಿಂದ ಮುಂದುವರಿದರೆ ಸಾಕು, ಜೀವನದಲ್ಲಿ ಯಶಸ್ಸು ಸಿಗುತ್ತದೆ. ಜೀವನವನ್ನು ನಿತ್ಯೋತ್ಸವದಂತೆ ರೂಪಿಸಿಕೊಳ್ಳುವ ಅವಕಾಶ ಇರುತ್ತದೆ. ಇಷ್ಟಕ್ಕೂ ನಿಮ್ಮ ಪ್ರಯತ್ನದಿಂದ ನಿಮಗೆ ಸಮಾಧಾನವಾಗದಿದ್ದರೆ, ಮಗಳಿಗೂ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡದಿದ್ದರೆ, ತಡಮಾಡಬೇಡಿ. ಉತ್ತಮ ಮನೋವೈದ್ಯರನ್ನು ಭೇಟಿ ಮಾಡಿ, ಮಾರ್ಗದರ್ಶನ
ಪಡೆದುಕೊಳ್ಳುವುದು ಅಗತ್ಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.