ADVERTISEMENT

ಪ್ರಶ್ನೋತ್ತರ: ಮ್ಯಾಥಮ್ಯಾಟಿಕ್ಸ್‌ನಲ್ಲಿ ಎಂಟೆಕ್ ಕೋರ್ಸ್ ಕಠಿಣವೇ?

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 19:30 IST
Last Updated 27 ಫೆಬ್ರುವರಿ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

1. ನಾನು ಮ್ಯಾಥಮ್ಯಾಟಿಕ್ಸ್‌ನಲ್ಲಿ ಎಂಎಸ್‌ಸಿ ಮಾಡುತ್ತಿದ್ದೇನೆ. ಎಂಎಸ್‌ಸಿ ಮುಗಿದ ನಂತರ ಗೇಟ್ ಎಕ್ಸಾಂ ತೆಗೆದುಕೊಳ್ಳಬೇಕು ಅಂದುಕೊಂಡಿದ್ದೇನೆ. ಪಿಎಚ್‌ಡಿ ಬದಲು ಎಂಟೆಕ್ ಮಾಡುವುದಾದರೆ, ಯಾವ ಯಾವ ವಿಷಯದಲ್ಲಿ ಮಾಡಬಹುದು ಎಂಬ ಗೊಂದಲವಿದೆ ಹಾಗೂ ಮ್ಯಾಥಮ್ಯಾಟಿಕ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಕಾರಣ ನನಗೆ ಎಂಟೆಕ್ ಕೋರ್ಸ್ ಕಠಿಣವಾಗುತ್ತದೆಯೇ? ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ.

ಎಂಟೆಕ್ ಮಾಡುವುದಾದರೆ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಡಬಹುದು. ಪ್ರಮುಖವಾಗಿ, ನಿಮ್ಮ ಸಾಮರ್ಥ್ಯ, ಆಸಕ್ತಿಗೆ ಅನುಗುಣವಾಗಿ ವೃತ್ತಿ ಯೋಜನೆಯನ್ನು ಮಾಡಿ ಅದರಂತೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

ADVERTISEMENT

****

2. ನಾನು ಮೆಕ್ಯಾನಿಕಲ್ ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ವೃತ್ತಿಯನ್ನು ಬದಲಿಸಿ ಸಾಫ್ಟ್‌ವೇರ್‌ ವೃತ್ತಿ ಮಾಡಬೇಕು ಎಂಬ ಆಸೆ ಇದೆ. ಸಲಹೆ ನೀಡಿ.‌

ಮುರುಗೇಶ್, ಊರು ತಿಳಿಸಿಲ್ಲ.

ವೃತ್ತಿಯನ್ನು ಬದಲಿಸುವುದು ಜೀವನದ ಪ್ರಮುಖ ನಿರ್ಧಾರ. ವೃತ್ತಿಯ ಯಶಸ್ಸಿಗೆ ವೃತ್ತಿ ಸಂಬಂಧಿತ ವಿಷಯದಲ್ಲಿ ಪರಿಣತಿ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ನಿರ್ಧಾರಕ್ಕೆ ಬರುವ ಮುನ್ನ ಈ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಅದ್ದರಿಂದ, ನೀವು ನೀಡಿರುವ ಕಿರುಮಾಹಿತಿಯಿಂದ ಮಾರ್ಗದರ್ಶನ ನೀಡುವುದು ಸಾಧ್ಯವಿಲ್ಲ. ನೀವು ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ, ಸುದೀರ್ಘವಾಗಿ ಚರ್ಚಿಸುವುದು ಉತ್ತಮ.

***

3. ನಾನು ದ್ವಿತೀಯ ಪಿಯುಸಿ (ಸೈನ್ಸ್) ಮುಗಿಸಿದ್ದೇನೆ. ಮುಂದೆ, ಕೋರ್ಸ್ ಆಯ್ಕೆ ಬಗ್ಗೆ ಗೊಂದಲವಿದೆ. ಉದ್ಯೋಗ ಹಾಗೂ ಸಂಬಳದ ದೃಷ್ಟಿಯಿಂದ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು?

ದರ್ಶನ್, ಬೆಂಗಳೂರು.

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪರಿಗಣಿಸಿ ಯಾವ ವೃತ್ತಿಯಲ್ಲಿ ಹೆಚ್ಚಿನ ತೃಪ್ತಿ ಮತ್ತು ಯಶಸ್ಸು ನಿಮ್ಮದಾಗಬಹುದೆಂದು ಪರಿಶೀಲಿಸಿ. ಅದರಂತೆ ವೃತ್ತಿಯೋಜನೆಯನ್ನು ತಯಾರಿಸಿ, ಸೂಕ್ತವಾದ ಕೋರ್ಸ್ ಮತ್ತು ವೃತ್ತಿಯನ್ನು ಅನುಸರಿಸಿ. ದ್ವಿತೀಯ ಪಿಯುಸಿ ನಂತರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/channel/UCH-ugIg9bBIyH5QQbn_JjIw

***

4. ನಾನು ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ನನ್ನ ಶೈಕ್ಷಣಿಕ ದಾಖಲಾತಿಗಳಲ್ಲಿ ನನ್ನ ತಂದೆಯ ಹೆಸರಿನ ಮುಂದೆ ಬಿ. ಟಿ. ಎಂದಿದೆ; ಆದರೆ ಬೇರೆಲ್ಲೂ ಇಲ್ಲ. ಮುಂದೆ ದಾಖಲಾತಿ ಪರಿಶೀಲನೆ ವೇಳೆ ಇದರಿಂದ ತೊಂದರೆಯಾಗುತ್ತದೆಯೇ?

ಭವ್ಯ, ಮಂಡ್ಯ

ನಮಗಿರುವ ಮಾಹಿತಿಯಂತೆ, ನಿಮ್ಮ ತಂದೆಯ ಹೆಸರಿನಲ್ಲಿರುವ ಅಲ್ಪಸ್ವಲ್ಪ ವ್ಯತ್ಯಾಸದಿಂದ ನಿಮ್ಮ ಉದ್ಯೋಗದ ದಾಖಲಾತಿ ಪರಿಶೀಲನೆಯ ಸಮಯದಲ್ಲಿ ತೊಂದರೆಯಾಗಲಾರದು. ಆದರೆ, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಅವರ ಹೆಸರುಗಳನ್ನು ನಿಮ್ಮ ದಾಖಲೆಗಳಲ್ಲಿರುವಂತೆ ನಮೂದಿಸುವುದು ಉತ್ತಮ ಹಾಗೂ, ಅಗತ್ಯ ಬಿದ್ದರೆ ಲೋಪದೋಷಗಳ ಕುರಿತು ಪ್ರಮಾಣಪತ್ರವನ್ನು ಸಲ್ಲಿಸಬಹುದು.

***

5. ನಾನು ದ್ವಿತೀಯ ಪಿಯುಸಿ ಓದುತ್ತಿರುವೆ. ಮುಂದೆ ಎಂಬಿಎ ಮಾಡಬೇಕೆಂದಿದ್ದೇನೆ. ನಾನು ಬಿಕಾಂ ಮಾಡುವುದು ಒಳ್ಳೆಯದೇ ಅಥವಾ ಬಿಬಿಎ ಒಳ್ಳೆಯದೇ?

ಹೆಸರು, ಊರು ತಿಳಿಸಿಲ್ಲ.

ಫೈನಾನ್ಸ್ ವಿಸ್ತಾರವಾದ ಕ್ಷೇತ್ರ. ಅಕೌಂಟಿಂಗ್, ಬ್ಯಾಂಕಿಂಗ್, ಇನ್ಶೂರೆನ್ಸ್, ಇನ್‌ವೆಸ್ಟ್‌ಮೆಂಟ್, ಕಾರ್ಪೊರೇಟ್ ಫೈನಾನ್ಸ್, ರಿಸ್ಕ್ ಮ್ಯಾನೇಜ್‍ಮೆಂಟ್ ಸೇರಿದಂತೆ ಅನೇಕ ಆಯ್ಕೆಗಳಿವೆ. ವೃತ್ತಿಯ ಅವಕಾಶಗಳ ದೃಷ್ಟಿಯಿಂದ, ನಿಮಗೆ ಆಸಕ್ತಿಯಿರುವ ವಿಷಯದಲ್ಲಿ ಬಿಕಾಂ ಮಾಡುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ.

***

6. ಸರ್, ಡಿಪ್ಲೊಮಾ ಪಿಯುಸಿಗೆ ತತ್ಸಮಾನ ಎಂದು ಸರ್ಕಾರ ಸ್ಪಷ್ಟೀಕರಣವನ್ನು ನೀಡಿದೆ. ಆದರೂ, ಪಿಯುಸಿ ಆಧಾರಿತ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಕೆಲವೊಮ್ಮೆ ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಮಾಹಿತಿ ಕೊಡಿ.

ಅಭಿಷೇಕ್, ಊರು ತಿಳಿಸಿಲ್ಲ.

ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ತೊಡಕಾಗುತ್ತಿದ್ದರೆ, ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಸಂಪರ್ಕಿಸಿ.

****

7. ನಾನು ಬಿಕಾಂ ಪದವಿ ಪಡೆದಿದ್ದು ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ನಮ್ಮ ಹೊಲದಲ್ಲಿ ವರದ ಮೇಲ್ದಂಡೆ ಕಾಲುವೆ ಹೋಗಿದ್ದು 1/2 ಎಕರೆ ಕಾಲುವೆಗೆ ಹೋಗಿದೆ. ಅದಕ್ಕಾಗಿ ಪಿಡಿಪಿ ಕೋಟಾದಲ್ಲಿ ನನಗೆ ಅರ್ಜಿ ಸಲ್ಲಿಸಲು ಅವಕಾಶ ಇದೆಯೇ? ಪಿಡಿಪಿ ಸರ್ಟಿಫಿಕೆಟ್ ಪಡೆಯುವುದು ಹೇಗೆ?

ಉದಯ, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಸಂಬಂಧಪಟ್ಟ ತಹಸೀಲ್ದಾರ್ ಕಚೇರಿಯಿಂದ ಪಿಡಿಪಿ ಸರ್ಟಿಫಿಕೆಟ್ ಪಡೆದು ಸರ್ಕಾರಿ ಉದ್ಯೋಗಕ್ಕೆ ಪಿಡಿಪಿ ಕೋಟಾದ ಅಡಿಯಲ್ಲಿ ಇನ್ನಿತರ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

****

8. ಸರ್, ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದಲ್ಲಿ ಬಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ಇದರ ಜೊತೆಗೆ ನಾನು ಕಾಲೇಜಿಗೂ ಹೋಗಿ ಪದವಿಯನ್ನು ಮಾಡಬಹುದೇ?

ವಿಕ್ರಂ ಸೂರ್ಯ, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಯುಜಿಸಿ, ಎರಡು ಪದವಿ ಕೋರ್ಸ್‌ಗಳನ್ನು ಏಕಕಾಲದಲ್ಲಿ ( ರೆಗ್ಯುಲರ್ ಮತ್ತು ದೂರಶಿಕ್ಷಣ) ಮಾಡುವ ಅವಕಾಶವನ್ನು ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.