ADVERTISEMENT

ಮದನ್ ಯಾದವ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 19:45 IST
Last Updated 5 ಜನವರಿ 2019, 19:45 IST
ಮದನ್ ಯಾದವ್
ಮದನ್ ಯಾದವ್   

ಮಾಧವ ಯಾದವ್ ಹುಟ್ಟಿದ್ದು ಬಿಹಾರದ ಬದ್ವಾನ್‌ ಕಾಲ ಎಂಬ ಕುಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣ ಪಡೆದಿದ್ದೂ ಅಲ್ಲಿಯೇ. ಆದರೆ ಆ ಊರಿನ ಶಾಲೆ ಮಕ್ಕಳು ನೆಮ್ಮದಿಯಿಂದ ಕಲಿಯುವ ವಾತಾವರಣ ಇರಲಿಲ್ಲ. ಸಮುದ್ರಮಟ್ಟದಿಂದ ಸುಮಾರು 1500 ಅಡಿ ಎತ್ತರದಲ್ಲಿರುವ ಈ ಹಳ್ಳಿಯಲ್ಲಿ, ವಿದ್ಯುತ್‌ ಸಂಪರ್ಕ, ಸೂಕ್ತ ನೀರಿನ ವ್ಯವಸ್ಥೆ, ಹೊರಜಗತ್ತಿಗೆ ಸಂಪರ್ಕ ಕಲ್ಪಿಸುವಂಥ ಒಳ್ಳೆಯ ರಸ್ತೆಯೂ ಇರಲಿಲ್ಲ. ಜೀವಮಾನದಲ್ಲಿ ಹಳ್ಳಿಬಿಟ್ಟು ಹೊರಜಗತ್ತನ್ನು ನೋಡಿಯೇ ಇರದ ಎಷ್ಟೋ ಮನುಷ್ಯರು ಅಲ್ಲಿದ್ದರು ಎಂದರೆ ಅಲ್ಲಿನ ಪರಿಸ್ಥಿತಿ ಊಹಿಸಿಕೊಳ್ಳಿ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮದನ್‌ ಯಾದವ್ ಝಾಬುವಾ ಎಂಬ ಹಳ್ಳಿಗೆ ಹೋದರು. ಪದವಿ ಶಿಕ್ಷಣ ಪಡೆದ ನಂತರ ಒಂದು ಖಾಸಗಿ ಶಾಲೆಯಲ್ಲಿ ಐದು ವರ್ಷಗಳ ಕಾಲ ಶಿಕ್ಷಕರಾಗಿಯೂ ಬೋಧನೆ ಮಾಡಿದರು. ಆದರೆ ತನ್ನೂರು, ಅಲ್ಲಿನ ಶಾಲೆಯ ದಾರುಣ ಸ್ಥಿತಿ ಅವರನ್ನು ಎಡಬಿಡದೆ ಕಾಡುತ್ತಿತ್ತು. ಊರ ಪರಿಸ್ಥಿತಿ ಸುಧಾರಣೆಗಾಗಿ ವಿನಿಯೋಗವಾಗದ ತನ್ನ ಪ್ರತಿಭೆಗೆ ಯಾವ ಬೆಲೆಯೂ ಇಲ್ಲ ಅನಿಸಿತು. ಪರಿಣಾಮವಾಗಿ 2003ರಲ್ಲಿ ಖಾಸಗಿ ಶಾಲೆಯ ಶಿಕ್ಷಕ ವೃತ್ತಿ ಬಿಟ್ಟು ಹಳ್ಳಿಗೆ ಮರಳಿ ಆ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡರು.

ಅಲ್ಲಿಂದ ಮದನ್ ಅವರ ಕೈಂಕರ್ಯ ಶುರುವಾಯಿತು. ಸರ್ಕಾರದ ‘ಸರ್ವ ಶಿಕ್ಷಣ ಅಭಿಯಾನ’ವನ್ನೇ ಅವರು ಬದಲಾವಣೆಯ ಮೊದಲ ಹೆಜ್ಜೆಯಾಗಿ ಬಳಸಿಕೊಂಡರು. ಪರಿಣಾಮವಾಗಿ ಉಚಿತ ಪುಸ್ತಕಗಳು, ಸಮವಸ್ತ್ರ ಮತ್ತು ಮಧ್ಯಾಹ್ನದ ಬಿಸಿಯೂಟ ಸಮರ್ಥವಾಗಿ ಪೂರೈಕೆಯಾಗತೊಡಗಿತು. ಇದರ ಜತೆಗೆ ಯಾದವ್ ಸ್ವಂತ ಕರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಟೈಗಳನ್ನೂ ಕೊಟ್ಟರು. ಇದು ವಸ್ತ್ರದ ಶಿಸ್ತನ್ನು ರೂಢಿಸಿಕೊಳ್ಳಲು ಮಕ್ಕಳಿಗೆ ಸಹಾಯಕವಾಯಿತು.

ADVERTISEMENT

ಇದರಿಂದ ನಿಧಾನವಾಗಿ ಶಾಲೆಯ ಕಡೆಗೆ ಮಕ್ಕಳು ಆಕರ್ಷಿತರಾದರು. ಬರಿ ಆ ಹಳ್ಳಿಯಷ್ಟೇ ಅಲ್ಲ, ಅಕ್ಕಪಕ್ಕದ ಹಳ್ಳಿಗಳಿಂದಲೂ ಮಕ್ಕಳು ಅದೇ ಶಾಲೆಗೆ ಬರತೊಡಗಿದರು.

ಈಗ ಆ ಸರ್ಕಾರಿ ಶಾಲೆಯಲ್ಲಿ 11ನೇ ತರಗತಿಯವರೆಗೆ ಶಿಕ್ಷಣ ಪಡೆದುಕೊಳ್ಳಲು ಅವಕಾಶ ಇದೆ. ವಿಶಾಲವಾದ ಆಟದ ಮೈದಾನವಿದೆ. ರಾಷ್ಟ್ರೀಯ ಹಬ್ಬಗಳ ದಿನಗಳಂದು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆ ಶಾಲೆಯ ಮಕ್ಕಳು ಮುಂದಿದ್ದಾರೆ. ಅಲ್ಲಿನ ಮಕ್ಕಳ ಬಾಯಿಯಲ್ಲಿ ಇಂಗ್ಲಿಷ್ ಸುಲಲಿತವಾಗಿ ಬರುತ್ತದೆ. ಹಾಗೆಯೇ ಇತರ ಪಠ್ಯಕಲಿಕೆಯಲ್ಲಿಯೂ ಅವರು ಸಾಕಷ್ಟು ಮುಂದಿದ್ದಾರೆ. ಈ ಶಾಲೆಯಲ್ಲಿ ಕಲಿತ ಮಕ್ಕಳು ಮಹಾನಗರಗಳಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ಇಬ್ಬರು ಭಾರತೀಯ ಸೇನೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

ಇಷ್ಟೆಲ್ಲ ಸುಧಾರಣೆಯಾಗಿದ್ದರೂ ಮದನ್ ಯಾದವ್‌ ವಿಶ್ರಮಿಸಿಲ್ಲ. ಶಾಲೆಗೆ ಸುಸಜ್ಜಿತವಾದ ಕಟ್ಟಡ ಕಟ್ಟುವುದು, ಇನ್ನಷ್ಟು ಶಿಕ್ಷಕರನ್ನು ನೇಮಕ ಮಾಡಿಕೊಂಡು ಒಳ್ಳೆಯ ಶಿಕ್ಷಣ ನೀಡುವುದು, ಹಳ್ಳಿಗೆ ನೀರಿನ ಸೌಕರ್ಯ ಕಲ್ಪಿಸುವುದು, ಒಳ್ಳೆಯ ರಸ್ತೆ ನಿರ್ಮಾಣ ಮಾಡುವುದು ಅವರ ಮುಂದಿನ ಕೆಲವು ಯೋಜನೆಗಳು. ಅದಕ್ಕಾಗಿ ಅವರು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.