ADVERTISEMENT

ಆನ್‌ಲೈನ್‌ ತರಗತಿ: ಮಕ್ಕಳ ದೃಷ್ಟಿಯ ಮೇಲಿರಲಿ ಗಮನ

ರೇಷ್ಮಾ
Published 6 ಸೆಪ್ಟೆಂಬರ್ 2020, 19:45 IST
Last Updated 6 ಸೆಪ್ಟೆಂಬರ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ಕಾರಣದಿಂದ ಮಕ್ಕಳ ಕಲಿಕೆಯ ವಿಷಯದಲ್ಲೂ ಅನೇಕ ಬದಲಾವಣೆಗಳಾಗಿವೆ. ಶಾಲೆಗೆ ಹೋಗಿ ಬಂದು ಮಾಡುತ್ತಿದ್ದ ಮಕ್ಕಳು ಈಗ ಮನೆಯಲ್ಲೇ ಬಂದಿಯಾಗಿದ್ದಾರೆ. ಅಲ್ಲದೇ ಆನ್‌ಲೈನ್ ತರಗತಿಗಳು ಆರಂಭವಾಗಿರುವ ಕಾರಣದಿಂದ ಮೊಬೈಲ್‌, ಕಂಪ್ಯೂಟರ್‌ ಪರದೆಯ‌ ಮೇಲೆ ಕಣ್ಣು ನೆಡುವುದು ಅನಿವಾರ್ಯವಾಗಿದೆ.‌

ಅಷ್ಟೇ ಅಲ್ಲದೆ ನೃತ್ಯ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳ ತರಗತಿಗಳೂ ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಆ ಕಾರಣಕ್ಕೆ ಮಕ್ಕಳು ವರ್ಚುವಲ್‌ ಪರದೆಯ‌ ಮುಂದೆ ಬಹಳ ಹೊತ್ತು ಕುಳಿತಿರುತ್ತಾರೆ. ಆದರೆ ಪರದೆ ನೋಡುವಾಗ ಸರಿಯಾದ ಕ್ರಮವನ್ನು ಪಾಲಿಸದಿದ್ದರೆ ಅದು ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು. ಆ ಕಾರಣಕ್ಕೆ ಮಕ್ಕಳ ಸ್ಕ್ರೀನ್ ಸಮಯವನ್ನು ನಿಭಾಯಿಸಲು ಪೋಷಕರು ಸದಾ ಜಾಗರೂಕರಾಗಿಬೇಕು. ಹಾಗಾದರೆ ಇದನ್ನು ನಿರ್ವಹಿಸುವುದು ಹೇಗೆ?‌

ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ
ಆನ್‌ಲೈನ್‌ ತರಗತಿಯಾಗಲಿ, ಮೊಬೈಲ್‌ನಲ್ಲಿ ಆಟ ಆಡುವಾಗ ಪರದೆಯನ್ನು ಕಣ್ಣಿಗೆ ಹತ್ತಿರವಾಗಿ ಹಿಡಿದುಕೊಳ್ಳುವುದು ತಪ್ಪು. ಇದರಿಂದ ಕಣ್ಣಿಗೆ ದಣಿವಾಗುತ್ತದೆ. ಅಲ್ಲದೇ ಕಣ್ಣಿನ ಸ್ನಾಯುಗಳಲ್ಲಿ ಆಯಾಸ ಕಾಣಿಸುತ್ತದೆ. ಮೊಬೈಲ್, ಟ್ಯಾಬ್‌, ಲ್ಯಾಪ್‌ಟಾಪ್ ಕಂಪ್ಯೂಟರ್ ಯಾವುದೇ ಪರದೆಯಾಗಿರಲಿ ಕಣ್ಣಿನಿಂದ 18 ರಿಂದ 24 ಇಂಚುಗಳ ಅಂತರದಲ್ಲಿರಬೇಕು. ಅಲ್ಲದೇ ಪರದೆಯು ಕಣ್ಣಿನ ನೇರಕ್ಕೆ ಸಮವಾಗಿರಬೇಕು.

ADVERTISEMENT

ವಿರಾಮ ತೆಗೆದುಕೊಳ್ಳಲು ಸೂಚಿಸಿ
ಯಾರೇ ಆಗಲಿ ಇಪ್ಪತ್ತು ನಿಮಿಷಕ್ಕಿಂತಲೂ ಅಧಿಕ ಕಾಲ ಪರದೆಯನ್ನು ನೋಡುತ್ತಿರಬಾರದು. ಇದರಿಂದ ಕಣ್ಣು ನೋಯಲು ಆರಂಭವಾಗಬಹುದು. ನಿಮ್ಮ ಮಗು ದೀರ್ಘಕಾಲದ ವಿರಾಮ ತೆಗೆದುಕೊಳ್ಳಲು ಹಿಂಜರಿದರೆ ಕನಿಷ್ಠ 20 ಸೆಕೆಂಡುಗಳ ಕಾಲ ಕಣ್ಣನ್ನು ಪರದೆಯಿಂದ ಬೇರೆಡೆ ಹರಿಸಲು ತಿಳಿಸಿ. ಅಲ್ಲದೇ ಆಗಾಗ ಕಣ್ಣನ್ನು ಮುಚ್ಚಿ ತೆರೆಯುವುದು ಮಾಡುತ್ತಿರಬೇಕು. ಪ್ರತಿ ಅರ್ಧಗಂಟೆಗೊಮ್ಮೆ 10 ಬಾರಿ ಕಣ್ಣು ಮಿಟುಕಿಸಲು ಹೇಳಬೇಕು. ಇದರಿಂದ ಕಣ್ಣುಗಳು ಒಣಗಿದಂತಾಗುವುದು ಅಥವಾ ತುರಿಕೆ ಉಂಟಾಗುವುದನ್ನು ತಡೆಯಬಹುದು.

ಪರದೆಯ ಬ್ರೈಟ್‌ನೆಸ್‌ ಸರಿಪಡಿಸಿ
ಅತಿಯಾದ ಬ್ರೈಟ್‌ನೆಸ್ ಇರುವ ಪರದೆಯನ್ನು ನಿರಂತರವಾಗಿ ನೋಡುವುದರಿಂದ ತಲೆನೋವು, ಆಯಾಸ ಉಂಟಾಗಬಹುದು. ಅಲ್ಲದೇ ಬ್ರೈಟ್‌ನೆಸ್ ಅನ್ನು ಅತೀ ಕಡಿಮೆ ಇರಿಸಿಕೊಳ್ಳುವುದರಿಂದ ಕೂಡ ಮಕ್ಕಳ ಕಣ್ಣಿಗೆ ಒತ್ತಡ ಬೀಳಬಹುದು. ಇದರಿಂದ ಪರದೆ ಮೇಲೆ ಏನು ಬರೆದಿದೆ ಎಂಬುದನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗದೇ ಇರಬಹುದು. ಆ ಕಾರಣಕ್ಕೆ ಮಗುವಿನ ಕಣ್ಣಿಗೆ ಹೊಂದುವಂತೆ ಬ್ರೈಟ್‌ನೆಸ್ ಅನ್ನು ಹೊಂದಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.