ADVERTISEMENT

ಪತ್ರಿಕೆ ಹಂಚುವ ಬಾಲಕನ ಸಾಧನೆ: ದ್ವಿತೀಯ ಪಿಯುನಲ್ಲಿ ಹರೀಶ್ ವಾಲಿಗೆ ಶೇ. 89.5 ಅಂಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 13:14 IST
Last Updated 15 ಏಪ್ರಿಲ್ 2019, 13:14 IST
ಹರೀಶ್ ವಾಲಿ
ಹರೀಶ್ ವಾಲಿ   

ಹೂವಿನಹಡಗಲಿ: ಪ್ರತಿದಿನ ಮನೆ ಮನೆಗೆ ಪತ್ರಿಕೆ ಹಂಚುವ ಕಾಯಕದ ಜತೆಗೆ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ, ದ್ವಿತೀಯ ಪಿ.ಯು.ಸಿ.ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿ ಹರೀಶ್ ವಾಲಿ.

ಪಟ್ಟಣದ ಮ.ಮ.ಪಾಟೀಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಹರೀಶ್ ವಿಜ್ಞಾನ ವಿಭಾಗದಲ್ಲಿ 537 (ಶೇ 89.5) ಅಂಕ ಗಳಿಸಿದ್ದಾರೆ. ಕನ್ನಡದಲ್ಲಿ 97, ಇಂಗ್ಲಿಷ್ 80, ಭೌತಶಾಸ್ತ್ರ 95, ರಸಾಯನಶಾಸ್ತ್ರ 87, ಗಣಿತ 97, ಜೀವಶಾಸ್ತ್ರ 81 ಅಂಕ ಗಳಿಸಿ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.

ಮನೆಯಲ್ಲಿ ಬಡತನ ಇರುವ ಕಾರಣ ಹರೀಶ್ ವಾಲಿ ಕಳೆದ ಏಳು ವರ್ಷಗಳಿಂದ ಪತ್ರಿಕೆ ಹಂಚುತ್ತಲೇ ವಿದ್ಯಾಭ್ಯಾಸದ ಖರ್ಚನ್ನು ತಾನೇ ನಿಭಾಯಿಸಿಕೊಳ್ಳುತ್ತಾನೆ. ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ ಯಾವುದಕ್ಕೂ ಹೆತ್ತವರ ಬಳಿ ಕೈ ಚಾಚುವುದಿಲ್ಲ. ತನ್ನ ಶೈಕ್ಷಣಿಕ ಖರ್ಚಿಗೆ ಹಣ ಹೊಂದಿಸಿಕೊಳ್ಳುವ ಜತೆಗೆ ಹೆತ್ತವರಿಗೂ ಆಸರೆಯಾಗುವ ಈ ವಿದ್ಯಾರ್ಥಿ ಪರಿಶ್ರಮದಿಂದ ಓದಿ ಗರಿಷ್ಠ ಅಂಕ ಪಡೆಯುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ADVERTISEMENT

ಪ್ರತಿದಿನ ಬೆಳಗಿನ ಜಾವ 4.45ಕ್ಕೆ ಆರಂಭವಾಗುವ ಹರೀಶನ ದಿನಚರಿ ರಾತ್ರಿ 10.30ಕ್ಕೆ ಕೊನೆಗೊಳ್ಳುತ್ತದೆ. ಬೆಳಿಗ್ಗೆ ಐದು ಗಂಟೆಯಿಂದ ಏಳು ಗಂಟೆವರೆಗೆ ಪತ್ರಿಕೆ ಹಂಚುತ್ತಾರೆ. ಮನೆಗೆ ಬಂದು ಕೆಲಕಾಲ ವಿಶ್ರಾಂತಿ ಪಡೆದು ಪುಸ್ತಕ ಕಣ್ಣಾಡಿಸುತ್ತಾರೆ. ಬೆಳಿಗ್ಗೆ 10 ಗಂಟೆಗೆ ಕಾಲೇಜಿಗೆ ಹೋಗಿ ಸಂಜೆ 5ಕ್ಕೆ ವಾಪಾಸು ಮನೆಗೆ ಬಂದು ಅಭ್ಯಾಸಕ್ಕೆ ಅಣಿಯಾಗುತ್ತಾರೆ. ಯಾವುದೇ ಟ್ಯೂಷನ್‌ಗೆ ಹೋಗದೇ ಅವರು ಕಾಲೇಜಿನ ಮುಂಚೂಣಿ ವಿದ್ಯಾರ್ಥಿಯಾಗಿ ಹೊರ ಹೊಮ್ಮಿರುವುದು ವಿಶೇಷ.

ಹರೀಶನ ತಂದೆ ವಾಲಿ ಕೊಟ್ರೇಶ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಶಶಿಕಲಾ ರೊಟ್ಟಿ ತಯಾರಿಸಿ, ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆ ಹಂಚುವ ಕೆಲಸ, ವಿದ್ಯಾಭ್ಯಾಸದ ನಡುವೆ ಹರೀಶ್ ಸಮಯ ಹೊಂದಿಸಿಕೊಂಡು ತಾಯಿಯ ಕೆಲಸಕ್ಕೆ ನೆರವಾಗುತ್ತಾರೆ.

‘ಅಂದಿನ ಪಾಠಗಳನ್ನು ಅಂದೇ ಓದಿ, ಬರೆಯುತ್ತೇನೆ. ಎಲ್ಲ ವಿಷಯಗಳನ್ನು ಓದದೇ ಮಲಗುವುದೇ ಇಲ್ಲ. ಪ್ರೌಢಶಾಲೆ ಹಂತದಿಂದ ಇದು ನನಗೆ ರೂಢಿಯಾಗಿದೆ. ಈ ತೆರನಾದ ಓದು ನನ್ನ ಯಶಸ್ಸಿಗೆ ಕಾರಣ’ ಎಂದು ಹೇಳುತ್ತಾರೆ ಹರೀಶ್.

‘ತಂದೆ–ತಾಯಿ ಪ್ರೋತ್ಸಾಹ, ಕಾಲೇಜಿನ ಪ್ರಾಚಾರ್ಯ, ಉಪನ್ಯಾಸಕರ ಮಾರ್ಗದರ್ಶನದಿಂದ ಗರಿಷ್ಠ ಅಂಕ ಪಡೆಯಲು ಸಾಧ್ಯವಾಯಿತು. ಬಿ.ಎಸ್ಸಿ (ಕೃಷಿ) ಪದವಿ ಮುಗಿಸಿ, ಐ.ಎ.ಎಸ್‌. ಮಾಡಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.