
ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಕಷ್ಟದ ಕೆಲಸ. ಅದರಲ್ಲೂ ಹೆಣ್ಣುಮಕ್ಕಳು ಬಿಸಿತುಪ್ಪದಂತೆ. ಹೀಗಾಗಿ ಅವರೊಂದಿಗೆ ನಾಜೂಕಿನಿಂದ ವ್ಯವಹರಿಸುವುದು ಅಗತ್ಯವಾಗಿರುತ್ತದೆ.
ನಮ್ಮದು ಮೇಲ್ಮಧ್ಯಮ ವರ್ಗದ ಸಂಸಾರ. ನಮಗೆ ಇಬ್ಬರು ಮಕ್ಕಳು. ಮಗ ಎಂಜಿನಿಯರಿಂಗ್ ಓದುತ್ತಿದ್ದಾನೆ. ಮಗಳು ಪಿಯುಸಿ ಎರಡನೇ ವರ್ಷದಲ್ಲಿದ್ದಾಳೆ. ಅವಳು ಕದ್ದು ಧೂಮಪಾನ ಮಾಡುತ್ತಾಳೆ, ಆಗಾಗ ಕುಡಿಯುತ್ತಾಳೆ ಎಂಬ ಗುಮಾನಿ ಇದೆ. ವಾರಾಂತ್ಯದಲ್ಲಿ ಗ್ರೂಪ್ ಸ್ಟಡಿಗೆ ಎಂದು ಗೆಳತಿಯ ಮನೆಗೆ ಹೋಗುತ್ತಾಳೆ. ಓದಿನಲ್ಲಿ ಗಾಂಭೀರ್ಯ ಇಲ್ಲ. ನಮಗಂತೂ ಬಿಸಿತುಪ್ಪ ಗಂಟಲಲ್ಲಿ ಇರುವಂತೆ ಆಗಿದೆ. ಅವಳನ್ನು ಎಚ್ಚರಿಸುವುದು ಹೇಗೆ?
-ಯಶೋದಾ ರವಿ, ಬೆಂಗಳೂರು
ಗುಮಾನಿ ಇದ್ದ ಮಾತ್ರಕ್ಕೆ ಅದು ನಿಜವಾಗಿರಲಿಕ್ಕಿಲ್ಲ. ಅಕಸ್ಮಾತ್ ನಿಜವಾಗಿದ್ದರೂ ನೀವು ಬೈದು, ಹೊಡೆದು ಮಾಡುವುದರಿಂದ ಅವಳಿಗೆ ಅವಮಾನವಾಗುತ್ತದೆ. ಅವಳು ಕೆರಳುತ್ತಾಳೆ. ಅದರ ಪರಿಣಾಮವಾಗಿ ಆಕೆ ಚಟಗಳಿಗೆ ಇನ್ನಷ್ಟು ದಾಸಳಾಗುವ ಸಾಧ್ಯತೆ ಹೆಚ್ಚು. ಇದರಿಂದ ಮನೆಯ ನೆಮ್ಮದಿ ಹಾಳಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳಿ. ಸಜ್ಜನರ ಸಹವಾಸ ಹಾಗೂ ಸದಭಿರುಚಿಯ ಹವ್ಯಾಸಗಳ ಮಹತ್ವವನ್ನು ಅವಳಿಗೆ ತಿಳಿಸಿ. ಧೂಮಪಾನದಿಂದ ಆಗುವ ಅನಾಹುತಗಳ ಬಗ್ಗೆ ಆಗಾಗ ಸಹಜವಾಗಿಯೇ ಮಗಳ ಎದುರಿಗೆ ಮಾತನಾಡಬಹುದು.
ನೀವು ಹದಿಹರೆಯದಲ್ಲಿ ಎದುರಿಸಿದ್ದ ಸಮಸ್ಯೆಗಳಿಗಿಂತಲೂ ಹೆಚ್ಚು ವೈವಿಧ್ಯಮಯವಾದ ಸಮಸ್ಯೆಗಳನ್ನು ನಿಮ್ಮ ಮಗಳು ಎದುರಿಸುತ್ತಿರಬಹುದು. ಅವಳು ಸಂಪೂರ್ಣ ಏಕಾಂಗಿಯಾಗದಂತೆ, ಕುಗ್ಗದಂತೆ ನೋಡಿಕೊಳ್ಳಿ. ಆಕೆ ತನ್ನ ಸ್ವಾತಂತ್ರ್ಯಕ್ಕಾಗಿ ಚಡಪಡಿಸಬಹುದು. ಅಂತ ರ್ಮುಖಿಯಾಗಿ ನರಳುತ್ತಿರಬಹುದು. ಇಂಥ ಸನ್ನಿವೇಶದಲ್ಲಿ ಮಗಳಿಗೆ ಆಸರೆಯಾಗಿ, ಸಂತೈಸಿ. ಅವಳಿಗೆ ಸಿಗರೇಟಿನಿಂದ ಸಿಗುವುದಕ್ಕಿಂತ ಹೆಚ್ಚು ಭರವಸೆ ಹಾಗೂ ನೆಮ್ಮದಿ ನಿಮ್ಮಿಂದ, ಮನೆಯಲ್ಲಿ ಸಿಗುವಂತೆ ವರ್ತಿಸಿ. ಅವಳನ್ನು ಗೌರವಿಸಿ. ಅವಳು ಸಮಾಧಾನವಾಗಿ ಇರುವಂತೆ ನೋಡಿಕೊಳ್ಳಿ. ಮಕ್ಕಳು ನೆಮ್ಮದಿಯಿಂದ ಬೆಳೆಯುತ್ತಿದ್ದರೆ, ನಿಮ್ಮ ಮನೆಯೂ ಸಂತೋಷದ ಬೆಳಕಿನಿಂದ ಬೆಳಗುತ್ತದೆ. ಅದು ಸಂಸಾರದ ಯಶಸ್ಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.