ADVERTISEMENT

PV Web Exclusive: ಮಾದರಿ ಸಮೀಕ್ಷೆಗಳ ಕ್ರಾಂತಿಕರ್ತ ಮಹಾಲನೊಬಿಸ್‌

ಜೂನ್‌ 29ರಂದು ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ

ಸ್ಮಿತಾ ಶಿರೂರ
Published 29 ಜೂನ್ 2021, 11:59 IST
Last Updated 29 ಜೂನ್ 2021, 11:59 IST
ಪ್ರೊ. ಪ್ರಶಾಂತ ಚಂದ್ರ ಮಹಾಲನೊಬಿಸ್‌ (ಚಿತ್ರ– ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ವೆಬ್‌ಸೈಟ್‌)
ಪ್ರೊ. ಪ್ರಶಾಂತ ಚಂದ್ರ ಮಹಾಲನೊಬಿಸ್‌ (ಚಿತ್ರ– ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ವೆಬ್‌ಸೈಟ್‌)   

ದೇಶದಲ್ಲಿ ಸಂಖ್ಯಾವಿಜ್ಞಾನದ ಕುರುಹುಗಳು 2,000 ವರ್ಷಗಳ ಹಿಂದಿನಿಂದಲೂ ಇವೆ. ಚಂದ್ರಗುಪ್ತ ಮೌರ್ಯನ ಕಾಲದಿಂದಲೂ ಆಡಳಿತದಲ್ಲಿ ಅಂಕಿಅಂಶಗಳ ದಾಖಲೀಕರಣದ ವ್ಯವಸ್ಥೆ ಇದೆ ಎಂಬುದು ಕೌಟಿಲ್ಯನ ಅರ್ಥಶಾಸ್ತ್ರದಿಂದ ತಿಳಿದುಬರುತ್ತದೆ. ಅಂಕಿ–ಅಂಶಗಳ ಸಂಗ್ರಹ ಹಾಗೂ ವಿಶ್ಲೇಷಣೆಯೇ ಸಂಖ್ಯಾವಿಜ್ಞಾನ. ಇಂಥ ಸಂಖ್ಯಾವಿಜ್ಞಾನಕ್ಕೆ ಭೌತ, ಮಾನವಿಕ ಹಾಗೂ ಆರ್ಥಿಕ ವಿಜ್ಞಾನಗಳ ದೃಷ್ಟಿಕೋನದೊಂದಿಗೆ ಹೊಸ ಆಯಾಮ ನೀಡಿದವರು ಪ್ರೊ. ಪ್ರಶಾಂತ ಚಂದ್ರ ಮಹಾಲನೊಬಿಸ್‌.

ಸರ್ಕಾರದ ವಿವಿಧ ಇಲಾಖೆಗಳ ಸಾಂಖ್ಯಿಕ ಚಟುವಟಿಕೆಗಳ ನಿರ್ವಹಣೆಗಾಗಿ 1951ರಲ್ಲಿ ಕೇಂದ್ರ ಸಾಂಖ್ಯಿಕ ಸಂಘಟನೆ (ಸಿಎಸ್‌ಒ) ಸ್ಥಾಪನೆಯಾಯಿತು. ಅದಕ್ಕೂ ಮುಂಚೆ 1950ರಲ್ಲಿ ಸಂಖ್ಯಾಶಾಸ್ತ್ರಜ್ಞರ ಸಮೂಹ ಹಾಗೂ ಹಾಗೂ ಅಂದಿನ ರಾಷ್ಟ್ರೀಯ ಆದಾಯ ಸಮಿತಿ ದೇಶದ ಗ್ರಾಮೀಣ ಪ್ರದೇಶಗಳ ಜನಜೀವನ ಒಳಗೊಂಡಂತೆ ವಿಸ್ತೃತ ರಾಷ್ಟ್ರೀಯ ಮಾದರಿ ಸಮೀಕ್ಷೆ ನಡೆಸುವುದು ತುರ್ತು ಅಗತ್ಯ ಎಂದು ಅಭಿಪ್ರಾಯಪಟ್ಟವು. ಆಗ ಕೇಂದ್ರ ಸರ್ಕಾರದ ಗೌರವ ಸಾಂಖ್ಯಿಕ ಸಲಹೆಗಾರರಾಗಿದ್ದ ಪ್ರೊ. ಪ್ರಶಾಂತ ಚಂದ್ರ ಮಹಾಲನೊಬಿಸ್‌ ಅವರ ನೇತೃತ್ವದಲ್ಲಿ ಅಕ್ಟೋಬರ್‌ನಲ್ಲಿ ಸಮೀಕ್ಷೆ ಆರಂಭಗೊಂಡಿತು.

ಇದಕ್ಕೆ ಭಾರತೀಯ ಸಾಂಖ್ಯಿಕ ಸಂಸ್ಥೆ (ಐಎಸ್‌ಐ)ಯು ತಾಂತ್ರಿಕ ಸಂಪನ್ಮೂಲ ಒದಗಿಸಿತು. ಈ ಸಮೀಕ್ಷೆಗಳ ಆರಂಭವಾಗುತ್ತಿದ್ದಂತೆ ಕೇಂದ್ರ ಸಾಂಖ್ಯಿಕ ಸಂಘಟನೆ (ಸಿಎಸ್‌ಒ), ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆ (ಎನ್‌ಎಸ್‌ಎಸ್‌ಒ) ಹಾಗೂ ರಾಜ್ಯ ಸಾಂಖ್ಯಿಕ ಶಾಖೆಗಳನ್ನು ರೂಪಿಸಲು ಮಹಾಲನೊಬಿಸ್‌ ಅವರು ಕಾರಣೀಕರ್ತರಾದರು.

ADVERTISEMENT

ಇದು ಸ್ವತಂತ್ರ ಭಾರತದ ಪ್ರಥಮ ವಿಸ್ತ್ರತ ರಾಷ್ಟ್ರೀಯ ಮಾದರಿ ಸಮೀಕ್ಷೆಯಾಗಿತ್ತು. ದೇಶದ ಸಾಂಖ್ಯಿಕ ಚಟುವಟಿಕೆಗಳಿಗೆ, ಅಧ್ಯಯನಗಳಿಗೆ ಸ್ಪಷ್ಟ ದಿಕ್ಕುದೆಸೆ ಒದಗಿಸಿದ ಪ್ರೊ. ಪ್ರಶಾಂತ ಚಂದ್ರ ಮಹಾಲನೊಬಿಸ್‌ ಅವರೇ ದೇಶದ ಆಧುನಿಕ ಸಂಖ್ಯಾವಿಜ್ಞಾನದ ಪಿತಾಮಹರೆನಿಸಿದರು. 1893ರಲ್ಲಿ ಕೋಲ್ಕತ್ತದಲ್ಲಿ ಜನಿಸಿದ ಇವರ ಜನ್ಮದಿನವಾದ ಜೂನ್‌ 29ನ್ನು ‘ರಾಷ್ಟ್ರೀಯ ಸಂಖ್ಯಾವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

1926ರಲ್ಲಿಯೇ ಅವರು ಸರ್ಕಾರದ ಬೇಡಿಕೆಯ ಮೇರೆಗೆ ಒಡಿಶಾದ ಪ್ರವಾಹ ಸ್ಥಿತಿಗತಿಗಳ ಅಂಕಿ–ಅಂಶಗಳನ್ನು ವಿಶ್ಲೇಷಣೆ ಮಾಡಿದ್ದರು. ಇದರ ಆಧಾರದ ಮೇಲೆ ಮುಂದೆ ಹಿರಾಖುಡ್‌ ಅಣೆಕಟ್ಟೆ ನಿರ್ಮಾಣವಾಯಿತು. 1937– 45ರಲ್ಲಿ ಅವರು ಸಮೀಕ್ಷೆಗಳ ನವೀನ ವಿಧಾನಗಳನ್ನು, ಉಪಾಯಗಳನ್ನು ಪರಿಚಯಿಸಿದ್ದರು. ಆಗಲೇ ಅವರು ವಾಯು ಸಮೀಕ್ಷೆ(ಏರ್‌ ಸರ್ವೆ)ಯ ಬಗ್ಗೆಯೂ ಊಹಿಸಿದ್ದರು. ಸ್ವಾತಂತ್ರ್ಯದ ನಂತರ ಭಾರತೀಯ ಜನಸಂಖ್ಯಾ ಸಮೀಕ್ಷೆಯ ಅಂಕಿ–ಅಂಶಗಳನ್ನು ಡಿ.ಬಿ. ಲಹಿರಿ ಅವರೊಂದಿಗೆ ವಿಶ್ಲೇಷಿಸಿದ ಅವರು ಅದರಲ್ಲಿದ್ದ ತಪ್ಪು ಹಾಗೂ ಕೊರತೆಗಳನ್ನು ತೋರಿಸಿಕೊಟ್ಟರು. ದೇಶದ ಇನ್ನೂ ಹಲವು ಮಾದರಿ ಸಮೀಕ್ಷೆಗಳು ಮಹಾಲನೊಬಿಸ್‌ ಅವರ ನೇತೃತ್ವದಲ್ಲಿ ನಡೆದವು. 1993ರಲ್ಲಿ ಅವರ ಕೊಡುಗೆಗಳನ್ನು ಗೌರವಿಸಿ ಸರ್ಕಾರ ಅವರ ಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು. ಜನಕಲ್ಯಾಣ ಹಾಗೂ ದೇಶದ ಪ್ರಗತಿಗೆ ಅವರು ಕೈಗೊಂಡ ಸರ್ವೆಗಳು ಮಹತ್ವದ ಪಾತ್ರ ವಹಿಸಿದ್ದವು. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಘಟನೆಯ ಕೋಲ್ಕತ್ತದ ಶಾಖೆಯ ಕಟ್ಟಡಕ್ಕೆ ‘ಮಹಾಲನೊಬಿಸ್‌ ಭವನ’ ಎಂದೇ ಹೆಸರಿಡಲಾಗಿದೆ.

ಕೋಲ್ಕತ್ತದಲ್ಲಿರುವ ಇಂಡಿಯನ್‌ ಸ್ಟಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ನ ಪ್ರಧಾನ ಕಚೇರಿ (ಚಿತ್ರ– ಇಂಡಿಯನ್‌ ಸ್ಟಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ವೆಬ್‌ಸೈಟ್‌).

ಐಎಸ್‌ಐ ಹೇಗೆ ಹುಟ್ಟಿತು?: ಮಹಾಲನೊಬಿಸ್‌ ಅವರು ಆರಂಭದಲ್ಲಿ ಕೋಲ್ಕತ್ತದ ಬ್ರಹ್ಮೊ ಬಾಯ್ಸ್‌ ಸ್ಕೂಲ್‌ನಲ್ಲಿ ಓದಿದರು. 1904ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನ ಭೌತವಿಜ್ಞಾನ ಅಧ್ಯಯನಕ್ಕೆ ಸೇರಿದರು. ನಂತರ ಇಂಗ್ಲೆಂಡ್‌ಗೆ ತೆರಳಿ ಕೆಂಬ್ರಿಜ್‌ ವಿಶ್ವವಿದ್ಯಾಯದಲ್ಲಿ ಅಧ್ಯಯನ ಮುಂದುವರಿಸಿದರು. ಅಲ್ಲಿಯ ಕಿಂಗ್ಸ್‌ ಕಾಲೇಜಿಗೂ ಹೋಗಿದ್ದ ಅವರು ಪ್ರಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್‌ ಅವರನ್ನು ಭೇಟಿಯಾದರು. 1922ರಲ್ಲಿ ಭಾರತಕ್ಕೆ ಮರಳಿದ ನಂತರ ಅವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತವಿಜ್ಞಾನ ಬೋಧಿಸತೊಡಗಿದರು. ಅಲ್ಲಿ 3 ದಶಕಗಳವರೆಗೆ ಅಧ್ಯಾಪಕರಾಗಿದ್ದರು. 1922ರಿಂದ 1926ರವರೆಗೆ ಹವಾಮಾನ ತಜ್ಞರೂ ಆಗಿದ್ದರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಖ್ಯಾವಿಜ್ಞಾನದಲ್ಲಿ ಆಸಕ್ತಿ ಹೊಂದಿದವರ ಒಂದು ಗುಂಪನ್ನು ರಚಿಸಿದರು. ಅದೇ ಮುಂದೆ ವಿಸ್ತಾರ ರೂಪ ಪಡೆದು 1931ರ ಡಿಸೆಂಬರ್‌ 17ರಂದು ಇಂಡಿಯನ್‌ ಸ್ಟಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ (ಐಎಸ್‌ಐ) ಆಗಿ ರೂಪ ತಾಳಿತು. ಅದರ ಮರು ವರ್ಷವೇ ‘ಸಂಖ್ಯಾ’ ಎಂಬ ಜರ್ನಲ್‌ ಸಹ ಆರಂಭಿಸಲಾಯಿತು.

1955ರಿಂದ 1967ರವರೆಗೆ ಅವರು ಯೋಜನಾ ಆಯೋಗದ ಸದಸ್ಯರಾಗಿದ್ದರು. 2ನೇ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವಲ್ಲಿ ಇವರ ಪಾತ್ರ ಮಹತ್ವದ್ದು. ಈ ಯೋಜನೆಯಿಂದಾಗಿ ದೇಶದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ವೇಗ ಪಡೆಯಿತು. ಅವರು ಪರಿಚಯಿಸಿದ ಫ್ರಾಕ್ಟೈಲ್‌ ಗ್ರಾಫಿಕಲ್‌ ಅನಾಲಿಸಿಸ್‌ ಎಂಬ ವಿಧಾನ ಗುಂಪುಗಳ ಸಾಮಾಜಿಕ–ಆರ್ಥಿಕ ಸ್ಥಿತಿಗತಿಗಳ ಹೋಲಿಕೆಗಳಿಗೆ ಸಹಾಯ ಮಾಡುತ್ತಿದೆ. ಅವರ ‘ದೂರ ಸಿದ್ಧಾಂತ’ವು ಅಪಾರ ಖ್ಯಾತಿ ತಂದುಕೊಟ್ಟಿತು. ಗುಂಪು ವಿಶ್ಲೇಷಣೆ ಹಾಗೂ ವರ್ಗೀಕರಣ ವಿಭಾಗದಲ್ಲಿ ಇದನ್ನು ಉಪಯುಕ್ತ ಎನಿಸಿದೆ.

ಘೋಷ ವಾಕ್ಯ: ‘ಹಸಿವನ್ನು ಅಂತ್ಯಗೊಳಿಸುವುದು, ಆಹಾರ ಭದ್ರತೆಯ ಗುರಿ ಮುಟ್ಟುವುದು, ಪೌಷ್ಟಿಕತೆ ಹೆಚ್ಚಿಸುವುದು, ಸುಸ್ಥಿರ ಕೃಷಿಯತ್ತ ಸಾಗುವುದು’ ಈ ವರ್ಷದ ಸಾಂಖ್ಯಿಕ ದಿನಾಚರಣೆಯ ಘೋಷವಾಕ್ಯವಾಗಿದೆ. 2030ರೊಳಗೆ ಹಸಿವು ನೀಗಿಸಲು ಎಲ್ಲ ರೀತಿಯ ಸುಸ್ಥಿರ ಪರಿಹಾರ ಕ್ರಮ ಕೈಗೊಳ್ಳುವುದು ಹಾಗೂ ಆಹಾರ ಭದ್ರತೆ ಗಳಿಸುವುದು ನಮ್ಮ ಗುರಿ ಎಂದು ಸಾಂಖ್ಯಿಕ ಇಲಾಖೆ ಘೋಷಿಸಿದೆ.

ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌: ಮಹಾಲನೊಬಿಸ್‌ ಅವರು ಹುಟ್ಟು ಹಾಕಿದ ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ಕೋಲ್ಕತ್ತದಲ್ಲಿ ಪ್ರಧಾನ ಕಚೇರಿ ಹೋಂದಿದ್ದು, ಸಂಖ್ಯಾ ವಿಜ್ಞಾನ, ಸಾಮಾಜಿಕ ವಿಜ್ಞಾನ ಹಾಗೂ ಪರಿಸರ ವಿಜ್ಞಾನಗಳ ಅಧ್ಯಯನ, ಬೋಧನೆ ಹಾಗೂ ಅನ್ವಯದ ಕಾರ್ಯ ನಡೆಸುತ್ತಿದೆ. ನವದೆಹಲಿ, ಬೆಂಗಳೂರು, ಚೆನ್ನೈ ಹಾಗೂ ತೇಜಪುರಗಳಲ್ಲಿ ಉಪಕೇಂದ್ರಗಳು ಇವೆ. ದೇಶದ ವಿವಿಧ ನಗರಗಳಲ್ಲಿ ಇವುಗಳ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ನ ಹುಟ್ಟು, ಬೆಳವಣಿಗೆ, ದೇಶದ ಸಂಖ್ಯಾವಿಜ್ಞಾನದ ಬೆಳವಣಿಗೆಗಳ ಬಗ್ಗೆ ಶಾಶ್ವತ ಮ್ಯೂಸಿಯಂ ಸ್ಥಾಪಿಸಬೇಕು ಎಂಬ ಯೋಜನೆಯನ್ನೂ ಮಹಾಲನೊಬಿಸ್‌ ಹೊಂದಿದ್ದರು. ಆದರೆ 1972 ಜೂನ್ 28ರಂದು ಅವರ ನಿಧನರಾದ ಕಾರಣ ಅವರ ಆಕಾಂಕ್ಷೆ ನೆರವೇರಲಿಲ್ಲ. ನಂತರ 1993ರಲ್ಲಿ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಮ್ಯೂಸಿಯಂ ಆರಂಭಿಸುವ ಯತ್ನ ಆರಂಭಿಸಲಾಯಿತು. ಹಂತಹಂತವಾಗಿ ನಡೆಸಿದ ಮಾಡಿದ ಯತ್ನದಿಂದಾಗಿ ಸಂಸ್ಥೆಯ ಆವರಣದಲ್ಲಿ ಈಗ ಮ್ಯೂಸಿಯಂ ರಾರಾಜಿಸುತ್ತಿದೆ. ಸಂಖ್ಯಾವಿಜ್ಞಾನದ ಹೆಜ್ಜೆಗುರುತುಗಳನ್ನು ಹಿಡಿದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.