ADVERTISEMENT

ಕೊರೊನಾ ಭೀತಿ: ಡಬ್ಬಿಯಲ್ಲಿ ಥಾಯ್ಲೆಂಡ್ ವಿದ್ಯಾರ್ಥಿಗಳು

ಏಜೆನ್ಸೀಸ್
Published 7 ಜುಲೈ 2020, 5:55 IST
Last Updated 7 ಜುಲೈ 2020, 5:55 IST
ಥಾಯ್ಲೆಂಡ್‌ನಲ್ಲಿ ಆರಂಭವಾದ ಶಾಲೆ
ಥಾಯ್ಲೆಂಡ್‌ನಲ್ಲಿ ಆರಂಭವಾದ ಶಾಲೆ   

ಕೊರೊನಾ ಲಾಕ್‌ಡೌನ್‌ ನಂತರ ಅನೇಕ ತಿಂಗಳಿಂದ ಮುಚ್ಚಿದ್ದ ಥಾಯ್ಲೆಂಡ್‌ ಶಾಲೆಗಳು ಮತ್ತೆ ಬಾಗಿಲು ತೆರೆದಿವೆ. ಸುದ್ದಿ ಅದಲ್ಲ, ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮದಿಂದ ಇಡೀ ಜಗತ್ತು ಥಾಯ್ಲೆಂಡ್‌ ಬಳಿಯ ಶಾಲೆಯತ್ತ ತಿರುಗಿ ನೋಡುವಂತಾಗಿದೆ.

ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಸ್ಯಾಮ್‌ ಖೋಕ್ ಎಂಬಲ್ಲಿ ಮಕ್ಕಳಿಗೆ ಸೋಂಕುಹರಡದಂತೆ ಕ್ಯಾಂಟೀನ್ ಮತ್ತು ತರಗತಿಗಳನ್ನು ಮರು ವಿನ್ಯಾಸ ಮಾಡಲಾಗಿದೆ.‌

ಹೌದು! ಇಡೀ ತರಗತಿಯಲ್ಲಿ ಸಾಕಷ್ಟು ಅಂತರದಲ್ಲಿ ಎಲ್ಲ ಮಕ್ಕಳಿಗೂ ಪ್ರತ್ಯೇಕ ಟೇಬಲ್‌, ಕುರ್ಚಿ ಹಾಕಲಾಗಿದೆ. ವಿಶೇಷವೆಂದರೆ ಪ್ರತಿ ಟೇಬಲ್ ಮೇಲೆ ಬಾಕ್ಸ್‌ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಅದರಲ್ಲೇ ಕುಳಿತುಕೊಳ್ಳಬೇಕು.

ADVERTISEMENT

ವಿದ್ಯಾರ್ಥಿಗಳು ಕುಳಿತುಕೊಳ್ಳುವ ಕಡೆ ಬಿಟ್ಟು ಉಳಿದ ಕಡೆ ಡಬ್ಬಿಯನ್ನು ಬಂದ್ ಮಾಡಲಾಗಿದೆ. ಬೋರ್ಡ್‌ ಕಾಣುವಂತೆ ಮುಂದುಗಡೆ ಮಾತ್ರ ಗಾಜು ಅಳವಡಿಸಲಾಗಿದೆ.

ಪಾಠ, ಪ್ರವಚನ ಕೇಳುವಾಗಮಕ್ಕಳು ಇದರೊಳಗೆ ಕೂಡಬೇಕು.ಯಾವುದೇ ಕಾರಣಕ್ಕೂ ಬಾಕ್ಸ್‌ನಿಂದ ಆಚೀಚೆ ಇಣುಕುವಂತಿಲ್ಲ. ಪರಸ್ಪರ ಮಾತನಾಡುವಂತಿಲ್ಲ. ಪ್ರತಿ ದಿನ ಈ ಬಾಕ್ಸ್‌ಗಳನ್ನು ಸೋಂಕು ನಿರೋಧಕದಿಂದ ಸ್ವಚ್ಛಗೊಳಿಸಲಾಗುತ್ತದೆ.

ಊಟ, ತಿಂಡಿಯ ಸಮಯದಲ್ಲಿ ಮಕ್ಕಳು ಅಂತರ ಕಾಯ್ದುಕೊಳ್ಳಲು ಕ್ಯಾಂಟೀನ್‌ ಟೇಬಲ್‌ ಮೇಲೆ ಪಾರದರ್ಶಕ ಪ್ಲಾಸ್ಟಿಕ್‌ ಹಾಳೆಗಳಿಂದ ಪ್ರತ್ಯೇಕ ಕ್ಯಾಬಿನ್‌ ರಚಿಸಲಾಗಿದೆ. ಪ್ರತಿ ಟೇಬಲ್ ನಡುವೆ ಸಾಕಷ್ಟು ಜಾಗ ಬಿಡಲಾಗಿದೆ.

ವಿದ್ಯಾರ್ಥಿಗಳು ಮನೆಯಿಂದ ಹಾಕಿಕೊಂಡು ಬಂದ ಮಾಸ್ಕ್‌ ಹೊರಗಡೆ ಇಟ್ಟು, ಶಾಲೆಯಲ್ಲಿ ಕೊಡುವ ಮಾಸ್ಕ್‌ಗಳನ್ನು ಧರಿಸಬೇಕು. ಪ್ರತಿದಿನ ಮಕ್ಕಳಿಗೆ ಥರ್ಮಲ್ ಹಾಗೂ ಇತರೆಪರೀಕ್ಷೆಗಳನ್ನು ಮಾಡಿ ಪೋಷಕರಿಗೆ ಮಾಹಿತಿ ನೀಡಲಾಗುತ್ತಿದೆ.

ತರಗತಿ,ಕ್ಯಾಂಟೀನ್‌ ಮತ್ತು ಮೈದಾನ ಹೀಗೆ ಎಲ್ಲೇ ಇರಲಿ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು. ಇಂಥ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.

‘ಶಾಲೆ ಆರಂಭಿಸುವ ಮೊದಲು ಐದು ಸಾವಿರ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು 15 ದಿನ ಕ್ವಾರೆಂಟೈನ್‌ ಮಾಡಲಾಗಿತ್ತು. ಎಲ್ಲರನ್ನೂ ಪರೀಕ್ಷಿಸಿದ ನಂತರವಷ್ಟೇ ಶಾಲೆ ಆರಂಭಿಸಲಾಗಿದೆ. ಶಾಲೆಯಲ್ಲಿಯೇ ಎಲ್ಲರಿಗೂ ಮಾಸ್ಕ್‌ ಮತ್ತು ಸ್ಯಾನಿಟೈಸರ್‌, ಕೈತೊಳೆಯುವ ಲಿಕ್ವಿಡ್ ಸೋಪ್‌ ನೀಡಲಾಗುತ್ತಿದೆ’ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

ಕೊರೊನಾ ತಡೆಗಟ್ಟಲು ಜಾರಿಗೆ ತಂದಥಾಯ್ಲೆಂಡ್ ಬಳಿಯ ಶಾಲೆಯ ಶಿಸ್ತುಬದ್ಧ ವ್ಯವಸ್ಥೆ ಇತರರಿಗೂ ಮಾದರಿ ಎಂದು‘ಬ್ಯಾಂಕಾಕ್ ಪೋಸ್ಟ್‌’ ವರದಿ ಮಾಡಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಶಾಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.