ADVERTISEMENT

ಎಸ್ಸೆಸ್ಸೆಲ್ಸಿ: ಲೈಂಗಿಕ ಸಂತಾನೋತ್ಪತ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:30 IST
Last Updated 25 ಜನವರಿ 2021, 19:30 IST
ಶಲಾಕ( 8.8)
ಶಲಾಕ( 8.8)   

ಜೀವಶಾಸ್ತ್ರ

ಒಂದು ಜೀವಕೋಶದಿಂದ ಎರಡು ಜೀವಕೋಶಗಳ ಉಂಟಾಗುವಿಕೆಯು ಡಿಎನ್‌ಎ ಮತ್ತು ಕೋಶ ರಚನೆಗಳ ಪ್ರತೀಕರಣವನ್ನು ಒಳಗೊಂಡಿದೆ.

ಮಿಯಾಸಿಸ್ ಕೋಶ ವಿಭಜನೆಯ ಮೂಲಕ ಸಂತಾನೋತ್ಪತ್ತಿ ನಡೆಸದ ದೇಹದಲ್ಲಿನ ಜೀವಕೋಶಗಳಿಗೆ ಹೋಲಿಸಿದರೆ ಅರ್ಧದಷ್ಟು ಸಂಖ್ಯೆಯ ಕ್ರೋಮೊಸೋಮ್‌ಗಳನ್ನು ಮತ್ತು ಅರ್ಧದಷ್ಟು ಪ್ರಮಾಣದ ಡಿಎನ್‌ಎಯನ್ನು ಹೊಂದಿರುವ ಭಿನ್ನವಾದ ವಂಶಾವಳಿಯ ಜೀವಕೋಶಗಳನ್ನು ವಿಶಿಷ್ಟ ಅಂಗಗಳಲ್ಲಿ ಹೊಂದುವುದು.

ADVERTISEMENT

ದೇಹದ ವಿನ್ಯಾಸವು ಹೆಚ್ಚು ಸಂಕೀರ್ಣವಾದಂತೆ ಲಿಂಗಾಣುಗಳು ಕೂಡ ವೈಶಿಷ್ಟ್ಯವನ್ನು ಪಡೆಯುತ್ತವೆ. ಒಂದು ಲಿಂಗಾಣುವು ದೊಡ್ಡದಾಗಿದ್ದು, ಸಂಗ್ರಹಿತ ಆಹಾರ ಹೊಂದಿದ್ದರೆ ಅದು ಹೆಣ್ಣು ಲಿಂಗಾಣು ಹಾಗೂ ಚಿಕ್ಕದಾಗಿದ್ದು ಚಲನಶೀಲವಾಗಿದ್ದರೆ ಅದನ್ನು ಗಂಡು ಲಿಂಗಾಣು ಎಂದು ಕರೆಯಲಾಗುತ್ತದೆ.

ಹೂ ಬಿಡುವ ಸಸ್ಯಗಳಲ್ಲಿ ಸಂತಾನೋತ್ಪತ್ತಿ

ಆವೃತ ಬೀಜ ಸಸ್ಯಗಳ ಸಂತಾನೋತ್ಪತ್ತಿ ಭಾಗಗಳು ಹೂವಿನಲ್ಲಿ ಪುಷ್ಪಪತ್ರ, ಪುಷ್ಪದಳ, ಕೇಸರ ಹಾಗೂ ಶಲಾಕಗಳಲ್ಲಿ ಕೇವಲ ಕೇಸರ ಮತ್ತು ಶಲಾಕ ಮಾತ್ರ ಹೂವಿನ ಸಂತಾನೋತ್ಪತ್ತಿ ಭಾಗಗಳಾಗಿ ಅವು ಲಿಂಗಾಣುಗಳನ್ನು ಹೊಂದಿವೆ.

ಲಿಂಗಗಳ ಸಂಖ್ಯೆಯ ಆಧಾರದ ಮೇಲೆ ಹೂಗಳಲ್ಲಿ ಎರಡು ವಿಧಗಳು

ಅ) ಏಕಲಿಂಗಿ- ಶಲಾಕ/ ಕೇಸರವನ್ನು ಮಾತ್ರ ಹೊಂದಿರುತ್ತವೆ. ಉದಾ: ಪಪಾಯ, ಕಲ್ಲಂಗಡಿ

ಆ) ದ್ವಿಲಿಂಗಿ- ಶಲಾಕ ಹಾಗೂ ಕೇಸರ ಎರಡನ್ನೂ ಹೊಂದಿರುತ್ತವೆ. ಉದಾ: ದಾಸವಾಳ, ಸಾಸಿವೆ

ಕೇಸರ

ಗಂಡು ಸಂತಾನೋತ್ಪತ್ತಿ ಭಾಗವಾಗಿದೆ. ಇದು ಹಳದಿ ಬಣ್ಣದ ಪರಾಗರೇಣುಗಳನ್ನು ಉತ್ಪಾದಿಸುತ್ತದೆ.

ಶಲಾಕ (ಚಿತ್ರ‌ 8.8)

ಹೆಣ್ಣು ಸಂತಾನೋತ್ಪತ್ತಿ ಭಾಗವಾಗಿದೆ. ಇದು ಮೂರು ಭಾಗಗಳನ್ನು ಒಳಗೊಂಡಿದೆ.

ಅಂಡಾಶಯ- ಉಬ್ಬಿಕೊಂಡಿರುವ ಕೆಳಭಾಗ

ಶಲಾಕ ನಳಿಕೆ- ಉದ್ದನೆಯ ಮಧ್ಯಭಾಗ

ಶಲಾಕಾಗ್ರ- ಜಿಗುಟಾದ ತುದಿಯ ಭಾಗ

ಅಂಡಾಶಯವು ಅಂಡಾಣುಗಳನ್ನು ಹೊಂದಿದೆ ಮತ್ತು ಪ್ರತಿ ಅಂಡಾಣು ಒಂದು ಅಂಡಕೋಶವನ್ನು ಹೊಂದಿದೆ. ಪರಾಗರೇಣುವಿನಿಂದ ಉತ್ಪತ್ತಿಯಾದ ಗಂಡು ಲಿಂಗಾಣುವು ಅಂಡಾಣುವಿನಲ್ಲಿರುವ ಹೆಣ್ಣು ಲಿಂಗಾಣುವಿನೊಂದಿಗೆ ಬೆಸೆದುಕೊಳ್ಳುತ್ತದೆ. ಲಿಂಗಕೋಶಗಳ ಈ ಸಮ್ಮಿಲನ ಅಥವಾ ನಿಶೇಚನ ಯುಗ್ಮಜವನ್ನು ಉಂಟು ಮಾಡುತ್ತದೆ. ಈ ಯುಗ್ಮಜವು ಹೊಸ ಸಸ್ಯವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ.

ಹೀಗೆ ಕೇಸರದಿಂದ ಪರಾಗವನ್ನು ಶಲಾಕಾಗ್ರಕ್ಕೆ ವರ್ಗಾಯಿಸುವುದನ್ನು ಪರಾಗಸ್ಪರ್ಶ ಎನ್ನುವರು.

ಸ್ಪಕೀಯ ಪರಾಗಸ್ಪರ್ಶ- ಪರಾಗ ವರ್ಗಾವಣೆಯು ಅದೇ ಹೂವಿನಲ್ಲಿ ನಡೆಯುವುದು.

ಪರಕೀಯ ಪರಾಗಸ್ಪರ್ಶ- ಪರಾಗವು ಒಂದು ಹೂವಿನಿಂದ ಮತ್ತೊಂದು ಹೂವಿಗೆ ವರ್ಗಾವಣೆಯಾಗುವುದು.

ಪರಾಗ ವರ್ಗಾವಣೆಯು ಗಾಳಿ, ನೀರು ಅಥವಾ ಪ್ರಾಣಿಗಳಂತಹ ಮಾಧ್ಯಮಗಳ ಮೂಲಕ ನಡೆಯುತ್ತದೆ.

ಶಲಾಕಾಗ್ರದ ಮೇಲೆ ಪರಾಗದ ಮೊಳೆಯುವಿಕೆ

ಪರಾಗವು ಸೂಕ್ತ ಶಲಾಕಾಗ್ರದ ಮೇಲೆ ಬಿದ್ದ ನಂತರ ಅದು ಅಂಡಾಶಯದಲ್ಲಿರುವ ಹೆಣ್ಣು ಲಿಂಗಾಣುಗಳನ್ನು ತಲುಪಬೇಕು. ಇದಕ್ಕಾಗಿ ಪರಾಗೇಣುವಿನಿಂದ ಒಂದು ನಾಳವು ಬೆಳೆಯುತ್ತದೆ ಮತ್ತು ಅಂಡಾಶಯವನ್ನು ತಲುಪಲು ಅದು ಶಲಾಕ ನಳಿಕೆಯ ಉದ್ದಕ್ಕೂ ಚಲಿಸುತ್ತದೆ.

ಪರಾಗಸ್ಪರ್ಶದ ನಂತರ ಅಂಡಾಣುವಿನ ಒಳಗೆ ಯುಗ್ಮಜವು ಹಲವು ಬಾರಿ ವಿಭಜನೆ ಹೊಂದಿ ಭ್ರೂಣವನ್ನು ಉಂಟು ಮಾಡುತ್ತದೆ. ಅಂಡಾಣುವು ಒಂದು ಒರಟಾದ ಪದರವನ್ನು ಬೆಳೆಸಿಕೊಳ್ಳುತ್ತದೆ ಮತ್ತು ಅದು ನಿಧಾನವಾಗಿ ಬೀಜವಾಗಿ ಪರಿವರ್ತನೆಗೊಳ್ಳುತ್ತದೆ. ಅಂಡಾಶಯವು ಕ್ಷಿಪ್ರವಾಗಿ ಬೆಳೆದು, ಮಾಗಿ ಹಣ್ಣಾಗುತ್ತದೆ. ಈ ನಡುವೆ ಪುಷ್ಪದಳ, ಪುಷ್ಪಪತ್ರ, ಕೇಸರಗಳು, ಶಲಾಕ ನಳಿಕೆ ಮತ್ತು ಶಲಾಕಾಗ್ರಗಳು ಸುಕ್ಕಾಗಿ ಉದುರಿಹೋಗುತ್ತವೆ.

ಬೀಜವು ಭವಿಷ್ಯದ ಸಸ್ಯ ಅಥವಾ ಭ್ರೂಣವನ್ನು ಹೊಂದಿದ್ದು ಸೂಕ್ತ ಪರಿಸ್ಥಿತಿಗಳಲ್ಲಿ ಅದು ಮೊಳಕೆಯೊಡೆಯುತ್ತದೆ. ಈ ಪ್ರಕ್ರಿಯೆಯನ್ನು ಮೊಳೆಯುವಿಕೆ ಎನ್ನುವರು.

ಮನುಷ್ಯರಲ್ಲಿ ಸಂತಾನೋತ್ಪತ್ತಿ

ಮನುಷ್ಯರಲ್ಲಿ ಲೈಂಗಿಕ ರೀತಿಯ ಸಂತಾನೋತ್ಪತ್ತಿ ನಡೆಯುತ್ತದೆ. ವಯಸ್ಸಾಗುತ್ತಾ ಹೋದಂತೆ ಹುಡುಗ ಹಾಗೂ ಹುಡುಗಿ ಇಬ್ಬರಲ್ಲೂ ಆಗುವ ಬದಲಾವಣೆಗಳು ಕೆಳಕಂಡಂತಿವೆ.

ಕಂಕುಳ ಮತ್ತು ಜನನಾಂಗ ಭಾಗಗಳಲ್ಲಿ ದಟ್ಟವಾಗಿ ಕೂದಲು ಬೆಳೆದು ಅವು ಗಾಢವಾದ ಬಣ್ಣಕ್ಕೆ ತಿರುಗುವುದು.

ಮುಖ, ಕೈ-ಕಾಲುಗಳ ಮೇಲೆ ತೆಳುವಾಗಿ ಕೂದಲುಗಳು ಕಾಣಿಸಿಕೊಳ್ಳುತ್ತವೆ.

ಚರ್ಮದಲ್ಲಿ ಆಗಾಗ ಎಣ್ಣೆಯ ಅಂಶ ಕಾಣಲಾರಂಭಿಸುತ್ತದೆ.

ಮುಖದ ಮೇಲೆ ಮೊಡವೆಗಳು ಮೂಡಲು ಪ್ರಾರಂಭವಾಗಬಹುದು.

ಹುಡುಗಿಯರಲ್ಲಿ ಪ್ರತ್ಯೇಕವಾಗಿ ಆಗುವ ಬದಲಾವಣೆಗಳು

ಸ್ತನಗಳ ಗಾತ್ರ ದೊಡ್ಡದಾಗುವುದು

ಸ್ತನಾಗ್ರದ ತೊಟ್ಟುಗಳು ದಟ್ಟವಾದ ಬಣ್ಣವನ್ನು ಹೊಂದುತ್ತವೆ

ಮಾಸಿಕ ಋತುಚಕ್ರ ಪ್ರಾರಂಭವಾಗುತ್ತದೆ.

ಹುಡುಗರಲ್ಲಿ ಪ್ರತ್ಯೇಕವಾಗಿ ಆಗುವ ಬದಲಾವಣೆಗಳು

ಮುಖದ ಮೇಲೆ ಹೊಸದಾಗಿ ಕೂದಲು ಕಾಣಿಸಿಕೊಳ್ಳುತ್ತವೆ

ಧ್ವನಿ ಒಡೆಯಲು ಪ್ರಾರಂಭವಾಗುತ್ತದೆ

ಹಗಲುಗನಸಿನಲ್ಲಿ/ ರಾತ್ರಿ ವೇಳೆ ಶಿಶ್ನವು ಆಗಾಗ ದೊಡ್ಡದಾಗುತ್ತದೆ ಮತ್ತು ನಿಮಿರುತ್ತದೆ.

ಸಂತಾನೋತ್ಪತ್ತಿಯ ಅಂಗಾಂಶಗಳು ಪಕ್ವವಾಗಲು ಪ್ರಾರಂಭವಾಗುವ ಹದಿಹರೆಯದ ಅವಧಿಯನ್ನು ಪ್ರೌಢಾವಸ್ಥೆ ಎಂದು ಕರೆಯುತ್ತಾರೆ. ಲೈಂಗಿಕ ರೀತಿ ಸಂತಾನೋತ್ಪತ್ತಿ ಎಂದರೆ ಎರಡು ಜೀವಗಳ ಲಿಂಗಾಣುಗಳು ಸಂಯೋಜನೆ ಹೊಂದಿ ಹೊಸ ಜೀವಿಯ ಸೃಷ್ಟಿಯಾಗುವುದು.

(ಪಾಠ ಸಂಯೋಜನೆ: ಜೀವಶಾಸ್ತ್ರ ವಿಭಾಗ, ಆಕಾಶ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.