ADVERTISEMENT

ಸಮಾಧಾನ ಅಂಕಣ | ಮೈಬಣ್ಣದ ಚಿಂತೆ ಬಿಡಿ: ವಿಶ್ವಾಸದಿಂದ ಅಡಿ ಇಡಿ

ಡಿ.ಎಂ.ಹೆಗಡೆ
Published 21 ಡಿಸೆಂಬರ್ 2025, 23:30 IST
Last Updated 21 ಡಿಸೆಂಬರ್ 2025, 23:30 IST
   

ನನಗೀಗ 17 ವರ್ಷ. ನನ್ನ ಮೈಬಣ್ಣ ಕಪ್ಪು. ನನಗೆ ಅದೇ ಒಂದು ಸಮಸ್ಯೆಯಾಗಿದೆ. ನನ್ನ ಪಾಲಕರು ಬೆಳ್ಳಗೆ, ನೋಡಲು ಚೆನ್ನಾಗಿದ್ದಾರೆ. ನಾನು ಅವರ ಮಗಳೇನಾ, ಅವರು ನನ್ನನ್ನು ಪ್ರೀತಿಸುತ್ತಿಲ್ಲವಾ, ನನ್ನ ಅಣ್ಣನಿಗೆ ಹೆಚ್ಚು ಪ್ರೀತಿ, ಕಾಳಜಿ ತೋರುತ್ತಿದ್ದಾರೆ, ನನ್ನನ್ನು ನಿರ್ಲಕ್ಷಿಸುತ್ತಾರೆ ಎಂದೆಲ್ಲ ಆಗಾಗ ಅನ್ನಿಸುತ್ತದೆ. ಅವರ ಹತ್ತಿರ ಇದನ್ನೆಲ್ಲ ಹೇಳಿದರೆ, ‘ಹಾಗೆಲ್ಲ ಏನೂ ಇಲ್ಲ, ಇಬ್ಬರನ್ನೂ ಸಮನಾಗಿ ಪ್ರೀತಿಸುತ್ತೇವೆ’ ಎನ್ನುತ್ತಾರೆ. ನನಗೆ ಸಮಾಧಾನವಿಲ್ಲ. ಇದು ನನ್ನ ಓದಿನ ಮೇಲೂ ಪರಿಣಾಮ ಬೀರುತ್ತಿದೆ. ಇತ್ತೀಚೆಗಂತೂ ಸತ್ತೇ ಹೋಗುವಷ್ಟು ಬೇಸರವಾಗಿದೆ, ಏನು ಮಾಡಲಿ ಸರ್?

-ಕಾವೇರಿ ರಮೇಶ್, ಬೆಂಗಳೂರು

ನಿಮ್ಮ ಸಮಸ್ಯೆ ಹಾಗೂ ಅದರಿಂದ ಆಗುತ್ತಿರುವ ನಿಮ್ಮ ಮಾನಸಿಕ ಯಾತನೆ ನನಗೆ ಅರ್ಥವಾಗುತ್ತದೆ. ಮೈಬಣ್ಣ ಕಪ್ಪು ಅಂದಮಾತ್ರಕ್ಕೆ ನೀವು ಹೀಗೆಲ್ಲಾ ಕುಗ್ಗಬಾರದು. ಇಷ್ಟೆಲ್ಲಾ ಚಿಂತಿಸಬಾರದು. ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು, ಎಲ್ಲರೂ ಮುಖ್ಯರು. ಯಾರೂ ಕಾರಣವಿಲ್ಲದೇ ಇಲ್ಲಿ ಹುಟ್ಟುವುದಿಲ್ಲ. ಪ್ರತಿಯೊಬ್ಬರೂ ಅವರದೇ ಆದ ಕೆಲಸವನ್ನು ಮಾಡುತ್ತಾ, ಬದುಕನ್ನು ಅನುಭವಿಸುವ ಸಲುವಾಗಿ ಹುಟ್ಟಿರುತ್ತಾರೆ. ಇಲ್ಲಿ ಪ್ರತಿಯೊಂದಕ್ಕೂ ಅದರದ್ದೇ ವಿಶೇಷತೆ, ಸೌಂದರ್ಯ ಹಾಗೂ ಮಹತ್ವ ಇದೆ. ಯಾರೂ ಸುಂದರವಾಗಿಲ್ಲ ಎನ್ನುವ ಹಾಗಿಲ್ಲ.

ADVERTISEMENT

ನೀವು ಒಮ್ಮೆ ಸಹಜವಾಗಿ ನಿಮ್ಮ ಸುತ್ತಲೂ ಗಮನಿಸಿ ನೋಡಿ. ಕಣ್ಣಿಗೆ ಕಾಣುವುದೆಲ್ಲವೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿವೆ, ವಿಶೇಷವಾಗಿವೆ. ಬಣ್ಣ, ಆಕಾರ, ಸುವಾಸನೆ, ಎತ್ತರ, ದಪ್ಪ ಎಲ್ಲವೂ ಬೇರೆಯೇ ಇವೆ. ಒಂದರಂತೆ ಇನ್ನೊಂದು ಇಲ್ಲದಿರುವುದೇ ಸೃಷ್ಟಿಯ ವೈಶಿಷ್ಟ್ಯ. ವೈವಿಧ್ಯವೇ ನಿತ್ಯ ನೂತನ. ಬೇರೆಯವರಂತೆ ತಾನಿಲ್ಲ ಎಂದು ಯಾರೂ ಕೊರಗುವ ಅಗತ್ಯವೇ ಇಲ್ಲ. ಭೂಮಿಯ ಮೇಲೆ ಇಂದಿನವರೆಗೆ ನಿಮ್ಮಂತೆ ಯಾರೂ ಹುಟ್ಟಲಿಲ್ಲ. ಅಷ್ಟೇ ಅಲ್ಲ ಇನ್ನು ಮುಂದೆಯೂ ನಿಮ್ಮಂತೆ ಇನ್ನೊಬ್ಬರು ಹುಟ್ಟುವುದೂ ಇಲ್ಲ.

ಕೋಟ್ಯಂತರ ಮನುಷ್ಯರು ಇದ್ದೇವಾದರೂ ಒಬ್ಬರ ಹೆಬ್ಬೆರಳಿನಂತೆ ಇನ್ನೊಬ್ಬರದಿಲ್ಲ, ಒಬ್ಬರ ಕಣ್ಣಿನ ರೆಟಿನಾದಂತೆ ಇನ್ನೊಬ್ಬರದಿಲ್ಲ, ಒಬ್ಬರ ನಾಲಿಗೆಯಂತೆ ಇನ್ನೊಬ್ಬರದಿಲ್ಲ, ಒಬ್ಬರ ಧ್ವನಿಯಂತೆ ಇನ್ನೊಬ್ಬರದಿಲ್ಲ, ಒಬ್ಬರ ಬುದ್ಧಿಯಂತೆ ಇನ್ನೊಬ್ಬರದಿಲ್ಲ, ಒಬ್ಬರಿಗಿರುವ ಪ್ರತಿಭೆಯೂ ಇನ್ನೊಬ್ಬರಿಗೆ ಇರುವುದಿಲ್ಲ. ಯಾವುದೇ ಕಾರಣಕ್ಕೂ ಯಾರೂ ತನ್ನ ಬಗ್ಗೆಯಾಗಲೀ ಬೇರೆಯವರ ಬಗ್ಗೆಯಾಗಲೀ ಬೇಸರಪಡುವ ಅಗತ್ಯವಿಲ್ಲ.

ಪಾಲಕರು ಬೆಳ್ಳಗಿರುವುದು, ಅವರ ಮಕ್ಕಳು ಅಷ್ಟಿಷ್ಟು ಕಪ್ಪಗಿರುವುದು ಅಸಹಜ ಏನಲ್ಲ. ವೈಜ್ಞಾನಿಕವಾಗಿ ನೋಡಿದರೆ, ಕೆಲವು ತಲೆಮಾರುಗಳ ಹಿಂದಿನವರ ದೇಹಲಕ್ಷಣಗಳು ಮಕ್ಕಳಲ್ಲಿ ಕಾಣುತ್ತವೆ. ನೀವೂ ಅಷ್ಟೆ, ನಿಮ್ಮ ಮುತ್ತಜ್ಜಿಯ ಮುತ್ತಜ್ಜಿಯ ಮರಿಯಜ್ಜಿಯ ಹಾಗೆಯೇ ಇದ್ದಿರಬಹುದು. ಅವರ ಫೋಟೊಗಳು ಇದ್ದಿದ್ದರೆ ನಿಮಗೆ ಸುಲಭವಾಗಿ ಇದು ಅರ್ಥವಾಗುತ್ತಿತ್ತು, ಅಲ್ಲವೇ?

ನಮ್ಮ ಭೂಮಿಯ ಮೇಲಿನ ಖಂಡಗಳಲ್ಲಿರುವ ಜನರಲ್ಲಿಯೇ ಕಾಣುವ ವೈವಿಧ್ಯಗಳನ್ನು ಗಮನಿಸಿ. ದಕ್ಷಿಣ ಭಾರತೀಯರ ದೈಹಿಕ ಗುಣಲಕ್ಷಣಗಳಂತೆ ಉತ್ತರದವರದ್ದಿಲ್ಲ. ಆಫ್ರಿಕಾದವರಂತೆ ಅಮೆರಿಕ ದವರಿಲ್ಲ. ಆಫ್ಗನ್ನಿನವರಂತೆ ಚೀನಾದವರಿಲ್ಲ. ಜರ್ಮನ್ನರಂತೆ ಜಪಾನೀಯರಿಲ್ಲ. ಒಂದು ಪೃಥ್ವಿಯಲ್ಲಿ ಸೃಷ್ಟಿಯೇ ಇಷ್ಟೊಂದು ವ್ಯತ್ಯಾಸಗಳಿರು ವವರನ್ನು ಸೃಷ್ಟಿಸಿದೆ! ಎಲ್ಲರೂ ಭಿನ್ನವಾಗಿಯೂ ವಿಶೇಷವಾಗಿಯೂ ಇದ್ದಾರೆ. ಆದರೂ ಮನುಷ್ಯರೆಲ್ಲರೂ ಒಂದೇ. ರಕ್ತದ ಗುಂಪುಗಳಲ್ಲಿ ವ್ಯತ್ಯಾಸವಿಲ್ಲ. ಅಂಗಾಂಗ ರಚನೆಯಲ್ಲಿ ವ್ಯತ್ಯಾಸವಿಲ್ಲ. ಹಾಗಾಗಿಯೇ ಎಲ್ಲರೂ ಎಲ್ಲರಿಗಾಗಿ ಬದುಕಬೇಕು ಎನ್ನುವುದನ್ನು ಎಲ್ಲೆಡೆಯೂ ಕಲಿಸಲಾಗುತ್ತದೆ.

ಕಾವೇರಿಯವರೆ, ನಿಮ್ಮ ವ್ಯಕ್ತಿತ್ವದಲ್ಲಿರುವ ವಿಶೇಷವನ್ನು ಗಮನಿಸಿ. ಹವ್ಯಾಸಗಳನ್ನು ಪಟ್ಟಿ ಮಾಡಿ. ಯಾವುದರ ಬಗ್ಗೆ ಮನಸ್ಸು ಅತಿಯಾಗಿ ಒಲಿಯುತ್ತದೆಯೋ ಅದನ್ನು ಶ್ರಮವಹಿಸಿ ಅಭ್ಯಾಸ ಮಾಡಿ. ನೀವು ಉಳಿದವರಿಗಿಂತ ಎಷ್ಟು ಭಿನ್ನ ಹಾಗೂ ಎಷ್ಟೊಂದು ಪ್ರತಿಭಾವಂತ ವ್ಯಕ್ತಿ ಎನ್ನುವುದನ್ನು ನಿರೂಪಿಸಿ. ಜಾಕಿಚಾನ್‌ರಿಂದ ರಜನಿಕಾಂತ್‌ ಅವರವರೆಗೆ ಹಲವರು ವಿವಿಧ ಕ್ಷೇತ್ರಗಳಲ್ಲಿ ಸೂಪರ್‌ ಸ್ಟಾರ್‌ಗಳಾಗಿದ್ದಾರೆ. ಹಾಗಾಗಿ, ನೀವು ಕೂಡ ಸಾಕಷ್ಟು ಆಕರ್ಷಕವಾಗಿದ್ದೀರಿ, ಒಳ್ಳೆಯವರಾಗಿದ್ದೀರಿ, ನಿಮ್ಮಿಂದಲೂ ಬಹಳಷ್ಟು ಒಳ್ಳೆಯ ಕೆಲಸಗಳು ಆಗಲಿವೆ ಎನ್ನುವ ಭರವಸೆ ನನಗಿದೆ.

ನನಗೆ ಗೊತ್ತಿರುವಂತೆ, ಕಪ್ಪಗಿರುವ ಹುಡುಗಿಯನ್ನು ಇಷ್ಟಪಡುವ ಬೆಳ್ಳಗಿನ ಹುಡುಗರಿದ್ದಾರೆ, ಕಪ್ಪಗಿರುವ ಹುಡುಗನನ್ನು ಇಷ್ಟಪಡುವ ಬೆಳ್ಳಗಿನ ಹುಡುಗಿಯರಿದ್ದಾರೆ. ಕೃಷ್ಣವರ್ಣದ ವ್ಯಕ್ತಿಗಳ ಚರ್ಮದ ಹೊಳಪು ವಿಶೇಷವಾಗಿರುತ್ತದೆ. ಆಫ್ರಿಕನ್‌ ದೇಶಗಳ ಕೃಷ್ಣವೇಣಿಯರು ಸೌಂದರ್ಯ ಸ್ಪರ್ಧೆಗಳಲ್ಲಿ ಛಾಪು ಮೂಡಿಸುತ್ತಿರು ವುದನ್ನು ನೀವು ಗಮನಿಸಲಿಲ್ಲವೇ? ಮನುಷ್ಯನ ವ್ಯಕ್ತಿತ್ವವೆಂಬುದು ಅವನ ಮೈಬಣ್ಣವಲ್ಲ. ಅವನ ಗುಣ, ಪ್ರತಿಭೆ, ಸಂಸ್ಕಾರ, ಸಾಧನೆ ಇವು ಮುಖ್ಯ. ನಿಮ್ಮ ಮೈಬಣ್ಣವು ನಿಮ್ಮ ಬದುಕಿನ ಸಾಧನೆಯ ಹಾದಿಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗಿ ಕಾಡುವುದಿಲ್ಲ. ನಿಮ್ಮ ಪಾಲಕರಿಗೆ ನೀವಿಬ್ಬರು ಮಕ್ಕಳ ಮೇಲೂ ಸಮಾನವಾದ ಪ್ರೀತಿ, ವಿಶ್ವಾಸ, ಅಕ್ಕರೆ, ಕಾಳಜಿ ಇರುತ್ತದೆ. ಅದು ಸಹಜ ಕೂಡ. ನೀವು ವೃಥಾ ಚಿಂತಿಸುವುದನ್ನು ಬಿಡಿ. ವಿಶ್ವಾಸದಿಂದ ಮುನ್ನುಗ್ಗಿ. ಓದಿನತ್ತ ಗಮನಹರಿಸಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.