
ಎಸ್ಎಸ್ಎಲ್ಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಅಂಕಿತಾ ಕೊಣ್ಣೂರ ಜೊತೆ ತಂದೆ ಬಸಪ್ಪ ಕೊಣ್ಣೂರ ಮತ್ತು ತಾಯಿ ಗೀತಾ ಕೊಣ್ಣೂರ
ಬಾಗಲಕೋಟೆ: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಜೀವನದ ಪ್ರಮುಖ ಪರೀಕ್ಷೆಯಾಗಿದ್ದರೂ ನಾನು ಒತ್ತಡ ಮಾಡಿಕೊಳ್ಳಲಿಲ್ಲ. ಎಷ್ಟೇ ಸವಾಲುಗಳಿದ್ದರೂ ಎಲ್ಲವನ್ನೂ ಸಮಾಧಾನವಾಗಿ ನಿಭಾಯಿಸುತ್ತ ಓದಿಕೊಂಡೆ. ಹೀಗಾಗಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಾಧಕಿ ಅಂಕಿತಾ ಬಸಪ್ಪ ಕೊಣ್ಣೂರ ಹೇಳಿದರು.
ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ವಜ್ಜರಮಟ್ಟಿ ಗ್ರಾಮದವರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದು ಮತ್ತು ಯಶಸ್ಸು ಗಳಿಸಿದ್ದು ಹೇಗೆ ಎಂಬುದರ ಬಗ್ಗೆ ಪ್ರಜಾವಾಣಿ ಜೊತೆ ಮಾತನಾಡಿದ ಅವರು, ‘ಶಾಲೆಯಲ್ಲಿನ ಸೌಲಭ್ಯ ಗಳನ್ನು ಸದ್ಬಳಕೆ ಮಾಡಿಕೊಂಡೆ. ಶಿಕ್ಷಕರು, ತಂದೆ–ತಾಯಿಯ ಮಾರ್ಗದರ್ಶನದಿಂದ ಪ್ರೇರಣೆ ಸಿಕ್ಕಿತು’ ಎಂದರು.
ಹೇಗೆ ಅಧ್ಯಯನ ಮಾಡುತ್ತಿದ್ದೀರಿ?
ನಿತ್ಯ ಮೂರುವರೆಯಿಂದ ನಾಲ್ಕು ಗಂಟೆ ಮಾತ್ರ ಅಧ್ಯಯನ ಮಾಡುತ್ತಿದ್ದೆ. ಅಂದಿನ ಪಾಠವನ್ನು ಅಂದೇ ಪೂರ್ಣಗೊಳಿಸುತ್ತಿದ್ದೆ. ಸಮಯ ಪಾಲನೆ ಜೊತೆಗೆ ಶ್ರದ್ಧೆ ಮತ್ತು ಬದ್ಧತೆಯಿಂದ ತೊಡಗಿಸಿಕೊಂಡೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡೆ ಓದಿದೆ.
ರಾಜ್ಯಕ್ಕೆ ಮೊದಲ ಸ್ಥಾನ ಗಳಿಸುವೆ ಎಂಬ ನಿರೀಕ್ಷೆ ಇತ್ತೇ?
ಖಂಡಿತ ಇತ್ತು. ನನ್ನ ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇತ್ತು. ಪರೀಕ್ಷೆ ಮುಗಿದ ನಂತರ ಆತ್ಮವಿಶ್ವಾಸ ಹೆಚ್ಚಾಗಿತ್ತು.
ತಂದೆ–ತಾಯಿಯವರ ನಿರೀಕ್ಷೆ ಏನಾಗಿತ್ತು?
ತಂದೆ ಶಾಲೆ ಓದಿಲ್ಲ. ಒಕ್ಕಲುತನ ಮಾಡಿಕೊಂಡಿದ್ದಾರೆ. ತಾಯಿ ಪಿಯುಸಿಯವರೆಗೆ ಓದಿದ್ದಾರೆ. ತಾವು ಮಾಡದ ಸಾಧನೆಯನ್ನು ಮಗಳು ಮಾಡಲಿ ಎಂಬುದು ಅವರ ನಿರೀಕ್ಷೆಯಾಗಿತ್ತು. ಅದನ್ನು ಮಾಡಿದ್ದೇನೆ.
ಮುಂದೆ ಏನಾಗಬೇಕು ಎಂಬ ಗುರಿ ಇದೆ?
ಪಿಯುಸಿ ವಿಜ್ಞಾನದ ನಂತರ ಐಐಟಿಯಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿ, ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡುವ ಗುರಿಯಿದೆ.
ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಇಂತಹ ಸಾಧನೆ ಹೇಗೆ ಸಾಧ್ಯವಾಯಿತು?
ಸಾಧನೆಗೆ ಪ್ರದೇಶ ಮುಖ್ಯವಲ್ಲ. ಸಾಧನೆ ಮಾಡಲು ಮನಸ್ಸು ಮುಖ್ಯ. ಅದಕ್ಕೆ ತಕ್ಕದಾದ ಪರಿಶ್ರಮವೂ ಅಷ್ಟೇ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.