ADVERTISEMENT

ಬೇಸಿಗೆ ರಜೆ: ಮುಗಿಯಿತು ಪಾಠ, ಈಗ ಆಟದ ಸಮಯ

ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳ್ಳಲು ವೇದಿಕೆಯಾಗುವ ಬೇಸಿಗೆ ಶಿಬಿರಗಳು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 5:51 IST
Last Updated 17 ಮಾರ್ಚ್ 2025, 5:51 IST
ಲಗೋರಿ
ಲಗೋರಿ   

ಕೊಪ್ಪಳ: ವರ್ಷದ ಹತ್ತು ತಿಂಗಳು ನಿತ್ಯ ಬೆಳಿಗ್ಗೆ ಬೇಗನೆ ಎದ್ದು ತಯಾರಾಗಿ ಶಾಲೆಗೆ ಹೋಗಿಬರುವುದು, ಬಳಿಕ ಟ್ಯೂಷನ್‌, ಓದು, ಬರಹ. ಉಳಿದ ಸಮಯದಲ್ಲಿ ಬಹುತೇಕ ಮಕ್ಕಳು ಮೊಬೈಲ್‌, ಟಿವಿ, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳ ಮುಂದೆ ಕುಳಿತರೆ ದಿನವೇ ಸಮಾಪ್ತಿ.

ಇದು ಈಗಿನ ಅನೇಕ ಮಕ್ಕಳ ಸಾಮಾನ್ಯ ದಿನಚರಿ. ಮೊದಲೆಲ್ಲ ಬೇಸಿಗೆ ರಜೆಗಳ ದಿನಗಳೆಂದರೆ ಪೋಷಕರಿಗೆ, ಮಕ್ಕಳಿಗೆ ಹಾಗೂ ಅಜ್ಜಿಯ ಮನೆಯವರ ಸಂಭ್ರಮಕ್ಕೆ ಎಲ್ಲೆಯೇ ಇರುತ್ತಿರಲಿಲ್ಲ. ಹಳ್ಳಿಗಳಲ್ಲಿ ನೆಲೆಸಿರುತ್ತಿದ್ದ ಅಜ್ಜಿಯ ಮನೆಗಳು ಮಕ್ಕಳ ಪಾಲಿಗೆ ಕಲಿಕಾ ಕೇಂದ್ರಗಳಂತೆ ಇರುತ್ತಿದ್ದವು. ಆಧುನಿಕ ಯುಗದ ಭರಾಟೆ ಹೊಡೆತಕ್ಕೆ ಸಿಲುಕಿ ಈಗ ಅಜ್ಜಿ ಮನೆಗಳೇ ಅನಾಥವಾಗಿದೆ.

ಮಕ್ಕಳು ಮಣ್ಣಿನಲ್ಲಿ ಆಡುವಾಗ ಬಿದ್ದು ತಾವೇ ಎದ್ದು ಸಾವರಿಸಿಕೊಂಡು ಗುರಿಯತ್ತ ಮುನ್ನುಗ್ಗುತ್ತಿದ್ದ ಛಲದ ಮನೋಭಾವವೇ ಅವರ ಬದುಕು ರೂಪಿಸಲು ಕಾರಣವಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಲಗೋರಿ, ಚಿನ್ನಿದಾಂಡು, ಮರಕೋತಿ, ಕಪ್ಪೆ ಓಟ, ಕುಂಟೆಬಿಲ್ಲೆ, ಸಾಲು ಚಂಡು, ಹಗ್ಗ ಜಗ್ಗಾಟ, ಕಣ್ಣಾಮುಚ್ಚಾಲೆ, ಹತ್ತಿಕಟಗಿ ಬತ್ತಿಕಟಗಿ, ಚೌಕಮಣಿ, ಹುಲಿಗೇರಿ ಹೀಗೆ ಅನೇಕ ಕ್ರೀಡೆಗಳು ಮಕ್ಕಳ ಬೇಸಿಗೆ ದಿನಗಳನ್ನು ಸುಂದರವಾಗಿರುವಂತೆ ಮಾಡುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಬೇಸಿಗೆ ರಜೆಗಳು ಮಕ್ಕಳಿಗೆ ಖುಷಿ ನೀಡಿದರೂ ಆ ಖುಷಿ ಪೋಷಕರಲ್ಲಿ ಕಾಣುತ್ತಿಲ್ಲ. ಮಕ್ಕಳು ಶಾಲೆಗೆ ಹೋದರೆ ಚಿಂತೆಯಿಲ್ಲ; ದೀರ್ಘ ರಜೆಯಿದ್ದರೆ ಅವರನ್ನು ಕಾಯುವುದೇ ಪೋಷಕರಿಗೆ ದೊಡ್ಡ ಕೆಲಸವಾಗುತ್ತಿದೆ. ಅದರಲ್ಲಿ ಪತಿ–ಪತ್ನಿ ಇಬ್ಬರೂ ಉದ್ಯೋಗಸ್ಥರಾಗಿದ್ದರೆ ಮೊಬೈಲ್‌ ಅನ್ನು ಮಕ್ಕಳ ಕೈಗೆ ಒಪ್ಪಿಸಿ ಹೋಗುವುದು ಬಿಟ್ಟು ಬೇರೆ ದಾರಿಯೂ ಇಲ್ಲದಂತಾಗಿದೆ.  

ADVERTISEMENT

ಸ್ನಾನ, ಉಪಾಹಾರ, ಊಟ ಹೀಗೆ ಏನೇ ಕೆಲಸ ಮಾಡಬೇಕಾದರೂ ‘ಮೊಬೈಲ್‌ ಬೇಕು’ ಎನ್ನುವ ಬೇಡಿಕೆ ಮಕ್ಕಳಲ್ಲಿ ವ್ಯಾಪಕವಾಗುತ್ತಿದೆ. ಇನ್ನು ಕೆಲವರು ಬಿಸಿಲಿನ ಹೊರತಾಗಿ ಬೆಳಿಗ್ಗೆ ಮತ್ತು ಸೂರ್ಯಾಸ್ತದ ಬಳಿಕ ಆಡಲು ಅವಕಾಶಗಳಿದ್ದರೂ ತಾಪದ ನೆಪದಲ್ಲಿ ಮನೆಯಲ್ಲಿ ಮೊಬೈಲ್‌ ಗೀಳು ಅಂಟಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿದ್ದುಕೊಂಡೇ ಆಡಲು ಹೇರಳ ಅವಕಾಶ ಇದ್ದರೂ ಅದರ ಗೊಡವೆಗೂ ಹೋಗುವುದಿಲ್ಲ. ಹೀಗಾಗಿ ಬೇಸಿಗೆ ದಿನಗಳು ಪೋಷಕರ ಪಾಲಿಗೆ ‘ಹೊರೆ’ಯಾಗುತ್ತಿವೆ.

ಏನು ಮಾಡಬಹುದು?: ಮಕ್ಕಳ ಮೊಬೈಲ್‌ ವಿಪರೀತ ಬಳಕೆ ತಪ್ಪಿಸಲು ಬೇಸಿಗೆ ಶಿಬಿರಗಳಿಗೆ ಕಳಿಸಬಹುದು. ಕ್ರೀಡೆಗಳು, ಸಂಗೀತ, ಸಾಹಸ ಕಲೆಗಳ ಪ್ರದರ್ಶನ, ಈಜುವುದನ್ನು ಕಲಿಸುವುದು, ಓದಿನ ಅಭ್ಯಾಸ, ಬರವಣಿಗೆ ಕೌಶಲ ಕಲಿಸುವುದು ಹೀಗೆ ಅನೇಕ ಕೆಲಸಗಳನ್ನು ಮಾಡಲು ಅವಕಾಶವಿದೆ.

ಇದಕ್ಕಾಗಿಯೇ ಜಿಲ್ಲೆಯಲ್ಲಿರುವ ವಿವಿಧ ಸಂಘ ಸಂಸ್ಥೆಗಳು ಮಕ್ಕಳಿಗೆ ತಮ್ಮಲಿನ ಕೌಶಲ ಹೇಳಿಕೊಡುತ್ತಿವೆ. ಜಿಲ್ಲೆಯ ಕೊಪ್ಪಳ, ಭಾಗ್ಯನಗರ, ಗಂಗಾವತಿ, ಕುಷ್ಟಗಿ, ಕನಕಗಿರಿ, ಕಾರಟಗಿ, ಯಲಬುರ್ಗಾ, ಕುಕನೂರು ಹೀಗೆ ಎಲ್ಲ ಊರುಗಳಲ್ಲಿಯೂ ಕ್ರೀಡೆ, ಸಂಗೀತ ಹೇಳಿಕೊಡಲು ಸಂಸ್ಥೆಗಳು ಸಿದ್ಧತೆ ಮಾಡಿಕೊಂಡಿವೆ. ಕ್ರೀಡಾ ಇಲಾಖೆ ಈಜುಪಟುಗಳನ್ನು ಸಿದ್ಧಪಡಿಸಲು ಯೋಜನೆ ಹಮ್ಮಿಕೊಂಡಿದೆ. ಇವುಗಳ ಲಾಭ ಪಡೆದುಕೊಂಡು ಮಕ್ಕಳು ದೈಹಿಕ ಸದೃಢತೆ ಪಡೆದುಕೊಳ್ಳುವ ಅಗತ್ಯವಿದೆ.

ಮೊದಲು ಓದಿನಿಂದ ಮಾತ್ರ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎನ್ನುವ ಕಾಲವಿತ್ತು. ಈಗ ರಿಯಾಲಿಟಿ ಶೋಗಳು ಮತ್ತು ಸಾಕಷ್ಟು ವಾಹಿನಿಗಳಲ್ಲಿ ಸಿಗುತ್ತಿರುವ ವೇದಿಕೆಯಿಂದಾಗಿ ಕ್ರೀಡೆ, ಸಂಗೀತ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಬದುಕು ಕಟ್ಟಿಕೊಳ್ಳಲು ಅವಕಾಶವಿದೆ.  

ಎರಡು ತಿಂಗಳ ಬೇಸಿಗೆ ಶಿಬಿರದಲ್ಲಿ ಮಕ್ಕಳಲ್ಲಿ ಯಾವ ವಿಷಯದ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆಯೊ ಅದು ಭವಿಷ್ಯದಲ್ಲಿ ದೊಡ್ಡ ಸಾಧನೆಗೆ ಕಾರಣವಾಗಬಹುದು. ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು ಎನ್ನುವಂತೆ ಮಕ್ಕಳ ಮುಂದಿನ ಸಾಧನೆಗೆ ಈಗಿನ ಸಣ್ಣ ಬೇಸಿಗೆ ಶಿಬಿರಗಳು ವೇದಿಕೆಯಾಗಬಹುದು. ಹೀಗಾಗಿ ಮಕ್ಕಳು ಮೊಬೈಲ್‌ನಿಂದ ದೂರವಾದರೆ ಸಾಕು ಎಂದು ಕಾಯುತ್ತಿರುವ ಪೋಷಕರಿಗೆ ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆಯಯಾಗಿರುವ ಬೇಸಿಗೆ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ.

ಕ್ರೀಡಾ ಇಲಾಖೆಯಿಂದ ಶಿಬಿರ ಆಯೋಜನೆ

ಜಿಲ್ಲೆಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಬೇಸಿಗೆ ಶಿಬಿರ ಅಂಗವಾಗಿ ವಿವಿಧ ಕ್ರೀಡೆಗಳಿಗೆ ತರಬೇತಿ ನೀಡಲು ಮುಂದಾಗಿದೆ. ಈಜು ಕೊಕ್ಕೊ ಬಾಲ್‌ ಬ್ಯಾಡ್ಮಿಂಟನ್‌ ಚೆಸ್‌ ಸಾಹಸ ಕ್ರೀಡೆ ಟ್ರಕ್ಕಿಂಗ್‌ ಬ್ಯಾಡ್ಮಿಂಟನ್‌ ನೆಟ್‌ಬಾಲ್‌ ಕ್ರಿಕೆಟ್‌ ಕುದುರೆ ಓಡಿಸುವುದು ಕುಸ್ತಿ ವಾಲಿಬಾಲ್ ಸ್ಕೇಟಿಂಗ್‌ ಯೋಗ ಫುಟ್‌ಬಾಲ್‌ ಕಬಡ್ಡಿ ಅಥ್ಲೆಟಿಕ್ಸ್‌ ಕರಾಟೆ ಮತ್ತು ಸಂಗೀತ ಸಾಧನಗಳ ಕಲಿಕೆಯನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಮಕ್ಕಳು ಇವುಗಳಲ್ಲಿ ಯಾವುದಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಾರೊ ಆ ಕ್ರೀಡೆಗಳನ್ನು ಕಲಿಸಲು ಪ್ರತ್ಯೇಕವಾಗಿ ಶಿಬಿರವನ್ನೇ ನಡೆಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಗಟ್ಟಿತನಕ್ಕೆ ಕಾರಣವಾಗಬೇಕು. ಇದಕ್ಕಾಗಿ ಇಲಾಖೆಯಿಂದಲೇ ಶಿಬಿರಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಮಕ್ಕಳು ಹಾಗೂ ವಯಸ್ಕರು ತಮ್ಮ ಆಸಕ್ತಿಯ ವಿಷಯಗಳನ್ನು ನಮ್ಮ ಮುಂದೆ ಹಂಚಿಕೊಂಡರೆ ಅದಕ್ಕೆ ಅನುಗುಣವಾಗಿ ಶಿಬಿರ ಆಯೋಜಿಸಲಾಗುತ್ತದೆ. ಮಕ್ಕಳ ಮನೋವಿಕಾಸಕ್ಕೂ ಅನುಕೂಲವಾಗುತ್ತದೆ.
ವಿಠ್ಠಲ ಜಾಬಗೌಡರ, ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಬೇಸಿಗೆ ರಜೆಯ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ಅಂಟಿಕೊಳ್ಳದೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ನಮ್ಮ ಆಶಯ. ಇದರಿಂದ ಅವರಲ್ಲಿನ ಪ್ರತಿಭೆ ಹೊರಬರಲು ವೇದಿಕೆ ಸಿಕ್ಕಂತಾಗುತ್ತದೆ. ಆದ್ದರಿಂದ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯಿಂದಲೇ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡಲು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ರಾಜಶೇಖರ ಹಿಟ್ನಾಳ, ಅಧ್ಯಕ್ಷ ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆ
ಸಂಗೀತ ಕಲಿತವರಿಗೆ ಸಾಕಷ್ಟು ಅವಕಾಶಗಳು ಇವೆ. ಇದನ್ನೇ ವೃತ್ತಿಪರವಾಗಿ ಸ್ವೀಕರಿಸಿ ಗ್ರಾಮೀಣ ಪ್ರದೇಶದಿಂದ ಅಂತರರಾಷ್ಟ್ರೀಯ ಮಟ್ಟದ ತನಕ ಸಾಧನೆ ಮಾಡಿದ ಅನೇಕರು ನಮ್ಮ ನಡುವೆ ಇದ್ದಾರೆ.
ಮಹಾಂತಯ್ಯ ಶಾಸ್ತ್ರಿ ಹಿರೇಮಠ, ಸಂಗೀತ ಕಲಾವಿದ
ಕೊಪ್ಪಳದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಮಕ್ಕಳು ಈಜು ಅಭ್ಯಾಸ ಮಾಡಿದ ಚಿತ್ರಣ   –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.