ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಬೆಂಗಳೂರು: ವಿದೇಶದಲ್ಲಿ ಶಿಕ್ಷಣ ಪಡೆಯುವುದು ಮಧ್ಯಮ ವರ್ಗದವರಿಗೆ ಗಗನ ಕುಸುಮ ಎನ್ನುವ ಸನ್ನಿವೇಶ ಬದಲಾಗುತ್ತಿದ್ದು, ಸಮಾಜದಲ್ಲಿನ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಬೇಕಾದ ಅವಕಾಶವನ್ನು ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.
ಲಕ್ಷಗಟ್ಟಲೇ ಖರ್ಚು ಮಾಡಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಆಗದವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ವಿದೇಶಿ ಅಧ್ಯಯನ ಮೇಳವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ ಎಂದು ಕೌಶಲಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್ಥಿಕವಾಗಿ ದುರ್ಬಲವಾಗಿರುವ, ಮಧ್ಯಮ ವರ್ಗದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ನಿಗಮವು ಆ.17ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ ಮೇಳ ಆಯೋಜಿಸಿದೆ ಎಂದರು.
ಉನ್ನತ ಶಿಕ್ಷಣ ಪಡೆಯಲು ಬಯಸುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಿಸಿರುವ ಹೊಸ ಯೋಜನೆಯಡಿ ಮೇಳ ಆಯೋಜಿಸಲಾಗಿದೆ. ಇದರಲ್ಲಿ 10ಕ್ಕೂ ಹೆಚ್ಚು ದೇಶಗಳ, 50ಕ್ಕೂ ಅಧಿಕ ಜಾಗತಿಕ ವಿಶ್ವವಿದ್ಯಾಲಯಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಸಂಸ್ಥೆಗಳು ವಿಶ್ವದ ಟಾಪ್ 500ರಲ್ಲಿ ಸ್ಥಾನ ಪಡೆದಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು ತೆರಳಿದರೆ ಅವರಿಗೆ ಬೆಂಬಲ ನೀಡುವುದು ನಮ್ಮ ಗುರಿ. ಈ ಅಧ್ಯಯನ ಮೇಳ ವಿದ್ಯಾರ್ಥಿಗಳಿಗೆ ಹೆಚ್ಚು ಆಪ್ತವಾಗಿರಲಿದೆ. ವಿಶ್ವವಿದ್ಯಾಲಯ, ಕೋರ್ಸ್‌ಗಳ ಆಯ್ಕೆ ಬಗ್ಗೆ ಯಾವುದೇ ಶುಲ್ಕವಿಲ್ಲದೇ ಉಚಿತ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಎಕ್ಸ್‌ಪೋ ಹೇಗಿರಲಿದೆ?:
ವಿಶ್ವವಿದ್ಯಾಲಯದ ಪ್ರತಿನಿಧಿಗಳೊಂದಿಗೆ ನೇರ ಸಂವಾದ, ವಿದ್ಯಾರ್ಥಿ ವೇತನ ಮತ್ತು ಅರ್ಹತಾ ಮೌಲ್ಯಮಾಪನ, ವೀಸಾ ಪ್ರಕ್ರಿಯೆ, ಹಣಕಾಸು ಯೋಜನೆ, ಆರೋಗ್ಯ ವಿಮೆ, ಭಾಷಾ ಪ್ರಾವೀಣ್ಯ ಮತ್ತು ಇತರೆ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ, ಐರ್ಲೆಂಡ್, ನ್ಯೂಜಿಲೆಂಡ್ ಸೇರಿದಂತೆ ವಿವಿಧ ದೇಶಗಳ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ.
ವಿದೇಶದಲ್ಲಿನ ವ್ಯಾಸಂಗ ಶ್ರೀಮಂತರಿಗೆ ಮಾತ್ರವಲ್ಲ ಎಲ್ಲರಿಗೂ ಕೈಗೆಟುಕಲಿದೆ. ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಕನಸು ಕಂಡಿರುವವರಿಗೆ ವಿದೇಶಿ ಅಧ್ಯಯನ ಮೇಳ ಆಯೋಜಿಸಲಾಗಿದೆಡಾ.ಶರಣ ಪ್ರಕಾಶ ಪಾಟೀಲ್,ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.