ಮುಗಿದ ರಜೆ: ಚಿಣ್ಣರಿಗೆ ಶಾಲೆಯ ಗಂಟೆ ಬಾರಿಸಿತು!
ಬೇಸಿಗೆ ಆರಂಭವಾದ ಹೊತ್ತಲ್ಲಿಯೇ ಶಾಲಾ ಪರೀಕ್ಷೆಗಳು ಶುರುವಾಗಿ, ಬೆವರೊರೆಸಿಕೊಳ್ಳುತ್ತಾ ಬರೆದು ಮುಗಿಸುವಷ್ಟರಲ್ಲಿ ಮಕ್ಕಳ ಮುಖದಲ್ಲಿ ಸಂತಸ ಎದ್ದು ಕುಣಿಯುತ್ತಿರುತ್ತದೆ. ಮುಂದಿನ ಸುದೀರ್ಘ ಬೇಸಿಗೆ ರಜೆ ಅವರೆದುರು ಮಳ್ಳನಂತೆ ಬಿದ್ದುಕೊಂಡದ್ದು ನೆನಪಿಸಿಕೊಂಡೇ ಅವರ ಮುಖ ಅರಳಿರುತ್ತದೆ. ಶಿಕ್ಷಕರು ಹೇಳಿದ ಗೃಹಪಾಠಗಳನ್ನೆಲ್ಲ ಮಾಡಿ ಮುಗಿಸುವ ಭರವಸೆಯೊಂದಿಗೆ ರಜೆಯ ಚಂದದ ದಾರಿಯಲ್ಲಿ ಎಲ್ಲ ಮಕ್ಕಳು ಮನೆಯತ್ತ ಹೆಜ್ಜೆ ಇಡುತ್ತಾರೆ.
ರಜೆ ಶುರುವಾದ ಮರುದಿನದಿಂದಲೇ ಮಕ್ಕಳ ವೇಳಾಪಟ್ಟಿ ಸಂಪೂರ್ಣವಾಗಿ ಬದಲಾಗಿಬಿಡುತ್ತದೆ. ಶಿಕ್ಷಕರು ಹಾಕಿಕೊಟ್ಟ ಕಾರ್ಯಚಟುವಟಿಕೆಗಳ ದಿನಚರಿ ಪುಸ್ತಕ ಮೂಲೆ ಸೇರುತ್ತದೆ. ತಡವಾಗಿ ಏಳುವುದು, ದಿನವಿಡೀ ಆಡುವುದು, ಹಸಿದಾಗ ಉಣ್ಣುವುದು, ಬೇಕಾದಾಗ ಟಿ.ವಿ ನೋಡುವುದು, ಹಿರಿಯರ ಮೊಬೈಲನ್ನು ಹಟ ಮಾಡಿ ಪಡೆದು ಗಂಟೆಗಟ್ಟಲೆ ಅದರಲ್ಲಿ ಕಳೆದುಹೋಗುವುದು, ಮನೆಯವರೊಡನೆ ಪ್ರವಾಸಕ್ಕೆ ಹೋಗುವುದು, ನೆಂಟರ ಮನೆ, ಅಜ್ಜಿ ಮನೆಯ ದಾರಿ ಹಿಡಿಯುವುದು, ಬಸ್ಸು, ರೈಲಿನಲ್ಲಿ ಒಬ್ಬೊಬ್ಬರೇ ಓಡಾಡುವ ಧೈರ್ಯ ಮಾಡುವುದು... ಇಂತಹ ‘ದೊಡ್ಡ ದೊಡ್ಡ’ ಸಂಗತಿಗಳೆಲ್ಲ ನಡೆಯುತ್ತಿರುತ್ತವೆ. ಪಾಲಕರು ಒತ್ತಾಯದಿಂದ ಸೇರಿಸಿದ ಕೋರ್ಸುಗಳಿಗೆ ಸೇರಿ, ಮನಸ್ಸಿಲ್ಲದ ಮನಸ್ಸಿನಲ್ಲಿ ಕಲಿಯುತ್ತಾ ಕಲಿತ ವಿಷಯಗಳನ್ನು ಅಷ್ಟೇ ಬೇಗ ಮರೆಯುತ್ತಾ ಉಳಿದ ಸಮಯದಲ್ಲಿ ಏನಾದರೂ ಆಟ ಆಡುತ್ತಾ ರಜೆ ಕಳೆದೇಹೋಗುತ್ತಿದೆ ಎಂದು ಬೇಸರಿಸುವವರ ಸಂಖ್ಯೆಯೂ ಬಹಳಷ್ಟಿರುತ್ತದೆ.
ಹಳ್ಳಿಗಳ ಮಕ್ಕಳಾದರೆ ಅವರ ರಜೆಯ ಮಜವೇ ಬೇರೆ. ಸುತ್ತಮುತ್ತಲಿನ ಹಣ್ಣುಗಳ ಮರ ಹತ್ತುತ್ತಾ, ಪಕ್ಷಿಗಳ ಜಾಡು ಹಿಡಿದು ಸಾಗುತ್ತಾ, ಸಣ್ಣ ಸಣ್ಣ ಹಳ್ಳಗಳನ್ನು ಅರಸುತ್ತಾ, ಅಲ್ಲಿ ಸಿಗುವ ಮೀನು ಹಿಡಿಯುತ್ತಾ, ನೀರು ಹೆಚ್ಚಿರುವ ಹಳ್ಳಗಳಲ್ಲಿ ಈಜಾಡುತ್ತಾ, ಸೈಕಲ್ ಸವಾರಿಯಲ್ಲಿ ಊರು ಸುತ್ತುತ್ತಾ, ಹಿರಿಯರಿಗೆ ಸಾಮಾನು ತಂದುಕೊಡುವ ನೆಪದಲ್ಲಿ ಒಂದಿಷ್ಟು ಭಕ್ಷೀಸು ಗಳಿಸಿ ಪೆಪ್ಪರಮೆಂಟು, ಬಿಸ್ಕತ್ತು ತಿನ್ನುವ ಆಸೆ ಈಡೇರಿಸಿಕೊಳ್ಳುತ್ತಾ, ಕಾಡಿನ ಹೂಗಳನ್ನು ಆಯ್ದು ತಂದು, ತಾವೇ ಪೋಣಿಸಿ ಚಂದದ ಮಾಲೆ ಮಾಡಿ, ರಸ್ತೆಬದಿಯಲ್ಲಿ ಹೂ ಮಾರಲು ನಿಲ್ಲುತ್ತಾ, ಎದುರು ಹಾದು ಹೋಗುವ ಬಸ್ಸಿನ ಕಿಟಕಿಗಳಲ್ಲಿ ಇಣುಕುವ ಮುಖಗಳಿಗೆ ಟಾಟಾ ಮಾಡುತ್ತಾ ರಜೆ ಕಳೆದುಬಿಡುತ್ತಾರೆ. ಶಾಲೆ ಪುನರಾರಂಭದ ಲಕ್ಷಣಗಳು ಒಂದು ವಾರದ ಮೊದಲೇ ಮಕ್ಕಳನ್ನು ಕಾಡತೊಡಗುತ್ತವೆ. ‘ನಾಕು ದಿನ ಕಳೆದ್ರೆ ರಜೆ ಮುಗೀತು. ಕಡೆಗೆ ಮಕ್ಳಿಗೆಲ್ಲ ಶಾಲೆ’ ಎಂದು ಅಕ್ಕಪಕ್ಕದವರು ಮಾತಾಡಿಕೊಳ್ಳಲು ಶುರುಮಾಡುತ್ತಾರೆ. ಆ ಮಾತು ಕೇಳುತ್ತಿದ್ದಂತೆಯೇ ಅಂಗಳದಲ್ಲಿ ಆಡುತ್ತಿದ್ದ ಮಕ್ಕಳ ಮುಖಗಳು ಬಾಡುತ್ತವೆ.
‘ಶಾಲೆ ಶುರುವಾಯ್ತು’ ಎನ್ನುತ್ತಾ ಅಜ್ಜಿಯ ಮನೆಯಿಂದ ವಾಪಸ್ಸಾಗುವ ಮುದುಡಿದ ಮನಸ್ಸುಗಳು, ಮೂಲೆಗೆ ಬಿಸುಟಿದ್ದ ಪಾಟಿಚೀಲವನ್ನು ಹುಡುಕಿ ತೆಗೆದು ಸ್ವಚ್ಛಗೊಳಿಸಲು ಶುರುವಿಡುತ್ತವೆ. ಹರಿದ ಬ್ಯಾಗು ಹೊಲಿಗೆ ಹಾಕಿಸಿಕೊಂಡು ಹೊಸತಾದರೆ, ಇನ್ನು ಕೆಲವರು ಹೊಸ ಬ್ಯಾಗನ್ನು ಕೊಡಿಸಿಕೊಳ್ಳುವ ಉಮೇದಿನಲ್ಲಿ ಇರುತ್ತಾರೆ. ಕಪಾಟಿನಿಂದ ಹೊರಬಂದ ಸಮವಸ್ತ್ರ ಒಂದು ರೀತಿಯ ಪರಿಮಳ ಹೊತ್ತುಕೊಂಡು ಬಂದು ಶಾಲೆಯ ಬಗ್ಗೆ ಹೊಸ ಕನಸನ್ನು ಹುಟ್ಟಿಸುತ್ತದೆ. ಹೊಸ ಕಂಪಾಸು, ಹೊಸ ರಟ್ಟು, ಹೊಸ ಪೆನ್ನುಗಳು ಬಣ್ಣ ಬಣ್ಣದಲ್ಲಿ ಮನಮೋಹಿಸಿ ಶಾಲೆಗೆ ಹೊರಡುವ ದಿನವನ್ನು ಕಾಯುವಂತೆ ಮಾಡುತ್ತವೆ. ಒಂದು ವಾರ ಮೊದಲೇ ಬಂದ ಈ ಬಾರಿಯ ಮಳೆರಾಯ ಬಣ್ಣಬಣ್ಣದ ಹೊಸ ಛತ್ರಿಗಳನ್ನು ಕೊಂಡುಕೊಳ್ಳಲು ಮುಹೂರ್ತ ಹಾಕಿಕೊಟ್ಟಿದ್ದಾನೆ. ಶಾಲೆಯ ಗೆಳೆಯರು, ಮೇಷ್ಟ್ರು, ಮೇಡಮ್ಮುಗಳು ನೆನಪಾಗಿ ಅವರನ್ನು ನೋಡುವ ಕಾತರ ಹೆಚ್ಚತೊಡಗುತ್ತದೆ.
ಶಾಲೆ ಶುರುವಾಗುವ ಮೊದಲೇ ಎಲ್ಲ ಪುಸ್ತಕಗಳು ಅಪ್ಪ– ಅಮ್ಮನಿಂದ ಹೊಸ ‘ಅಂಗಿ’ ಹಾಕಿಸಿಕೊಂಡು, ಮೇಲ್ಭಾಗದಲ್ಲಿ ಅಂಟಿಸಿದ ಲೇಬಲ್‌ನಲ್ಲಿ ಹೆಸರು ಬರೆಸಿಕೊಳ್ಳುತ್ತವೆ. ರಜೆಯಲ್ಲಿ ಪೆನ್ನು ಹಿಡಿಯುವುದನ್ನೇ ಮರೆತಿದ್ದ ಬೆರಳುಗಳು ಹದ ತಪ್ಪಿ, ಹೆಸರಿನ ಅಕ್ಷರಗಳು ಉದ್ದುದ್ದವಾಗುತ್ತವೆ. ರಜೆ ಶುರುವಾದ ಹೊತ್ತಲ್ಲಿ ಕಂಡ ಮಗನ ದುಂಡನೆಯ ಅಕ್ಷರ, ರಜೆ ಮುಗಿದ ಹೊತ್ತಲ್ಲಿ ಕಳೆದುಹೋದಾಗ ಅಮ್ಮ ಗಾಬರಿ ಬೀಳುವುದೂ ಇದೆ. ‘ಶಾಲೆಗೆ ಹೋಗಿ ಮತ್ತೆ ಸುಧಾರಿಸಿಕೊಳ್ಳುವೆ’ ಎಂಬ ಸಾಂತ್ವನದ ಮಾತು ಅಮ್ಮನ ಮುಖದಲ್ಲಿ ಮಂದಹಾಸ ತರಿಸುತ್ತದೆ. ಹಿಂದಿನ ರಾತ್ರಿ ಪ್ರತಿ ಮಗುವಿಗೂ ಹೊಸ ಉಮೇದಿನೊಂದಿಗೆ ಶಾಲೆಗೆ ಕಾಲಿಟ್ಟ ಕನಸು. ‘ಶಾಲೆ ಪ್ರಾರಂಭೋತ್ಸವ’ ಎಂಬ ದೊಡ್ಡ ಬರಹವನ್ನು ದಿನಪತ್ರಿಕೆ ಹಾಗೂ ಟಿ.ವಿ. ವಾಹಿನಿಯಲ್ಲಿ ಕಂಡು ಖುಷಿಗೊಂಡ ಮಕ್ಕಳ ಪುಟಾಣಿ ಪಾದಗಳು ಬೆಳಗಾಗುತ್ತಿದ್ದಂತೆಯೇ ಶಾಲೆಯತ್ತ ಹೆಜ್ಜೆ ಹಾಕುತ್ತವೆ. ಹೊಸ ಸಮವಸ್ತ್ರ, ಹೊಸ ಪಠ್ಯಪುಸ್ತಕ, ನವೋಲ್ಲಾಸದೊಂದಿಗೆ ಶುರುವಾದ ದಿನ ಸಂತಸದಾಯಕವಾಗಿ ಮುಗಿಯುತ್ತದೆ. ಗುಡುಗು, ಸಿಡಿಲಿನ ಮಳೆಯೊಂದಿಗೆ ತಂಪಾದ ಗಾಳಿಯೂ ಸೇರಿ ಶಾಲೆಯ ದಿನಗಳು ಸಾಗುತ್ತವೆ, ರಜೆಯ ಮಜಾದ ಸವಿನೆನಪಿನಲ್ಲಿ, ಬಾಲ್ಯದ ತುಂಟತನದ ಪುಳಕದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.