ಹಿಮಾಂಶು ಥಾಪ್ಲಿಯಾಲ್
ಮಂಗಳೂರು: ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಎಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ಎನ್ಐಟಿಕೆ ಹಳೆ ವಿದ್ಯಾರ್ಥಿ ಹಿಮಾಂಶು ಥಾಪ್ಲಿಯಾಲ್ ಮೊದಲ ರ‍್ಯಾಂಕ್ ಗಳಿಸಿದ್ದಾರೆ.
ಉತ್ತರಾಖಂಡದಲ್ಲಿ ಹುಟ್ಟಿ ಲಖನೌನಲ್ಲಿ ಬೆಳೆದಿರುವ ಹಿಮಾಂಶು ಜೆಇಇಯಲ್ಲಿ 5,83,000 ರ‍್ಯಾಂಕ್ ಗಳಿಸಿದ್ದರು. ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದಾಗಿ ಎಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಪಿಥೋರ್‌ಗಢದ ಎನ್‌ಪಿಎಸ್ಇಐನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಷಯದಲ್ಲಿ ಬಿ–ಟೆಕ್ ಪದವಿ ಪಡೆದಿದ್ದ ಅವರು ಎನ್ಐಟಿಕೆಯಲ್ಲಿ ನ್ಯಾನೊ ತಂತ್ರಜ್ಞಾನ ವಿಷಯದಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.
‘ನನಗೆ ಭಾರತೀಯ ಟೆಲಿಕಾಂ ಸೇವೆಗೆ ಸೇರುವಾಸೆ ಇತ್ತು. ಅದೀಗ ನನಸಾಗುತ್ತಿದೆ. ವ್ಯವಸ್ಥೆಯನ್ನು ಅರ್ಥೈಸಿಕೊಳ್ಳಲು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕ ನಿರ್ವಹಣೆ ತೋರಲು ಆದ್ಯತೆ ನೀಡುತ್ತೇನೆ. ಸಮಾಜಕ್ಕೆ ನನ್ನಿಂದ ಸಾಧ್ಯವಾದಷ್ಟನ್ನು ಮರಳಿಸಲು ಪ್ರಯತ್ನಿಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದರು.
‘ನನ್ನ ಕಲಿಕೆ ಮತ್ತು ಬೆಳೆವಣಿಗೆಗೆ ಸುರತ್ಕಲ್‌ನ ಎನ್ಐಟಿಕೆ ಅತ್ಯುತ್ತಮ ವೇದಿಕೆ ಒದಗಿಸಿದೆ. ನನ್ನ ವ್ಯಕ್ತಿತ್ವವನ್ನು ರೂಪಿಸಿದೆ. ಸರಿಯಾದ ನಿರ್ಧಾರ ತಳೆಯಲು ನೆರವಾಗಿದೆ. ಸಮಯ ಅಮೂಲ್ಯ. ಅದನ್ನು ಚೆನ್ನಾಗಿ ದುಡಿಸಿಕೊಳ್ಳಿ. ಪ್ರತಿ ಕ್ಷಣವನ್ನು ಆನಂದಿಸಿ. ಯುಪಿಎಸ್ಸಿ ಪರೀಕ್ಷೆಯ ಸಿದ್ಧತೆ ಮತ್ತು ಅಧ್ಯಯನದ ನಡುವೆ ಸಮತೋಲನವಿರಲಿ. ಎಲ್ಲ ಕೆಲಸ ಕಾರ್ಯದಲ್ಲೂ ಶಿಸ್ತು ಇರಲಿ’ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಿಮಾಂಶು ಅವರನ್ನು ಎನ್ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ ಅಭಿನಂದಿಸಿ, ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.