ಟೆಕ್ನಿಕಲ್ ಗುರೂಜಿ ಎಂದೇ ಖ್ಯಾತರಾದ ಗೌರವ್ ಚೌದರಿ
ನವದೆಹಲಿ: ತಂತ್ರಜ್ಞಾನವನ್ನು ಕಲಿಯುವುದು ನಿಪುಣರಾಗಲು ಹೊರತು ಗುಲಾಮರಾಗಲಲ್ಲ, ಕೃತಕ ಬುದ್ಧಿಮತ್ತೆ (ಎಐ) ಬಳಸುವಾಗ ಎಚ್ಚರಿಕೆಯಿಂದರಬೇಕು ಎಂದು ಯುಟ್ಯೂಬರ್ ಗೌರವ್ ಚೌದರಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಧಾನ ಮಂತ್ರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾದ ಟೆಕ್ನಿಕಲ್ ಗುರೂಜಿ ಎಂದೇ ಖ್ಯಾತರಾದ ಗೌರವ್ ಚೌದರಿ ಅವರು, ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
‘ತಂತ್ರಜ್ಞಾನ ನಮ್ಮನ್ನು ಉತ್ತಮಗೊಳಿಸಲು ಪ್ರಮುಖ ಪಾತ್ರವಹಿಸುತ್ತದೆ. ಆದರೆ ನಿಮ್ಮ ಸ್ವಂತ ಬುದ್ಧಿವಂತಿಕೆ, ಚುರುಕುತನ ಮತ್ತು ಕಲಾತ್ಮಕತೆ ಮುಖ್ಯವಾಗಿರುತ್ತದೆ. ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿ, ಅದು ನಿಮ್ಮ ಶಕ್ತಿಯಾಗಿ ಬದಲಾಗಬೇಕೇ ಹೊರತು ಓದಿಗೆ ಅಡ್ಡಿಪಡಿಸುವಂತಾಗಬಾರರು’ ಎಂದರು.
‘ಸ್ಮಾರ್ಟ್ ಸ್ಟಡಿ ಆ್ಯಪ್‌ಗಳು, ಡಿಜಿಟಲ್ ಟಿಪ್ಪಣಿಗಳು ಮತ್ತು ಆನ್‌ಲೈನ್ ಕಲಿಕೆಗಳು ಓದಿಗೆ ಸಹಾಯ ಮಾಡುತ್ತವೆ. ಇದೇ ರೀತಿ ಕೃತಕ ಬುದ್ಧಿಮತ್ತೆ (ಎಐ)ಯನ್ನು ಒಂದು ಅಸ್ತ್ರವಾಗಿ ಬಳಸಿ, ಆಗ ಅದು ಓದಿಗೆ ಸ್ನೇಹಿತನಾಗಲಿದೆ. ಆದರೆ ಎಐ ಬಳಸುವಾಗ ಎಚ್ಚರಿಕೆಯಿರಲಿ. ಎಐ ಎಲ್ಲಾ ಜ್ಞಾನ, ಮಾಹಿತಿ, ವಿಶ್ಲೇಷಣೆಯನ್ನು ನೀಡಬಹುದು ಆದರೆ ನಿಮಗೆ ಬೇಕಾದ ಮೂಲ ವಿಷಯದ ಬಗ್ಗೆ ನಿಮಗೆ ಅರಿವಿರಬೇಕು’ ಎಂದು ಸಲಹೆ ನೀಡಿದರು.
ಎಡ್‌ಲ್ವೆಸಿಸ್ (Edelweiss) ಮ್ಯೂಚುವಲ್ ಫಂಡ್‌ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಮಾತನಾಡಿ, ‘ಎಐ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಬಾರದು ಎಂದರು. ಉದಾಹರಣೆಗೆ, ಕಲೆ ಅಥವಾ ವಿಜ್ಞಾನ ಯಾವ ವಿಭಾಗ ಆಯ್ಕೆ ಮಾಡಿಕೊಳ್ಳಬೇಕು ಎಂದು ನಿಮಗೆ ಗೊಂದಲ ಕಾಡಬಹುದು. ಆಗ ಎಐ ನಿಮಗೆ ಎರಡೂ ವಿಭಾಗಗಳಲ್ಲಿ ಏನೆಲ್ಲಾ ವಿಷಯ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿ ನೀಡಲಿದೆ. ಆದರೆ ಅದನ್ನು ಓದಿದ ಮೇಲೆ ನಿರ್ಧಾರ ನಿಮ್ಮದೇ ಆಗಿರುತ್ತದೆ. ಮುಂದೊಂದು ದಿನ ಈ ವಿಭಾಗ ಆಯ್ಕೆ ಮಾಡಿಕೊಳ್ಳಲು ಎಐ ಹೇಳಿತು ಎನ್ನಲು ಸಾಧ್ಯವಿಲ್ಲ’ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.