ಧಾರವಾಡದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ
‘ನಮ್ಮ ಬದುಕಿನಲ್ಲಿ ನಡೆಯುವುದೆಲ್ಲವೂ ವಿಧಿಲಿಖಿತ’ ಎಂಬ ಮಾತಿದೆ. ಆದರೆ ಹೀನ ಕೃತ್ಯಗಳಿಗೆ ಸಂಬಂಧಿಸಿದ ಮಹತ್ವದ ಸುಳಿವುಗಳನ್ನು ದೃಢಪಡಿಸುವ ನಿಖರ ವರದಿ ಕೊಡುವ ಮೂಲಕ ಅಪರಾಧಿಗಳು, ವಂಚಕರ ‘ವಿಧಿ’ಯನ್ನು ನೀವೂ ಬರೆಯಬಹುದು!
ಹೌದು, ಅಪರಾಧ, ವಂಚನೆ, ಸೈಬರ್ ಕ್ರೈಮ್‌ನಂತಹ ಪ್ರಕರಣಗಳಲ್ಲಿ ದೊರಕುವ ಸಾಕ್ಷ್ಯಗಳ ಅಸಲಿತನವನ್ನು ವೈಜ್ಞಾನಿಕವಾಗಿ ಪತ್ತೆಹಚ್ಚುವುದಕ್ಕೆ ಸಂಬಂಧಿಸಿದ ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಅಧ್ಯಯನವು ಅಂತಹದ್ದೊಂದು ಅವಕಾಶವನ್ನು ಯುವಜನರಿಗೆ ಒದಗಿಸಿಕೊಡುತ್ತದೆ.
ಧಾರವಾಡದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದಲ್ಲಿ ಇದಕ್ಕೆ ಪೂರಕವಾಗುವಂತಹ ವಿವಿಧ ಕೋರ್ಸ್‌ಗಳು ಲಭ್ಯ ಇವೆ.
ರಾಜ್ಯದ ಈ ಏಕೈಕ ಫೊರೆನ್ಸಿಕ್ ವಿಶ್ವವಿದ್ಯಾ ಲಯದಲ್ಲಿ, ವಿಧಿ ವಿಜ್ಞಾನ ಮತ್ತು ಸೈಬರ್ ಸೆಕ್ಯೂರಿಟಿಗೆ ಸಂಬಂಧಿಸಿದಂತೆ ಬಿ.ಟೆಕ್–ಎಂ.ಟೆಕ್ ಹಾಗೂ ಬಿ.ಎಸ್ಸಿ–ಎಂ.ಎಸ್ಸಿ ಕೋರ್ಸ್‌ಗಳು ಇವೆ. ಇವೆರಡೂ 5 ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್‌ಗಳು. ಪಿಯುಸಿಯನ್ನು ವಿಜ್ಞಾನ ವಿಷಯದಲ್ಲಿ ಪೂರೈಸಿದವರು ಇವುಗಳಿಗೆ ದಾಖಲಾಗಬಹುದು. ನ್ಯಾಷನಲ್ ಫೊರೆನ್ಸಿಕ್ ಅಡ್ಮಿಷನ್ ಟೆಸ್ಟ್ (ಎನ್‌ಎಫ್‌ಎಟಿ) ಮೂಲಕ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಪ್ರೊಫೆಷನಲ್ ಡಿಪ್ಲೊಮಾ ಇನ್ ಕ್ರೈಂ ಸೀನ್ ಮ್ಯಾನೇಜ್‌ಮೆಂಟ್ ಎಂಬ ಆರು ತಿಂಗಳ ಕೋರ್ಸ್ ಸಹ ಇದೆ. ಪದವಿಯಲ್ಲಿ ವಿಜ್ಞಾನವನ್ನು ಓದಿದವರು ಇದಕ್ಕೆ ದಾಖಲಾಗಬಹುದು.
ಪೊಲೀಸ್, ಸಿಬಿಐ, ಸಿಐಡಿ ತನಿಖೆ, ನ್ಯಾಯಾಂಗ ವಿಚಾರಣೆಯಂತಹ ಕ್ಷೇತ್ರಗಳಲ್ಲಿ ಫೊರೆನ್ಸಿಕ್ ಪರೀಕ್ಷೆ ಅತ್ಯಂತ ಮಹತ್ವ ಪಡೆದಿದೆ. ವೈಜ್ಞಾನಿಕವಾಗಿ, ಕರಾರುವಾಕ್ಕಾಗಿ ಪರೀಕ್ಷಿಸಿ ನೈಜತೆಯನ್ನು ತಿಳಿಸುವ ವಿಜ್ಞಾನ ಎಂಬ ಹೆಸರು ಇದಕ್ಕಿದೆ.
‘ತಂತ್ರಜ್ಞಾನದ ಈ ಯುಗದಲ್ಲಿ ಫೊರೆನ್ಸಿಕ್ ಸೈನ್ಸ್ ಬಹಳಷ್ಟು ಪ್ರಾಮುಖ್ಯ ಪಡೆದಿದೆ. ನಮ್ಮ ಕೋರ್ಸ್‌ಗಳಲ್ಲಿ ಫೊರೆನ್ಸಿಕ್ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ, ಸೈಬರ್ ಸೆಕ್ಯೂರಿಟಿ, ಬಿಹೇವಿಯರಲ್ ಸೈನ್ಸ್‌ನಂತಹ ವಿಷಯಗಳನ್ನು ಕಲಿಸಲಾಗುತ್ತದೆ. ಫೊರೆನ್ಸಿಕ್ ಸೈನ್ಸ್ ಕೋರ್ಸ್ ಮುಗಿಸಿದವರಿಗೆ ಕೇಂದ್ರ, ರಾಜ್ಯ ಮತ್ತು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಗಳು, ಸಿಐಡಿ ವಿಭಾಗ, ಬೆರಳಚ್ಚು ವಿಭಾಗ, ಸಿಇಎನ್ (ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕದ್ರವ್ಯ) ಪೊಲೀಸ್ ವಿಭಾಗ, ಮೈಕ್ರೊಸಾಫ್ಟ್, ಗೂಗಲ್, ಅಮೆಜಾನ್‌ನಂತಹ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು ಇವೆ’ ಎಂದು ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ. ಮಂಜುನಾಥ ಘಾಟೆ ವಿವರಿಸುತ್ತಾರೆ.
‘ವಿದ್ಯಾಕಾಶಿ’ ಎಂದು ಕರೆಸಿಕೊಳ್ಳುವ ನಗರದಲ್ಲಿ 2023ರಲ್ಲಿ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ.
ವಿಧಿ ವಿಜ್ಞಾನ ವಿಷಯದ ಕಲಿಕೆಗೆ ವಿವಿಧ ಕೋರ್ಸ್‌ಗಳಿವೆ ಎಂಬುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಕೋರ್ಸ್‌ಗಳು ಚೆನ್ನಾಗಿವೆ. ಇವಕ್ಕೆ ಒಳ್ಳೆಯ ಸ್ಕೋಪ್ ಇದೆ. ವಿಷಯಗಳು ಆಸಕ್ತಿ ಮೂಡಿಸುತ್ತವೆ.ಪ್ರಗತಿ, ವಿದ್ಯಾರ್ಥಿನಿ, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ
ವಿಧಿವಿಜ್ಞಾನ ಕೋರ್ಸ್‌ಗೆ ಬೇಡಿಕೆ ಇದೆ. ಇಲ್ಲಿಗೆ ದಾಖಲಾಗಲು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಈ ಕೋರ್ಸ್ ಪೂರೈಸಿದವರಿಗೆ ವಿವಿಧ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳಿವೆ.ಪ್ರೊ. ಮಂಜುನಾಥ ಘಾಟೆ, ನಿರ್ದೇಶಕ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.