ADVERTISEMENT

ವಿಐಟಿ–ಎಪಿಯಿಂದ ಮೆರಿಟ್ ಸ್ಕಾಲರ್‌ಶಿಪ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 14:19 IST
Last Updated 18 ಜುಲೈ 2022, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ: ಆಂಧ್ರ ಪ್ರದೇಶದ ವೆಲ್ಲೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ವಿಐಟಿ–ಎಪಿ) ವಿಶ್ವವಿದ್ಯಾಲಯವು ಎಂಜಿನಿಯರಿಂಗ್‌ಯೇತರ ಪದವಿ ಕೋರ್ಸ್‌ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ 2022–23ನೇ ಸಾಲಿನ ಜಿ.ವಿ.ಮೆರಿಟ್‌ ಸ್ಕಾಲರ್‌ಶಿಪ್‌ ಮತ್ತು ರಾಜೇಶ್ವರಿ ಅಮ್ಮಾಳ್‌ ಮೆರಿಟ್‌ ಸ್ಕಾಲರ್‌ಶಿಪ್‌ ನೀಡಲಿದೆ ಎಂದು ಕುಲಾಧಿಪತಿ ಡಾ.ಜಿ.ವಿಶ್ವನಾಥನ್‌ ತಿಳಿಸಿದ್ದಾರೆ.

ಈ ಕುರಿತು ಕುಲಪತಿ ಡಾ.ಎಸ್‌.ವಿ.ಕೋಟಾ ರೆಡ್ಡಿ ಅವರು ಮಾಹಿತಿ ನೀಡಿದ್ದು, ದೇಶದಾದ್ಯಂತ ಯಾವುದೇ ಬೋರ್ಡ್‌ ಪರೀಕ್ಷೆಯಲ್ಲಿ ಟಾಪರ್ ಆಗಿರುವ ವಿದ್ಯಾರ್ಥಿ ಜಿ.ವಿ.ಮೆರಿಟ್‌ ಸ್ಕಾಲರ್‌ಶಿಪ್‌ ಪಡೆಯಬಹುದು. ಇದರಡಿಯಲ್ಲಿ ವಿದ್ಯಾರ್ಥಿಯು ಪದವಿಯ ಅಷ್ಟೂ ವರ್ಷ ಶೇ 100ರಷ್ಟು ಸ್ಕಾಲರ್‌ಶಿಪ್‌ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗೆಯೇ ರಾಜೇಶ್ವರಿ ಅಮ್ಮಾಳ್‌ ಮೆರಿಟ್‌ ಸ್ಕಾಲರ್‌ಶಿಪ್‌ ಪಡೆಯುವ ವಿದ್ಯಾರ್ಥಿಗಳು ದೇಶದ ಯಾವುದೇ ರಾಜ್ಯದ ಜಿಲ್ಲೆಯ‌ ಟಾಪರ್ ಆಗಿರಬೇಕು. ಇವರುಪದವಿಯಲ್ಲಿ ಪಡೆಯುವ ಟ್ಯೂಷನ್ ಶುಲ್ಕದಲ್ಲಿ ಶೇ 50ರಷ್ಟು ಸ್ಕಾಲರ್‌ಶಿಪ್‌ ಪಡೆಯಲು ಅರ್ಹರಾಗಿರುತ್ತಾರೆ. ಜಿಲ್ಲೆಯ ಟಾಪರ್‌ ವಿದ್ಯಾರ್ಥಿನಿಯಾಗಿದ್ದಲ್ಲಿ ಹೆಚ್ಚುವರಿ ಶೇ 25ರಷ್ಟು ಸ್ಕಾಲರ್‌ಶಿಪ್‌ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಸ್ನಾತಕೋತ್ತರ ಮೆರಿಟ್ ಸ್ಕಾಲರ್‌ಶಿಪ್‌ ಸಹ ಇದ್ದು, ಅದರ ಬಗ್ಗೆ ರಿಜಿಸ್ಟ್ರಾರ್‌ ಡಾ.ಜಗದೀಶ್‌ ಚಂದ್ರ ಮುದುಗಂಟಿ ಮಾಹಿತಿ ನೀಡಿದರು. ಜುಲೈ 31ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆwww.vitap.ac.in ಸಂಪರ್ಕಿಸಲು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.