ADVERTISEMENT

ಶಿಕ್ಷಣ| ಪ್ರಶ್ನೋತ್ತರ: ಡೇಟಾ ಅನಾಲಿಟಿಕ್ಸ್‌ಗೆ ಅವಕಾಶಗಳು ಹೇಗಿವೆ?

ಪ್ರದೀಪ್ ಕುಮಾರ್ ವಿ.
Published 16 ಏಪ್ರಿಲ್ 2023, 19:30 IST
Last Updated 16 ಏಪ್ರಿಲ್ 2023, 19:30 IST
ಪ್ರದೀಪ್ ಕುಮಾರ್ ವಿ.
ಪ್ರದೀಪ್ ಕುಮಾರ್ ವಿ.   

1. ನಾನು ಬಿಕಾಂ ಮುಗಿಸಿದ್ದೇನೆ, ಮುಂದೆ ಎಂಕಾಂ ಮತ್ತು ಎಂಬಿಎ ಇವೆರಡರಲ್ಲ್ಲಿ, ಯಾವುದನ್ನು ವೃತ್ತಿಯ ಅವಕಾಶಗಳ ದೃಷ್ದಿಯಿಂದ ಆರಿಸಿಕೊಳ್ಳಬಹುದು?
–ವಿದ್ಯಾ, ಹುಬ್ಬಳ್ಳಿ.

ವೃತ್ತಿಯ ದೃಷ್ಠಿಯಿಂದ ಎಂಬಿಎ ಕೋರ್ಸ್ ನಂತರ ಹೆಚ್ಚಿನ ಕ್ಷೇತ್ರಗಳಲ್ಲಿ (ಬ್ಯಾಂಕಿಂಗ್, ಇನ್‌ಶ್ಯೂರೆನ್ಸ್, ಫೈನಾನ್ಸ್, ರೀಟೇಲ್, ಸರ್ಕಾರಿ ಇತ್ಯಾದಿ) ಅವಕಾಶಗಳಿವೆ. ಎಂಕಾಂ ಅಥವಾ ಎಂಬಿಎ ನಂತರ, ಆಯಾ ಕ್ಷೇತ್ರಗಳಲ್ಲಿನ ಕೆಲಸದ ವಿವರಗಳಿಗೆ (ಜಾಬ್ ಪ್ರೊಫೈಲ್) ತಕ್ಕಂತೆ ಜ್ಞಾನ, ಆಸಕ್ತಿ, ಅಭಿರುಚಿ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ನಿಮಗೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ಪರಿಶೀಲಿಸಲು, ವೃತ್ತಿಯೋಜನೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU


2. ನಾನು ಬಿಎಸ್ಸಿ (ಪಿಸಿಎಂ) ಪದವಿ ಮುಗಿಸಿದ್ದೇನೆ. ಮುಂದೆ ಎಂಎಸ್ಸಿ (ಡೇಟಾ ಸೈನ್)್ಸ ಮಾಡಬೇಕೆಂದುಕೊಂಡಿದ್ದೇನೆ. ಎಂ.ಎಸ್ಸಿ ಕೋರ್ಸಿನಲ್ಲಿ ಡೇಟಾ ಸೈನ್ಸ್ ಹಾಗೂ ಡೇಟಾ ಸೈನ್ಸ್ ಮತ್ತು ಅನಲಿಟಿಕ್ಸ್ ಎಂಬಂತೆ ಎರಡು ಆಯ್ಕೆಗಳಿವೆ. ಇವೆರಡರಲ್ಲಿ ಯಾವುದು ಸೂಕ್ತ?
–ವಿಶಾಲ್, ಬೆಳಗಾವಿ.

ADVERTISEMENT

ವ್ಯಾಪಾರದ ಮಾಹಿತಿ, ದತ್ತಾಂಶ ತಿಳುವಳಿಕೆ ಮತ್ತು ತಯಾರಿಕೆ, ಮೌಲ್ಯಮಾಪನ ಮತ್ತು ನಿಯೋಜನೆಗಾಗಿ ಉದ್ಯಮಗಳು ಡೇಟಾ ಸೈನ್ಸ್ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಡೇಟಾ ಸೈನ್ಸ್ ತಜ್ಞರಿಗೆ ಅಪಾರವಾದ ಬೇಡಿಕೆಯಿದೆ. ಡೇಟಾ ಸೈನ್ಸ್ ಕ್ಷೇತ್ರದಲ್ಲಿರುವ ಅನೇಕ ವಿಭಾಗಗಳಲ್ಲಿ ಅನಲಿಟಿಕ್ಸ್ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಮೇಲ್ನೋಟಕ್ಕೆ ಎಂ.ಎಸ್ಸಿ ಡೇಟಾ ಸೈನ್ಸ್ ಮತ್ತು ಅನಲಿಟಿಕ್ಸ್ ಉತ್ತಮ ಆಯ್ಕೆಯೆಂದು ಅನಿಸಿದರೂ, ಎರಡೂ ಕೋರ್ಸ್‌ಗಳ ಸಂಪೂರ್ಣ ವಿವರಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಮೇಲಷ್ಟೇ ನಿರ್ಣಯಕ್ಕೆ ಬರಬಹುದು. ಉದಾಹರಣೆಗೆ, ಎರಡೂ ಕೋರ್ಸ್‌ಗಳ ಕಲಿಕೆಯ ಫಲಿತಾಂಶವೇನು (ಲರ್ನಿಂಗ್ ಔಟ್‌ಕಮ್) ಎನ್ನುವುದು ವೃತ್ತಿಯ ದೃಷ್ಠಿಯಿಂದ ಮುಖ್ಯವಾಗುತ್ತದೆ. ಹಾಗಾಗಿ, ನೀವು ತಿಳಿಸಿರುವ ಎರಡೂ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ವಿಷಯ, ವಿನ್ಯಾಸ, ಮೂಲಸೌಕರ್ಯಗಳು, ಪ್ಲೇಸ್‌ಮೆಂಟ್ ಮಾಹಿತಿ, ಇತ್ಯಾದಿಗಳನ್ನು ಪರಿಶೀಲಿಸಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳನ್ನು ಗಮನಿಸಿ, ಯಾವ ವಿಶ್ವವಿದ್ಯಾಲಯದ ಕೋರ್ಸ್ ಸೂಕ್ತವೆಂದು ನಿರ್ಧರಿಸಬಹುದು. ಹೆಚ್ಚಿನ
ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

3. ನಾನು ಎಂ.ಎಸ್ಸಿ (ಬಯೋ ಕೆಮಿಸ್ಟ್ರಿ) ಮಾಡಿ ಕೆಲಸದಲ್ಲಿದ್ದೇನೆ. ಈಗ, ಡೇಟಾ ಸೈನ್ಸ್ ಬಗ್ಗೆ ಆಸಕ್ತಿಯಿದೆ. ಯಾವ ಕೋರ್ಸ್ ಮಾಡಬಹುದು?
–ಸಚಿನ್, ಊರು ತಿಳಿಸಿಲ್ಲ.

ಡೇಟಾ ಸೈನ್ಸ್ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಆಸಕ್ತಿಯ ಜೊತೆಗೆ ಸಮಸ್ಯೆಗಳ ಪರಿಹಾರ, ವಿವರಗಳಿಗೆ ಗಮನ, ಮೆಷಿನ್ ಲರ್ನಿಂಗ್, ಪ್ರೋಗ್ರಾಮಿಂಗ್ ಮುಂತಾದ ಕೌಶಲಗಳಿರಬೇಕು. ಈಗ ನೀವು ಕೆಲಸ ಮಾಡುತ್ತಿರುವ ಕ್ಶೇತ್ರದಲ್ಲಿ ಮುಂದುವರಿಯುತ್ತಾ ಡೇಟಾ ಸೈನ್ಸ್ ಕ್ಷೇತ್ರದ ತಜ್ಞತೆಗಾಗಿ, ಅಲ್ಪಾವಧಿ
ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು. ಇದಾದ ನಂತರ, ವೃತ್ತಿಯ ದೃಷ್ಠಿಯಿಂದ ಈ ಕ್ಷೇತ್ರ ನಿಮಗೆ ಸೂಕ್ತವೆನಿಸಿದರೆ ಮತ್ತು ಹೆಚ್ಚಿನ ತಜ್ಞತೆ ಅಗತ್ಯವೆನಿಸಿದರೆ, ಸ್ನಾತಕೋತ್ತರ ಪದವಿಯನ್ನು ಮಾಡಬಹುದು.

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.