ADVERTISEMENT

ಜೈಲಿನಲ್ಲಿರುವ ಮಾವೋವಾದಿ ಮುಖಂಡನ ಪತ್ನಿಗೆ ಕಾಂಗ್ರೆಸ್ ಟಿಕೆಟ್

ಲೋಕಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 4:54 IST
Last Updated 24 ಮಾರ್ಚ್ 2019, 4:54 IST
ಶುಭಶ್ರೀ
ಶುಭಶ್ರೀ   

ಭುವನೇಶ್ವರ: ಜೈಲಿನಲ್ಲಿರುವ ಮಾವೋವಾದಿ ಮುಖಂಡ ಸವ್ಯಸಾಚಿ ಪಾಂಡಾ ಅವರ ಪತ್ನಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.

ರಾನ್‌ಪುರ ವಿಧಾನಸಭಾ ಕ್ಷೇತ್ರದಿಂದ ಶುಭಶ್ರೀ ಪಾಂಡಾ ಅಲಿಯಾಸ್ ಮಿಲಿ ಪಾಂಡಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.

ವಿಶ್ವಾಸವಿಟ್ಟು ಟಿಕೆಟ್ ನೀಡಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಹಾಗೂ ಕಾರ್ಯಾಧ್ಯಕ್ಷ ಚಿರಂಜೀಬ್ ಬಿಸ್ವಾಲ್ ಅವರಿಗೆ ಶುಭಶ್ರೀ ಧನ್ಯವಾದ ಹೇಳಿದ್ದಾರೆ.

ADVERTISEMENT

ಗೆದ್ದು ಬಂದಲ್ಲಿ, ಹಿಂದುಳಿದಿರುವ ರಾನ್‌ಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

2014ರಲ್ಲಿಯೂ ಅವರು ಇದೇ ಕ್ಷೇತ್ರದಿಂದ ಅಮಾ ಒಡಿಶಾ ಪಾರ್ಟಿಯಿಂದ ಸ್ಪರ್ಧಿಸಿದ್ದರು. ಸವ್ಯಸಾಚಿ ಅವರ ತಂದೆ ರಾಮ ಪಾಂಡಾ ಅವರು ಪ್ರಮುಖ ರಾಜಕಾರಣಿಯಾಗಿದ್ದು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಸವ್ಯಸಾಚಿ ಪಾಂಡಾ ಯಾರು?
2012ರಲ್ಲಿ ಇಟಲಿಯ ಇಬ್ಬರು ನಾಗರಿಕರ ಅಪಹರಣ ಸೇರಿದಂತೆ ಒಡಿಶಾದಲ್ಲಿ ಹಲವು ಹಿಂಸಾಚಾರಗಳನ್ನು ನಡೆಸಿದ್ದ ಆರೋಪದ ಮೇಲೆ ಸವ್ಯಸಾಚಿ ತಲೆಗೆ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. 2008ರಲ್ಲಿ ಹಿಂದೂ ಧಾರ್ಮಿಕ ಮುಖಂಡ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಹತ್ಯೆಯಲ್ಲೂ ಈತನ ಕೈವಾಡವಿದೆ ಎಂಬ ಆರೋಪಗಳಿದ್ದವು. ಈ ಘಟನೆ ಬಳಿಕ ಹಿಂದೂ–ಕ್ರಿಶ್ಚಿಯನ್ ಗಲಭೆಯೂ ನಡೆದಿತ್ತು.

2014ರ ಜುಲೈನಲ್ಲಿ ಸವ್ಯಸಾಚಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.ಶುಭಶ್ರೀ ಅವರೂ ಪೊಲೀಸರ ನಿಗಾವಣೆಯಲ್ಲಿದ್ದರು. ನಕ್ಸಲ್ ಚಟುವಟಿಕೆ ನಂಟು ಆರೋಪದಲ್ಲಿ ಎರಡು ವರ್ಷ ಜೈಲುಶಿಕ್ಷೆಯನ್ನೂ ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.