ADVERTISEMENT

‘ಮಂಡ್ಯ ಅಂದರೆ ಇಂಡಿಯಾ’ ಎಂದರೇನು?; ರೈತರ ಸಮಸ್ಯೆ ‘ಗೌಣ’, ಬರೀ ಭ್ರಮೆ

ಸಂಕಷ್ಟಗಳ ಅರಿವಿಲ್ಲದ ಅಭ್ಯರ್ಥಿಗಳು

ಎಂ.ಎನ್.ಯೋಗೇಶ್‌
Published 21 ಮಾರ್ಚ್ 2019, 20:25 IST
Last Updated 21 ಮಾರ್ಚ್ 2019, 20:25 IST
ಮೈಷುಗರ್‌ ಕಾರ್ಖಾನೆ ಸ್ತಬ್ಧಗೊಂಡ ನಂತರ ಮಂಡ್ಯದಲ್ಲಿ ಇಂತಹ ದೃಶ್ಯ ಕಾಣುತ್ತಿಲ್ಲ (ಸಂಗ್ರಹ ಚಿತ್ರ)
ಮೈಷುಗರ್‌ ಕಾರ್ಖಾನೆ ಸ್ತಬ್ಧಗೊಂಡ ನಂತರ ಮಂಡ್ಯದಲ್ಲಿ ಇಂತಹ ದೃಶ್ಯ ಕಾಣುತ್ತಿಲ್ಲ (ಸಂಗ್ರಹ ಚಿತ್ರ)   

* ರೈತರ ಸಮಸ್ಯೆಗಳ ಅರಿವಿಲ್ಲದ ಅಭ್ಯರ್ಥಿಗಳು

* ನಿಲ್ಲದ ರೈತರ ಆತ್ಮಹತ್ಯೆ

* ನಕಾರಾತ್ಮಕ ಅಂಶಗಳ ಮೇಲುಗೈ

ADVERTISEMENT

ಮಂಡ್ಯ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಂಡ್ಯ ಕಣ ರಣಾಂಗಣವಾಗಿದೆ. ರಾಜ್ಯದ ಇತರ ಕ್ಷೇತ್ರಗಳಲ್ಲಿ ಕಾಣದ ಅಬ್ಬರ ಇಲ್ಲಿ ಮನೆ ಮಾಡಿದೆ. ಮುಖಂಡರ ಘರ್ಷಣೆಯ ಎದುರು ಸಕ್ಕರೆ ನಾಡನ್ನು ಕಾಡುತ್ತಿರುವ ರೈತರ ಆತ್ಮಹತ್ಯೆ, ರೋಗಗ್ರಸ್ತ ಸಕ್ಕರೆ ಕಾರ್ಖಾನೆ, ಜಾರಿಯಾಗದ ನೀರಾವರಿ ಯೋಜನೆಗಳು ಗೌಣವಾಗಿವೆ.

2015ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದೊಂದು ವರ್ಷದಲ್ಲಿ 80 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಭತ್ತ, ಕಬ್ಬು ಬೆಳೆದು ನಷ್ಟ ಅನುಭವಿಸುತ್ತಿರುವ ಅನ್ನದಾತ ನಿತ್ಯ ಸಾವಿಗೆ ಕೊರಳೊಡ್ಡುತ್ತಿದ್ದಾನೆ. ಮುಖ್ಯಮಂತ್ರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ರಾಜ್ಯದಲ್ಲೇ ಅತೀ ಕಡಿಮೆ ಇಳುವರಿ ಬರುವ ಕಬ್ಬು ಬೆಳೆಯುತ್ತಿರುವ ರೈತರಿಗೆ ಬೇರೆ ಆಯ್ಕೆಗಳ ಬಗ್ಗೆ ಮಾರ್ಗದರ್ಶನವಿಲ್ಲ. ಸುಗ್ಗಿ ಕಾಲದಲ್ಲಿ ಭತ್ತ, ರಾಗಿ ಖರೀದಿ ಕೇಂದ್ರ ಆರಂಭವಾಗದೆ ರೈತರು ತಮ್ಮ ಬದುಕನ್ನು ದಲ್ಲಾಳಿಗಳ ಬಳಿ ಅಡ ಇಟ್ಟಿದ್ದಾರೆ. ಸರ್ಕಾರಿ ಸ್ವಾಮ್ಯದ ಮೈಷುಗರ್‌ ಕಾರ್ಖಾನೆ, ಸಹಕಾರಿ ಸ್ವಾಮ್ಯದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯ ಚಕ್ರಗಳು ತುಕ್ಕು ಹಿಡಿದಿವೆ. ಖಾಸಗಿ ಕಾರ್ಖಾನೆಗಳು ರೈತರಿಗೆ ಕಬ್ಬು ಪೂರೈಕೆಯ ಬಾಕಿ ಕೊಡದೆ ವಂಚಿಸಿವೆ. ಇನ್ನೂ ₹ 200 ಕೋಟಿಯಷ್ಟು ಬಾಕಿ ಬರಬೇಕಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಾಗಲಿ, ವಿವಿಧ ಪಕ್ಷಗಳ ಮುಖಂಡರಾಗಲಿ ಈ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಬರೀ ಮಾತು, ಬರೀ ಏಟು–ಎದಿರೇಟು, ಭ್ರಮೆಯಲ್ಲೇ ಮುಳುಗಿ ಏಳುತ್ತಿದ್ದಾರೆ.

‘ಮುತ್ಸದ್ಧಿ ರಾಜಕಾರಣದಿಂದ ಪುಢಾರಿ ರಾಜಕಾರಣಕ್ಕೆ ಮಂಡ್ಯ ಹೊರಳಿದೆ. 1996ರ ನಂತರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬಂದ ರಿಯಲ್‌ ಎಸ್ಟೇಟ್‌ ದಂಧೆಯಿಂದಾಗಿ ಅನ್ನಕೊಡುವ ಭೂಮಿ ಹಣವಂತರ ಪಾಲಾಯಿತು. ಪುಢಾರಿಗಳು ಚುನಾವಣೆಯಲ್ಲಿ ನಿಂತು ಗೆದ್ದರು, ಮುಗ್ಧ ಜನರನ್ನು ತಪ್ಪು ದಾರಿಗೆ ಎಳೆದರು. ರೈತರ ಸಮಸ್ಯೆ ಹೆಚ್ಚಾದವು. ಆ ಮೂಲಕ ಮಂಡ್ಯದ ಐತಿಹಾಸಿಕ ಪರಂಪರೆಗೆ ಅಪಚಾರ ಎಸಗಿದರು’ ಎಂದು ವಿಚಾರವಾದಿ ಹುಲ್ಕೆರೆ ಮಹಾದೇವು ನೆನಪಿಸಿಕೊಳ್ಳುತ್ತಾರೆ.

‘ಮಂಡ್ಯ ಅಂದರೆ ಇಂಡ್ಯಾ’ ಎಂದರೇನು?: ‘ಮಂಡ್ಯ ಅಂದರೆ ಇಂಡಿಯಾ’ ಎನ್ನುವ ಮಾತು ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ. ಆದರೆ ಮಾತಿನ ನಿಜವಾದ ಅರ್ಥವನ್ನು ಮರೆತಂತೆ ಕಾಣುತ್ತಿದೆ. ಶಿವಪುರ ಧ್ವಜ ಸತ್ಯಾಗ್ರಹದ ಮೂಲಕ ಜಿಲ್ಲೆ ರಾಷ್ಟ್ರದಾದ್ಯಂತ ಗುರುತಿಸಿಕೊಂಡಿತ್ತು. ಸಾಹುಕಾರ್‌ ಚನ್ನಯ್ಯ, ಎಚ್‌.ಕೆ.ವೀರಣ್ಣಗೌಡರ ರಾಜಕಾರಣ ಜವಾಹರ್‌ಲಾಲ್‌ ನೆಹರೂ, ಇಂದಿರಾ ಗಾಂಧಿ ಗಮನ ಸೆಳೆದಿದ್ದವು. ನಂತರದ ತಲೆಮಾರಿನಲ್ಲಿ ಶಂಕರಗೌಡರು ಸಕ್ಕರೆ ನಾಡಿನ ಅಸ್ಮಿತೆಯನ್ನು ಎತ್ತರಕ್ಕೆ ಏರಿಸಿದ್ದರು.

ಈ ತಲೆಮಾರಿನಲ್ಲಿ ಎಸ್‌.ಎಂ.ಕೃಷ್ಣವರೆಗೂ ಜಿಲ್ಲೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ದೆಹಲಿವರೆಗೂ ಸದ್ದು ಮಾಡುತ್ತಿದ್ದವು. ಈ ಕಾರಣಕ್ಕಾಗಿಯೇ ಮಂಡ್ಯ ಎಂದರೆ ಇಂಡಿಯಾ ಎಂಬ ಮಾತು ಹುಟ್ಟಿಕೊಂಡಿತು. ಆದರೆ ಈಗ ಈ ಮಾತಿನ ಅರ್ಥ ಬದಲಾಗಿದ್ದು ಬರೀ ನಕಾರಾತ್ಮಕ ವಿಚಾರಗಳಿಗಾಗಿಯೇ ಜಿಲ್ಲೆ ಗುರುತಿಸಿಕೊಳ್ಳುತ್ತಿದೆ.

‘ಮಂಡ್ಯ ಸಮಸ್ಯೆಗಳು ಸುಮಲತಾ, ನಿಖಿಲ್‌ ಇಬ್ಬರಿಗೂ ಗೊತ್ತಿಲ್ಲ. ಇಬ್ಬರೂ ಜನರಲ್ಲಿ ಭ್ರಮೆ ಹುಟ್ಟಿಸುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ಜಿಲ್ಲೆ ಹಿಂದೆಂದೂ ಕಂಡಿರಲಿಲ್ಲ’ ಎಂದು ಹಿರಿಯ ಸಾಹಿತಿ ಜಿ.ಟಿ.ವೀರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.