ADVERTISEMENT

ಮಿಥುನ್‌ ಸೋತರೆ ಕುದ್ರೋಳಿಗೆ ಕಾಲಿಡುವುದಿಲ್ಲ: ಜನಾರ್ದನ ಪೂಜಾರಿ ಶಪಥ

ಕಾಂಗ್ರೆಸ್‌ನ ಹಿರಿಯ ಮುಖಂಡ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 11:14 IST
Last Updated 25 ಮಾರ್ಚ್ 2019, 11:14 IST
ಮಂಗಳೂರಿನ ಪುರಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರ ಕೈಹಿಡಿದು ಶುಭ ಹಾರೈಸಿದರು. ಸಚಿವ ಯು.ಟಿ.ಖಾದರ್‌, ಜೆಡಿಎಸ್‌ ಮುಖಂಡ ಕೆ.ಅಮರನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್‌ ಇದ್ದರು.– ಪ್ರಜಾವಾಣಿ ಚಿತ್ರ
ಮಂಗಳೂರಿನ ಪುರಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರ ಕೈಹಿಡಿದು ಶುಭ ಹಾರೈಸಿದರು. ಸಚಿವ ಯು.ಟಿ.ಖಾದರ್‌, ಜೆಡಿಎಸ್‌ ಮುಖಂಡ ಕೆ.ಅಮರನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್‌ ಇದ್ದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ‘ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್‌ ರೈ ಸೋತರೆ ಚುನಾವಣಾ ಫಲಿತಾಂಶದ ಬಳಿಕ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ನಾನು ಕಾಲಿಡುವುದಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಶಪಥ ಮಾಡಿದರು

ನಗರದ ಪುರಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,‘ಈ ಚುನಾವಣೆಯಲ್ಲಿ ಮಿಥುನ್‌ ರೈ ಗೆಲ್ಲುತ್ತಾರೆ. ಕುದ್ರೋಳಿ ಗೋಕರ್ಣನಾಥನೇ ಭಾನುವಾರ ರಾತ್ರಿ ನನ್ನ ಕನಸಿನಲ್ಲಿ ಬಂದು ಈ ವಿಷಯ ತಿಳಿಸಿದ್ದಾನೆ. ಅವರು ಸೋತರೆ ನಾನು ಇನ್ನು ಕುದ್ರೋಳಿ ದೇವಸ್ಥಾನಕ್ಕೆ ಕಾಲಿಡುವುದಿಲ್ಲ’ ಎಂದರು.

‘ದೇವಸ್ಥಾನಕ್ಕೆ ಹೋಗುವಂತೆ ಯಾವಾಗಲೂ ಉಳ್ಳಾಲ ದರ್ಗಾಕ್ಕೆ ಹೋಗುತ್ತಿದ್ದೆ. ಚರ್ಚ್‌ಗಳಿಗೂ ಹೋಗುತ್ತಿದ್ದೆ. ಮಿಥುನ್‌ ಸೋತರೆ ದರ್ಗಾ ಮತ್ತು ಚರ್ಚ್‌ಗಳಿಗೆ ಹೋಗುವುದನ್ನೂ ನಿಲ್ಲಿಸುತ್ತೇನೆ’ ಅಲ್ಲಿಗೂ ಹೋಗುವುದಿಲ್ಲ' ಎಂದರು.

ADVERTISEMENT

ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲ್‌ ಭಾನುವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಾರಿ ಅವರನ್ನು ಭೇಟಿಮಾಡಿ ಆಶೀರ್ವಾದ ಪಡೆದಿದ್ದರು. ‘ಈ ಚುನಾವಣೆಯಲ್ಲಿ ನಳಿನ್‌ ಅವರನ್ನು ಸೋಲಿಸಲು ಸಾಧ್ಯವಿಲ್ಲ’ ಎಂದು ಪೂಜಾರಿ ಹೇಳಿಕೆ ನೀಡಿದ್ದರು. ಸೋಮವಾರ ಬೆಳಿಗ್ಗೆಯೇ ಪೂಜಾರಿ ಅವರನ್ನು ಭೇಟಿಮಾಡಿದ ಮಿಥುನ್‌ ರೈ ಅವರ ಆಶೀರ್ವಾದ ಪಡೆದಿದ್ದರು.

ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಜನಾರ್ದನ ಪೂಜಾರಿ ಪಾಲ್ಗೊಂಡರು. ವಿವಿಧ ದೇವಾಲಯ, ಮಸೀದಿ, ಚರ್ಚ್‌ಗಳ ಭೇಟಿ ಮುಗಿಸಿ ಸಭೆಗೆ ಬಂದ ಮಿಥುನ್‌, ವೇದಿಕೆಯಲ್ಲಿದ್ದ ಪೂಜಾರಿ ಮತ್ತು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ಕಾಲಿಗೆರಗಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಮಿಥುನ್‌ ರೈ ಅವರ ತಂದೆ ಡಾ.ಮಹಾಬಲ ರೈ, ಅಣ್ಣಂದಿರಾದ ಡಾ.ಮಯೂರ್‌ ರೈ ಮತ್ತು ಡಾ.ಮನೀಶ್‌ ರೈ ಅವರನ್ನು ವೇದಿಕೆ ಮೇಲೆ ಕರೆದ ಪೂಜಾರಿ, ಮಿಥುನ್‌ ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡೇ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.