ADVERTISEMENT

17ನೇ ಲೋಕಸಭೆ; ಹೆಚ್ಚಿದ ಮಹಿಳಾ ಪ್ರಾತಿನಿಧ್ಯ

ಶೆಮಿಜ್‌ ಜಾಯ್‌
Published 28 ಮೇ 2019, 5:53 IST
Last Updated 28 ಮೇ 2019, 5:53 IST
   

ನವದೆಹಲಿ: 17ನೇ ಲೋಕಸಭೆ ಹೊಸ ದಾಖಲೆ ಬರೆದಿದೆ. 78 ಮಹಿಳೆಯರು ಆಯ್ಕೆಯಾಗಿದ್ದು, ಇದು ಈವರೆಗಿನ ಅತ್ಯಧಿಕ ಸಂಖ್ಯೆ. ಈ ಚುನಾವಣೆಯಲ್ಲಿ 726 ಮಹಿಳೆಯರು ಸ್ಪರ್ಧಿಸಿದ್ದರು.

1957ರ ಚುನಾವಣೆಯಲ್ಲಿ 22 ಮಹಿಳೆಯರು ಆಯ್ಕೆಯಾಗಿದ್ದರು. ಅದು ಈವರೆಗಿನ ಕನಿಷ್ಠ ಸಂಖ್ಯೆ.

ಅವಧಿ ಪೂರೈಸುತ್ತಿರುವ 16ನೇ ಲೋಕಸಭೆಗೆ 61 ಮಹಿಳೆಯರು ಚುನಾಯಿತರಾಗಿದ್ದರು. ಐದು ವರ್ಷಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ನಾಲ್ವರು ಮಹಿಳೆಯರು ಆಯ್ಕೆ ಯಾಗಿದ್ದು, ಒಟ್ಟು ಸಂಖ್ಯೆ 65ಕ್ಕೆ ಏರಿತ್ತು.

ADVERTISEMENT

ಹಾಲಿ ಸಂಸದೆಯರ ಪೈಕಿ 41 ಮಂದಿ ಮತ್ತೆ ಸ್ಪರ್ಧಿಸಿದ್ದು, ಇವರಲ್ಲಿ ಸೋನಿಯಾಗಾಂಧಿ, ಹೇಮಾ ಮಾಲಿನಿ, ಕಿರಣ್‌ ಖೇರ್ ಸೇರಿ 27 ಮಂದಿ ಪುನರಾಯ್ಕೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಮೃತಿ ಇರಾನಿ ಮತ್ತು ಸಾಧ್ವಿ ಪ್ರಜ್ಞಾ ಠಾಕೂರ್‌ ತಮ್ಮ ಪ್ರತಿಸ್ಪರ್ಧಿಗಳ ಕಾರಣಕ್ಕೆ ಹೆಚ್ಚು ಗಮನ ಸೆಳೆದಿದ್ದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಅಮೇಠಿಯಲ್ಲಿ ಗೆದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಯಬರೇಲಿ ಕ್ಷೇತ್ರದಿಂದ ಪುನರಾಯ್ಕೆಯಾದ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಬಿಜೆಪಿಯ ಮೇನಕಾ ಗಾಂಧಿ, ವಿವಾದಿತ ಹೇಳಿಕೆಯಿಂದ ಗಮನ ಸೆಳೆದಿದ್ದ ಬಿಜೆಪಿಯ ಪ್ರಜ್ಞಾಸಿಂಗ್‌ ಠಾಕೂರ್, ಎನ್‌ಸಿಪಿಯ ಸುಪ್ರಿಯಾ ಸುಳೆ, ಡಿಎಂಕೆಯ ಕನಿಮೊಳಿ, ಪಕ್ಷೇತರ ಸದಸ್ಯೆ ಕರ್ನಾಟಕದ ಸುಮಲತಾ ಸೇರಿದ್ದಾರೆ. ಬಿಜೆಪಿಯ ಅಭ್ಯರ್ಥಿ ರಂಜನ್‌ಬೆನ್‌ ಭಟ್‌ ಅವರು ವಡೋದರಾ ಕ್ಷೇತ್ರದಿಂದ 5,89,177 ಮತಗಳ ಅಂತರದಿಂದ ಜಯಗಳಿಸಿದ್ದು, ಇದು ಮಹಿಳಾ ಸ್ಪರ್ಧಿಗಳಲ್ಲಿಯೇ ಅತ್ಯಧಿಕ ಗೆಲುವಿನ ಅಂತರವಾಗಿದೆ.

ಅಂತೆಯೇ ಪರಾಭವಗೊಂಡವರಲ್ಲಿ ಪ್ರಮುಖರೆಂದರೆ ಮಹಿಳಾ ಕಾಂಗ್ರೆಸ್‌ ಮುಖ್ಯಸ್ಥೆ ಸುಶ್ಮಿತಾ ದೇವ್, ತೃಣಮೂಲ ಕಾಂಗ್ರೆಸ್‌ನ ಮೂನ್ ಮೂನ್ ಸೆನ್, ಕಾಂಗ್ರೆಸ್‌ನ ರಂಜಿತಾ ರಂಜನ್‌ ಸೇರಿದ್ದಾರೆ.

ಬಿಜೆಪಿಯಲ್ಲಿ ಹೆಚ್ಚು: ಬಿಜೆಪಿಯಿಂದ ಆಯ್ಕೆಯಾದವರಲ್ಲಿ ಶೇ 10ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಬಿಜೆಪಿಯ 303 ಸಂಸದರಲ್ಲಿ ಮಹಿಳೆಯರ ಸಂಖ್ಯೆ 41.

ತೃಣಮೂಲ ಕಾಂಗ್ರೆಸ್‌ನಿಂದ 11, ಬಿಜೆಡಿಯಿಂದ 5 ಮಹಿಳೆಯರು ಸಂಸತ್‌ ಪ್ರವೇಶಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌, ಬಿಜೆಡಿ ಕನಿಷ್ಠ ಶೇ 33ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಕೆಟ್‌ ನೀಡಿತ್ತು. ಕಾಂಗ್ರೆಸ್‌ನಿಂದ ಐವರು ಮಹಿಳೆ ಯರು ಆಯ್ಕೆಯಾಗಿದ್ದರೆ, ವೈಎಸ್‌ಆರ್ ಕಾಂಗ್ರೆಸ್‌ನಿಂದ ನಾಲ್ವರು ಗೆದ್ದಿದ್ದಾರೆ. ಅಕಾಲಿ ದಳ, ಶಿವಸೇನಾ, ಎನ್‌ಸಿಪಿ, ಅಪ್ನಾದಳ, ಡಿಎಂಕೆ, ಎನ್‌ಪಿಪಿ, ಬಿಎಸ್‌ಪಿಯಿಂದ ತಲಾ ಒಬ್ಬರು ಗೆದ್ದಿದ್ದಾರೆ.

ಮಹಿಳೆಯರ ಸ್ಪರ್ಧೆ ಈ ಚುನಾವಣೆ ಯಲ್ಲಿ ಗಣನೀಯವಾಗಿ ಏರಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಮಹಿಳಾ ಸ್ಪರ್ಧಿಗಳ ಸಂಖ್ಯೆ ಶೇ 8.38ರಷ್ಟು ಏರಿದ್ದರೆ ಪುರುಷ ಸ್ಪರ್ಧಿಗಳ ಸಂಖ್ಯೆ ಶೇ 4.7ರಷ್ಟು ಕುಸಿದಿತ್ತು. 2014ರಲ್ಲಿ ಒಟ್ಟು 668 ಮಹಿಳೆ ಯರು ಕಣದಲ್ಲಿದ್ದರೆ, 2019ರಲ್ಲಿ ಇವರ ಸಂಖ್ಯೆ 726ಕ್ಕೆ ಏರಿದೆ. ಪುರುಷ ಸ್ಪರ್ಧಿಗಳ ಸಂಖ್ಯೆ 2014ರಲ್ಲಿ 7,577 ಇದ್ದರೆ, ಈ ಚುನಾವಣೆಯಲ್ಲಿ 7,215ಕ್ಕೆ ಇಳಿದಿದೆ.

ಟಿಟಿವಿ ದಿನಕರನ್‌ ನೇತೃತ್ವದ ಎಎಂಎಂಕೆ ಪಕ್ಷ ಒಬ್ಬ ಮಹಿಳೆಗೂ ಟಿಕೆಟ್‌ ನೀಡಿಲ್ಲ. ಎಐಎಡಿಎಂಕೆ, ಶಿವಸೇನಾ ತಲಾ ಒಬ್ಬರಿಗೆ ಟಿಕೆಟ್‌ ನೀಡಿತ್ತು.

ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್‌ (ಶೇ 40.5), ಬಿಜೆಡಿ (ಶೇ 33) ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಟಿಕೆಟ್ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.