ADVERTISEMENT

ಭೋವಿ ಗುರುಪೀಠಕ್ಕೆ ಬಿ.ಎಸ್‌.ಯಡಿಯೂರಪ್ಪ ಭೇಟಿ: ಬಿಜೆಪಿ ವಿರುದ್ಧ ಭಕ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 15:08 IST
Last Updated 26 ಮಾರ್ಚ್ 2019, 15:08 IST

ಚಿತ್ರದುರ್ಗ: ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮನವೊಲಿಸಲು ಭೋವಿ ಗುರುಪೀಠಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಬಗ್ಗೆ ಯುವಕನೊಬ್ಬ ತೀವ್ರ ಅಸಮಾಧಾನ ಹೊರಹಾಕಿದರು. ಇದರಿಂದ ಬಿಜೆಪಿ ನಾಯಕರು ಮುಜುಗರ ಅನುಭವಿಸಬೇಕಾಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಭೋವಿ ಸಮುದಾಯದ ಮುಖಂಡರ ನಡುವೆ ವಾಗ್ವಾದ ಕೂಡ ನಡೆಯಿತು.

ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಹಾಗೂ ಯಡಿಯೂರಪ್ಪ ಅವರು ಗುರುಪೀಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದರು. ಶಾಲು ಹೊದಿಸಿ ಸ್ವಾಮೀಜಿ ಅವರನ್ನು ಗೌರವಿಸಿದರು. ಬಳಿಕ ಮಠದ ಕೊಠಡಿಯಲ್ಲಿ ಸ್ವಾಮೀಜಿ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದರು. ಶಾಸಕರು ಸೇರಿ ಹಲವು ಮುಖಂಡರು ಹೊರಭಾಗದ ಮತ್ತೊಂದು ಕೊಠಡಿಯಲ್ಲಿ ಆಸೀನರಾಗಿದ್ದರು.

ADVERTISEMENT

ಈ ವೇಳೆ ಕೊಠಡಿಯನ್ನು ಪ್ರವೇಶಿಸಿದ ಯುವಕರ ಗುಂಪು ಶಾಸಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮಠಕ್ಕೆ ಬಂದಿರುವ ಔಚಿತ್ಯವನ್ನು ಪ್ರಶ್ನಿಸಿದರು. ಭೋವಿ ಸಮುದಾಯದ ನಾಯಕರಿಗೆ ಉದ್ದೇಶ ಪೂರ್ವಕವಾಗಿ ಟಿಕೆಟ್‌ ತಪ್ಪಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಬಿಜೆಪಿ ನಿಯೋಗ ಭೋವಿ ಗುರುಪೀಠಕ್ಕೆ ಭೇಟಿ ನೀಡುವುದಕ್ಕೂ ಮುನ್ನವೇ ಸಮುದಾಯದ ಕೆಲ ಯುವಕರು ಗುಂಪು ಕಟ್ಟಿಕೊಂಡು ಕಾಯುತ್ತಿದ್ದರು. ಯಡಿಯೂರಪ್ಪ ಅವರಿಂದ ಸಮುದಾಯಕ್ಕೆ ಅನ್ಯಾಯವಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅವರ ಪುತ್ರನನ್ನು ಸೋಲಿಸುತ್ತೇವೆ ಎಂದು ಕೂಗುತ್ತಿದ್ದರು. ಯುವಕರಿಗೆ ಗದರಿದ ಸ್ವಾಮೀಜಿ, ಮುಜುಗರ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ತಾಕೀತು ಮಾಡಿದ್ದರು.

‘ನಮ್ಮಿಂದ ತಪ್ಪಾಗಿದೆ’:ಕೋಲಾರ ಅಥವಾ ಚಿತ್ರದುರ್ಗದಲ್ಲಿ ಭೋವಿ ಸಮುದಾಯಕ್ಕೆ ಟಿಕೆಟ್‌ ನೀಡಬೇಕಿತ್ತು. ನಮ್ಮ ಕಡೆಯಿಂದ ತಪ್ಪಾಗಿದೆ ಎಂದು ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಸ್ವಾಮೀಜಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಭೋವಿ ಸಮುದಾಯಕ್ಕೆ ಸಾಕಷ್ಟು ಅವಕಾಶ ನೀಡಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ 9 ಮಂದಿಗೆ ಟಿಕೆಟ್‌ ನೀಡಿದ್ದೆವು. ಈ ಪೈಕಿ ನಾಲ್ವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಭೋವಿ ಸಮುದಾಯ ಬಿಜೆಪಿ ಜೊತೆ ಇದೆ’ ಎಂದು ಹೇಳಿದರು.

‘ಬಿಜೆಪಿ ಜತೆ ಪ್ರಯಾಣ ಸಾಧ್ಯವಿಲ್ಲ’:ಇನ್ನು ಮುಂದೆ ಬಿಜೆಪಿ ಜೊತೆ ಪ್ರಯಾಣ ಸಾಧ್ಯವಿಲ್ಲ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಯಡಿಯೂರಪ್ಪ ಅವರಿಗೆ ತಿಳಿಸಿದರು.

‘ಸಮುದಾಯದ ಹಿತವೇ ಮುಖ್ಯ. ಸಮಾಜಕ್ಕೆ ಧಕ್ಕೆಯಾಗುವಂಥ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಟಿಕೆಟ್ ಪಡೆದಿರುವ ಅಭ್ಯರ್ಥಿ, ಭೋವಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಸದ್ಯಕ್ಕೆ ಬಿಜೆಪಿ ಜೊತೆ ಪ್ರಯಾಣಿಸಲು ಸಾಧ್ಯವಿಲ್ಲ. ರಾಜ್ಯದ ಬೇರೆ ಜಿಲ್ಲೆಗಳ ವಿಷಯವನ್ನು ಸಮಾಜದ ರಾಜಕಾರಣಿಗಳ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.