ADVERTISEMENT

ಪ್ರಮೋದ್ ಮಧ್ವರಾಜ್ ವಿರುದ್ಧ ಪ್ರಚಾರ: ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 16:41 IST
Last Updated 23 ಮಾರ್ಚ್ 2019, 16:41 IST
ಪ್ರಮೋದ್ ಮಧ್ವರಾಜ್
ಪ್ರಮೋದ್ ಮಧ್ವರಾಜ್   

ಉಡುಪಿ: ‘ಲೋಕಸಭಾ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾ‌ಜ್ ಅವರಿಗೆ ಮತ ಹಾಕಬೇಡಿ’ ಎಂದು ಎಲ್ಲೆಡೆ ಪ್ರಚಾರ ಮಾಡುವುದಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಹೇಳಿದರು.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,‘₹ 25,000, ₹ 50,000 ಸಾಲ ತೆಗೆದುಕೊಂಡ ರೈತರು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ₹ 1.10 ಕೋಟಿ ಆಸ್ತಿ ಅಡಮಾನವಿಟ್ಟು, ₹ 193 ಕೋಟಿ ಸಾಲ ಪಡೆದ ಮಧ್ವರಾಜ್ ಆರಾಮಾಗಿದ್ದಾರೆ. ಇಂಥವರು ಲೋಕಸಭೆ ಪ್ರವೇಶಿಸಬಾರದು’ ಎಂದು ವಾಗ್ದಾಳಿ ನಡೆಸಿದರು.

‘ಪ್ರಮೋದ್ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡಿರುವಾಗ, ನಾನು ಚುನಾವಣಾ ಪ್ರಕ್ರಿಯೆ ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಪ್ರಮೋದ್ ವಿರುದ್ಧ ಯಾರೇ ಪ್ರಚಾರಕ್ಕೆ ಕರೆದರೂ ಹೋಗುತ್ತೇನೆ. ಹಗರಣದ ದಾಖಲೆಗಳನ್ನು ಜನರ ಮುಂದಿಡುತ್ತೇನೆ’ ಎಂದು ಅಬ್ರಾಹಂ ಅಬ್ಬರಿಸಿದರು.

ADVERTISEMENT

‘ಕಿರುಕುಳ ನೀಡುವ ಉದ್ದೇಶದಿಂದಲೇ ನನ್ನ ವಿರುದ್ಧ ಕ್ರಿಮಿನಲ್‌ ಪ್ರಕರಣ ಹಾಕಿದ್ದಾರೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಇದಕ್ಕೆ ಪ್ರತಿಯಾಗಿ ಶೀಘ್ರವೇ ಪ್ರಮೋದ್ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಪ್ರಮೋದ್‌ಗೆ ತಾಕತ್ತಿದ್ದರೆ ನನ್ನ ವಿರುದ್ಧ ₹ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲಿ. ಇಲ್ಲವಾದರೆ, ಹಗರಣ ಮಾಡಿರುವುದಾಗಿ ಒಪ್ಪಿಕೊಳ್ಳಲಿ’ ಎಂದು ಅಬ್ರಾಹಂ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.