ಚಾಮರಾಜನಗರ: ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಹ್ಯಾಟ್ರಿಕ್ ಗೆಲುವಿನತ್ತ ದೃಷ್ಟಿ ಹಾಯಿಸಿರುವ ಜೆಡಿಎಸ್– ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ ಹಾಗೂ ಐದು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ನಡುವಿನ ಜಿದ್ದಾಜಿದ್ದಿನ ಕದನಕ್ಕೆ ಈ ಚುನಾವಣೆ ಸಾಕ್ಷಿಯಾಗಲಿದೆ. ಇಬ್ಬರಿಗೂ ಪೈಪೋಟಿ ನೀಡಲು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ನಾಲ್ವರು ಪಕ್ಷೇತರರು ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ. ಉತ್ತಮ ಪ್ರಜಾಕೀಯ ಪಾರ್ಟಿ, ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಮತ್ತು ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿಗಳೂ ಅಖಾಡದಲ್ಲಿದ್ದಾರೆ.
10 ವರ್ಷಗಳಿಂದ ಸಂಸದರಾಗಿರುವ ಆರ್.ಧ್ರುವನಾರಾಯಣ ಅವರು ‘ಕಾಯಕ ಯೋಗಿ’ ಎಂದೇ ಕ್ಷೇತ್ರದಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಕೇಂದ್ರೀಯ ವಿದ್ಯಾಲಯ, ಏಕಲವ್ಯ ಶಾಲೆಯಂತಹ ಶಿಕ್ಷಣ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತರುವ ಮೂಲಕ ಜನರ ನಡುವೆ ಜನಪ್ರಿಯರಾಗಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಅಲೆಯನ್ನು ಹಿಮ್ಮೆಟ್ಟಿಸಿ 1.41 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ.
ಕೊನೆ ಕ್ಷಣದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿರುವ ‘ದಲಿತ ನಾಯಕ’, ಬಿಜೆಪಿಯ ಶ್ರೀನಿವಾಸ ಪ್ರಸಾದ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮದೇ ವರ್ಚಸ್ಸು ಅವಲಂಬಿಸಿದ್ದಾರೆ. 20 ವರ್ಷಗಳ ನಂತರ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ‘ಕೇಂದ್ರ ಸರ್ಕಾರದಿಂದ ಅನುದಾನ ಕಡಿಮೆ ಬರುತ್ತಿದ್ದ ಕಾಲದಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ’ ಎಂದು ಪ್ರಚಾರ ನಡೆಸಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರ ಬರಲು ಬೆಂಬಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಅನಾರೋಗ್ಯ, ಇಳಿವಯಸ್ಸು ಅವರ ಪಾಲಿಗೆ ದುಬಾರಿಯಾಗಿದೆ.
ಚಿತ್ರಣ ಬದಲು: ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ರಾಜಕೀಯ ಚಿತ್ರಣ ಈ ಬಾರಿ ಬದಲಾಗಿದೆ. 2014ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಒಂದರಲ್ಲಿ ಜೆಡಿಎಸ್ ಶಾಸಕರಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ನಾಲ್ಕರಲ್ಲಿ ಕಾಂಗ್ರೆಸ್, ಎರಡರಲ್ಲಿ ಬಿಜೆಪಿ ಶಾಸಕರಿದ್ದರೆ, ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಹಾಗೂ ತಿ.ನರಸೀಪುರದಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ. 2014ರಲ್ಲಿ ಎಂಟೂ ಕ್ಷೇತ್ರಗಳಲ್ಲೂ ಧ್ರುವ
ನಾರಾಯಣ ಮುನ್ನಡೆ ಸಾಧಿಸಿದ್ದರು. ಮೈತ್ರಿಯ ಭಾಗವಾಗಿ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸದಿರುವುದರಿಂದ ಕಾಂಗ್ರೆಸ್‌ಗೆ ಇನ್ನಷ್ಟು ಬಲ ಬಂದಿದೆ.
ದೂರವಾದ ಮುನಿಸು: ವಿಧಾನಸಭೆ ಚುನಾವಣೆ ನಂತರ ಧ್ರುವನಾರಾಯಣ ಅವರೊಂದಿಗೆ ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಅಂತರ ಕಾಯ್ದಕೊಂಡಿದ್ದರು. ಶ್ರೀನಿವಾಸ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಂತೆ ಧ್ರುವನಾರಾಯಣ ಅವರೊಂದಿಗೆ ಕೈಜೋಡಿಸಿದ್ದಾರೆ.
ಒಗ್ಗಟ್ಟು ಪ್ರದರ್ಶನ: ಬಿಜೆಪಿಯಲ್ಲಿ ಟಿಕೆಟ್‌ಗೆ ಪೈಪೋಟಿ ಹೆಚ್ಚಿದ್ದರಿಂದ ಮುಖಂಡರ ನಡುವೆ ಭಿನ್ನಮತಕ್ಕೂ ಕಾರಣವಾಗಿತ್ತು. ಪ್ರಸಾದ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಎಲ್ಲವೂ ತಣ್ಣಗಾಯಿತು. ಪಕ್ಷದ ಸ್ಥಳೀಯ ನಾಯಕತ್ವದ ಬಗ್ಗೆ ಕೆಲವು ಮುಖಂಡರಲ್ಲಿ ಅಸಮಾಧಾನವಿ
ದ್ದರೂ ಎಲ್ಲರೂ ಒಟ್ಟಾಗಿ ಪ್ರಚಾರ ನಡೆಸುತ್ತಿದ್ದಾರೆ.
ಬಿಎಸ್‌ಪಿ ಪೈಪೋಟಿ:ಕ್ಷೇತ್ರದಲ್ಲಿ ಬಿಜೆಪಿ– ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೂ, ಎರಡೂ ಪಕ್ಷಗಳಿಗೂ ಬಿಎಸ್‌ಪಿ ಪೈಪೋಟಿ ನೀಡುತ್ತಿದೆ.ತನ್ನದೇ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರ ಡಾ.ಎಂ.ಶಿವಕುಮಾರ್ ಅವರನ್ನು ಕಣಕ್ಕಿಳಿಸಿದೆ.ಈ ಬಾರಿ ಒಂದು ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿರುವುದು ಅದರ ಉತ್ಸಾಹವನ್ನು ಹೆಚ್ಚಿಸಿದೆ.
ಜಾತಿ ಲೆಕ್ಕಾಚಾರ: ಜಾತಿ ಲೆಕ್ಕಾಚಾರವೂ ಜೋರಾಗಿ ನಡೆಯುತ್ತಿದೆ. ದಲಿತ, ಲಿಂಗಾಯತರ ಮತಗಳು ನಿರ್ಣಾಯಕ. ನಾಯಕ, ಉಪ್ಪಾರ, ಕುರುಬ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತದಾರರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯಗಳ ನಿಲುವೂ ಫಲಿತಾಂಶ ನಿರ್ಧರಿಸುತ್ತದೆ.
ಶ್ರೀನಿವಾಸ ಪ್ರಸಾದ್ ಹಾಗೂ ಬಿಎಸ್‌ಪಿ ಅಭ್ಯರ್ಥಿಯಿಂದಾಗಿ ದಲಿತ ಮತಗಳು ವಿಭಜನೆಯಾಗಲಿವೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದರೆ, ದಲಿತರ ಮತಗಳನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ಜೆಡಿಎಸ್ ಬೆಂಬಲವಿರುವುದರಿಂದ ಮತವಿಭಜನೆಯಾದರೂ ಹೆಚ್ಚಿನ ಪರಿಣಾಮವಾಗದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಮುಖಂಡರದ್ದು.
ದಲಿತರೊಂದಿಗೆ, ಮೇಲ್ವರ್ಗದವರ ಸಾಂಪ್ರದಾಯಿಕ ಮತಗಳನ್ನು ಬಿಜೆಪಿ ನೆಚ್ಚಿಕೊಂಡಿದೆ.ಬಿಎಸ್‌ಪಿಯು ದಲಿತರು, ಹಿಂದುಳಿದ ವರ್ಗಗಳ ಮತಗಳನ್ನು ಕೇಂದ್ರೀಕರಿಸಿದೆ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂಬುದು ಕಾಂಗ್ರೆಸ್ ನಿರೀಕ್ಷೆ.
ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲ್ಲುವುದು ಖಚಿತ
-ಆರ್.ಧ್ರುವನಾರಾಯಣ,ಕಾಂಗ್ರೆಸ್ ಅಭ್ಯರ್ಥಿ.
***
ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದೆ. ಬಿಜೆಪಿ ಬಗ್ಗೆ ಜನರಿಗೆ ಒಲವಿಲ್ಲ. ಹಾಗಾಗಿ, ನನ್ನ ಗೆಲುವು ಸುಲಭವಾಗಲಿದೆ
-ಡಾ.ಎಂ.ಶಿವಕುಮಾರ್, ಬಿಎಸ್‌ಪಿ ಅಭ್ಯರ್ಥಿ
***
ನಾಲ್ಕು ದಶಕಗಳಿಂದ ರಾಜಕೀಯ ದಲ್ಲಿದ್ದೇನೆ. ಕ್ಷೇತ್ರದ ಜನರ ಸಂಪರ್ಕ ಈಗಲೂ ಇಟ್ಟುಕೊಂಡಿದ್ದೇನೆ. ಮತ ದಾರರ ಪ್ರತಿಕ್ರಿಯೆ ಉತ್ತಮವಾಗಿದೆ.
- ವಿ.ಶ್ರೀನಿವಾಸ ಪ್ರಸಾದ್,ಬಿಜೆಪಿ ಅಭ್ಯರ್ಥಿ
**
ಯುವ ಮತದಾರರು ಏನಂತಾರೆ?
ನಾನು ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ಜನಪರವಾಗಿ ಕೆಲಸ ಮಾಡುವವರು ಮತ್ತು ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವವರಿಗೆ ಮತ ಹಾಕುತ್ತೇನೆ
–ಎನ್.ದಿಲೀಪ್ ಕುಮಾರ್, ಕೊಳ್ಳೇಗಾಲ
********
ಪಕ್ಷಗಳು ಯುವ ಅಭ್ಯರ್ಥಿಗೆ ಅವಕಾಶ ಕೊಡಬೇಕು. ಜನರ ಕಷ್ಟಗಳಿಗೆ ಸ್ಪಂದಿಸುವ, ಅಭಿವೃದ್ಧಿ ಪರವಾಗಿ ದುಡಿಯುವವರನ್ನು ಆಯ್ಕೆ ಮಾಡಬೇಕಾಗಿರುವುದು ಮತದಾರರ ಕರ್ತವ್ಯ. ಅಂತಹವರಿಗೇ ನನ್ನ ಮತ
–ಮಂಜುನಾಥ್, ಭೀಮನಬೀಡು, ಗುಂಡ್ಲುಪೇಟೆ
ಪಕ್ಷಗಳ ಬಲಾಬಲ
ಕಾಂಗ್ರೆಸ್–4, ಬಿಜೆಪಿ–2, ಜೆಡಿಎಸ್–1, ಬಿಎಸ್‌ಪಿ– 1
–––––––––––––––
ಚಾಮರಾಜನಗರ–ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್)
ಕೊಳ್ಳೇಗಾಲ–ಎನ್.ಮಹೇಶ್ (ಬಿಎಸ್‌ಪಿ)
ಹನೂರು–ಆರ್.ನರೇಂದ್ರ (ಕಾಂಗ್ರೆಸ್)
ಗುಂಡ್ಲುಪೇಟೆ– ಸಿ.ಎಸ್.ನಿರಂಜನ್‌ಕುಮಾರ್ (ಬಿಜೆಪಿ)
ತಿ.ನರಸೀಪುರ– ಅಶ್ವಿನ್ ಕುಮಾರ್ (ಜೆಡಿಎಸ್)
ನಂಜನಗೂಡು– ಹರ್ಷವರ್ಧನ್ (ಬಿಜೆಪಿ)
ವರುಣಾ– ಡಾ.ಯತೀಂದ್ರ (ಕಾಂಗ್ರೆಸ್)
ಎಚ್.ಡಿ.ಕೋಟೆ– ಅನಿಲ್ ಚಿಕ್ಕಮಾದು (ಕಾಂಗ್ರೆಸ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.