ADVERTISEMENT

‘ಕೈ’ ಭದ್ರಕೋಟೆಯಲ್ಲಿ ‘ಕಮಲ’ಕ್ಕೆ ಅರಳುವ ತವಕ

ಮುನಿಯಪ್ಪರ ಗೆಲುವಿನ ನಾಗಲೋಟ: ಜಯದ ಖಾತೆ ತೆರೆಯದ ಬಿಜೆಪಿ

ಜೆ.ಆರ್.ಗಿರೀಶ್
Published 3 ಮೇ 2019, 11:05 IST
Last Updated 3 ಮೇ 2019, 11:05 IST
ಕೆ.ಎಚ್‌.ಮುನಿಯಪ್ಪ
ಕೆ.ಎಚ್‌.ಮುನಿಯಪ್ಪ   

ಕೋಲಾರ: ರಾಜ್ಯದ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ರಾಜಕೀಯದ ಒಳ ಸುಳಿಗಳು ರೋಚಕ. ಕ್ಷೇತ್ರದಲ್ಲಿ ಈವರೆಗೆ ನಡೆದ ಚುನಾವಣೆಗಳ ಫಲಿತಾಂಶ ಅವಲೋಕಿಸಿದರೆ ಮತದಾರರು ಇಲ್ಲಿ ವ್ಯಕ್ತಿಗಿಂತ ಪಕ್ಷಕ್ಕೆ ಮಣೆ ಹಾಕಿದ್ದೇ ಹೆಚ್ಚು.

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಕ್ಷೇತ್ರದಲ್ಲಿ ತೆಲುಗು ಭಾಷೆಯ ಗಾಢ ಪ್ರಭಾವವಿದೆ. ಇಲ್ಲಿನ ಜನರ ಆಡು ನುಡಿ ಹಾಗೂ ವ್ಯಾವಹಾರಿಕ ಭಾಷೆ ತೆಲುಗಾದರೂ ಬದುಕು ಕನ್ನಡ. ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟ ಜಿಲ್ಲೆಯು ಈ ಹಿಂದೆ ಜನಪರ ರಾಜಕಾರಣಕ್ಕೆ ಹೆಸರಾಗಿತ್ತು.

ವರ್ಷಗಳು ಉರುಳಿದಂತೆ ಕ್ಷೇತ್ರದಲ್ಲಿ ಜನಪರ ರಾಜಕಾರಣ ಮೂಲೆ ಗುಂಪಾಗಿ ಓಲೈಕೆ ರಾಜಕಾರಣ ಮುನ್ನೆಲೆಗೆ ಬಂದಿದೆ. ಕೈಗಾರೀಕರಣ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮವು ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಜಾತಿ, ಹಣ ಹಾಗೂ ತೋಳ್ಬಲದ ರಾಜಕೀಯ ಮೇರೆ ಮೀರಿದ್ದು, ಎಲ್ಲೆಲ್ಲೂ ಝಣ ಝಣ ಕಾಂಚಣದ್ದೇ ಸದ್ದು.

ADVERTISEMENT

ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್‌, ಬಂಗಾರಪೇಟೆ ಹಾಗೂ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾಸಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ದಲಿತ, ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಾಂಗ್ರೆಸ್‌ ಮೇಲುಗೈ

ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಹಿಂದಿನ 10 ಚುನಾವಣೆಗಳಲ್ಲಿ ಒಂದು ಬಾರಿ ಮಾತ್ರ ಜನತಾ ಪಕ್ಷ (ಜೆಎನ್‌ಪಿ) ಗೆಲುವಿನ ನಗೆ ಬೀರಿದೆ. ಬಿಜೆಪಿಗೆ ಈವರೆಗೂ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಅದೃಷ್ಟ ಪರೀಕ್ಷೆಗಿಳಿದ ಪಕ್ಷೇತರ ಅಭ್ಯರ್ಥಿಗಳಿಗೂ ವಿಜಯಲಕ್ಷ್ಮಿ ಒಲಿದಿಲ್ಲ.

1980ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ (ಐಎನ್‌ಸಿ– ಐ) ಅಭ್ಯರ್ಥಿ ಜಿ.ವೈ.ಕೃಷ್ಣನ್‌ ಗೆಲುವು ಸಾಧಿಸಿದ್ದರು. ನಂತರ 1984ರ ಚುನಾವಣೆಯಲ್ಲಿ ಜನತಾ ಪಕ್ಷದ (ಜೆಎನ್‌ಪಿ) ವಿ.ವೆಂಕಟೇಶ್‌ ಅವರಿಗೆ ವಿಜಯ ಮಾಲೆ ಒಲಿದಿತ್ತು. ಬಳಿಕ 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೈ.ರಾಮಕೃಷ್ಣ ಅವರ ಗೆಲುವಿನೊಂದಿಗೆ ಕ್ಷೇತ್ರವು ಪುನಃ ‘ಕೈ’ ವಶವಾಯಿತು.

ಮುನಿಯಪ್ಪ ಪಾರುಪತ್ಯ

1991ರಿಂದ 2014ರವರೆಗೆ ನಡೆದ ಚುನಾವಣೆಗಳಲ್ಲಿ ಕೈ ಪಾಳಯದ ಕೆ.ಎಚ್‌.ಮುನಿಯಪ್ಪ ಅವರದೇ ಪಾರುಪತ್ಯ. ಸತತ 7 ಬಾರಿ ಜಯ ಗಳಿಸಿರುವ ಅವರ ಗೆಲುವಿನ ನಾಗಲೋಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.ಮುನಿಯಪ್ಪರ ಗೆಲುವಿನ ಕುದುರೆ ಕಟ್ಟುವ ಯತ್ನದಲ್ಲಿ ಬಿಜೆಪಿ, ಜೆಡಿಎಸ್‌, ಸಂಯುಕ್ತ ಜನತಾ ದಳ ಅಭ್ಯರ್ಥಿಗಳು ಪ್ರತಿ ಬಾರಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಕೈ ಪಾಳಯದ ಕಟ್ಟಾಳು ಮುನಿಯಪ್ಪರ ಪಕ್ಷನಿಷ್ಠೆ ಬದಲಾಗಿಲ್ಲ. ಕ್ಷೇತ್ರದ ಮತದಾರರು ಕಾಂಗ್ರೆಸ್‌ ಮೇಲಿಟ್ಟಿರುವ ಅಭಿಮಾನವು ಮುನಿಯಪ್ಪ ಅವರನ್ನು ಪ್ರತಿ ಬಾರಿ ಗೆಲುವಿನ ದಡ ಸೇರಿಸುತ್ತಾ ಬಂದಿದೆ.

ಹಿತಶತ್ರುಗಳ ಕಾಟ: ಕ್ಷೇತ್ರದಲ್ಲಿ ಒಂದು ದಶಕದಲ್ಲಿ ರಾಜಕೀಯವಾಗಿ ಸಾಕಷ್ಟು ಬದಲಾವಣೆಯ ನೀರು ಹರಿದಿದ್ದು, ಮತದಾರರು ಮತ್ತೊಂದು ಚುನಾವಣೆಗೆ ಮುಖಾಮುಖಿಯಾಗಿದ್ದಾರೆ. ಸತತ 8ನೇ ಬಾರಿ ಜಯಭೇರಿ ಬಾರಿಸುವ ನಿರೀಕ್ಷೆಯಲ್ಲಿರುವ ಮುನಿಯಪ್ಪ ಅವರಿಗೆ ಹಿತಶತ್ರುಗಳ ಕಾಟ ಹೆಚ್ಚಿದೆ. ವಿಪಕ್ಷಗಳಿಗಿಂತ ಸ್ವಪಕ್ಷೀಯರೇ ಅವರ ವಿರುದ್ಧ ತೊಡೆ ತಟ್ಟಿದ್ದಾರೆ.

ಮುನಿಯಪ್ಪ ವಿರೋಧಿಗಳಲ್ಲಿ ಹೆಪ್ಪುಗಟ್ಟಿದ್ದ ಅಸಹನೆಯ ದಳ್ಳುರಿ ಜ್ವಾಲಮುಖಿಯಂತೆ ಸ್ಫೋಟಗೊಂಡಿದೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿರುವ ಮುನಿಯಪ್ಪರ ವಿರೋಧಿಗಳೆಲ್ಲಾ ಪಕ್ಷಭೇದ ಮರೆತು ಒಗ್ಗೂಡಿದ್ದಾರೆ. ಈ ಸಮಾನ ಮನಸ್ಕರ ಚಕ್ರವ್ಯೂಹ ಭೇದಿಸಿ ಗೆಲುವು ಸಾಧಿಸಲು ಮುನಿಯಪ್ಪ ಅವರು ಈ ಬಾರಿ ಸಾಕಷ್ಟು ಬೆವರು ಹರಿಸಬೇಕಿದೆ.

ಬಂಡಾಯದ ಬಿಸಿ: ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಕೇಸರಿ ಪಡೆಗೆ ಬಂಡಾಯದ ಬಿಸಿ ತಟ್ಟಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಡುಗೋಡಿ ವಾರ್ಡ್‌ ಸದಸ್ಯ ಎಸ್‌.ಮುನಿಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಮಧ್ಯೆ ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯ, ವಿ.ಎಂ.ರಮೇಶ್‌ಬಾಬು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿ ಪಕ್ಷದ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ವರಿಷ್ಠರು ಬಂಡಾಯ ಶಮನಕ್ಕೆ ತೆರೆಮರೆಯ ಕಸರತ್ತು ನಡೆಸಿದ್ದು, ಕಮಲ ಪಾಳಯವು ಕ್ಷೇತ್ರದಲ್ಲಿ ಜಯದ ಖಾತೆ ತೆರೆಯುವ ಕನಸು ಕಾಣುತ್ತಿದೆ.

ಕೋಲಾರ ಲೋಕಸಭಾ ಕ್ಷೇತ್ರದ ಹಿನ್ನೋಟ.....

1) 1980
ಜಿ.ವೈ.ಕೃಷ್ಣನ್‌– 1,82,241
ಟಿ.ಚನ್ನಯ್ಯ– 84,729
ಗೆಲುವಿನ ಅಂತರ– 97,512

2) 1984
ವಿ.ವೆಂಕಟೇಶ್‌– 2,39,562
ಜಿ.ವೈ.ಕೃಷ್ಣನ್‌– 1,94,797
ಗೆಲುವಿನ ಅಂತರ– 44,765

3) 1989
ವೈ.ರಾಮಕೃಷ್ಣ– 3,50,009
ಬಿ.ಮುನಿಯಪ್ಪ– 2,17,407
ಗೆಲುವಿನ ಅಂತರ– 1,32,602

4) 1991
ಕೆ.ಎಚ್‌.ಮುನಿಯಪ್ಪ– 2,35,904
ವಿ.ಹನುಮಪ್ಪ– 1,73,535
ಗೆಲುವಿನ ಅಂತರ– 62,369

5) 1996
ಕೆ.ಎಚ್‌.ಮುನಿಯಪ್ಪ– 3,10,349
ಬಾಲಾಜಿ ಚನ್ನಯ್ಯ– 2,93,307
ಗೆಲುವಿನ ಅಂತರ– 17,042

6) 1998
ಕೆ.ಎಚ್‌.ಮುನಿಯಪ್ಪ– 3,04,261
ಬಾಲಾಜಿ ಚನ್ನಯ್ಯ– 2,26,289
ಗೆಲುವಿನ ಅಂತರ– 77,972

7) 1999
ಕೆ.ಎಚ್‌.ಮುನಿಯಪ್ಪ– 3,21,964
ಜಿ.ಮಂಗಮ್ಮ– 2,39,182
ಗೆಲುವಿನ ಅಂತರ– 82,782

8) 2004
ಕೆ.ಎಚ್‌.ಮುನಿಯಪ್ಪ– 3,85,582
ಡಿ.ಎಸ್‌.ವೀರಯ್ಯ– 3,73,947
ಗೆಲುವಿನ ಅಂತರ– 11,635

9) 2009
ಕೆ.ಎಚ್‌.ಮುನಿಯಪ್ಪ– 3,44,771
ಡಿ.ಎಸ್‌.ವೀರಯ್ಯ– 3,21,765
ಗೆಲುವಿನ ಅಂತರ– 23,006

10) 2014
ಕೆ.ಎಚ್‌.ಮುನಿಯಪ್ಪ– 4,18,926
ಕೆ.ಕೇಶವ– 3,71,076
ಗೆಲುವಿನ ಅಂತರ– 47,850

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.