ADVERTISEMENT

ಕ್ಷೇತ್ರ ಮಹಾತ್ಮೆ: ಬಸ್ತರ್‌ (ಛತ್ತೀಸಗಢ)

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಬಸ್ತರ್‌
ಬಸ್ತರ್‌   

ಛತ್ತೀಸಗಢದ ನಕ್ಸಲ್‌ಪೀಡಿತ ಪ್ರದೇಶಗಳಲ್ಲೊಂದಾದ ಬಸ್ತರ್‌ನ ಲೋಕಸಭಾ ಕ್ಷೇತ್ರವು ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವಣ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ ಇಲ್ಲಿಂದ ಕಾಂಗ್ರೆಸ್‌, ಶಾಸಕ ಹಾಗೂ ಮಾಜಿ ಸಚಿವ ಕವಾಸಿ ಲಖ್ಮಾ ಅವರನ್ನು ಸ್ಪರ್ಧೆಗಿಳಿಸಿದೆ. ಇವರೊಂದಿಗೆ ಸೆಣಸಲು ಬಿಜೆಪಿಯು ಆರ್‌ಎಸ್‌ಎಸ್‌ ಹಿನ್ನೆಲೆಯ ಮಹೇಶ್‌ ಕಶ್ಯಪ್‌ ಅವರನ್ನು ಅಖಾಡಕ್ಕಿಳಿಸಿದೆ. ಸಿಪಿಐ ಫೂಲ್‌ಸಿಂಗ್‌ ಕಚ್ಲಾಂ ಅವರನ್ನು ಕಣಕ್ಕಿಳಿಸಿದರೆ, ಬಿಎಸ್‌ಪಿ ಆಯತು ರಾಮ್‌ ಮಾಂಡವಿ ಅವರನ್ನು ಹಾಗೂ ಗೊಂಡ್ವಾನಾ ಗಣತಂತ್ರ ಪಕ್ಷವು (ಜಿಜಿಪಿ) ಟಿಕಂ ನಾಗವಂಶಿ ಅವರನ್ನು ಅಭ್ಯರ್ಥಿಯಾಗಿಸಿವೆ. 2019ರಲ್ಲಿ ಕಾಂಗ್ರೆಸ್‌ನ ದೀಪಕ್‌ ಬೈಜ್‌ ಅವರು 38,982 ಮತಗಳ ಅಂತರದಿಂದ ಬಿಜೆಪಿಯ ಬೈದುರಾಮ್ ಕಶ್ಯಪ್‌ ಅವರನ್ನು ಸೋಲಿಸಿದ್ದರು. ಈ ಕ್ಷೇತ್ರವು ದಶಕಗಳ ಕಾಲ ಬಿಜೆಪಿಯ ಭದ್ರಕೋಟೆಯಾಗಿತ್ತು. ಈ ಬಾರಿ ಈ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳುತ್ತೇವೆಂಬ ವಿಶ್ವಾಸ ಬಿಜೆಪಿ ಮುಖಂಡರದ್ದಾಗಿದೆ. ಮಹೇಶ್‌ ಕಶ್ಯಪ್‌ ಅವರು ಆದಿವಾಸಿಗಳ ಪರ ಹೋರಾಟದಿಂದ ಮುಂಚೂಣಿಗೆ ಬಂದಿದ್ದು, ಸ್ಥಳೀಯವಾಗಿಯೂ ಸಾಕಷ್ಟು ಪ್ರಭಾವವನ್ನು ಹೊಂದಿರುವ ಮುಖಂಡರಾಗಿದ್ದಾರೆ. ಇದೇ ಕಾರಣಕ್ಕೆ ಇವರು ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕವಾಸಿ ಲಖ್ಮಾ ಅವರು ಕೊಂಟಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ಜನಜನಿತರಾಗಿದ್ದಾರೆ. 2013ರಲ್ಲಿ ದರ್ಭಾ ಕಣಿವೆಯಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ ಬದುಕುಳಿದವರಲ್ಲಿ ಇವರೂ ಒಬ್ಬರಾಗಿದ್ದಾರೆ. ಈ ದಾಳಿಯಲ್ಲಿ ಕಾಂಗ್ರೆಸ್‌ ಮುಖಂಡರೂ ಸೇರಿದಂತೆ ಹಲವು ಮಂದಿ ಮೃತಪಟ್ಟಿದ್ದರು. ಈ ದಾಳಿಯ ಸಂಚಿನ ಕುರಿತ ಮಾಹಿತಿ ಪಡೆಯಲು ಕವಾಸಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.