ADVERTISEMENT

ಕ್ಷೇತ್ರ ಮಹಾತ್ಮೆ: ಅಲ್ವರ್ (ರಾಜಸ್ಥಾನ)

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 23:30 IST
Last Updated 31 ಮಾರ್ಚ್ 2024, 23:30 IST
ಅಲ್ವಾರ್‌
ಅಲ್ವಾರ್‌   

ರಾಜಸ್ಥಾನದ ಅಲ್ವರ್ ಲೋಕಸಭಾ ಕ್ಷೇತ್ರವು ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳಿಗೆ ಹಲವು ಬಾರಿ ಒಲಿದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮಹಾಂತ ಬಾಲಕನಾಥ್ ಅವರು 7,60,201 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್‌ನ ಜಿತೇಂದ್ರ ಸಿಂಗ್‌ ಅವರು ಎರಡನೇ ಸ್ಥಾನ ಪಡೆದಿದ್ದರು. 2018ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕರಣ್‌ಸಿಂಗ್‌ ಯಾದವ್‌ ಗೆದ್ದಿದ್ದರು. ಈ ಬಾರಿ ಬಿಜೆಪಿಯು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ರಾಜ್ಯಸಭಾ ಸದಸ್ಯರಾಗಿ ಸಂಸತ್‌ ಪ್ರವೇಶಿಸಿರುವ ಇವರು ಈ ಬಾರಿ ಚುನಾವಣಾ ಕಣಕ್ಕಿಳಿಯಲು ಈ ಕ್ಷೇತ್ರ ಆಯ್ದುಕೊಂಡಿದ್ದಾರೆ. ಭೂಪೇಂದ್ರ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಹೌದು. ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿರುವ ಇವರನ್ನು ಮಣಿಸಲು ಕಾಂಗ್ರೆಸ್‌, ಸ್ಥಳೀಯವಾಗಿ ಹೆಚ್ಚು ಪ್ರಭಾವವಿರುವ ಯುವ ಮುಖಂಡ ಲಲಿತ್‌ ಯಾದವ್‌ ಅವರನ್ನು ಅಖಾಡಕ್ಕಿಳಿಸಿದೆ.

ಲಲಿತ್‌ ಯಾದವ್‌ ಅವರು ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯಕ್ಕೆ ಧುಮುಕಿದವರು. 2018ರಲ್ಲಿ ಬಿಎಸ್‌ಪಿ ಟಿಕೆಟ್‌ನಿಂದ ಮುಂಡಾವರ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸೇರಿದ್ದ ಅವರು ಮುಂಡಾವರ್‌ ಕ್ಷೇತ್ರದಿಂದಲೇ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಕ್ಷೇತ್ರಕ್ಕೆ ಹೊರಗಿನವರಾದ ಭೂಪೇಂದ್ರ ಅವರನ್ನು ಎದುರಿಸಲು ಸ್ಥಳೀಯವಾಗಿ ಪ್ರಭಾವ ಹೊಂದಿರುವ ಲಲಿತ್ ಅವರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.