ADVERTISEMENT

ಬಿಜೆಪಿಗೆ ಅಭಿವೃದ್ಧಿ ಅಜೆಂಡಾ ಇಲ್ಲ: ದಿನೇಶ್ ಗುಂಡೂರಾವ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 7:52 IST
Last Updated 20 ಏಪ್ರಿಲ್ 2019, 7:52 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಹುಬ್ಬಳ್ಳಿ: ‘ಬಿಜೆಪಿಗೆ ಅಭಿವೃದ್ಧಿ ಅಜೆಂಡಾ ಇಲ್ಲ. ಹಾಗಾಗಿ ರಾಮಮಂದಿರ, ಸಂವಿಧಾನದ 370ನೇ ವಿಧಿ, ಭಯೋತ್ಪಾದನೆ, ಭದ್ರತೆ ವಿಷಯಗಳ ಜತೆಗೆ ದೇಶ ಒಡೆಯುವಂತಹ ಹೇಳಿಕೆ ನೀಡುತ್ತಾ ಮತ ಕೇಳುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರವಿದ್ದಾಗ ರಾಮಮಂದಿರ ವಿವಾದ ಇತ್ಯರ್ಥಕ್ಕೆ ಯಾವ ರೀತಿಯಲ್ಲೂ ಮುಂದಾಗದ, ಅಭಿವೃದ್ಧಿ ಕೆಲಸಗಳನ್ನೇ ಮಾಡದ ಬಿಜೆಪಿ, ಈಗ ಪ್ರಣಾಳಿಕೆಯಲ್ಲಿ ಹಳೇ ವಿಷಯಗಳನ್ನೇ ಪ್ರಸ್ತಾಪಿಸಿ ಜನರಿಗೆ ಮಂಕುಬೂದಿ ಎರಚುತ್ತಿದೆ’ ಎಂದರು.

‘ದೇಶ ಒಡೆಯುತ್ತಿದ್ದಾರೆ’:‘ಬಿಜೆಪಿ ಬೆಂಬಲಿಸದವರು ದೇಶದ್ರೋಹಿಗಳು ಎನ್ನುವ ಬಿಜೆಪಿ ಮುಖಂಡರು, ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಮತ ಹಾಕದವರು ಪಾಕಿಸ್ತಾನದ ಬೆಂಬಲಿಗರು ಎನ್ನುವ ಅಮಿತ್ ಶಾ ಹೇಳಿಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದುದು. ಇಂತಹ ಮನಸ್ಥಿತಿಯವರು ಹೇಗೆ ‘ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್’ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

‘ಅಭಿವೃದ್ಧಿಯ ದೂರದೃಷ್ಟಿ ಇಲ್ಲದ ಬಿಜೆಪಿಗೆ ಚುನಾವಣೆ, ಸಾಮಾಜಿಕ ಜಾಲತಾಣ, ಮಾಧ್ಯಮ ನಿರ್ವಹಣೆ ಮಾತ್ರ ಚನ್ನಾಗಿ ಗೊತ್ತಿದೆ. ಧರ್ಮದ ವಿಷಯದಲ್ಲಿ ಜನರನ್ನು ಪ್ರಚೋದಿಸುವ ಮೂಲಕ, ಚುನಾವಣಾ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

‘ಉತ್ತರ ಕರ್ನಾಟಕ ಭಾಗದ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಏನನ್ನೂ ಮಾಡಿಲ್ಲ. ರಾಜ್ಯದ ಬಿಜೆಪಿ ಸಂಸದರ ಕೊಡುಗೆಯೂ ಶೂನ್ಯ. ವಿವಾದ ಬಗೆಹರಿಸಲು ಇದ್ದ ಅವಕಾಶವನ್ನು ಪ್ರಧಾನಿ ಮೋದಿ ಕೈ ಚೆಲ್ಲಿ, ಕರ್ನಾಟಕಕ್ಕೆ ಅನ್ಯಾಯ ಮಾಡಿದರು. ನಾವು ಅಧಿಕಾರಕ್ಕೆ ಬಂದರೆ, ವಿವಾದವನ್ನು ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಹಿಂದುಳಿದವರ ಕಡೆಗಣಿಸಿದ ಬಿಜೆಪಿ:

‘ರಾಜ್ಯದಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಬಿಜೆಪಿ ಯಾವ ಕ್ಷೇತ್ರದಲ್ಲೂ ಟಿಕೆಟ್ ಕೊಟ್ಟಿಲ್ಲ. ಸಾಮಾಜಿಕ ನ್ಯಾಯ ತತ್ವದ ಪ್ರಕಾರ ನಾವು ದೇವಾಡಿಗ, ಬೆಸ್ತ, ಬಿಲ್ಲವ, ಈಡಿಗ, ಕುರುಬರಿಗೆ ಟಿಕೆಟ್ ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ 16ರಿಂದ 17 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್‌ 4ರಿಂದ 5 ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ. ದೇಶದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮಾಫಿಯಾ ರಾಜಕಾರಣಕ್ಕೆ ಈ ಚುನಾವಣೆ ಅಂತ್ಯ ಹಾಡಲಿದೆ’ ಎಂದರು.

ಲಿಂಗಾಯತ ಧರ್ಮ– ನಿಲುವಿನ ಅಗತ್ಯವಿಲ್ಲ:
‘ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಆ ಸಮುದಾಯಕ್ಕೆ ಸಂಬಂಧಿಸಿದ್ದು. ಅದರ ಕಾಂಗ್ರೆಸ್ ನಿಲುವು ವ್ಯಕ್ತಪಡಿಸುವ ಅಗತ್ಯವಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕ ಜಗದೀಶ ಶೆಟ್ಟರ್ ಸೇರಿದಂತೆ ಹಲವರು ಹಿಂದೆ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಗ, ಅದು ಬಿಜೆಪಿ ಪ್ರೇರಿತ ಹೋರಾಟವಾಗಲಿಲ್ಲ. ನಮ್ಮ ಅವಧಿಯಲ್ಲಿ ನಡೆದಿದ್ದು ಮಾತ್ರ ಕಾಂಗ್ರೆಸ್ ಪ್ರೇರಿತ ಹೋರಾಟ ಹೇಗಾಗುತ್ತದೆ?’ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಮುಖಂಡರಾದ ವೀರಣ್ಣ ಮತ್ತೀಕಟ್ಟಿ, ನಾಗರಾಜ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ, ಅಲ್ತಾಫ ಕಿತ್ತೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.