ADVERTISEMENT

ರಾಜ್ಯದಲ್ಲಿ ಬಿಜೆಪಿಯನ್ನು ಒಂದಂಕಿಗೆ ಇಳಿಸುತ್ತೇವೆ: ಡಿ.ಕೆ.ಶಿವಕುಮಾರ್ 

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 6:56 IST
Last Updated 15 ಏಪ್ರಿಲ್ 2019, 6:56 IST
   

ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಒಂದಂಕಿಗೆ ಇಳಿಸುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಸುಳ್ಳಿನ ಆಧಾರದಲ್ಲಿ ಸರ್ಕಾರ ರಚಿಸಿತ್ತು. ಈ ಬಾರಿ ಅದು ಸಾಧ್ಯವಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಒಂದಂಕಿಗಿಂತ ಹೆಚ್ಚು ಸ್ಥಾನ ಗಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಬಿಡುವುದಿಲ್ಲ’ಎಂದರು.

ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಂಗಳೂರಿಗೆ ಬಂದಾಗ ಕೇಂದ್ರ ಸರ್ಕಾರದ ಸಾಧನೆಯ ರಿಪೋರ್ಟ್ ಕಾರ್ಡ್ ನೀಡಬಹುದು ಎಂಬ ನಿರೀಕ್ಷೆ ಇತ್ತು. ಕಳೆದ ಬಾರಿ 'ಅಚ್ಛೇ ದಿನ' ಎಂದು ಮತ ಕೇಳಿದ್ದರು. ಆ ದಿನಗಳು ಬರಲೇ ಇಲ್ಲ. ಈ ಬಗ್ಗೆ ಪ್ರಧಾನಿ ಚಕಾರ ಎತ್ತಲಿಲ್ಲ. ಈಗ ಮತ್ತೆ ಸುಳ್ಳು ಹೇಳಿ ಮತ ಕೇಳುತ್ತಿದ್ದಾರೆ. ಮೋದಿ ಸರ್ಕಸರ ನುಡಿದಂತೆ ನಡೆಯಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಕಾಂಗ್ರೆಸ್‌ಗೆ ಹೆಚ್ಚು ಲಾಭ: ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭ ಆಗಲಿದೆ. ಮಂಡ್ಯ, ಹಾಸನ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಇದ್ದ ಭಿನ್ನಾಭಿಪ್ರಾಯ ಬಹುತೇಕ ಶಮನವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಗ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕೆಲವರು ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದವರು. ನಮ್ಮ ಪಕ್ಷದ ಕಾರ್ಯಕರ್ತರು ದೀರ್ಘ ಕಾಲ ಅವರ ವಿರುದ್ಧ ಹೋರಾಟ ಮಾಡಿದ್ದವರು. ನಮ್ಮ ಪಕ್ಷಕ್ಕೆ ಬಂದಾಗ ಬೆಂಬಲ ನೀಡಿದ್ದರು. ಈಗ ಅವರೇ ಅಸಮಾಧಾನ ಹೊರಹಾಕಿದ್ದಾರೆ. ಎಲ್ಲವೂ ಸರಿಹೋಗಲಿದೆ’ಎಂದರು.

ದನಿ ಎತ್ತದ ಸಂಸದ: ನಳಿನ್ ಕುಮಾರ್ ಕಟೀಲ್ ಹತ್ತು ವರ್ಷಗಳಿಂದ ದಕ್ಷಿಣ ಕನ್ನಡ ಸಂಸದರಾಗಿದ್ದಾರೆ. ಈ ಅವಧಿಯಲ್ಲಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದರ ವರದಿ ಮಂಡಿಸಲಿ ಎಂದು ಆಗ್ರಹಿಸಿದರು.

‘ಜಿಲ್ಲೆಯ ಸಮಸ್ಯೆಗಳ ಕುರಿತು ನಳಿನ್ ಕುಮಾರ್ ಕಟೀಲ್ ಒಂದು ದಿನವೂ ಸಂಸತ್ತಿನಲ್ಲಿ ದನಿ ಎತ್ತಲಿಲ್ಲ. ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡುತ್ತಾರೆ. ಇಂತಹವರು ಜಿಲ್ಲೆಗೆ ಸಂಸದರಾಗದಂತೆ ತಡೆಯಬೇಕು. ಉತ್ಸಾಹಿ ಯುವಕ, ಎಲ್ಲ ಜಾತಿ, ಧರ್ಮದ ಜನರನ್ನು ಒಟ್ಟಿಗೆ ಕರೆದೊಯ್ಯಬಲ್ಲ ಮಿಥುನ್‌ ರೈ ಅವರಿಗೆ ಜಿಲ್ಲೆಯ ಜನರು ಬೆಂಬಲ ನೀಡಬೇಕು’ಎಂದು ಮನವಿ ಮಾಡಿದರು.

ವಿಜಯ ಬ್ಯಾಂಕ್ ವಿಲೀನದ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಒಟ್ಟಾಗಿ ರಾಜ್ಯದ 28 ಸಂಸದರ ನಿಯೋಗ ಕರೆದೊಯ್ದು ಒತ್ತಡ ಹೇರಿದ್ದರೆ ವಿಜಯ ಬ್ಯಾಂಕ್ ವಿಲೀನ ಆಗುತ್ತಿರಲಿಲ್ಲ. ಆದರೆ, ಇವರು ಅಂತಹ ಪ್ರಯತ್ನವನ್ನೇ ಮಾಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಭಿಮಾನ ಉಳಿಸಲು ಸಾಧ್ಯವಾಗದ ಇವರು ಯಾವತ್ತೋ ರಾಜೀನಾಮೆ ನೀಡಬೇಕಿತ್ತು ಎಂದರು.

ನಿಲುವು ಅಚಲ: ಲಿಂಗಾಯತ ಧರ್ಮದ ವಿಚಾರದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗಿನ ಜಟಾಪಟಿ ಕುರಿತು ಪ್ರಶ್ನಿಸಿದಾಗ, ‘ಈ ವಿಚಾರದಲ್ಲಿ ನನ್ನ ನಿಲುವು ಅಚಲ. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು’ಎಂದರು.

ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕುರಿತು ಪೊಲೀಸರಿಂದ ನೋಟಿಸ್ ಬಂದಿದೆಯೇ ಎಂಬ ಪ್ರಶ್ನೆಗೆ, ‘ನನಗೆ, ಮುಖ್ಯಮಂತ್ರಿಯವರಿಗೆ, ಕೆಲವು ಸಚಿವರಿಗೆ ನೋಟಿಸ್ ಬಂದಿದೆ. ನಾವು ಪ್ರತಿಭಟನೆ ನಡೆಸಿಲ್ಲ. ಐಟಿ ಅಧಿಕಾರಿಗಳು ತಪ್ಪು ಮಾಡುತ್ತಿದ್ದಾರೆ. ಇದನ್ನು ಮನವರಿಕೆ ಮಾಡಲು ಹೋಗಿದ್ದೆವು. ಆಗ ಕಾರ್ಯಕರ್ತರು ಕೂಡ ಬಂದಿದ್ದರು. ಎಲ್ಲರನ್ನೂ ಸಮಾಧಾನಪಡಿಸಿ ಕಳಿಸಿದೆವು’ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.