ADVERTISEMENT

ಹುಬ್ಬಳ್ಳಿ: ಹೂಗಳಲ್ಲಿ ಕಂಗೊಳಿಸಿದ ವಿ.ವಿ.ಪ್ಯಾಟ್‌, ಬ್ಯಾಲೆಟ್‌ ಪೇಪರ್

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 7:22 IST
Last Updated 31 ಮಾರ್ಚ್ 2019, 7:22 IST
   

ಹುಬ್ಬಳ್ಳಿ: ವಿವಿಧ ಬಣ್ಣಗಳ ಹೂಗಳಿಂದ ಸುಂದರವಾಗಿ ಅಲಂಕರಿಸಿದ್ದ ಕರ್ನಾಟಕ ನಕಾಶೆ, ವಿ.ವಿ. ಪ್ಯಾಟ್‌, ಬ್ಯಾಲೆಟ್‌ ಪೇಪರ್‌ ಮುಂದೆ ಸೆಲ್ಪಿ ತೆಗೆದುಕೊಳ್ಳಲು ನಾ ಮುಂದು, ನೀ ಮುಂದು ಎಂದು ಜಿದ್ದಿಗೆ ಬಿದ್ದು ಯುವ ಮತದಾರರು. ಜಿಲ್ಲಾಧಿಕಾರಿ ಜೊತೆ ಸೆಲ್ಫಿ ಸಂಭ್ರಮ.

ಯುವಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ತೋಟಗಾರಿಕಾ ಇಲಾಖೆದ ಸಹಯೋಗದಲ್ಲಿ ಭಾನುವಾರ ನಗರದ ಇಂದಿರಾಗಾಜಿನ ಮನೆಯಲ್ಲಿ ಆರಂಭವಾದ ಪುಷ್ಪ ಪ್ರದರ್ಶನದಲ್ಲಿ ಕಂಡುಬಂದ ಚಿತ್ರಣವಿದೆ. ಈ ಬಾರಿಯ ಚುನಾವಣೆಯಲ್ಲಿ ಯುವಕರ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ಮತದಾನ ಯಂತ್ರ ಬಳಕೆ ಹೇಗೆ ಎಂಬುದರ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.

ಪ್ರದರ್ಶನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ದೀಪಾ ಚೋಳನ್‌ ‘ರಾಷ್ಟ್ರ ನಿರ್ಮಾಣದ ಕೆಲಸ ಯುವಕರ ಕೈಯಲ್ಲಿದೆ. ಆದ್ದರಿಂದ ಅವರು ತಮ್ಮ ಜವಾಬ್ದಾರಿ ಅರಿತು ತಪ್ಪದೇ ಮತದಾನ ಮಾಡಬೇಕು. ಏ. 23ರಂದು ಮತದಾನ ಮಾಡಿದ ಬಳಿಕ ಅದನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಂಡು ಅವರೂ ಮತ ಹಾಕಲು ಪ್ರೇರೇಪಿಸಬೇಕು’ ಎಂದರು.

ADVERTISEMENT

‘ಮತದಾನ ನಮ್ಮೆಲ್ಲರ ಕರ್ತವ್ಯ ಎನ್ನುವ ಜವಾಬ್ದಾರಿ ಎಲ್ಲರಿಗೂ ಇರಬೇಕು. ನಮ್ಮ ಪ್ರತಿನಿಧಿಯನ್ನು ಆಯ್ಕೆಮಾಡಲು ನಮಗೆ ನೇರ ಅವಕಾಶವಿದೆ. ಯುವಜನತೆಯೇ ಹೆಚ್ಚು ಮತದಾನ ಮಾಡಿ ಬೇರೆಯವರಿಗೂ ಸ್ಫೂರ್ತಿಯಾಗಬೇಕು. ನನ್ನ ಹಕ್ಕು ಚಲಾಯಿಸಬೇಕು ಎನ್ನುವುದು ಮನಸ್ಸಿನಿಂದಲೇ ಬರಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ದೀಪಾ ಚೋಳನ್‌ ಹೇಳಿದರು.

ಕಾರ್ನೆಷಿಯನ್‌, ಗುಲಾಬಿ ಮತ್ತು ಕ್ರಜ್ಯಾಂತ ಹೂಗಳನ್ನು ಬಳಸಿ ನಿರ್ಮಿಸಲಾಗಿರುವ ಮತದಾನದ ಸಾಮಗ್ರಿಗಳ ಎದುರು ಯುವಕ, ಯುವತಿಯರು ಮುಗಿಬಿದ್ದು ಸೆಲ್ಫಿ ತೆಗೆದುಕೊಂಡರು. ಮತದಾನ ಜಾಗೃತಿ ಫಲಕದಲ್ಲಿ ‘ತಪ್ಪದೇ ಮತದಾನ ಮಾಡಿ, ನಾನು ಮತದಾನ ಮಾಡುತ್ತೇನೆ. ನೀವು?... ಮತದಾನ ಮಾಡಿದವನೇ ಮಹಾಶೂರ’ ಸಂದೇಶಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಸಂದೇಶದ ಮುಂದೆಯೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದು ಕಂಡುಬಂತು.

ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಬಿ.ಸಿ. ಸತೀಶ, ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ಮಡಿವಾಳ, ಹಿರಿಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ, ಪ್ಯಾರಾ ಶೂಟರ್‌ ಜ್ಯೋತಿ ಸಣ್ಣಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.