ADVERTISEMENT

ಎಂ.ವಿ.ಕೃಷ್ಣಪ್ಪ, ದೊಡ್ಡತಿಮ್ಮಯ್ಯ ಕೋಲಾರದ ಪ್ರಥಮ ಸಂಸದರು!

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 9:01 IST
Last Updated 3 ಏಪ್ರಿಲ್ 2014, 9:01 IST

ಚಿಕ್ಕಬಳ್ಳಾಪುರ: ಬ್ರಿಟಿಷರ ಆಳ್ವಿಕೆಯಿಂದ ದೇಶವು 1947ರಲ್ಲಿ ಮುಕ್ತಗೊಂಡು 1951ರಲ್ಲಿ ನಡೆದ ಮೊಟ್ಟಮೊದಲ ಲೋಕಸಭಾ ಚುನಾವಣೆಯಲ್ಲಿ ಆಗಿನ ಇಡೀ ಮೈಸೂರು ರಾಜ್ಯದಿಂದ ಕೇವಲ 11 ಮಂದಿ ಸದಸ್ಯರು ಆಯ್ಕೆಯಾಗಿದ್ದರು. ಚಿಕ್ಕಬಳ್ಳಾಪುರ ಆಗ ಇನ್ನೂ ಪ್ರತ್ಯೇಕ ಕ್ಷೇತ್ರವಾಗಿರದ ಕಾರಣ ಅದು ಕೋಲಾರ ವ್ಯಾಪ್ತಿಗೆ ಒಳಪಟ್ಟಿತ್ತು. ಕೋಲಾರ ಕ್ಷೇತ್ರವು ವಿಶಾಲವಾಗಿದ್ದ ಕಾರಣ ದ್ವಿಸದಸ್ಯತ್ವ ಪದ್ಧತಿ ಜಾರಿಯಲ್ಲಿತ್ತು.

ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೇ ಜನರ ಮೇಲೆ ಗಾಢವಾಗಿ ಪರಿಣಾಮ ಬೀರಿದ್ದ ಕಾಂಗ್ರೆಸ್‌ ಪಕ್ಷವು ಆಗಲೂ ತನ್ನ ಪ್ರಾಬಲ್ಯ ಮೆರೆದಿತ್ತು. ಬೇರೆ ಬೇರೆ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸೇರಿಕೊಂಡು ಒಟ್ಟಾರೆ 7 ಮಂದಿ ಕಣದಲ್ಲಿದ್ದರೂ ಆಗಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಅಭ್ಯರ್ಥಿಗಳಾದ ಎಂ.ವಿ.ಕೃಷ್ಣಪ್ಪ ಮತ್ತು ದೊಡ್ಡತಿಮ್ಮಯ್ಯ ಅವರು ವಿಜೇತರಾದರು.

ಆಗಿನಿಂದಲೂ ತನ್ನ ಹಿಡಿತ ಸಾಧಿಸಿಕೊಂಡು ಬಂದಿರುವ ಕಾಂಗ್ರೆಸ್‌ ಈಗಲೂ ಕೂಡ ಸಡಿಲಗೊಳಿಸಲು ಸಿದ್ಧವಿಲ್ಲ. ಬೇರೆ ಬೇರೆ ಪಕ್ಷದವರು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೂ ಕಾಂಗ್ರೆಸ್ ಪ್ರತಿಯೊಂದು ಚುನಾವಣೆಯಲ್ಲೂ ಮೇಲುಗೈ ಸಾಧಿಸುತ್ತಲೇ ಬಂದಿದೆ. 1996ರಲ್ಲಿ ಆರ್.ಎಲ್‌.ಜಾಲಪ್ಪ ಅವರು 1994ರಲ್ಲಿ ಜನತದಳ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು ಹೊರತುಪಡಿಸಿದರೆ, ಕಾಂಗ್ರೆಸ್‌ ಕಾಯ್ದುಕೊಂಡ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ.

1951ರಲ್ಲಿ ದೇಶವು ಎಲ್ಲಾ ರೀತಿಯ ಬಂಧನಗಳಿಂದ ಮುಕ್ತಗೊಂಡಿತು ಎಂಬ ಸಂತಸ ಒಂದೆಡೆಯಿದ್ದರೆ,  ಕ್ಷೇತ್ರಕ್ಕೆ ಸೂಕ್ತ ಜನಪ್ರತಿನಿಧಿಯನ್ನೇ ಆಯ್ಕೆ ಮಾಡಬೇಕು ಎಂಬ ಉಮೇದು ಜನರಲ್ಲಿತ್ತು. ಆಗಿನ ಕಾಲದಲ್ಲಿ ಮತದಾನ ಮತ್ತು ಚುನಾವಣೆ ಕುರಿತು ಪೂರ್ಣಪ್ರಮಾಣದ ಜಾಗೃತಿ ಇರದಿದ್ದರೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದ್ದರು.

ಆಗ ಮೈಸೂರು ರಾಜ್ಯದಿಂದ ಒಟ್ಟಾರೆ 11 ಮಂದಿ ಸದಸ್ಯರು ಮಾತ್ರವೇ ಆಯ್ಕೆಯಾಗಲು ಅವಕಾಶವಿತ್ತು. 9 ಕ್ಷೇತ್ರಗಳಿಂದ 11 ಮಂದಿ ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. 11 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 10 ಕ್ಷೇತ್ರಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಾಲಾದರೆ, ಮೈಸೂರಿನ ಒಂದು ಕ್ಷೇತ್ರ ಮಾತ್ರ ಕಿಸಾನ್ ಮಜ್ದೂರ್ ಪ್ರಜಾ ಪಕ್ಷ ಪಾಲಾಯಿತು. ಒಂದೊಂದು ಕ್ಷೇತ್ರದಿಂದಲೂ 4 ರಿಂದ 8 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 741116 ಮತದಾರರ ಪೈಕಿ 717848 ಮಂದಿ ಮತ ಚಲಾಯಿಸಿದರು. 1952ರ ಮಾರ್ಚ್‌ 27ರಂದು ಮತದಾನ ನಡೆದಿತ್ತು. ಒಟ್ಟಾರೆ 11 ಸ್ಥಾನಗಳಿಗೆ 50 ಮಂದಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅಂತಿಮ ಕ್ಷಣಗಳಲ್ಲಿ 13 ಮಂದಿ ನಾಮಪತ್ರ ಹಿಂಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.