ADVERTISEMENT

ಗಾಳಿ ಮಾತು | ಅಲ್ಲಿದೆ ನಮ್ಮನೆ... ಇಲ್ಲಿ ಬಂದೆ ಸುಮ್ಮನೆ...

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 23:15 IST
Last Updated 15 ಏಪ್ರಿಲ್ 2023, 23:15 IST
   

ಅಲ್ಲಿದೆ ನಮ್ಮನೆ...ಇಲ್ಲಿ ಬಂದೆ ಸುಮ್ಮನೆ... ಹೀಗೆಂದು ಸಚಿವ ಆರ್.ಅಶೋಕ ಮೊನ್ನೆಯಿಂದ ಈಚೆಗೆ ಸದಾ ಈ ಹಾಡು ಗುನುಗುತ್ತಿದ್ದಾರಂತೆ. ಪದ್ಮನಾಭ ನಗರದಲ್ಲಿ ‘ಸಾಮ್ರಾಟ’ನಂತೆ ಮೆರೆಯುತ್ತಿದ್ದ ಈ ಚಕ್ರವರ್ತಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದ್ದೇ ತಡ ಎರಡು ದೋಣಿಯಲ್ಲಿ ಕಾಲಿಟ್ಟ ಅನುಭವವಾಗಿದೆಯಂತೆ.

ಕನಕಪುರದಲ್ಲಿ ಬಂಡೆಯಂತೆ ನಿಂತು ಸತತ ಏಳು ಗೆಲುವು ಕಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪದ್ಮನಾಭನಗರದಲ್ಲಿ ಮೆರೆಯುತ್ತಿರುವ ಅಶೋಕ ಇಬ್ಬರೂ ಒಕ್ಕಲಿಗ ನಾಯಕ ಕಲಿಗಳು. ಈಚೆಗೆ ವಿಮಾನ ನಿಲ್ದಾಣದಲ್ಲಿ ಹಾಗೂ ವಿಧಾನಸೌಧ ಮುಂಭಾಗ ಕೆಂಪೇಗೌಡರ ಪ್ರತಿಮೆ ನಿಲ್ಲಿಸಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದ್ದಕ್ಕೆ ಪ್ರತಿಯಾಗಿ ಅಶೋಕಗೆ ಪಕ್ಷ ಈ ಪರಿ ‘ಬಳುವಳಿ’ ನೀಡಿದ್ದನ್ನು ಅರಗಿಸಿಕೊಳ್ಳಲು ಆಗಿಲ್ಲವಂತೆ.

ಟಿಕೆಟ್‌ ಘೋಷಣೆಯಾಗಿ ಮೂರ್ನಾಲ್ಕು ದಿನವಾದರೂ ಅಶೋಕ ಮಾತ್ರ ಇನ್ನೂ ಕನಕಪುರಕ್ಕೆ ಕಾಲಿಟ್ಟಿಲ್ಲ. ಭಾರಿ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಸಹಜವಾಗಿಯೇ ಇದರಿಂದ ನಿರಾಸೆ ಆಗಿದೆಯಂತೆ. ‘ಯೋಚನೆ ಮಾಡಬೇಡಿ, ಬಸವರಾಜ ಬೊಮ್ಮಾಯಿ, ಅರುಣ್‌ ಸಿಂಗ್‌ ಸಮೇತ ಇದೇ 18ರಂದು ಅಶೋಕ ಕನಕಪುರ ಕೋಟೆಗೆ ಲಗ್ಗೆ ಇಡಲಿದ್ದಾರೆ’ ಎಂದು ಪಕ್ಷದ ಅಳಿದುಳಿದ ನಾಯಕರು ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಪ್ರಯತ್ನದಲ್ಲಿ ಇದ್ದಾರಂತೆ.

ADVERTISEMENT

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರ ನಡುವೆ ಪಕ್ಷಗಳ ಹೊರತಾಗಿಯೂ ಒಂದು ಸಾಮರಸ್ಯದ ಬಾಂಧವ್ಯ ಇದೆ. ಇದೀಗ ಬಿಜೆಪಿ ಹೈಕಮಾಂಡ್‌ ಅದಕ್ಕೆ ಬೆಂಕಿ ಇಟ್ಟಂತಿದೆ. ‘ಇಲ್ಲಿ ಅಬ್ಬರಿಸಲು ಪ್ರಯತ್ನಿಸಿದರೆ ಪದ್ಮನಾಭನಗರದಲ್ಲಿ ಡಿಚ್ಚಿ ಕೊಡುವುದು ಖಚಿತ’ ಎಂದು ಡಿ.ಕೆ.ಸಹೋದರರು ಈಗಾಗಲೇ ಅಶೋಕಗೆ ನಯವಾಗಿ ಎಚ್ಚರಿಸಿದ್ದಾರಂತೆ. ಹೀಗಾಗಿ ಕನಕಪುರ ದಲ್ಲಿ ತುಸು ಎಚ್ಚರದಿಂದಲೇ ಹೆಜ್ಜೆ ಇಡಲು ಯೋಚಿಸುತ್ತಿದ್ದು, ಸಹವರ್ತಿಗಳನ್ನು ಗುಂಪುಗೂಡಿಸಿಕೊಂಡು ಚರ್ಚೆ ನಡೆಸುತ್ತಿದ್ದಾರೆಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.