ADVERTISEMENT

ಗುಸು ಗುಸು: ಕಾಗೇರಿ ಬಾವಂಗೆ ಕೈಕೊಟ್ರಾ ಅನಂತ ಬಾವ!

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 23:28 IST
Last Updated 30 ಮಾರ್ಚ್ 2024, 23:28 IST
ಅನಂತಕುಮಾರ ಹೆಗಡೆ
ಅನಂತಕುಮಾರ ಹೆಗಡೆ   

ದಶಕಗಳ ಕಾಲ ಉತ್ತರಕನ್ನಡವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಅನಂತಕುಮಾರ ಹೆಗಡೇರು, ಸಂವಿಧಾನ ಬದಲಿಸಲು ಹೋಗಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಹಿಂದುತ್ವದ ಹಾದಿಯಿಂದ ಹೆಜ್ಜೆ ಹೊರಗಿಟ್ಟಿರುವ ಮೋದಿ, ಅಮಿತ್ ಶಾ ಜೋಡಿ, ಹೆಗಡೇರಿಗೆ ಟಿಕೆಟ್ ಕೊಡದೇ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಕೊಟ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಸ್ಪೀಕರ್‌’ ಆಗಿದ್ದಾಗಲೇ, ಕೆಲವು ಶಾಸಕರು ಕಾಗೇರಿಯವರ ಎಚ್ಚರಿಕೆಗೆ ಬಗ್ಗುತ್ತಿರಲಿಲ್ಲ. ಇನ್ನು ಕಾಗೇರಿ ಬಾವನ ‘ಧ್ವನಿ’ ಉತ್ತರಕನ್ನಡದಲ್ಲಿ ಮೊಳಗ್ತದಾ ಎಂಬ ಚರ್ಚೆ ಶುರುವಾಗಿದೆಯಂತೆ. 

ದಶಕಗಳಿಂದಲೂ ಗುದ್ದಾಡಿಕೊಂಡೇ ರಾಜಕಾರಣ ಮಾಡಿಕೊಂಡು ಬಂದ ನಮ್ಮ ಕಾಗೇರಿ ಬಾವಂಗೆ, ಅನಂತ ಬಾವ ಕೈಕೊಟ್ನಾ ಎಂತ ಮಾರಾಯ ಎಂಬುದು ಕ್ಷೇತ್ರದಲ್ಲಿ ಪ್ರಶ್ನೆ. ಟಿಕೆಟ್ ಘೋಷಣೆಯಾಗಿದ್ದೇ ತಡ, ಕಾಗೇರಿ ಬಾವ, ‘ಅನಂತಣ್ಣ ನಾನು ಜೋಡೆತ್ತು ಇದ್ದಂಗೆ. ಹ್ವಾಯ್ ಅನಂತ್ ಬಾವ ನನ್ನ ಜತೆಗೆ ಇರ್ತಾನ’ ಎಂದು ತಮ್ಮ ಆಪ್ತರಲ್ಲಿ ಹೇಳಿಕೊಂಡೇ ಬಂದಿದ್ದರಂತೆ. 

ಹೆಂಗಾದರೂ ಆಗಲಿ, ಅನಂತಣ್ಣನ ಒಮ್ಮೆ ಕಂಡೇ ಬಿಡುವಾ ಎಂದು ಕಾಗೇರಿ ಸವಾರಿ ಅನಂತ ಬಾವನ ಮನೆ ಕಡೀಗೆ ಹೊಂಟೇ ಬಿಟ್ಟಿತು. ಕಾಗೇರಿ ಬರೋ ಸಂಗ್ತಿ ತಿಳಿದ ಅನಂತ ಬಾವ, ಮನೆ ಬಾಗಿಲಿಗೆ ಚಿಲ್ಕ ಹಾಕ್ಕಂಡ್ ಎತ್ತಲೋ ಸವಾರಿ ಹೊರಟೇ ಬಿಟ್ಟಿತಂತೆ. ಜೋಡೆತ್ತು ಸಿಗದೇ, ನೊಗವನ್ನೂ ಒಬ್ಬನೇ ಹೊರಲಾಗದೇ ಕಾಗೇರಿ ಬಾವ, ಪೆಚ್ಚು ಮೋರೆ ಹಾಕ್ಕಂಡ್ ಬಂತಂತೆ ಎಂಬುದು ಶಿರಸಿ ಸುದ್ದಿಯಂತೆ. 

ADVERTISEMENT

ಇದನ್ನು ಕೇಳಿದ ಕಾಗೇರಿ ಬಾವ, ‘ಯಂತಾ? ನಾ ಅನಂತಣ್ಣನಲ್ಲಿಗೆ ಹೋಗೋದು ಅಂದ್ರೇನು? ಒಂದ್ ವ್ಯಾಳೆ ನಾನೇ ಆಕಡೆ ಹೋಯಿದು ಗೊತ್ತಿದ್ರೆ ಅನಂತಣ್ಣ ಹಾಗೆಲ್ಲ ಮಾಡವ್ನಲ್ಲ. ಇದೆಲ್ಲ, ನನಗೆ ಆಗದವರು ಕಟ್ಟಿದ್ ಕತೆ‘ ಎಂದು ಒಂದ್ ನಗೆ ಹಾರಿಸಿದ್ರಂತೆ. 

ವಿಶ್ವೇಶ್ವರ ಹೆಗಡೆ ಕಾಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.